ಬೆಂಗಳೂರು: ಟೂರ್ನಿಯ ಎರಡನೇ ಶ್ರೇಯಾಂಕಿತ ಹಾಗೂ ಜಾಗತಿಕ ರ್ಯಾಂಕಿಂಗ್‍ನಲ್ಲಿ 159ನೇ ಸ್ಥಾನ ಹೊಂದಿರುವ ಬ್ರಿಟನ್‍ನ ಜೇಮ್ಸ್ ವಾರ್ಡ್, ಏರ್ ಏಷ್ಯಾ ಟೆನಿಸ್ ಚಾಂಪಿಯನ್ ಶಿಪ್‍ನ ಪ್ರಶಸ್ತಿಗೆ ಭಾಜನರಾದರು. ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್‍ಎಲ್‍ಟಿಎ)ಯ ಕೋರ್ಟ್‍ನಲ್ಲಿ ಭಾನುವಾರ ಮುಕ್ತಾಯ ಕಂಡಲ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಜೇಮ್ಸ್ , ಅಗ್ರ ಶ್ರೇಯಾಂಕಿತ, ಸ್ಪೇನ್‍ನ ಆ್ಯಡ್ರಿಯನ್ ಮೆನೆಂಡಿಸ್-ಮಡೇರಾ ವಿರುದ್ಧ 6-2, 7-5 ನೇರ ಸೆಟ್‍ಗಳಲ್ಲಿ ಜಯ ಪಡೆದು, ರು. 32 ಲಕ್ಷ ಮೊತ್ತದ ಪ್ರಶಸ್ತಿಗೆ ಭಾಜನರಾದರು. ಈ ಕುತೂಹಲದ ಪಂದ್ಯಕ್ಕೆ ಸಾಕಷ್ಟು ಮಂದಿ ಪ್ರೇಕ್ಷಕರೂ ಸಾಕ್ಷಿಯಾದರು. ಪಂದ್ಯದ ಆರಂಭದಿಂದಲೂ ಮಿಂಚಿದ ಜೇಮ್ಸ್ , ವಿಶ್ವದ 137ನೇ ರ್ಯಾಂಕಿಂಗ್‍ನ ಆ್ಯಡ್ರಿಯನ್ ವಿರುದ್ಧದ ಮೊದಲನೇ ಸೆಟ್ ನಲ್ಲಿ ಅನಾಯಾಸ ಗೆಲವು ಸಾಧಿಸಿದರೂ, ದ್ವಿತೀಯ ಸೆಟ್ ನಲ್ಲಿ ತೀವ್ರ ಪ್ರತಿರೋಧ ಎದುರಿಸಿದರು. ಆದರೂ ಪಟ್ಟು ಬಿಡದೆ ಜಯ ತಮ್ಮದಾಗಿಸಿಕೊಂಡರು.