ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ ಗೆ ರೋಚಕ ಜಯ

ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅತಿಥೇಯ ನ್ಯೂಜಿಲೆಂಡ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 4 ವಿಕೆಟ್ ಗಳ ರೋಚಕ ಜಯ ಸಾಧಿಸಿದೆ...
ನ್ಯೂಜಿಲೆಂಡ್
ನ್ಯೂಜಿಲೆಂಡ್

ಆಕ್ಲೆಂಡ್: ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅತಿಥೇಯ ನ್ಯೂಜಿಲೆಂಡ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 4 ವಿಕೆಟ್ ಗಳ ರೋಚಕ ಜಯ ಸಾಧಿಸಿದೆ.

ನ್ಯೂಜಿಲೆಂಡ್ ನ ಆಕ್ಲೆಂಡ್ ನಲ್ಲಿ ಇಂದು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ (ಡಕ್ವರ್ಥ್ ನಿಯಮದನ್ವಯ) 298 ರನ್ ಗಳ ಸವಾಲಿನ ಮೊತ್ತವನ್ನು ಬೆನ್ನು ಹತ್ತಿದ ಕಿವೀಸ್ ಪಡೆ 42.5 ಓವರ್ ಗಳಲ್ಲಿ ಗುರಿಯನ್ನು ತಲುಪಿ ಫೈನಲ್ ಗೇರಿದೆ. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಎಬಿ ಡಿ ವಿಲೆಯರ್ಸ್ ಅವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಭರ್ಜರಿ ಮೊತ್ತ ಕಲೆ ಹಾಕಿದರೂ ಕಿವೀಸ್ ಬ್ಯಾಟ್ಸ್ ಮನ್ ಗಳನ್ನು ಮಾತ್ರ ನಿಯಂತ್ರಿಸುವಲ್ಲಿ ವಿಫಲರಾದರು.

ನಿಯಂತ್ರಿಸಲಾರದೆ ಸೋತು ಸುಣ್ಣವಾಗಿದೆ. ದಕ್ಷಿಣ ಆಫ್ರಿಕಾ ಒಡ್ಡಿದ್ದ 43 ಓವರ್ ಗಳಲ್ಲಿ 298 ರನ್ ಟಾರ್ಗೆಟ್ ಅನ್ನು ನ್ಯೂಜಿಲೆಂಡ್ ಬ್ಯಾಟ್ಸ್ ಮನ್ ಗಳು 1 ಎಸೆತ ಬಾಕಿ ಇರುವಂತೆ ಚೇಸ್ ಮಾಡಿ ಮೊಟ್ಟ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದಾರೆ.

ಈ ಮೊದಲು ದಕ್ಷಿಣ ಆಫ್ರಿಕಾ ತಂಡ ಬ್ಯಾಟಿಂಗ್ ಮಾಡುತ್ತಿರುವ ವೇಳೆ ಮಳೆ ಬಂದಿದ್ದರಿಂದ 50 ಓವರ್ ಗಳ ಪಂದ್ಯವನ್ನು ಡಕ್ವರ್ಥ್ ಲೂಯಿಸ್ ನಿಯಮದನ್ವಯ 43 ಓವರ್ ಗಳಿಗೆ ಇಳಿಸಲಾಯಿತು. ಉತ್ತಮವಾಗಿ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 43 ಓವರ್ ಗಳಲ್ಲಿ ಡುಪ್ಲೆಸಿಸ್ (82 ರನ್), ಎಬಿ ಡಿವಿಲಿಯರ್ಸ್ (ಅಜೇಯ 65 ರನ್), ಮಿಲ್ಲರ್ (49 ರನ್) ನೆರವಿನಿಂದ 281 ರನ್ ಗಳಿಸಿತು. ನ್ಯೂಜಿಲೆಂಡ್ ತಂಡಕ್ಕೆ ಗೆಲ್ಲಲು 43 ಓವರ್ ಗಳಲ್ಲಿ 298 ರನ್ ಗಳ ಬೃಹತ್ ಗುರಿಯನ್ನು ನಿಗದಿ ಪಡಿಸಲಾಯಿತು.

ಈ ಸವಾಲಿನ ಮೊತ್ತವನ್ನು ಬೆನ್ನುಹತ್ತಿದ ನ್ಯೂಜಿಲೆಂಡ್ ತಂಡಕ್ಕೆ ಮೆಕ್ಕಲಮ್ ಭರ್ಜರಿ ಆರಂಭವನ್ನೇ ಒದಗಿಸಿದರು. ಕೇವಲ 22 ಎಸೆತಗಳಲ್ಲೇ ಅರ್ಧಶತಕ ಸಿಡಿಸುವ ಮೂಲಕ ಆಫ್ರಿಕಾ ತಂಡಕ್ಕೆ ತಲೆನೋವಾಗಿ ಪರಿಣಮಿಸಿದ್ದರು. ಆದರೆ 26 ಎಸೆತಗಳಲ್ಲಿ 59 ರನ್ ಗಳಿಸಿದ ಅವರು ಮಾರ್ಕೆಲ್ ಎಸೆತದಲ್ಲಿ ಸ್ಟೈನ್ ಕ್ಯಾಚಿತ್ತು ಹೊರನಡೆದರು. ಕಳೆದ ಪಂದ್ಯದ ದಾಖಲೆ ಹೀರೋ ಗಪ್ಟಿಲ್‌ 34 ರನ್‌ಗಳಿಸಿ ರನ್‌ಔಟ್‌ಗೆ ಬಲಿಯಾದರು. ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಟೇಲರ್‌ 30 ರನ್‌ಗಳಿಸಿ ಔಟಾದರೆ,  ಆಕರ್ಷಕ ಅರ್ಧಶತಕ ಸಿಡಿಸಿ ಆಟವಾಡುತ್ತಿದ್ದ ಕೋರಿ ಆ್ಯಂಡರ್ಸನ್‌ 58 ರನ್‌ ಗಳಿಸಿ ಔಟಾದರು.

ನ್ಯೂಜಿಲೆಂಡ್ ಬಾಲಂಗೋಚಿ ಆಟಗಾರ ರೊಂಚಿ ಕೂಡ 8 ರನ್‌ಗೆ ಪೆಲಿವಿಯನ್‌ ಸೇರಿದರು. ಈ ಹಂತದಲ್ಲಿ ದಕ್ಷಿಣ ಆಫ್ರಿಕಾ ತಂಡ ಮೇಲುಗೈ ಸಾಧಿಸಿತಾದರೂ, ಅಮೋಘ ಬ್ಯಾಟಿಂಗ್‌‌ ಪ್ರದಶಿಸಿದ  ನ್ಯೂಜಿಲೆಂಡ್ ತಂಡದ ಗ್ರ್ಯಾಂಟ್‌ ಇಲಿಯಟ್‌ , ವೆಟ್ಟೋರಿ ಅವರನ್ನು ಜೊತೆಗೂಡಿ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು. ಅಲ್ಲದೆ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ 84 ರನ್‌ ಸಿಡಿಸಿ ಇಲಿಯಟ್ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಆ ಮೂಲಕ 6 ಬಾರಿ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ್ದ ನ್ಯೂಜಿಲೆಂಡ್‌ ವನ್ನು ಇದೇ ಮೊದಲ ಬಾರಿಗೆ ಇಲಿಯಟ್  ಫೈನಲ್‌ಗೆ ಕೊಂಡೊಯ್ದರು. ಈ ಹಿಂದೆ 3 ಬಾರಿ ಸೆಮಿಫೈನಲ್‌ಗೆ ಬಂದು ಅಷ್ಟೂ ಬಾರಿ ಸೋತಿದ್ದ  ದ.ಆಫ್ರಿಕಾ ಮತ್ತೆ ಸೋಲು ಕಾಣುವ ಮೂಲಕ ತಮಗಂಟಿರುವ ಚೋಕರ್ಸ್‌ ಪಟ್ಟವನ್ನು ನಿವಾರಿಸಿಕೊಳ್ಳಲು ಮತ್ತೆ ವಿಫಲವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com