
ಬೆಂಗಳೂರು: ಇದೇ ತಿಂಗಳು 17ರಂದು ನಡೆಯಲಿರುವ ಟಿಸಿಎಸ್ ವಿಶ್ವ 10ಕೆ ಮ್ಯಾರಥಾನ್‍ನಲ್ಲಿ ಸುಮಾರು 25 ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಸ್ಪರ್ಧೆಯ ಆಯೋಜಕರಾದ ಪ್ರೊಕ್ಯಾಮ್ ಇಂಟರ್ ನ್ಯಾಷನಲ್ ಸಂಸ್ಥೆ ತಿಳಿಸಿದೆ.
ನಗರದ ವಿಂಡ್ಸರ್ ಮ್ಯಾನರ್ ಹೋಟೆಲ್‍ನಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮ್ಯಾರಥಾನ್ ಸ್ಪರ್ಧೆಯ ರೂಪುರೇಷೆಗಳ ಪಕ್ಷಿನೋಟವನ್ನು ನೀಡಲಾಯಿತು. ಬೆಂಗಳೂರು ಮ್ಯಾರಥಾನ್ ಬಗ್ಗೆ ಜನರು ತೋರುತ್ತಿರುವ ಒಲವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಇದು ಆಯೋಜಕರಿಗೆ ಸ್ಫೂರ್ತಿ ನೀಡಿದೆ ಎಂದು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ನಾಗರಾಜ್ ಇಜಾರಿ ತಿಳಿಸಿದರು.
ಪೆರೆಕ್ ರಾಯಭಾರಿ: ಈ ಸಂದರ್ಭದಲ್ಲಿ ಮಾತನಾಡಿದ ಪ್ರೊಕಾಮ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಸಿಂಗ್, ಈ ಬಾರಿಯ ಬೆಂಗಳೂರು 10ಕೆ ಮ್ಯಾರಥಾನ್ ಸ್ಪರ್ಧೆಗೆ ಹಿರಿಯ ಅಥ್ಲೀಟ್ ಹಾಗೂ ಮೂರು ಒಲಿಂಪಿಕ್ಸ್ ಸ್ವರ್ಣ ಪದಕ ವಿಜೇತೆ, ಫ್ರಾನ್ಸ್ ನ ಮೇರಿ ಜೋಸ್ ಪೆರಕ್ ಅವರನ್ನು ರಾಯಭಾರಿಯನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದರು. 1992ರ ಬಾರ್ಸಿಲೋನಾ ಒಲಿಂಪಿಕ್ಸ್ ನಲ್ಲಿ ಮಹಿಳೆಯರ 400 ಮೀ. ಓಟದ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದ ಮೇರಿ, 1996ರ ಅಟ್ಲಾಂಟಾ ಒಲಿಂಪಿಕ್ಸ್ ನಲ್ಲಿಯೂ ಇದೇ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡಿದ್ದರು. ಅಲ್ಲದೆ, ಅಟ್ಲಾಂಟಾ ಒಲಿಂಪಿಕ್ಸ್‍ನ ಮಹಿಳೆಯ 200 ಮೀ. ಓಟದ ಸ್ಪರ್ಧೆಯಲ್ಲೂ ಅವರು, ಚಿನ್ನ ಗೆದ್ದಿದ್ದಾರೆ. ಇಂಥ ಶ್ರೇಷ್ಠ ಅಥ್ಲೀಟ್ ಒಬ್ಬರನ್ನು ಈ ಬಾರಿಯ ಬೆಂಗಳೂರು 10ಕೆ ಮ್ಯಾರಥಾನ್ ಸ್ಪರ್ಧೆಯ ರಾಯಭಾರಿಯನ್ನಾಗಿಸಲು ಸಂತಸವಾಗುತ್ತಿದೆ ಎಂದು ವಿವೇಕ್ ತಿಳಿಸಿದರು.
ದಿಗ್ಗಜರು ಕಣಕ್ಕೆ: ವಿಶ್ವದ ಅಗ್ರ ಅಥ್ಲೀಟ್‍ಗಳಾದ ಮಲಿಕಾ ಅಸಾಹಸ್ಸಾ , ಲೂಸಿ ಕಾಬೂ, ಗೂಯೆ ಅಡೋಲಾ, ಬಿರ್ ಹಾನು ಲೆಗೆಸಿ ಅವರು ಮೇ 17ರಂದು ನಡೆಯಲಿರುವ ಮ್ಯಾರಥಾನ್‍ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರ ಜೊತೆಗೆ, ಭಾರತೀಯ ಕ್ರೀಡಾಳುಗಳಾದ ಬಿ.ಸಿ. ತಿಲಕ್, ಲಕ್ಷ್ಮಣ್ ಜಿ, ಕವಿತಾ ರಾವತ್, ಮೋನಿಕಾ ಅತಾರೆ ಹಾಗೂ ಸೂರ್ಯ ಪಾಲ್ಗೊಳ್ಳಲಿದ್ದಾರೆ. ಜಗತ್ತಿನ ಖ್ಯಾತ ಗಡಿಯಾರ ತಯಾರಿಕಾ ಸಂಸ್ಥೆ ಸಿಸ್ಕೋ, ಈ ಬಾರಿಯ ಬೆಂಗಳೂರು 10ಕೆ ಮ್ಯಾರಥಾನ್‍ನಿಂದ ಪ್ರೊಕ್ಯಾಮ್ ಸಂಸ್ಥೆಯೊಂದಿಗೆ ಕೈ ಜೋಡಿಸಿದೆ.
Advertisement