ವಾರ್ನರ್ ಸ್ಲೆಡ್ಜಿಂಗ್ ಮಾಡದಿದ್ದರೇನು ನಾನು ಮಾಡುತ್ತೇನೆ: ಮಿಚೆಲ್ ಜಾನ್ಸನ್

ಭಾರತ ತಂಡದ ವಿರುದ್ಧ ಡೇವಿಡ್ ವಾರ್ನರ್ ಸ್ಲೆಡ್ಜಿಂಗ್ ಮಾಡದಿದ್ದರೆ ನಾನೇ ಮಾಡುತ್ತೇನೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವೇಗದ ಬೌಲರ್ ಮಿಚೆಲ್ ಜಾನ್ಸನ್...
ಆಸ್ಟ್ರೇಲಿಯಾ ತಂಡದ ಮಿಚೆಲ್ ಜಾನ್ಸನ್
ಆಸ್ಟ್ರೇಲಿಯಾ ತಂಡದ ಮಿಚೆಲ್ ಜಾನ್ಸನ್

ಮೆಲ್ಬೋರ್ನ್: ಭಾರತ ತಂಡದ ವಿರುದ್ಧ ಡೇವಿಡ್ ವಾರ್ನರ್ ಸ್ಲೆಡ್ಜಿಂಗ್ ಮಾಡದಿದ್ದರೆ ನಾನೇ ಮಾಡುತ್ತೇನೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವೇಗದ ಬೌಲರ್ ಮಿಚೆಲ್ ಜಾನ್ಸನ್ ಹೇಳಿದ್ದಾರೆ.

ಆಸ್ಟ್ರೇಲಿಯಾ ಎಂದರೆ ಸ್ಲೆಡ್ಜಿಂಗ್, ಸ್ಲೆಡ್ಜಿಂಗ್ ಎಂದರೆ ಆಸ್ಟ್ರೇಲಿಯಾ ಎನ್ನುವಷ್ಟರ ಮಟ್ಟಿಗೆ ಆಸಿಸ್ ಕ್ರಿಕೆಟಿಗರು ಕುಖ್ಯಾತಿ ಗಳಿಸಿದ್ದಾರೆ. ವಿಶ್ವಕಪ್ ನಲ್ಲಿ ಸ್ಲೆಡ್ಜಿಂಗ್ಗೆ ನಿಷೇಧ ಹೇರಿದ್ದರೂ ಕೂಡ ಅವರು ಇತರೆ ತಂಡದ ಆಟಗಾರರ ಮೇಲೆ ಸ್ಲೆಡ್ಜಿಂಗ್ ಮಾಡುವುದನ್ನಂತೂ ಬಿಟ್ಟಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಈ ಸ್ಲೆಡ್ಜಿಂಗ್ ಸಮಸ್ಯೆಯನ್ನು ತಡೆಯಲು ದಂಡ, ನಿಷೇಧದಂತಹ ಹಲವಾರು ಕಠಿಣ ಕ್ರಮಗಳನ್ನು ಕೈಗೊಂಡಿದ್ದರೂ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗಿಲ್ಲ.

ಇನ್ನು ಪ್ರಸ್ತುತ ವಿಶ್ವಕಪ್ ಕ್ರಿಕೆಟ್ ನಲ್ಲಿ ಸ್ಲೆಡ್ಜ್  ಮಾಡುವ ಆಟಗಾರನ ವಿರುದ್ಧ ಐಸಿಸಿ ಒಂದು ಪಂದ್ಯದ ನಿಷೇಧದ ಎಚ್ಚರಿಕೆ ನೀಡಿದ್ದರೂ ಸಹ ಸ್ಲೆಡ್ಜಿಂಗ್ ಮಾತ್ರ ನಿಂತಿಲ್ಲ. ಕಳೆದ ಶುಕ್ರವಾರ ಅಡಿಲೇಡ್ ನಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಡೇವಿಡ್ ವಾರ್ನರ್ ಮತ್ತು ಪಾಕಿಸ್ತಾನ ತಂಡದ ವಹಾಬ್ ರಿಯಾಜ್ ಮೈದಾನದಲ್ಲಿಯೇ ಪರಸ್ಪರ ವಾಗ್ವಾದಕ್ಕಿಳಿದಿದ್ದರು. ಈ ಪ್ರಕರಣದಿಂದ ಉಭಯ ಆಟಗಾರರ ವಿರುದ್ಧ ಕೆಂಗಣ್ಣು ಬೀರಿದ್ದ ಐಸಿಸಿ ಇಬ್ಬರಿಗೂ ದಂಡವಿಧಿಸಿತ್ತು. ಇದಾದ ಮೇಲೂ ಅದೇಕೋ ಆಸ್ಟ್ರೇಲಿಯನ್ನರು ಮಾತ್ರ ತಮ್ಮ ಹಳೇ ಚಾಳಿಯನ್ನು ತಾವು ಬಿಡುವುದಿಲ್ಲ ಎಂದು ತಮ್ಮ ಮೊಂಡುವಾದವನ್ನು ಮುಂದಿಡುತ್ತಿದ್ದಾರೆ.

ಇನ್ನು ಈ ಪೈಕಿ ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಮಿಚೆಲ್ ಜಾನ್ಸನ್ ಬಹಿರಂಗವಾಗಿಯೇ ತಾವು ಸ್ಲೆಡ್ಜಿಂಗ್ ಮಾಡುತ್ತೇವೆ ಎಂದು ಹೇಳಿಕೊಂಡಿದ್ದು, ಸ್ಲೆಡ್ಜಿಂಗ್ ಇಲ್ಲದಿದ್ದರೆ ಪಂದ್ಯದಲ್ಲಿ ರೋಚಕತೆಯೇ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಿಡ್ನಿಯಲ್ಲಿ ಈ ಬಗ್ಗೆ ಮಾತನಾಡಿದ ಜಾನ್ಸನ್, ವಾರ್ನರ್ ಇನ್ನು ಮುಂದೆ ಯಾವುದೇ ರೀತಿಯ ಸ್ಲೆಡ್ಜಿಂಗ್ ಪ್ರಕರಣದಲ್ಲಿ ತಾವು ಪಾಲ್ಗೊಳ್ಳುವುದಿಲ್ಲ ಎಂದು ಹೇಳಿರುವುದನ್ನು ನಾನು ಪತ್ರಿಕೆಗಳಲ್ಲಿ ಓದಿದ್ದೇನೆ. ಆದರೆ ಅವರು ಸ್ಲೆಡ್ಜಿಂಗ್ ಅನ್ನು ನಿಲ್ಲಿಸಿದರೆ ಏನು.. ನಾನು ಅದನ್ನು ಮುಂದುವರೆಸಿಕೊಂಡು ಹೋಗುತ್ತೇನೆ. ಕ್ರಿಕೆಟ್ ಪಂದ್ಯದಲ್ಲಿ ಸ್ಲೆಡ್ಜಿಂಗ್ ರೋಚಕತೆಯನ್ನು ಹುಟ್ಟುಹಾಕಲ್ಲಿದ್ದು, ಪ್ರೇಕ್ಷಕರಿಗೆ ಉತ್ತಮ ಮನರಂಜನೆಯಾಗಿರಲಿದೆ ಎಂದು ಹೇಳಿದ್ದಾರೆ.

ಇನ್ನು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಸ್ಲೆಡ್ಜಿಂಗ್ ಇತಿಹಾಸ ಬಹು ದೊಡ್ಡದಾಗಿಯೇ ಇದ್ದು, ಇತ್ತೀಚೆಗೆ ಉಭಯ ತಂಡಗಳ ನಡುವೆ ನಡೆದ ಕ್ರಿಕೆಟ್ ಸರಣಿಗಳು ಇದಕ್ಕೊಂದು ಉದಾಹರಣೆಯಷ್ಟೇ. ಆಸ್ಟ್ರೇಲಿಯಾದಲ್ಲಿ ನಡೆದ ತ್ರಿಕೋನ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಮತ್ತು ಡೇವಿಡ್ ವಾರ್ನರ್ ನಡುವಿನ 'ಸ್ಪೀಕ್ ಇನ್ ಇಂಗ್ಲಿಷ್' ಸ್ಲೆಡ್ಜಿಂಗ್ ಪ್ರಕರಣ ಭಾರಿ ಸುದ್ದಿಗೆ ಗ್ರಾಸವಾಗಿದ್ದಷ್ಟೇ ಅಲ್ಲದೇ ನಿಯಮಾವಳಿ ಉಲ್ಲಂಘನೆ ಮಾಡಿದ ವಾರ್ನರ್ ಗೆ ಐಸಿಸಿ ದಂಡ ಕೂಡ ವಿಧಿಸಿತ್ತು. ಇದರಿಂದ ಆಸ್ಟ್ರೇಲಿಯಾ ತಂಡ ತೀವ್ರ ಮುಜುಗರಕ್ಕೀಡಾಗಿತ್ತು. ಆದರೆ ಇದೀಗ ಮತ್ತೆ ಭಾರತ ತಂಡದ ವಿರುದ್ಧ ತಾವು ಸ್ಲೆಡ್ಜ್ ಮಾಡುತ್ತೇವೆ ಎಂದು ಆಟಗಾರರು ಬಹಿರಂಗವಾಗಿಯೇ ಹೇಳಿರುವುದು, ಕಾಂಗರೂಗಳ ಸ್ಲೆಡ್ಜಿಂಗ್ ಪ್ರೀತಿಗೆ ಹಿಡಿದ ಕನ್ನಡಿಯಾಗಿದೆ.

ಇದೇ ಮಾರ್ಚ್ 26 ಗುರುವಾರ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ  ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯಲಿರುವ 2ನೇ ಸೆಮಿಫೈನಲ್ ಪಂದ್ಯ ಈಗಾಗಲೇ ಸಾಕಷ್ಟು ರೋಚಕತೆ ಕೆರಳಿಸಿದ್ದು, ಗೆದ್ದ ತಂಡ ಫೈನಲ್ ನಲ್ಲಿ ನ್ಯೂಜಿಲೆಂಡ್ ತಂಡದೊಂದಿಗೆ ಪ್ರಶಸ್ತಿಗಾಗಿ ಸೆಣಸಾಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com