ರೋಮ್: ರಿಯಲ್ ಮ್ಯಾಡ್ರಿಡ್ ತಂಡದ ಮಾಜಿ ಸ್ಟ್ರೈಕರ್ ರೊಬಿನೊ ವಿರುದ್ಧ ಅತ್ಯಾಚಾರದ ಆರೋಪ ಸಾಬೀತಾಗಿದ್ದು, ಇಟಾಲಿಯ ನ್ಯಾಯಾಲಯ 9 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಇಟಾಲಿಯ ಸ್ಥಳೀಯ ಮಾಧ್ಯಮಗಳು ರೊಬಿನೊ ಜೈಲು ಶಿಕ್ಷೆಯನ್ನು ಖಚಿತಪಡಿಸಿದ್ದು, ಫುಟ್ಬಾಲ್ ಆಟಗಾರನೊಂದಿಗೆ ಆರೋಪ ಎದುರಿಸುತ್ತಿದ್ದ ಇನ್ನೂ 5 ವಿರುದ್ಧದ ತೀರ್ಪು ಇನ್ನಷ್ಟೇ ತಿಳಿಯಬೇಕಿದೆ ಎಂದು ಹೇಳಿವೆ.
ರೊಬಿನೊ 2013 ರಲ್ಲಿ ಸೀರೀ ಯಲ್ಲಿ ಎಸಿ ಮಿಲನ್ ತಂಡದ ಪರವಾಗಿ ಫುಟ್ಬಾಲ್ ಪಂದ್ಯವನ್ನಾಡುತ್ತಿದ್ದರು. ಈ ವೇಳೆ 22 ವರ್ಷಗಳ ಅಲ್ಬೇನಿಯನ್ ಮಹಿಳೆಯನ್ನು ಪಾನಮತ್ತಳನ್ನಾಗಿಸಿ ಆಕೆಯ ಮೇಲೆ ರೊಬಿನೊ ಹಾಗೂ ಇನ್ನು 5 ಜನರು ಅತ್ಯಾಚಾರ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ರೊಬಿನೊ ಅವರ ಅಪರಾಧ ಸಾಬೀತಾಗಿರುವ ಹಿನ್ನೆಲೆಯಲ್ಲಿ 9 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ತಮ್ಮ ವಿರುದ್ಧದ ಆರೋಪವನ್ನು ರೊಬಿನೊ ನಿರಾಕರಿಸಿದ್ದು, ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ. ತೀರ್ಪಿನ ಬಗ್ಗೆ ರೊಬಿನೊ ಫೇಸ್, ಬುಕ್, ಇನ್ಸ್ಟಾಗ್ರಾಮ್ ನಲ್ಲಿ ಬರೆದಿದ್ದು, ತಾನು ನಿರಪರಾಧಿ ಎಂದು ಹೇಳಿಕೊಂಡಿದ್ದಾರೆ.
ರೊಬಿನೊ ವಿರುದ್ಧ ಅತ್ಯಾಚಾರ, ಲೈಂಗಿಕ ಕಿರುಕುಳ ಕೇಳಿಬಂದಿರುವುದು ಇದೇ ಮೊದಲೇನಲ್ಲ. 2009 ರಲ್ಲಿ ಲೀಡ್ಸ್ ನಲ್ಲಿ ಯುವತಿಯೊಬ್ಬಳು ರೊಬಿನೊ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ರೊಬಿನೊ ಪ್ರಸ್ತುತ ಬ್ರೆಜಿಲ್ ನ ಅಟ್ಲೆಟಿಕೊ ಮಿನಿಯೊರೊ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.