ಗೇಯ್ಲ್ ಆರ್ಭಟಕ್ಕೆ ತತ್ತರಿಸಿದ ಕಿಂಗ್ಸ್ ಇಲೆವೆನ್

ತವರಿನ ಅಂಗಳದಲ್ಲಿ ಅಕ್ಷರಶಃ ಆರ್ಭಟಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ದುರ್ಬಲ ಪಂಜಾಬ್...
ಕ್ರೀಸ್‍ ಗೇಯ್ಲ್
ಕ್ರೀಸ್‍ ಗೇಯ್ಲ್

ಬೆಂಗಳೂರು: ತವರಿನ ಅಂಗಳದಲ್ಲಿ ಅಕ್ಷರಶಃ ಆರ್ಭಟಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ದುರ್ಬಲ ಪಂಜಾಬ್ ತಂಡವನ್ನು 138 ರನ್ ಗಳಿಂದ ಹೀನಾಯವಾಗಿ ಸೋಲಿಸಿತು.

ಮೊದಲು ಬ್ಯಾಟ್ ಮಾಡಿದ ಬೆಂಗಳೂರು, ಕ್ರೀಸ್‍ಗೇಯ್ಲ್  ಅವರ ಆಕರ್ಷಕ ಶತಕದ ಸಹಾಯದಿಂದ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು, 226 ರನ್‍ಗಳ ಬೃಹತ್ ಮೊತ್ತ ಪೇರಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ ತಂಡ, 13.4 ಓವರ್‍ಗಳಲ್ಲಿ ಕೇವಲ 88 ರನ್‍ಗಳಿಗೆ ಸರ್ವಪತನ ಕಂಡಿತು. ಈ ಗೆಲವಿನ ಮೂಲಕ, ಬೆಂಗಳೂರು ತಂಡ, ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದರೆ, ಈ ಸೋಲಿನಿಂದಾಗಿ ಪಂಜಾಬ್ ತಂಡ ಪ್ಲೇ ಆಫ್ ಹಂತಕ್ಕೆ ಕಾಲಿಡುವ ಅವಕಾಶದಿಂದ ಸಂಪೂರ್ಣವಾಗಿ ಕಳೆದುಕೊಂಡಿತು.

ಗೇಯ್ಲ್ ಅಬ್ಬರ: ಟಾಸ್ ಗೆದ್ದಿದ್ದ ಪಂಜಾಬ್ ತಂಡ ಮೊದಲು ಆರ್ ಸಿಬಿ ತಂಡವನ್ನು ಮೊದಲು ಬ್ಯಾಟಿಂಗ್‍ಗೆ ಇಳಿಸಿತು. ಇದರ ಲಾಭ ಪಡೆದ ಆರ್‍ಸಿಬಿ ಆರಂಭಿಕರಾದ ಕ್ರಿಸ್ ಗೇಯ್ಲ್ ಹಾಗೂ ವಿರಾಟ್ ಕೊಹ್ಲಿ ಮೊದಲ ವಿಕೆಟ್‍ಗೆ ಭರ್ಜರಿ 119 ರನ್‍ಗಳ ಜೊತೆಯಾಟವಾಡಿ, ತಂಡ ಬೃಹತ್ ಮೊತ್ತ ಪೇರಿಸಲು ನೆರವಾದರು. ಅಕ್ಷರಶಃ ಅಬ್ಬರಿಸಿದ ಕ್ರಿಸ್ ಗೇಯ್ಲ್ ಆಕರ್ಷಕ ಶತಕ ಸಿಡಿಸಿದರಲ್ಲದೇ ಈ ಬಾರಿಯ ಐಪಿಎಲ್‍ನಲ್ಲಿ ಮೊದಲ ಶತಕ ದಾಖಲಿಸಿದ ಹಿರಿಮೆಗೂ
ಪಾತ್ರರಾದರು. ಗೇಯ್ಲ್ ಅವರು ನೀಡಿದ್ದ ಎರಡು ಸುಲಭ ಕ್ಯಾಚ್ ಗಳನ್ನು ಕೈಚೆಲ್ಲಿದ ಪಂಜಾಬ್ ದುಬಾರಿ ಬೆಲೆ ತೆರಬೇಕಾಯಿತು. ಅವರಿಗೆ ಕ್ರೀಸ್‍ನಲ್ಲಿ ಉತ್ತಮವಾಗಿ ಸಾಥ್ ನೀಡಿದ್ದ ಕೊಹ್ಲಿ,
ತಂಡದ ಮೊತ್ತ 117 ರನ್ ಆಗಿದ್ದಾಗ ವಿಕೆಟ್ ಒಪ್ಪಿಸಿ ಹೊರನಡೆದರು.

ಆಗ, ಕ್ರೀಸ್‍ಗೆ ಕಾಲಿಟ್ಟಿದ್ದು 360 ಡಿಗ್ರಿ ಬ್ಯಾಟ್ಸ್ ಮನ್ ಎಂದೇ ಖ್ಯಾತರಾದ ಎಬಿ ಡಿವಿಲಿಯರ್ಸ್. ಗೇಯ್ಲ್ ಹಾಗೂ ಡಿವಿಲಿಯರ್ಸ್ ಜೋಡಿ, 2ನೇ ವಿಕೆಟ್ ಗೆ ಭರ್ಜರಿ 71(5.5 ಓವರ್ ಗಳಲ್ಲಿ) ರನ್ ಸೇರಿಸಿತು.  ಅವರ ಎಸೆತದಲ್ಲಿ ಅವರಿಗೇ ಕ್ಯಾಚ್ ನೀಡಿದ ಗೇಯ್ಲ್ (117 ರನ್, 57 ಎಸೆತ, 7 ಬೌಂಡರಿ, 12 ಸಿಕ್ಸರ್) ತಮ್ಮ ಆರ್ಭಟಕ್ಕೆ ತೆರೆ ಎಳೆದುಕೊಂಡರು.

ಆನಂತರ, ಡಿವಿಲಿಯರ್ಸ್‍ಗೆ ಜೋಡಿಯಾಗಿದ್ದು ದಿನೇಶ್ ಕಾರ್ತಿಕ್. ಆದರೆ, ಅವರು ಹೆಚ್ಚು ಆಡಲಿಲ್ಲ. ವೈಯಕ್ತಿಕವಾಗಿ ಕೇವಲ 8 ರನ್ ಗಳಿಸಿದ್ದ ಅವರು ಇನಿಂಗ್ಸ್‍ನ 18ನೇ ಓವರ್‍ನಲ್ಲಿ ಔಟಾದರು. ಆಗ ಜೊತೆಯಾದ ಸರ್ಫರಾಜ್ ಖಾನ್ ಜೊತೆಗೆ ಪಂದ್ಯದ ಕೊನೆಯವರೆಗೂ ಅಜೇಯರಾಗುಳಿದ ಡಿವಿಲಿಯರ್ಸ್, ತಂಡದ ಮೊತ್ತವನ್ನು 226 ರನ್‍ಗಳಿಗೆ ಮುಟ್ಟಿಸಿದರು.

ಪಂಜಾಬ್ ತತ್ತರ: ಬೆಂಗಳೂರು ತಂಡ ನೀಡಿದ್ದ ಮೊತ್ತವನ್ನು ಬೆನ್ನಟ್ಟಿದ ಕಿಂಗ್ಸ್ ಇಲೆವೆನ್ ಪಂಜಾಬ್ ಗೆ ಕರ್ನಾಟಕದ ಬೌಲರ್ ಶ್ರೇಯಸ್ ಅರವಿಂದ್ ಹಾಗೂ ಮಿಚೆಲ್ ಸ್ಟಾರ್ಕ್ ಭಾರೀ ಹೊಡೆತ ನೀಡಿದರು.

ಆರಂಭಿಕ ವೊಹ್ರಾ ಅವರನ್ನು ಮೊದಲ ಓವರ್‍ನಲ್ಲೇ ಪೆವಿಲಿಯನ್ ಗೆ ಅಟ್ಟಿದ ಸ್ಟಾರ್ಕ್ ತಂಡಕ್ಕೆ ಮೊದಲ ವಿಕೆಟ್ ಸಂತಸ ತಂದುಕೊಟ್ಟರು. ಹರ್ಷಲ್ ಪಟೇಲ್ ಅವರು ಮತ್ತೊಬ್ಬ ಆಟಗಾರ ಮುರಳಿ ವಿಜಯ್ ಅವರ ವಿಕೆಟ್ ಉರುಳಿಸಿದರು. ಆರಂಭಿಕರಿಬ್ಬರೂ ವೈಯಕ್ತಿಕವಾಗಿ ಕೇವಲ 2 ರನ್ ಗಳಿಸಿದ್ದು ಪಂಜಾಬ್ ತಂಡಕ್ಕೆ ಬಾರೀ ಪೆಟ್ಟು  ಕೊಟ್ಟಿತು.

ಇದಾದ ಮೇಲೆ ದಾಳಿಗಿಳಿದ ರಾಜ್ಯದ ಆಟಗಾರ ಶ್ರೀನಾಥ್ ಅರವಿಂದ್, ಪಂಜಾಬ್ ತಂಡದ ಮಧ್ಯಮ ಕ್ರಮಾಂಕ ಕುಸಿಯುವಂತೆ ಮಾಡಿದರು. ತಾವು ಮಾಡಿದ ಇನಿಂಗ್ಸ್ ನ 6ನೇ ಓವರ್‍ನಲ್ಲಿ ಮೂರನೇ ಕ್ರಮಾಂಕದ ವೃದ್ಧಿಮಾನ್ ಸಾಹಾ ಅವರ ವಿಕೆಟ್ ಕಬಳಿಸಿದ ಅವರು, ಆನಂತರದ ಕ್ರಮಾಂಕಗಳಲ್ಲಿನ ಬ್ಯಾಟ್ ಮನ್‍ಗಳಾದ ಗ್ಲೆನ್ ಮ್ಯಾಕ್ಸ್ ವೇಲ್ , ಡೇವಿಡ್ ಮಿಲ್ಲರ್, ಜಾರ್ಜ್ ಬೇಯ್ಲಿ ಅವರನ್ನು ಹೊರಗಟ್ಟಿದರು. ಇದರ ದಾಳಿಗೆ ಕೈ ಜೋಡಿಸಿದ
ಸ್ಟಾರ್ಕ್, ಕೆಳಕ್ರಮಾಂಕದ ಬ್ಯಾಟ್ಸ್ ಮನ್ ಗಳಾದ ಮಿಚೆಲ್ ಜಾನ್ಸನ್, ಅನುರೀತ್ ಸಿಂಗ್, ಕರಣ್ ವೀರ್ ಸಿಂಗ್ ಅವರ ವಿಕೆಟ್ ಉರುಳಿಸಿದರು.

ಇನ್ನು, ಚಾಹಲ್ ಅವರು ಕೊನೆಯ ಬ್ಯಾಟ್ಸ್ ಮನ್ ಸಂದೀಪ್ ಶರ್ಮಾ ಅವರ ವಿಕೆಟ್ ಪಡೆಯುವಲ್ಲಿಗೆ ಪಂಜಾಬ್ ತಂಡದ ಇನಿಂಗ್ಸ್‍ಗೆ ತೆರೆಬಿತ್ತು. ಈ ಎಲ್ಲದರ ಮಧ್ಯೆ, ಪಂಜಾಬ್ ಪರ ಅಜೇಯ 40 ರನ್ (21 ಎಸೆತ, 5 ಬೌಂಡರಿ, 2 ಸಿಕ್ಸರ್) ಗಳಿಸಿದ್ದ ಅಕ್ಷರ ಪಟೇಲ್ ಮಾತ್ರ ಉತ್ತಮ ಪ್ರದರ್ಶನ ನೀಡಿದರು. ಆದರೆ, ಅವರ ಪ್ರದರ್ಶನ ವ್ಯರ್ಥವಾಯಿತು. ಅವರಿಗೆ ಪಂಜಾಬ್ ತಂಡದ ಯಾರೊಬ್ಬರಿಂದಲೂ ಉತ್ತಮ ಸಾಥ್ ಸಿಗಲಿಲ್ಲ. ಅಕ್ಷರ್ ಪಟೇಲ್ ಅವರದ್ದು ಬಿಟ್ಟರೆ, ವೃದ್ಧಿಮಾನ್ ಸಾಹಾ ಗಳಿಸಿದ 13 ರನ್‍ಗಳೇ ಆ ತಂಡದ ದ್ವಿತೀಯ ಒಂದಂಕಿ ರನ್ ದೇಣಿಗೆ ನೀಡಿದವರೇ. ಇದರಿಂದಾಗಿ ಪಂಜಾಬ್ ತಂಡ, ಕನಿಷ್ಠ ಪಕ್ಷ ವೀರೋಚಿತ ಹೋರಾಟವನ್ನೂ ತೋರದೇ ಹೀನಾಯವಾಗಿ ಸೋತಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com