ಬಾಂಗ್ಲಾ ಮಣಿಸಿ ತ್ರಿಕೋನ ಸರಣಿ ಗೆದ್ದ ಭಾರತ

ಮಾರಕ ಬೌಲಿಂಗ್ ದಾಳಿ ಹಾಗೂ ಸರ್ಫರಾಜ್ ಖಾನ್ (ಅಜೇಯ 59 ರನ್, 27 ಎಸೆತ, 9 ಬೌಂಡರಿ, 3 ಸಿಕ್ಸರ್) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ 19...
ಸರ್ಫರಾಜ್ ಖಾನ್
ಸರ್ಫರಾಜ್ ಖಾನ್
ಕೋಲ್ಕತಾ: ಮಾರಕ ಬೌಲಿಂಗ್ ದಾಳಿ ಹಾಗೂ ಸರ್ಫರಾಜ್ ಖಾನ್ (ಅಜೇಯ 59 ರನ್, 27 ಎಸೆತ, 9 ಬೌಂಡರಿ, 3 ಸಿಕ್ಸರ್) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ 19 ವರ್ಷದೊಳಗಿನ ಕ್ರಿಕೆಟ್ ತಂಡ ತ್ರಿಕೋನ ಏಕದಿನ ಸರಣಿಯನ್ನು ಗೆದ್ದುಕೊಂಡಿದೆ. 
ಭಾನುವಾರ ಜಾದವ್‍ಪುರ ವಿಶ್ವವಿದ್ಯಾಲಯದ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ಪಂದ್ಯದಲ್ಲಿ 219 ಎಸೆತಗಳು ಬಾಕಿ ಇರುವಂತೆ 7 ವಿಕೆಟ್ ಗಳ ಭರ್ಜರಿ ಜಯ ಸಂಪಾದಿಸಿದೆ. ಆ ಮೂಲಕ ರಾಹುಲ್ ದ್ರಾವಿಡ್ 19 ವರ್ಷದವರ ಕೋಚ್ ಆಗಿ ಮೊದಲ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. ಆ ಮೂಲಕ ಮುಂದಿನ ವರ್ಷ ಬಾಂಗ್ಲಾದೇಶದಲ್ಲಿ ನಡೆಯಲಿರುವ ಕಿರಿಯರ ವಿಶ್ವಕಪ್ ಟೂರ್ನಿಗೆ ತಂಡ ಉತ್ತಮ ತಾಲೀಮು ನಡೆಸಿ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಂತಾಗಿದೆ. 
ಟಾಸ್ ಗೆದ್ದ ಬಾಂಗ್ಲಾದೇಶ ಕಿರಿಯರು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆ ನಂತರ 36.5 ಓವರ್ ಗಳಲ್ಲಿ 116 ರನ್‍ಗಳಿಗೆ ಸರ್ವಪತನವಾಯಿತು. ಈ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಭಾರತ 13.3 ಓವರ್‍ಗಳಲ್ಲಿ 3 ವಿಕೆಟ್‍ಗೆ 117 ರನ್ ದಾಖಲಿಸಿತು. ಆ ಮೂಲಕ ಆಫ್ಘಾನಿಸ್ಥಾನ, ಬಾಂಗ್ಲಾದೇಶ ಒಳಗೊಂಡ ತ್ರಿಕೋನ ಸರಣಿಯನ್ನು ಗೆದ್ದುಕೊಂಡಿದೆ. ಭಾರತದ ಪರ ವಾಶಿಂಗ್ಟನ್ ಸುಂದರ್ (12), ರಿಶಬ್ ಪಂತ್ (26) ಮತ್ತು ಅಮನ್‍ದೀಪ್ ಖಾರೆ (0) ಬೇಗನೆ ಒಟಾದರು. ಈ ವೇಳೆ ಕ್ರೀಸ್‍ಗಿಳಿದ ರಿಕಿ ಭುಯಿ (ಅಜೇಯ 20) ಮತ್ತು ಸರ್ಫರಾಜ್ ಖಾನ್ ತಂಡವನ್ನು ಜಯದ ದಡ ಸೇರಿಸಿದರು. 
ಬಾಂಗ್ಲಾ ಪರ ಸಯೀದ್ ಸರ್ಕಾರ್, ಹಸನ್ ಮಿರಾಜ್ ಮತ್ತು ಅಹ್ಮದ್ ಶವೊನ್ ತಲಾ 1 ವಿಕೆಟ್ ಪಡೆದರು. ಇದಕ್ಕು ಮುನ್ನ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಪರ ಶಾಂಟೊ (45), ಜೊಯïರಾಜ್ ಶೇಖ್ (28), ಜಕರ್ ಅಲಿ (24) ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಉಳಿದಂತೆ ಯಾವುದೇ ಬ್ಯಾಟ್ಸ್‍ಮನ್ ಹೆಚ್ಚು ರನ್ ಗಳಿಸಲಿಲ್ಲ. ಭಾರತದ ಪರ ಮಯಾಂಕ್ ದಗಾರ್ 3, ಶುಭಮ್ ಮವಿ ಮತ್ತು ಮಹಿಪಾಲ್ ಲೊಮ್ರೊರ್ ತಲಾ 2, ಆವೇಶ್ ಖಾನ್ ಮತ್ತು ಅಹ್ಮದ್ ತಲಾ 1 ವಿಕೆಟ್ ಪಡೆದರು. ಭಾರತ ತಂಡದ ಪರ ಸ್ಫೋಟಕ ಅರ್ಧಶತಕ ದಾಖಲಿಸಿದ ಸರ್ಫರಾಜ್ ಖಾನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 
ಸಂಕ್ಷಿಪ್ತ ಸ್ಕೋರ್:
 ಬಾಂಗ್ಲಾದೇಶ 36.5 ಓವರ್‍ಗಳಲ್ಲಿ 116 (ಶಾಂಟೊ 45, ಶೇಖ್ 28, ಮಯಾಂಕ್ 32ಕ್ಕೆ 3), 
ಭಾರತ 13.3 ಓವರ್‍ಗಳಲ್ಲಿ 117 (ಸರ್ಫರಾಜ್ ಅಜೇಯ 59, ರಿಶಬ್ 26, ಸಯೀದ್ 23ಕ್ಕೆ 1)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com