ಕ್ರೀಡಾಸ್ಪರ್ಧಿಗಳ ಬೆನ್ನಿಗೆ ನಿಂತ ರಾಜ್ಯ ಸರ್ಕಾರ, 1 ಸಾವಿರ ಪ್ರತಿಭಾನ್ವಿತರ ತರಬೇತಿಗೆ ಆರ್ಥಿಕ ನೆರವು!

ಕರ್ನಾಟಕ ರಾಜ್ಯ ಸರ್ಕಾರ ಹೊಸ ಕಾರ್ಯಕ್ರಮವನ್ನೂ ರೂಪಿಸಿದ್ದು, ರಾಜ್ಯದ ಸುಮಾರು 1 ಸಾವಿರ ಪ್ರತಿಭಾನ್ವಿತ ಆಥ್ಲೀಟ್ ಗಳ ತರಬೇತಿಗೆ ಆರ್ಥಿಕ ನೆರವು ನೀಡುವ ಕುರಿತು ಕಾರ್ಯಕ್ರಮ ರೂಪಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕ್ರೀಡಾಸ್ಪರ್ಧಿಗಳು ಮಿಂಚಬೇಕು ಎನ್ನುವ ದೃಷ್ಟಿಯಿಂದ ಕರ್ನಾಟಕ ರಾಜ್ಯ ಸರ್ಕಾರ ಹೊಸ ಕಾರ್ಯಕ್ರಮವನ್ನೂ ರೂಪಿಸಿದ್ದು, ರಾಜ್ಯದ ಸುಮಾರು 1 ಸಾವಿರ ಪ್ರತಿಭಾನ್ವಿತ ಆಥ್ಲೀಟ್ ಗಳ ತರಬೇತಿಗೆ ಆರ್ಥಿಕ ನೆರವು ನೀಡುವ ಕುರಿತು ಕಾರ್ಯಕ್ರಮ ರೂಪಿಸಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಾದ ಕಾಮನ್ ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್, ಒಲಿಂಪಿಕ್ಸ್ ಗೇಮ್ಸ್ ಗಳಲ್ಲಿ ಭಾರತದ ನೂರಾರು ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ಪೈಕಿ ಕರ್ನಾಟಕದ 30ರಿಂದ 35 ಕ್ರೀಡಾಪಟುಗಳು ಕೂಡ ಇದ್ದರು. ಅಥ್ಲೀಟ್ ಗಳಿಗೆ ಸೂಕ್ತ ತರಬೇತಿ ಮತ್ತು ಆರ್ಥಿಕ ನೆರವು ನೀಡಲು ಸರ್ಕಾರ ಸಿದ್ಧವಿದ್ದು, ಇದಕ್ಕಾಗಿ ಯುವಜನ ಮತ್ತು ಕ್ರೀಡಾ ಇಲಾಖೆ ವತಿಯಿಂದ ಅರ್ಜಿ ಕೂಡ ಆಹ್ವಾನ ಮಾಡಿದೆ. 
ಇನ್ನು ಈ ಬಗ್ಗೆ ಮಾಹಿತಿ ನೀಡಿದ ಯುವಜನ ಮತ್ತು ಕೀಡಾ ಇಲಾಖೆಯ ಆಯುಕ್ತ ಎನ್ ಶಿವಶಂಕರ್ ಅವರು, ಕರ್ನಾಟಕದ ಅಥ್ಲೀಟ್ ಗಳು ಅಂತಾರಾಷ್ಟ್ರೀಯ ಕೂಟಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಂಂಡು ತಮ್ಮ ಸಾಮರ್ಥ್ಯ ತೋರಿಸಬೇಕು. ಇದಕ್ಕಾಗಿ ನಾವು ಸುಮಾರು 1 ಸಾವಿರ ಪ್ರತಿಭಾನ್ವಿತ ಅಥ್ಲೀಟ್ ಗಳನ್ನು ಆಯ್ಕೆ ಮಾಡಿದ್ದೇವೆ ಎಂದು ತಿಳಿಸಿದರು. ಈ ಪ್ರಕ್ರಿಯೆಯಲ್ಲಿ ನಮಗೆ ಸುಮಾರು 2500ಕ್ಕೂ ಅಧಿಕ ಅರ್ಜಿಗಳು ಬಂದಿದ್ದು, ಈ ಪೈಕಿ ಅಥ್ಲೀಟ್ ಗಳ ಈ ಹಿಂದಿ ಸಾಧನೆಗಳನ್ನು ಗಮನಿಸಿ ಸುಮಾರು 1 ಸಾವಿರ ಅಥ್ವೀಟ್ ಗಳನ್ನು ಮಾತ್ರ ಆಯ್ಕೆ ಮಾಡಿದ್ದೇವೆ ಎಂದು ತಿಳಿಸಿದರು.
12ನೇ ವಯಸ್ಸಿನಿಂದ 21ನೇ ವಯಸ್ಸಿನ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದ್ದು, ಈ ಪ್ರಕ್ರಿಯೆಗಾಗಿ ನಾವು ಈಗಾಗಲೇ 82 ಗುಣಮಟ್ಟದ ಕೋಚ್ ಗಳನ್ನು ಕೂಡ ಆಯ್ಕೆ ಮಾಡಿಟ್ಟುಕೊಂಡಿದ್ದೇವೆ. ಇದಕ್ಕೆ ಮುಂದಿನಗಳಲ್ಲಿ ಮತ್ತೆ 35 ಮಂದಿ ಕೋಟ್ ಗಳು ಸೇರ್ಪಡೆಯಾಗಲಿದ್ದಾರೆ. ಇದಲ್ಲದೆ ವೈದ್ಯಕೀಯ ತಜ್ಞರು ಮತ್ತು ಫಿಸಿಯೋಗಳು, ಇಬ್ಬರು ಆಹಾರತಜ್ಞರು ಕೂಡ ಅಥ್ಲೀಟ್ ಗಳ ಮೇಲ್ವಿಚಾರಣೆ ನಡೆಸಲಿದ್ದಾರೆ. 
ರಾಜ್ಯದಲ್ಲಿ ಇಲಾಖೆಯ ಅಧೀನದಲ್ಲಿ 114 ಸ್ಟೇಡಿಯಂಗಳು ಮತ್ತು 124 ಸ್ವಿಮ್ಮಿಂಗ್ ಪೂಲ್ ಗಳಿದ್ದು, ಆಯ್ಕೆಯಾದ ಕ್ರೀಡಾಪಟುಗಳಿಗೆ ಇಲ್ಲಿಯೇ ತರಬೇತಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಉಳಿದಂತೆ ಇತರೆ ಕ್ರೀಡಾಂಗಣಗಳನ್ನು ನವೀಕರಿಸಿ ಅಲ್ಲಿಯೂ ತರಬೇತಿ ಮಾಡಲು ಅನುವು ಮಾಡಿಕೊಡಲಾಗುತ್ತದೆ ಎಂದು ಶಿವಶಂಕರ್ ತಿಳಿಸಿದರು.
ಅಥ್ಲೀಟ್ ಗಳ ದತ್ತಾಂಶ ಸಂಗ್ರಹಣೆಗೆ ವಿಶೇಷ ಆ್ಯಪ್
ಇನ್ನು ಅಥ್ಲೀಟ್ ಗಳ ದತ್ತಾಂಶ ಸಂಗ್ರಹಣೆಗೆ ವಿಶೇಷ ಆ್ಯಪ್ ಹೊರತರಲು ಇಲಾಖೆ ನಿರ್ಧರಿಸಿದ್ದು, ಪ್ರತೀಯೊಬ್ಬ ಅಥ್ಲೀಟ್ ಗೂ ಆತನದೇ ಆದ ಲಾಗಿನ್ ನೀಡಲಾಗುತ್ತದೆ. ಇದರಿಂದ ಅಥ್ಲೀಟ್ ಗಳು ತಮ್ಮ ತರಬೇತಿ, ಸಾಧನೆ, ಪ್ರಮಾಣಪತ್ರಗಳು ಪ್ರಶಸ್ತಿ ಪ್ರತ್ರಗಳನ್ನು ಅಪ್ಲೋಡ್ ಮಾಡಬಹುದು. ಕೇವಲ ಒಂದೇ ಕ್ಲಿಕ್ ನಲ್ಲಿ ಅಥ್ಲೀಟ್ ನ ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯವಾಗುತ್ತದೆ. ಇದಕ್ಕಾಗಿ ವಿಶೇಷ ಸಾಫ್ಟ್ ವೇರ್ ರಚನೆಗೆ ನಿರ್ಧಾರ ಕೈಗೊಂಡಿದ್ದೇವೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com