ಕಾಮನ್​ವೆಲ್ತ್​ ಗೇಮ್ಸ್​ಗೆ ತೆರೆ: ದೇಶದ ಮುಡಿಗೇರಿದ 66 ಪದಕಗಳು, 3ನೇ ಸ್ಥಾನಕ್ಕೇರಿ ಗಮನ ಸೆಳೆದ ಭಾರತ

ಗೋಲ್ಡ್ ಕೋಸ್ಟ್ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ತೆರೆ ಬಿದ್ದಿದ್ದು, ಭಾರತೀಯ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಇದೇ ಮೊದಲ ಬಾರಿಗೆ ಭಾರತಕ್ಕೆ ಮೂರನೇ ಸ್ಥಾನ ಲಭಿಸುವಂತೆ ಮಾಡಿದ್ದಾರೆ.
ಸಾಧನೆಯ ಉತ್ತುಂಗಕ್ಕೇರಿರುವ ಭಾರತೀಯ ಕ್ರೀಡಾಪಟುಗಳು
ಸಾಧನೆಯ ಉತ್ತುಂಗಕ್ಕೇರಿರುವ ಭಾರತೀಯ ಕ್ರೀಡಾಪಟುಗಳು
ಗೋಲ್ಡ್ ಕೋಸ್ಟ್: ಸತತ 12 ದಿನಗಳ ಕಾಲ ವಿಶ್ವವನ್ನು ರಂಜಿಸಿದ್ದ ಗೋಲ್ಡ್ ಕೋಸ್ಟ್ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ತೆರೆ ಬಿದ್ದಿದ್ದು, ಭಾರತೀಯ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಇದೇ ಮೊದಲ ಬಾರಿಗೆ ಭಾರತಕ್ಕೆ ಮೂರನೇ ಸ್ಥಾನ ಲಭಿಸುವಂತೆ ಮಾಡಿದ್ದಾರೆ.
12 ದಿನದ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾ‍ಪಟುಗಳು 26 ಚಿನ್ನದ ಪದಕಗಳನ್ನು ಗೆದ್ದು, 20 ಬೆಳ್ಳಿ 20 ಕಂಚಿನ ಪದಕಗಲು ಸೇರಿದಂತೆ ಒಟ್ಟು 66 ಪದಕಗಳನ್ನು ರಾಷ್ಟ್ರಕ್ಕೆ ಗಳಿಸಿಕೊಟ್ಟಿದ್ದಾರೆ. ಇದರೊಂದಿಗೆ ಭಾರತ ಪದಕಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಆ ಮೂಲಕ ಭಾರತ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ತನ್ನ ಅತ್ಯುತ್ತಮ ಸಾಧನೆ ತೋರಿದೆ.  80 ಚಿನ್ನದ ಪದಕ ಗಳಿಸುವ ಮೂಲಕ ಆಸ್ಟ್ರೇಲಿಯಾ ಮೊದಲನೇ ಸ್ಥಾನ ಪಡೆದಿದ್ದರೆ, 45 ಚಿನ್ನ ಗೆದ್ದು ಇಂಗ್ಲೆಂಡ್‌ ಎರಡನೇ ಸ್ಥಾನದಲ್ಲಿದೆ. ಇನ್ನು ನಾಲ್ಕು ಹಾಗೂ ಐದನೇ ಸ್ಥಾನದಲ್ಲಿ ಕ್ರಮವಾಗಿ ಕೆನಡಾ ಹಾಗೂ ನ್ಯೂಜಿಲೆಂಡ್‌ ಸ್ಥಾನ ಪಡೆದಿದೆ.
ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳಿಂದ ತುಂಬಿ ತುಳುಕುತ್ತಿದ್ದ ಬೃಹತ್‌ ಕ್ರೀಡಾಂಗಣದಲ್ಲಿ, ಸಂಗೀತ, ಲೇಸರ್‌ ಲೈಟ್‌ನ ವಿಭಿನ್ನ ವಿನ್ಯಾಸ ಹಾಗೂ ಆಗಸದಲ್ಲಿ ಬಣ್ಣ ಬಣ್ಣದ ಬಾಣ ಬಿರುಸುಗಳ ಚಿತ್ತಾರದೊಂದಿಗೆ 21ನೇ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಭಾನುವಾರ ತರೆ ಎಳೆಯಲಾಯಿತು. ಭಾರತೀಯ ಕ್ರೀಡಾಪಟು ಕೂಡದಲ್ಲಿ ಚಿನ್ನಗೆದ್ದ ಬಾಕ್ಸರ್‌ ಮೇರಿ ಕೋಮ್‌ ತ್ರಿವರ್ಣ ಧ್ವಜ ಹಿಡಿದು ಕ್ರೀಡಾಂಗಣದಲ್ಲಿ ಭಾರತೀಯ ತಂಡವನ್ನು ಮುನ್ನಡೆಸಿದರು.
ಕೊನೆಯ ದಿನವೂ ಪದಕಗಳ ಭೇಟೆಯಲ್ಲಿ ಭಾರತೀಯರು ಪಾರಮ್ಯ ಮೆರೆದಿದ್ದಾರೆ. ವಿಶ್ವದ ಮೂರನೇ ಶ್ರೇಯಾಂಕಿತ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧುರನ್ನು ಮಣಿಸುವ ಮೂಲಕ ಸೈನಾ ನೆಹ್ವಾಲ್‌ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದರು. ಪಿ.ವಿ.ಸಿಂಧು ಬೆಳ್ಳಿಪದಕಕ್ಕೆ ಮುತ್ತಿಟ್ಟರು. ಸ್ಕ್ವಾಷ್‌ ವಿಭಾಗದ ಮಿಕ್ಸಡ್‌ ಡಬಲ್ಸ್‌ನಲ್ಲಿ ಸೌರವ್ ಘೋಸಾಲ್ ಮತ್ತು ದೀಪಿಕಾ ಪಲ್ಲಿಕಲ್ ಬೆಳ್ಳಿ ಗೆದ್ದಿದ್ದಾರೆ. ಟೇಬಲ್​ ಟೆನ್ನಿಸ್​ನ ಮನಿಕಾ ಬಾತ್ರಾ ನಾಲ್ಕು ಪದಕಗಳನ್ನು ಪಡೆಯುವ ಮೂಲಕ ಭರವಸೆಯ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ. 
ಇನ್ನು ಕ್ರೀಡಾಕೂಟ ಆರಂಭವಾದ ಮೊದಲ ದಿನದಿಂದಲೇ ಪದಕಗಳ ಖಾತೆ ತೆರದ ಭಾರತಕ್ಕೆ ವೇಟ್ ಲಿಫ್ಟಿಂಗ್ ನಲ್ಲಿ ಗುರುರಾಜ ಮೊದಲ ಬೆಳ್ಳಿ ಪದಕ ಗಳಿಸಿಕೊಟ್ಟರು. ಅದೇ ದಿನ ವೇಟ್ ಲಿಫ್ಟಿಂಗ್ ನಲ್ಲಿ ಭಾರತಕ್ಕೆ ಮೀರಾಬಾಯಿ ಚಾನು ಮೊದಲ ಮತ್ತು ದಾಖಲೆಯ ಚಿನ್ನದ ಪದಕ ಗಳಿಸಿಕೊಟ್ಟರು. ಮಹಿಳೆಯರ 48 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಚಾನು ಮೊದಲ ಚಿನ್ನದ ಪದಕ ಗಳಿಸಿಕೊಟ್ಟಿದ್ದರು. ಬಳಿಕ ಮಹಿಳೆಯರ 53 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಭಾರತಕ್ಕೆ ಸಂಜಿತಾ ಚಾನು ಚಿನ್ನ ಗಳಿಸಿಕೊಟ್ಟರು. ಇದೇ ವೇಟ್ ಲಿಫ್ಟಿಂಗ್ ನಲ್ಲಿ ಪುರುಷರ 69 ಕೆಜಿ ವಿಭಾಗದ ಸ್ಪರ್ದೆಯಲ್ಲಿ ಭಾರತದ ದೀಪಕ್ ಲಾಥರ್ ದಾಖಲೆ ಕಂಚಿನ ಪದಕಕ್ಕೆ ಭಾಜನರಾಗಿದ್ದರು. ಇದು ಅವರ ಪದಾರ್ಪಣೆ ಕ್ರೀಡಾ ಕೂಟ ಎಂಬುದು ವಿಶೇಷವಾಗಿತ್ತು. ಅಂದಿನಿಂದ ಆರಂಭವಾಗದ ಭಾರತದ ಚಿನ್ನದ ಪ್ರತಿನಿತ್ಯ ಮುಂದುವರೆದಿತ್ತು.
ವೇಟ್ ಲಿಫ್ಟಿಂಗ್ ನಲ್ಲಿ ಸತೀಶ್ ಕುಮಾರ್ ಶಿವಲಿಂಗಮ್, ಟೆನ್ನಿಸ್ ನಲ್ಲಿ ಲಿಯಾಂಡರ್ ಪೇಸ್, ಭಾರತದ ಮಹಿಳೆಯರ ಟೇಬಲ್ ಟೆನ್ನಿಸ್ ತಂಡ, ವೆಂಕಟ್ ರಾಹುಲ್, ವಿಕಾಸ್ ಠಾಕೂರ್, ಶೂಟಿಂಗ್ ನಲ್ಲಿ ರವಿಕುಮಾರ್, ಸ್ಟಾರ್ ಶೂಟರ್ ಜೀತು ರಾಯ್, ಓಂ ಮಿಥರ್ವಾಲ್, ಬ್ಯಾಡ್ನಿಂಟನ್ ನಲ್ಲಿ ಸೈನಾ ಮತ್ತು ಪಿವಿ ಸಿಂಧು ಸಾಧನೆ ನಿಜಕ್ಕೂ ಅವಿಸ್ನರಣೀಯ. ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದ ಪ್ಯಾರಾ-ಲಿಫ್ಟರ್ ಸಚಿನ್ ಚೌಧರಿ ಸಾಧನೆ, ಶೂಟರ್ ಶ್ರೇಯಸಿ ಸಿಂಗ್ ಸಾಧನೆ, ಬೆಳ್ಳಿ ತಂದ ತೇಜಸ್ವಿನಿ ಸಾವಂತ್, ಡಿಸ್ಕಸ್ ಥ್ರೋನಲ್ಲಿ ಸ್ಟಾರ್ ಆದ ಸೀಮಾ ಪುನಿಾಯಾ ಮತ್ತು ನವಜೀತ್ ಕೌರ್ ದಿಲ್ಲೋನ್, ಪುರಷರ ಬ್ಯಾಡ್ಮಿಂಟನ್ ನಲ್ಲಿಪದಕ ಗೆದ್ದಿದ್ದು ಮಾತ್ರವಲ್ಲದೇ ವಿಶ್ವದ ಅಗ್ರ ಸ್ಥಾನಕ್ಕೇರಿದೆ ಕಿಡಾಂಬಿ ಶ್ರೀಕಾಂತ್ ಸಾಧನೆ ವಿಶ್ವದ ಗಮನ ಸೆಳೆದಿತ್ತು. ಅಂತೆಯೇ ಅತ್ಯಂತ ಕಿರಿಯ ವಯಸ್ಸಿನಲ್ಲೇ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ತಂದುಕೊಟ್ಟ ಸಾಧನೆ ಮಾಡಿದ ಅನೀಶ್ ಬನ್ವಾಲಾ ಸಾಧನೆ ಕೂಡ ಇತರೆ ಆಟಗಾರರಿಗೆ ಸ್ಪೂರ್ತಿಯಾಗಿತ್ತು.
ಗ್ಲಾಸ್ಗೋ ಕ್ರೀಡಾಕೂಟಕ್ಕಿಂತ ಉತ್ತಮ ಸಾಧನೆ ತೋರಿದ ಭಾರತೀಯ ಅಥ್ಲೀಟ್ ಗಳು
ಕಳೆದ ಬಾರಿಯ 2014ರ ಗ್ಲಾಸ್ಗೊ ಕಾಮನ್​ವೆಲ್ತ್​ ಕೂಟದಲ್ಲಿ ಒಟ್ಟು 15 ಚಿನ್ನ. 30 ಬೆಳ್ಳಿ ಮತ್ತು 19 ಕಂಚಿನ ಪದಕ ಸೇರಿ ಒಟ್ಟು 64 ಪದಕ ಗಳಿಸಿದ್ದ ಭಾರತ ಪದಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿತ್ತು. ಈ ಬಾರಿ ಹೆಚ್ಚು ಚಿನ್ನದ ಪದಕ ಗಳಿಸಿ ಮೂರನೇ ಸ್ಥಾನಕ್ಕೆ ಏರಿದೆ. ಇದಕ್ಕೂ ಮೊದಲು 2010ರಲ್ಲಿ ದೆಹಲಿಯಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ ಭಾರತ 38 ಚಿನ್ನದ ಪದಕಗಳೂ ಸೇರಿದಂತೆ ಒಟ್ಟು 101 ಪದಕಗಳನ್ನು ಮುಡಿಗೇರಿಸಿಕೊಂಡಿತ್ತು. ಇದಕ್ಕೂ ಮೊದಲು ಮ್ಯಾಂಚೆಸ್ಟರ್ ನಲ್ಲಿ 2002ರಲ್ಲಿ ನಡೆದಿದ್ದ ಕೂಟದಲ್ಲಿ 38 ಚಿನ್ನದ ಪದಕಗಳೊಂದಿಗೆ 69 ಪದಕಗಳನ್ನು ಪಡೆದಿತ್ತು.
ಒಟ್ಟಾರೆ 2018ರ ಗೋಲ್ಡ್ ಕೋಸ್ಟ್ ಕಾಮನ್ ವೆಲ್ತ್ ಕ್ರೀಡಾಕೂಟ ಭಾರತದ ಪಾಲಿಗೆ ಮಾತ್ರ ಅತ್ಯಂತ ಅವಿಸ್ಮರಣೀಯ ಕ್ರೀಡಾಕೂಟವಾಗಿದ್ದರಲ್ಲಿ ಎರಡು ಮಾತಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com