
ತಿರುವನಂತಪುರ: ಪಂದ್ಯದ ಆರಂಭದಲ್ಲಿ ಅವಕಾಶವನ್ನು ಕೈಚೆಲ್ಲಿದರೂ ನಂತರ ಆಕರ್ಷಕ ಪ್ರದರ್ಶನ ನೀಡಿದ ಭಾರತ ತಂಡ, ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಷನ್ (ಸ್ಯಾಫ್) ಚಾಂಪಿಯನ್‍ಶಿಪ್‍ನಲ್ಲಿ ಚಾಂಪಿಯನ್ ಆಗಿದೆ.
ಭಾನುವಾರ ತಿರುವನಂತಪುರ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತ (166ನೇ ರ್ಯಾಂಕಿಂಗ್) ತಂಡ 2-1 ಗೋಲುಗಳ ಅಂತರದಲ್ಲಿ ಅಫ್ಘಾನಿಸ್ತಾನ (150ನೇ ರ್ಯಾಂಕಿಂಗ್) ವಿರುದ್ಧ ಜಯಿಸಿತು. ಆ ಮೂಲಕ 7ನೇ ಬಾರಿಗೆ ಸ್ಯಾಫ್ ಚಾಂಪಿಯನ್‍ಶಿಪ್ ಪ್ರಶಸ್ತಿ ಯನ್ನು ಎತ್ತಿ ಹಿಡಿಯಿತು.
2013ರಲ್ಲಿ ಆಫ್ಘಾನಿಸ್ತಾನ ವಿರುದ್ಧ ಪ್ರಶಸ್ತಿ ಸುತ್ತಿನಲ್ಲಿ ಸೋತಿದ್ದ ಭಾರತ, ಈಗ ಮತ್ತೆ ಗೆದ್ದು ಪ್ರಶಸ್ತಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಪಂದ್ಯದಲ್ಲಿ ಭಾರತದ ಪರ ಜೆಜೆ ಲಾಲ್‍ಪೆಕ್ಲುವಾ 72ನೇ, ಸುನೀಲ್ ಛೆಟ್ರಿ 105ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, ಅಫ್ಘಾನಿಸ್ತಾನದ ಪರ ಜುಬೈರ್ ಅಮಿರ್ 70ನೇ ನಿಮಿಷದಲ್ಲಿ ಗೋಲು ಗಳಿಸಿದರು.
ಭಾರತ ತಂಡಕ್ಕೆ ಎರಡನೇ ಅವಧಿಗೆ ಸ್ಟೀಫನ್ ಕಾನ್ಸ್‍ಟಾಂಟೀನ್ ಕೋಚ್ ಆದ ನಂತರ ಗೆದ್ದ ಮೊದಲ ಪ್ರಶಸ್ತಿಯಾಗಿದೆ. ಪಂದ್ಯದ ಆರಂಭದಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಿ ಚೆಂಡಿನ ಮೇಲೆ ಹೆಚ್ಚು ನಿಯಂತ್ರಣ ಸಾಧಿಸಿತಾದರೂ, ಸಿಕ್ಕ ಸಾಕಷ್ಟು ಅವಕಾಶಗಳಲ್ಲಿ ಗೋಲು ದಾಖಲಿಸಲು ವಿಫಲವಾಗುವ ಮೂಲಕ ನಿರಾಸೆ ಅನುಭವಿಸಿತು. 14ನೇ ನಿಮಿಷದಲ್ಲಿ ನಾಯಕ ಸುನೀಲ್ ಛೆಟ್ರಿ ಚೆಂಡನ್ನು ಹೆಡ್ ಮಾಡಿದರು. ಆಗ ಗೋಲಿನ ಕಂಬಕ್ಕೆ ಬಡಿದ ಚೆಂಡು ಹೊರ ಸಾಗಿತು. ನಂತರ 33ನೇ ನಿಮಿಷದಲ್ಲಿ ಮತ್ತೆ ಸಿಕ್ಕ ಅವಕಾಶದಲ್ಲಿ ಛೆಟ್ರಿ ಚೆಂಡನ್ನು ನೇರವಾಗಿ ಗೋಲ್‍ಕೀಪರ್‍ನತ್ತ ಒದ್ದ ಕಾರಣ ಎದುರಾಳಿ ರಕ್ಷಕನಿಗೆ ಪ್ರಯತ್ನ ತಡೆಯಲು ಕಷ್ಟವಾಗಲಿಲ್ಲ. 45ನೇ ನಿಮಿಷದಲ್ಲಿ ಜೆಜೆ ಲಾಲ್‍ಪೆಕ್ಲುವಾ ಆಕರ್ಷಕ ರೀತಿಯಲ್ಲಿ ಛೆಟ್ರಿಗೆ ಪಾಸ್ ನೀಡಿದರು. ಅದನ್ನು ಪರಿಣಾಮಕಾರಿ ಯಾಗಿ ಬಳಸಿಕೊಳ್ಳಲು ಭಾರತ ತಂಡದ ನಾಯಕ ವಿಫಲರಾದರು. ಆ ಮೂಲಕ ಪಂದ್ಯದ ಮೊದಲಾರ್ಧ ಗೋಲು ದಾಖಲಾಗದೇ ಅಂತ್ಯಕಂಡಿತು.
ದ್ವಿತಿಯಾರ್ಧದಲ್ಲಿ ಉಭಯ ತಂಡದ ಆಟಗಾರರು ಚುರುಕಿನ ಆಟವಾಡಿದರು. 70ನೇ ನಿಮಿಷದಲ್ಲಿ ಆಫ್ಘನ್‍ನ ಜುಬೈರ್ ಅಮೀರ್ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರು. ಇದರ ಬೆನ್ನಲ್ಲೇ ಜೆಜೆ 72ನೇ ನಿಮಿಷದಲ್ಲಿ ಗೋಲು ಬಾರಿಸಿ ಆತಿಥೇಯರು ಸಮಬಲ ಸಾಧಿಸಲು ನೆರವಾದರು. ಪಂದ್ಯದ ನಿಗದಿತ ಅವಧಿ ವೇಳೆಗೆ ಉಭಯ ತಂಡಗಳು 1-1ರ ಸಮಬಲ ಸಾಧಿಸಿದ್ದರಿಂದ ಹೆಚ್ಚುವರಿ 30 ನಿಮಿಷ ಆಟ ಮುಂದುವರಿಸಲಾಯಿತು. ಪಂದ್ಯದ 105ನೇ ನಿಮಿಷದಲ್ಲಿ ನಾಯಕ ಸುನೀಲ್ ಛೆಟ್ರಿ ಸಿಕ್ಕ ಫ್ರೀ ಕಿಕ್‍ನಲ್ಲಿ ಗೋಲು ದಾಖಲಿಸಿ ತಂಡಕ್ಕೆ ಗೆಲವು ತಂದುಕೊಟ್ಟರು.
Advertisement