ಟೀಂ ಇಂಡಿಯಾ
ಟೀಂ ಇಂಡಿಯಾ

ಟೀಂ ಇಂಡಿಯಾಗೆ ಕ್ಲೀನ್ ಸ್ವೀಪ್ ಭಯ

ಮುಂದಿನ ವರ್ಷ ತವರಿನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ ಟಿ20 ಪಂದ್ಯಾವಳಿಯ ದೃಷ್ಟಿಯಿಂದ ಆತಿಥೇಯ ಭಾರತ ಮತ್ತು ಪ್ರವಾಸಿ ದ.ಆಫ್ರಿಕಾಕ್ಕೆ...
Published on
ಕೋಲ್ಕತಾ: ಮುಂದಿನ ವರ್ಷ ತವರಿನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ ಟಿ20 ಪಂದ್ಯಾವಳಿಯ ದೃಷ್ಟಿಯಿಂದ ಆತಿಥೇಯ ಭಾರತ ಮತ್ತು ಪ್ರವಾಸಿ ದ.ಆಫ್ರಿಕಾಕ್ಕೆ ಮಹತ್ವನೀಯವೆನಿಸಿದ್ದ ಮೂರು ಚುಟುಕು ಪಂದ್ಯ ಸರಣಿಯನ್ನು ಈಗಾಗಲೇ 0-2ರಿಂದ ಕೈಚೆಲ್ಲಿರುವ ಎಂ.ಎಸ್. ಧೋನಿ ನಾಯಕತ್ವದ ಭಾರತ ತಂಡ, ಗುರುವಾರ ನಡೆಯಲಿರುವ ಕೊನೆಯ ಹಾಗೂ ಮೂರನೇ ಪಂದ್ಯದಲ್ಲಿ ಕ್ಲೀನ್‍ಸ್ವೀಪ್‍ನಿಂದ ಪಾರಾಗಬೇಕಾದ ಒತ್ತಡಕ್ಕೆ ಸಿಲುಕಿದೆ.
ಭಾರತದ ಐತಿಹಾಸಿಕ ಕ್ರಿಕೆಟ್ ತಾಣವೆಂದೇ ಕರೆಯಲಾಗುವ ಈಡನ್ ಗಾರ್ಡನ್ ಮೈದಾನವು ಈ ಅಂತಿಮ ಚುಟುಕು ಸೆಣಸಾಟಕ್ಕೆ ಸಾಕ್ಷಿಯಾಗಲಿದೆ. ಅಂದಹಾಗೆ ಈ ಮೂರನೇ ಪಂದ್ಯವು ಭಾರತದ ಪಾಲಿಗೆ ತನ್ನ ಪ್ರತಿಷ್ಠೆಯನ್ನು ಕಾಯ್ದುಕೊಳ್ಳಲಷ್ಟೇ ಪ್ರಾಮುಖ್ಯ ಪಡೆದಿದೆ. ಮೊದಲಿಗೆ ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಸವಾಲಿನ ಮೊತ್ತ ಕಲೆಹಾಕಿಯೂ ಗೆಲುವು ದಕ್ಕಿಸಿಕೊಳ್ಳಲು ವಿಫಲವಾದ ಧೋನಿ ಪಡೆ, ಕಟಕ್‍ನಲ್ಲಿನ ಎರಡನೇ ಪಂದ್ಯದಲ್ಲಿಯಂತೂ ದಯನೀಯ ಬ್ಯಾಟಿಂಗ್ ನಡೆಸಿ ಸರಣಿ ಕೈಚೆಲ್ಲಿತು. ಇದೀಗ ಹರಿಣಗಳನ್ನು ಮೂರನೇ ಪಂದ್ಯದಲ್ಲಿಯಾದರೂ ಮಣಿಸಿ ಕಳೆದುಕೊಂಡಿರುವ ತನ್ನ ಗೌರವವನ್ನು ಮರಳಿ ಪಡೆಯಬೇಕಾದ ಅನಿವಾರ್ಯತೆಗೆ ಧೋನಿ ಪಡೆ ಒಳಗಾಗಿದೆ. 
ಎಚ್ಚರಿಕೆ ಅಗತ್ಯ: ಚುಟುಕು ಕ್ರಿಕೆಟ್‍ನಲ್ಲಿ ಎಷ್ಟು ಆಕ್ರಮಣಕಾರಿಯಾಗಿರಬೇಕೋ ಅಷ್ಟೇ ಮೈಯೆಲ್ಲಾ ಜಾಗ್ರತೆಯೂ ಅಗತ್ಯ. ಕಟಕ್ ಪಂದ್ಯದಲ್ಲಿ ಧಾವಂತಕ್ಕೆ ಒಳಗಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ರನೌಟ್ ಆಗಿ ಭಾರತದ ಪಾಲಿಗೆ ದುಬಾರಿಯಾಗಿ ಪರಿಣಮಿಸಿದ್ದರು. ಈ ಪ್ರಮಾದ ಮರುಕಳಿಸದಂತೆ ನೋಡಿಕೊಳ್ಳಬೇಕಿದೆ. ಇನ್ನು ಕಳೆದೆರಡೂ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿರುವ ಆರಂಭಿಕ ಶಿಖರ್ ಧವನ್ ಮೂರನೇ ಪಂದ್ಯದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳು ಬಹುತೇಕ ಕ್ಷೀಣಿಸಿದ್ದು, ಅವರ ಸ್ಥಾನದಲ್ಲಿ ಅಜಿಂಕ್ಯ ರಹಾನೆ ಆಡುವ ಸಾಧ್ಯತೆ ಇದೆ. ಆದಾಗ್ಯೂ ಪಿಚ್‍ನ ಸ್ಥಿತಿಗನುಗುಣವಾಗಿ ಈ ಪಲ್ಲಟಗಳಾಗುವ ಸಂಭವವಿದೆ. ಇನ್ನು ಸುರೇಶ್ ರೈನಾ, ಅಂಬಟಿ ರಾಯುಡು ಹಾಗೂ ಎಂ.ಎಸ್. ಧೋನಿ ಮಧ್ಯಮ ಕ್ರಮಾಂಕದಲ್ಲಿ ಇನ್ನಿಂಗ್ಸ್ ಅನ್ನು ಸಶಕ್ತಗೊಳಿಸಲು ಮುಂಚೂಣಿಗರ ಪಾತ್ರ ಮಹತ್ವವಾಗಿದೆ. 
ಏತನ್ಮಧ್ಯೆ ಬೌಲಿಂಗ್ ವಿಭಾಗವು ಇನ್ನಷ್ಟು ಮೊನಚಿನಿಂದ ಕೂಡಿರದ ಹೊರತು ದ.ಆಫ್ರಿಕಾವನ್ನು ಕಟ್ಟಿಹಾಕಲು ಸಾಧ್ಯವಾಗದು. ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ ಬೌಲರ್‍ಗಳು ಕಟಕ್ ಪಂದ್ಯದಲ್ಲಿ ಯೂ ತೀಕ್ಷ್ಣತೆ ಕಳೆದುಕೊಂಡಿದ್ದರು. ಆದಾಗ್ಯೂ ಸ್ಪಿನ್ ವಲಯವನ್ನು ಅತ್ಯಂತ ಅಪಾಯಕಾರಿಯಾಗಿ ಪರಿವರ್ತಿಸಿದ್ದ ಆರ್. ಅಶ್ವಿನ್ ದ. ಆಫ್ರಿಕಾವನ್ನು ಕಾಡಿದ್ದರು. ಆದರೆ ಸಮರ್ಥಿಸಿಕೊಳ್ಳಲಾಗಷ್ಟು ಅಲ್ಪ ಮೊತ್ತಕ್ಕೆ ಗುರಿಯಾಗಿದ್ದ ಭಾರತ, ಪಂದ್ಯದಲ್ಲಿ 6 ವಿಕೆಟ್ ಸೋಲನು ಭವಿಸಿತ್ತು. 
ಹರಿಣಗಳ ಅಮಿತೋತ್ಸಾಹ: ಇತ್ತ ಆರಂಭಿಕ ಎರಡು ಪಂದ್ಯಗಳ ಲ್ಲಿಯೂ ಚಿಕಿತ್ಸಾತ್ಮಕ ಪ್ರದರ್ಶನ ನೀಡಿ ಸರಣಿಯನ್ನು ಕೈವಶ ಮಾಡಿಕೊಂಡಿರುವ ಪ್ರವಾಸಿ ದ.ಆಫ್ರಿಕಾ ಆಟಗಾರರಂತೂ ಅಮಿ ತೋತ್ಸಾಹದಿಂದ ಕೂಡಿದ್ದಾರೆ. ಕೊನೇ ಪಂದ್ಯ ಅವರ ಪಾಲಿಗೆ ಔಪಚಾರಿಕವೆನಿಸಿದರೂ, ವೈಟ್‍ವಾಶ್ ಗುಂಗಿನಲ್ಲಿರುವ ಆಫ್ರಿಕಾ ಮತ್ತೊಮ್ಮೆ ಭಾರತದ ವಿರುದ್ಧ ಪ್ರಭುತ್ವ ಮೆರೆಯಲು ಪಣ ತೊಟ್ಟಿದೆ. ಉತ್ತಮ ಜತೆಯಾಟದಿಂದ ತಂಡಕ್ಕೆ ನೆರವಾಗುತ್ತಿರುವ ಹಾಶೀಂ ಆಮ್ಲಾ, ಡಿವಿಲಿಯರ್ಸ್ ಹಾಗೂ ಇದಕ್ಕೆ ಪೂರಕವಾಗಿ ಆಲ್‍ರೌಂಡ್ ಸ್ಥಾನವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಜೆಪಿ ಡುಮಿನಿ ಕೊನೇ ಪಂದ್ಯದಲ್ಲಿಯೂ ಮಿಂಚು ಹರಿಸಲು ಅಣಿಯಾಗಿದ್ದಾರೆ. ವೇಗಿ ಆಲ್ಬೀ ಮಾರ್ಕೆಲ್ ಕೂಡ ಭಾರತಕ್ಕೆ ಸಿಂಹಸ್ವಪ್ನವಾಗಿದ್ದಾರೆ. 
ಬ್ಯಾಟಿಂಗ್ ತಾಣ: ಈಗಾಗಲೇ ಸರಣಿ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ 40 ಸಹಸ್ರ ಪ್ರೇಕ್ಷಕ ಸಾಮಥ್ರ್ಯ ಹೊಂದಿರುವ ಚಾರಿತ್ರಿಕ ಕ್ರಿಕೆಟ್ ತಾಣ ಈಡನ್ ಗಾರ್ಡನ್‍ನಲ್ಲಿ ನಡೆಯಲಿರುವ ಕೊನೇ ಪಂದ್ಯಕ್ಕೆ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರು ಹಾಜರಿರುವುದು ಸಂದೇಹವೆನಿಸಿದೆ. ಈ ಮಧ್ಯೆ ಅಂಗಣ ಬ್ಯಾಟ್ಸ್‍ಮನ್ ಸ್ನೇಹಿಯಾಗಿ ಇರಲಿದೆ ಎಂದು ಮೈದಾನದ ಪಿಚ್ ಕ್ಯುರೇಟರ್ ಪ್ರಬೀರ್ ಮುಖರ್ಜಿ ಮತ್ತು ಮಾಜಿ ನಾಯಕ ಸೌರವ್ ಗಂಗೂಲಿ ಮುಂತಿಳಿಸಿದ್ದಾರೆ. ಕಳೆದೆರಡು ದಿನಗಳಿಂದ ಮಳೆ ಸುರಿದರೂ, 31 ಡಿಗ್ರಿ ತಾಪಮಾನದಿಂದ ಕೂಡಿರುವ ವಾತಾವರಣದಲ್ಲಿ ತುಂತುರು ಇಬ್ಬನಿ ಬೀಳಲಿದ್ದು, ಇದು ಪಿಚ್‍ನ ತಿರುವಿಗೆ ಕಾರಣವಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com