
ಎರಡು ಅಭ್ಯಾಸ ಪಂದ್ಯಗಳಲ್ಲಿ ನ್ಯೂಜಿಲೆಂಡ್ ಎ ತಂಡದ ವಿರುದ್ಧ ಜಯ ಸಾಧಿಸಿ ಆತ್ಮ ವಿಶ್ವಾಸವನ್ನು ಆಗಾಧವಾಗಿ ವೃದ್ಧಿಸಿಕೊಂಡಿರುವ ಭಾರತೀಯ ಹಾಕಿ ತಂಡ, ಮಂಗಳವಾರ ನಡೆಯಲಿರುವ ತಮ್ಮ ಮುಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ರಾಷ್ಟ್ರೀಯ ತಂಡವನ್ನೆದುರಿಸಲಿದ್ದು, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ.
ನೆಲ್ಸನ್‍ನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಈಗಾಗಲೇ ಸಾಕಷ್ಟು ತಯಾರಿ ನಡೆಸಿರುವ ಸರ್ದಾರ್ ಪಡೆ, ಸದರಿ ಪ್ರವಾಸದಲ್ಲಿ ಮತ್ತೊಂದು ಜಯದ ಮಾಲೆ ಧರಿಸುವ ಕಾತುರದಲ್ಲಿದೆ. ಈ ಎರಡೂ ತಂಡಗಳು ಈ ಹಿಂದೆ 2014ರಲ್ಲಿ ವಿಶ್ವ ಹಾಕಿ ಲೀಗ್ ಪಂದ್ಯಾವಳಿಯಲ್ಲಿ ಮುಖಾಮುಖಿಯಾಗಿದ್ದವು. ಆಗ, ಕಿವೀಸ್ ಪಡೆ ಜಯ ಸಾಧಿಸಿತ್ತು. ಇದೀಗ, ತನ್ನ ತವರಿನಲ್ಲೇ ಭಾರತವನ್ನು ಎದುರಿಸುತ್ತಿರುವ ಬ್ಲಾಕ್ ಸ್ಟಿಕ್ಸ್ ಪಡೆ (ನ್ಯೂಜಿಲೆಂಡ್ ಹಾಕಿ ತಂಡದ ಅಡ್ಡ ಹೆಸರು) ಸಹಜವಾಗಿ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಆದರಿತ್ತ, ಭಾರತ ತಂಡಕ್ಕೆ ಕಿವೀಸ್ ಎ ತಂಡದ ವಿರುದ್ಧ ದಾಖಲಿಸಿರುವ ಎರಡು ಗೆಲುವುಗಳೇ ಸ್ಪೂರ್ತಿ ಎನಿಸಿದೆ.ಹಿಂದಿನ ಎರಡು ಪಂದ್ಯಗಳಲ್ಲಿ ಮಿಂಚಿರುವ ರಾಜ್ಯದ ಇಬ್ಬರು ಆಟಗಾರರಾದ ಎಸ್.ಕೆ. ಉತ್ತಪ್ಪ, ಎಸ್.ವಿ ಸುನೀಲ್ ಜೊತೆಗೆ ಆಕಾಶ್ ದೀಪ್ ಮಂಗಳವಾರದ ಪಂದ್ಯದ ಅದೇ ರೀತಿಯ ಮಿಂಚಿನ ಆಟ ಪ್ರದರ್ಶಿಸಿದರೇ ಪಂದ್ಯ ಗೆಲ್ಲುವುದು ಭಾರತಕ್ಕೆ ಕಷ್ಟವೇನು ಆಗಲಾರದು.
ಇದೇ ವಿಚಾರವಾಗಿ, ಸೋಮವಾರ ಸುದ್ದಿಗಾರರೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ತಂಡದ ಮುಖ್ಯ ತರಭೇತುದಾರ ಹಾಗೂ ಉತ್ಕೃಷ್ಟ ಪ್ರದರ್ಶನದ ನಿರ್ದೇಶಕ ರೋಲಂಟ್ ಓಲ್ಟ್ಸ್ ಮನ್ ಕಳೆದ ಎರಡೂ ಪಂದ್ಯಗಳು ಭಾರತಕ್ಕೆ ಸಾಕಷ್ಟು ನೆರವಾಗಿವೆ. ಕೇವಲ ಗೆಲುವುಗಳಿಂದ ಗಳಿಸಿದ ಆತ್ಮವಿಶ್ವಾಸವಷ್ಟೇ ಅಲ್ಲ, ಇಲ್ಲಿನ ಹವಾಗುಣ ಹಾಗೂ ಮತ್ತಿತರ ಸ್ಥಿತಿಗತಿಗಳಿಗೂ ನಮ್ಮ ಆಟಗಾರರಿಗೆ ಹೊಂದಿಕೊಳ್ಳಲು ಅನುವು ಮಾಡಿಕೊಟ್ಟಿವೆ. ಹಿಂದಿನ ಪಂದ್ಯಗಳಲ್ಲಿ ಫೀಲ್ಡ್ ಗೋಲ್ ಗಳಿಸುವಲ್ಲಿ ನಮ್ಮ ಆಟಗಾರರು ಸಾಕಷ್ಟು ನೈಪುಣ್ಯತೆ ಸಾಧಿಸಿದ್ದಾರೆ. ಈ ನಿಟ್ಟಿನಲ್ಲಿ, ಆಟಗಾರರ ತಂತ್ರಗಾರಿಕೆಯಲ್ಲಿ ಸಾಕಷ್ಟು ಬದಲಾವಣೆ ನೋಡಬಹುದು. ಕಿವೀಸ್ ತಂಡದ ಭದ್ರತಾ ಪಡೆಯನ್ನು ಬೇಧಿಸುವುದು, ಆ ತಂಡದ `ಡಿ' ಆವರಣದೊಳಗೆ ನುಗ್ಗುವುದು ನಂತರ ಗೋಲು ದಾಖಲಿಸುವ ತಂತ್ರಗಾರಿಕೆಯಲ್ಲಿ ಸಾಕಷ್ಟು ಪಳಗಿದ್ದಾರೆ. ಆಟಗಾರರ ನಡುವಿನ ಸಹಕಾರವೂ ಗಮನ ಸೆಳೆಯುವಂಥಾದ್ದು ಎಂದರು.
Advertisement