ಜಯದ ಹಾದಿಯಲ್ಲಿ ಜಾರಿದ ಭಾರತ

ಒಂದು ಹಂತದಲ್ಲಿ ಗೆಲವಿನತ್ತ ದಾಪುಗಾಲಿಟ್ಟು ಸಾಗುತ್ತಿದ್ದ ಭಾರತಕ್ಕೆ ತನ್ನ ಮೊನಚು ಬೌಲಿಂಗ್ ದಾಳಿಯಿಂದ ಅಡ್ಡಗಾಲು ಹಾಕಿದ...
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ
ರಾಜ್ ಕೋಟ್: ಒಂದು ಹಂತದಲ್ಲಿ ಗೆಲವಿನತ್ತ ದಾಪುಗಾಲಿಟ್ಟು ಸಾಗುತ್ತಿದ್ದ ಭಾರತಕ್ಕೆ ತನ್ನ ಮೊನಚು ಬೌಲಿಂಗ್ ದಾಳಿಯಿಂದ ಅಡ್ಡಗಾಲು ಹಾಕಿದ ದಕ್ಷಿಣ ಆಫ್ರಿಕಾ, ಮೂರನೇ ಏಕದಿನ ಪಂದ್ಯದಲ್ಲಿ ವಿಜಯದ ನಗೆ ಬೀರಿದೆ. 
ಭಾನುವಾರ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 18 ರನ್ ಅಂತರದಲ್ಲಿ ಜಯ ಸಂಪಾದಿಸಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 2-1ರ ಮುನ್ನಡೆ ಸಾಧಿಸಿದೆ. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 
ಆನಂತರ 50 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 270 ರನ್ ಗಳನ್ನು ಕಲೆ ಹಾಕಿತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ 50 ಓವರ್‍ಗಳಲ್ಲಿ 6 ವಿಕೆಟ್‍ಗೆ 252 ರನ್ ಗಳಿಸಲಷ್ಟೇ ಶಕ್ತವಾಯಿತು. 
ವ್ಯರ್ಥವಾದ ಕೊಹ್ಲಿ-ಧೋನಿ ಹೋರಾಟ: ದಕ್ಷಿಣ ಆಫ್ರಿಕಾ ನೀಡಿದ್ದ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದಭಾರತ ತಂಡ ತನ್ನ ಇನಿಂಗ್ಸ್ ಅರ್ಧಭಾಗದವರೆಗೂ ಯಶಸ್ವಿಯಾಗಿ ಗುರಿ ತಲುಪುವ ಸ್ಥಿತಿಯಲ್ಲಿತ್ತು. 
ಆದರೆ, ಅಂತಿಮ 15 ಓವರ್‍ಗಳಲ್ಲಿ ದಕ್ಷಿಣ ಆಫ್ರಿಕಾ ತಂಡದ ದಾಳಿ ಭಾರತೀಯ ಬ್ಯಾಟ್ಸ್‍ಮನ್‍ಗಳಿಗೆ ಮಾರಕವಾಗಿ ಪರಿಣಮಿಸಿತು. ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ (13) ನಿರಾಸೆ ಮೂಡಿಸಿದರು. ರೋಹಿತ್ ಶರ್ಮಾ (65) ಹಾಗೂ ವಿರಾಟ್ ಕೊಹ್ಲಿ (77) ಎರಡನೇ ವಿಕೆಟ್‍ಗೆ (72) ಅರ್ಧಶತಕದ ಜತೆಯಾಟ ನೀಡಿದರು. 
ಇನ್ನು ಮೂರನೇ ವಿಕೆಟ್‍ಗೆ ಕೊಹ್ಲಿ ಜತೆಗೂಡಿದ ನಾಯಕ ಮಹೇಂದ್ರ ಸಿಂಗ್ ಧೋನಿ (47) ಮತ್ತೊಂದು ಅರ್ಧಶತಕದ ಜತೆಯಾಟವಾಡಿದರು. ಒಂದು ಹಂತದಲ್ಲಿ 35 ಓವರ್‍ಗಳಲ್ಲಿ 2 ವಿಕೆಟ್‍ಗೆ 162 ರನ್ ದಾಖಲಿಸಿದ್ದ ಭಾರತ, 8 ವಿಕೆಟ್‍ಗಳೊಂದಿಗೆ 90 ಎಸೆತದಲ್ಲಿ 109 ರನ್‍ಗಳ ಅಗತ್ಯದಲ್ಲಿತ್ತು. ನಂತರದ ಹಂತದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್‍ಗಳಿಗೆ ರನ್ ಗಳಿಸಲು ಅವಕಾಶ ಮಾಡಿಕೊಡದ ಆಫ್ರಿಕಾ ಬೌಲರ್‍ಗಳು ಸಂಘಟಿತ ದಾಳಿ ನಡೆಸಿದರು.
ಕ್ರಮೇಣವಾಗಿ ಬ್ಯಾಟ್ಸ್‍ಮನ್‍ಗಳ ಮೇಲೆ ಒತ್ತಡ ಹೆಚ್ಚಾಯಿತು. ಇದರಿಂದ ವಿಕೆಟ್‍ಗಳು ಬೀಳಲಾರಂಭಿಸಿ ಭಾರತ ಸೋಲಿನತ್ತ ಹೆಜ್ಜೆ ಹಾಕಿತು. ದಕ್ಷಿಣ ಆಫ್ರಿಕಾ ತಂಡದ ಪರ ಮಾರ್ಕೆಲ್ 4, ಡುಮಿನಿ ಹಾಗೂ ಇರ್ಮಾನ್ ತಲಾ 1 ವಿಕೆಟ್ ಪಡೆದರು.
ಹರಿಣಗಳಿಗೆ ಕ್ವಿಂಟಾನ್ ಶತಕದ ಆಸರೆ: ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಯಿತು. ಕೆಳ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಡೇವಿಡ್ ಮಿಲ್ಲರ್‍ಗೆ ಆರಂಭಿಕರಾಗಿ ಬಡ್ತಿ ನೀಡಲಾಯಿತು. ಮಿಲ್ಲರ್‍ಗೆ ಬ್ಯಾಟಿಂಗ್ ಮಾಡಲು ಉತ್ತಮ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಪ್ರಯೋಗ ಮಾಡಲಾಯಿತು. ಇದು ತಂಡಕ್ಕೆ ಉತ್ತಮ ಫಲಿತಾಂಶ ನೀಡಿತು. ಕ್ವಿಂಟಾನ್ ಡಿ ಕಾಕ್ ಜತೆ ಇನಿಂಗ್ಸ್ ಆರಂಭಿಸಿದ ಮಿಲ್ಲರ್, ಮೊದಲ ವಿಕೆಟ್‍ಗೆ 72 ರನ್‍ಗಳ ಉತ್ತಮ ಅಡಿಪಾಯ ಹಾಕಿಕೊಟ್ಟರು. 
ಆಸರೆಯಾದ ಶತಕದ ಜತೆಯಾಟ: 3ನೇ ವಿಕೆಟ್‍ಗೆ ಕ್ವಿಂಟಾನ್ ಜತೆಗೂಡಿದ ಫಫ್ ಡುಪ್ಲೆಸಿಸ್ 118 ರನ್ ಪೇರಿಸುವ ಮೂಲಕ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. 60 ರನ್ ಗಳಿಸಿದ ಪ್ಲೆಸಿಸ್ ಮೋಹಿತ್ ಶರ್ಮಾ ಎಸೆತದಲ್ಲಿ ಔಟಾದರು. ಅಂತಿಮ ಹಂತದಲ್ಲಿ ಆಕ್ರಮಣಕಾರಿ ಬ್ಯಾಟ್ಸ್‍ಮನ್ ಡಿವಿಲಿಯರ್ಸ್ (5), ಜೆ.ಪಿ.ಡುಮಿನಿ (13) ಬೇಗನೆ ವಿಕೆಟ್ ಒಪ್ಪಿಸಿದ್ದು, ತಂಡಕ್ಕೆ ತೀವ್ರ ಪೆಟ್ಟು ನೀಡಿತು. ಅಂತಿಮ ಹಂತದಲ್ಲಿ ಹರಿಣಗಳ ಇನಿಂಗ್ಸ್ ಅನ್ನು ಏಕಾಂಗಿಯಾಗಿ ಮುನ್ನಡೆಸಿದ ಬೆಹರ್ಡಿನ್ (ಅಜೇಯ 33) ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com