
ಮುಂಬೈ: ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಅವರಿಗೆ ತಲಾ ರು.1.5 ಕೋಟಿ ನೀಡಲು ಬಿಸಿಸಿಐ ನಿರ್ಧರಿಸಿದೆ.
ಭಾರತೀಯ ಕ್ರಿಕೆಟ್ ಸಂಸ್ಥೆ (ಬಿಸಿಸಿಐ) ಜಾರಿಗೊಳಿಸಿರುವ `ಒಂದು ಬಾರಿ ಪಾವತಿ' ಯೋಜನೆಯಡಿ ಈ ಹಣವನ್ನು ನೀಡಲು ಶುಕ್ರವಾರ ನಡೆದ ಬಿಸಿಸಿಐ ಆರ್ಥಿಕ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಖಾಸಗಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಇನ್ನಿತರ ತೀರ್ಮಾನಗಳು ಸಂಭಾವನೆ ವಿಚಾರದಲ್ಲಿ ಟೀಂ ಇಂಡಿಯಾದಲ್ಲಿ ಅಳವಡಿಸಲಾಗಿರುವ ಆಟಗಾರರ ಶ್ರೇಣೀಕೃತ ವ್ಯವಸ್ಥೆಯನ್ನು ಭಾರತ ಮಹಿಳೆಯರ ತಂಡಕ್ಕೂ ಅಳವಡಿಸಲು ತೀರ್ಮಾನಿಸಲಾಯಿತು.
ಕಳೆದೆರಡು ವರ್ಷಗಳಲ್ಲಿ ಬಿಸಿಸಿಐನ ಆದಾಯ ಗಣನೀಯವಾಗಿ ಇಳಿದಿರುವ ವಿಚಾರವನ್ನು ಸಭೆಯ ಗಮನಕ್ಕೆ ತರಲಾಯಿತು. ಇದರಿಂದಾಗಿ, ಆಟಗಾರರ ಸಂಭಾವನೆಯೂ ಕಡಿಮೆಯಾಗಿದೆ. ಸಂಸ್ಥೆಯ ಆದಾಯ ಇನ್ನೂ ಇಳಿತ ಕಂಡರೆ, ಆಟಗಾರರಿಗೆ ಯಾವುದೇ ತೊಂದರೆಯಾಗದಂತೆ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಯಿತು. ಇದೇ ವೇಳೆ, ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿರುವ ಬಿಸಿಸಿಐ ವಿರುದ್ಧದ ಪ್ರಕರಣಗಳಿಗಾಗಿ ಕಳೆದೆರಡು ವರ್ಷಗಳಲ್ಲಿ ರು.52 ಕೋಟಿ ಹಣ ಖರ್ಚಾಗಿರುವುದಾಗಿ ಸಭೆಗೆ ತಿಳಿಸಲಾಯಿತು.
Advertisement