ಆರ್. ಅಶ್ವಿನ್, ಜಡೇಜಾ ಸ್ಪಿನ್ ಮೋಡಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ

ಪ್ರವಾಸಿ ದಕ್ಷಿಣ ಆಫ್ರಿಕಾದ ಹೆಗಲೇರಿರುವ "ಸ್ಪಿನ್‌ ಭೂತ' ಇನ್ನೂ ಕೆಳಗಿಳಿದಿಲ್ಲ. ಇದು ಬೆಂಗಳೂರಿನಲ್ಲೂ ಪ್ರವಾಸಿಗರಿಗೆ ಅಪಾಯದ ಮುನ್ಸೂಚನೆ ನೀಡಿದೆ...
ಆರ್ ,ಅಶ್ವಿ‌ನ್‌ ಮತ್ತು ಜಡೇಜ
ಆರ್ ,ಅಶ್ವಿ‌ನ್‌ ಮತ್ತು ಜಡೇಜ

ಬೆಂಗಳೂರು: ಪ್ರವಾಸಿ ದಕ್ಷಿಣ ಆಫ್ರಿಕಾದ ಹೆಗಲೇರಿರುವ "ಸ್ಪಿನ್‌ ಭೂತ' ಇನ್ನೂ ಕೆಳಗಿಳಿದಿಲ್ಲ. ಇದು ಬೆಂಗಳೂರಿನಲ್ಲೂ ಪ್ರವಾಸಿಗರಿಗೆ ಅಪಾಯದ ಮುನ್ಸೂಚನೆ ನೀಡಿದೆ. ಅಶ್ವಿ‌ನ್‌-ಜಡೇಜ ಜೋಡಿಯ ಸ್ಪಿನ್ನಿಗೆ ತತ್ತರಿಸಿದ ಆಮ್ಲ ಪಡೆ, ಶನಿವಾರ ಮೊದಲ್ಗೊಂಡ ದ್ವಿತೀಯ ಟೆಸ್ಟ್‌ನಲ್ಲಿ 214 ರನ್ನುಗಳ ಸಣ್ಣ ಮೊತ್ತಕ್ಕೆ ತನ್ನ ಪ್ರಥಮ ಇನ್ನಿಂಗ್ಸ್‌ ಮುಗಿಸಿದೆ.

ಬಳಿಕ ಭಾರತ ದಿಟ್ಟ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದು, ವಿಕೆಟ್‌ ನಷ್ಟವಿಲ್ಲದೆ 80 ರನ್‌ ಪೇರಿಸಿದೆ. ಇದರೊಂದಿಗೆ ಮೊದಲ ದಿನವೇ ಬೆಂಗಳೂರು ಟೆಸ್ಟ್‌ ಪಂದ್ಯದ ಮೇಲೆ ಕೊಹ್ಲಿ ಪಡೆ ಬಿಗಿ ಹಿಡಿತ ಸಾಧಿಸಿದಂತಾಗಿದೆ.

ಮೊಹಾಲಿಯಲ್ಲಿ ಸ್ಪಿನ್‌ ತ್ರಿವಳಿಗಳು ಹರಿಣಗಳಿಗೆ ಉರುಳಾದರೆ, ಬೆಂಗಳೂರಿನಲ್ಲಿ ಇಬ್ಬರೇ ಸ್ಪಿನ್ನರ್‌ಗಳು ಆಮ್ಲ ಪಡೆಗೆ ಕಂಟಕವಾಗಿ ಪರಿಣಮಿಸಿದರು. ಆರ್‌. ಅಶ್ವಿ‌ನ್‌ ಮತ್ತು ರವೀಂದ್ರ ಜಡೇಜ ತಲಾ 4 ವಿಕೆಟ್‌ ಕಿತ್ತು ಭಾರತಕ್ಕೆ ಮೇಲುಗೈ ಒದಗಿಸಿದರು. ಒಂದು ವಿಕೆಟ್‌ ವರುಣ್‌ ಆರೋನ್‌ ಪಾಲಾಯಿತು. ಇನ್ನೊಂದು ವಿಕೆಟ್‌ ರನೌಟ್‌ ರೂಪದಲ್ಲಿ ಬಿತ್ತು.

ಮೊಹಾಲಿಯ ಎರಡೂ ಇನ್ನಿಂಗ್ಸ್‌ಗಳಲ್ಲಿ ಖಾತೆ ತೆರೆಯದೆ ಹೋದರೂ ಸ್ಥಾನ ಉಳಿಸಿಕೊಂಡ ಶಿಖರ್‌ ಧವನ್‌ 45 ಹಾಗೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್‌ ಸ್ಥಿರತೆಯನ್ನು ಕಾಯ್ದುಕೊಂಡು ಬಂದಿರುವ ಮುರಳಿ ವಿಜಯ್‌ 28 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಭಾರತ ಕನಿಷ್ಠ 150 ರನ್‌ ಮುನ್ನಡೆ ಗಳಿಸಿದರೂ ಈ ಟ್ರ್ಯಾಕ್‌ನಲ್ಲಿ ಅದು ಬಂಪರ್‌ ಆಗಿ ಪರಿಣಮಿಸಲಿದೆ. ಮಳೆ ಬಾರದೇ ಹೋದರೆ, ದ್ವಿತೀಯ ಸರದಿಯಲ್ಲೂ ಸ್ಪಿನ್‌ ಮ್ಯಾಜಿಕ್‌ ಮುಂದುವರಿದರೆ ಮೂರೇ ದಿನದಲ್ಲಿ ಭಾರತದ ಪರವಾದ ಫ‌ಲಿತಾಂಶವನ್ನು ನಿರೀಕ್ಷಿಸಲಡ್ಡಿಯಿಲ್ಲ.

ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಭಾರತ ಇದರ ಭರಪೂರ ಲಾಭವೆತ್ತಿತು. ಇಶಾಂತ್‌ ಶರ್ಮ-ಸ್ಟುವರ್ಟ್‌ ಬಿನ್ನಿ ಜೋಡಿಯ 7 ಓವರ್‌ಗಳ ಸ್ಪೆಲ್‌ ಬಳಿಕ, ಮೊದಲ ಬೌಲಿಂಗ್‌ ಬದಲಾವಣೆ ರೂಪದಲ್ಲಿ ದಾಳಿಗಿಳಿದ ಅಶ್ವಿ‌ನ್‌ ಒಂದೇ ಓವರಿನಲ್ಲಿ ಅವಳಿ ವಿಕೆಟ್‌ ಬೇಟೆಯಾಡಿ ದಕ್ಷಿಣ ಆಫ್ರಿಕಾವನ್ನು ಆತಂಕಕ್ಕೆ ತಳ್ಳಿದರು. 2ನೇ ಎಸೆತದಲ್ಲಿ ವಾನ್‌ ಝಿಲ್‌ ಲೆಗ್‌ ಬಿಫೋರ್‌ ಬಲೆಗೆ ಬಿದ್ದರೆ, 5ನೇ ಎಸೆತದಲ್ಲಿ ಖಾತೆ ತೆರೆಯದ ಡು ಪ್ಲೆಸಿಸ್‌ ಪೂಜಾರಾಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ಅಲ್ಲಿಗೆ 15 ರನ್ನಿಗೆ ಪ್ರವಾಸಿಗರ 2 ವಿಕೆಟ್‌ ಬಿತ್ತು.

ಆಗಲೇ ಸ್ಟೇಡಿಯಂನಲ್ಲಿ "ಎಬಿಡಿ ಎಬಿಡಿ...' ಕೂಗು ಮಾರ್ದನಿಸತೊಡಗಿತ್ತು. ಆರ್‌ಸಿಬಿ ಆಟಗಾರನಾಗಿ ಬೆಂಗಳೂರನ್ನು ಮತ್ತೂಂದು ಮನೆಯನ್ನಾಗಿಸಿಕೊಂಡ ಡಿ ವಿಲಿಯರ್ಗೆ ಇದು 100ನೇ ಟೆಸ್ಟ್‌ ಪಂದ್ಯದ ಸಂಭ್ರಮವಾಗಿತ್ತು. ಅವರ "360 ಡಿಗ್ರಿ ಆಟ'ಕ್ಕೆ ಪ್ರೇಕ್ಷಕ ವರ್ಗ ಕಾತರದಿಂದ ಕಾಯುತ್ತಿತ್ತು. ಆದರೆ ಆಗ ಕ್ರೀಸಿಗೆ ಬಂದವರು ನಾಯಕ ಹಾಶಿಮ್‌ ಆಮ್ಲ. ಆದರೆ ಅವರ ರನ್‌ ಬರಗಾಲ ಇಲ್ಲಿಯೂ ಮುಂದುವರಿಯಿತು. ಕೇವಲ 7 ರನ್‌ ಮಾಡಿ ಆರೋನ್‌ಗೆ ಬೌಲ್ಡ್‌ ಆದರು. ಸ್ಕೋರ್‌ 3ಕ್ಕೆ 45.

ಈ ಹಂತದಲ್ಲಿ ಎಬಿಡಿ ಪ್ರವೇಶವಾಯಿತು. ಅವರೇ ದಕ್ಷಿಣ ಆಫ್ರಿಕಾದ ಮಾನ ಕಾಪಾಡಬೇಕಾಯಿತು. ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ ಯಾವುದೇ ಆತಂಕ ತೋರಗೊಡದ ಎಬಿಡಿ ಎಂದಿನ ಲಯದಲ್ಲೇ ಸಾಗಿದರು. 59 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ಒಟ್ಟು 105 ಎಸೆತಗಳನ್ನು ಎದುರಿಸಿ 11 ಬೌಂಡರಿ, ಒಂದು ಸಿಕ್ಸರ್‌ ನೆರವಿನಿಂದ 85 ರನ್‌ ಬಾರಿಸಿ ತಂಡವನ್ನು ಆಧರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com