ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ನಡೆದಿರುವ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ಪ್ರಕರಣದ ಜಾಡನ್ನು ಭೇದಿಸಲು ಸಿಸಿಬಿ ಪೊಲೀಸರು ಪಣತೊಟ್ಟಿದ್ದು, ಈಗ ನೂರಕ್ಕೂ ಹೆಚ್ಚು ಆಟಗಾರರ ವಿಚಾರಣೆಗೆ ಮುಂದಾಗಿದ್ದಾರೆ.
ಈಗಾಗಲೇ ಟೂರ್ನಿಯಲ್ಲಿದ್ದ ಏಳು ತಂಡಗಳ ಮಾಲೀಕರಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ವಿಚಾರಣೆ ನಡೆಸಿದ್ದಾರೆ. ಇದೀಗ ತಂಡದ ಎಲ್ಲಾ ಆಟಗಾರರಿಗೂ ನೋಟಿಸ್ ನೀಡಿ, ವಿಚಾರಣೆ ನಡೆಸಲು ಸಿಸಿಬಿ ಪೊಲೀಸರು ತೀರ್ಮಾನಿಸಿದ್ದಾರೆ.
ಕೆಪಿಎಲ್ನಲ್ಲಿ ಶಿವಮೊಗ್ಗ ಲಯನ್ಸ್ ತಂಡದ ನಾಯಕನಾಗಿದ್ದ ಮಿಥುನ್, ಟೀಂ ಇಂಡಿಯಾ ಪರ 5 ಏಕದಿನ ಹಾಗೂ 4 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅಂತಾರಾಷ್ಟ್ರೀಯ ಏಕದಿನದಲ್ಲಿ 3 ವಿಕೆಟ್ ಹಾಗೂ ಟೆಸ್ಟ್ನಲ್ಲಿ 9 ಪಡೆದಿದ್ದಾರೆ. ರಾಜ್ಯದ ಪ್ರಮುಖ ವೇಗದ ಬೌಲರ್ ಆಗಿರುವ ಅಭಿಮನ್ಯು ಮಿಥುನ್ ಗೂ ಕೆಪಿಎಲ್ ಫಿಕ್ಸಿಂಗ್ ಬಿಸಿ ತಟ್ಟಿದೆ. ನೋಟಿಸ್ ನೀಡಿದ ಹಿನ್ನೆಲೆ ಇಂದು ಅಭಿಮನ್ಯು ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಇತ್ತೀಚೆಗಷ್ಟೆ ಫಿಕ್ಸಿಂಗ್ ನಡೆಸಿದ ಆರೋಪದಡಿ ಬೆಳಗಾವಿ ಫ್ಯಾಂಥರ್ಸ್ ತಂಡದ ಮಾಲೀಕ ಅಲಿ ಅಶ್ವಾಕ್ ತಾರ್ನನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದರು. ಈ ವೇಳೆ ತಮಿಳುನಾಡು ಪ್ರಿಮಿಯರ್ ಲೀಗ್ನ ಚಂದ್ರಶೇಖರ್ ಎಂಬ ಆಟಗಾರ ಬೆಟ್ಟಿಂಗ್ ವಿಚಾರ ಎಲ್ಲಿ ಹೊರಬರುತ್ತದೆ ಎಂದು ಹೆದರಿ ಸೂಸೈಡ್ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಹೊರಬಿದ್ದಿತ್ತು. ಅಲ್ಲದೆ ಟ್ರ್ಯಾಪ್ ಮೂಲಕ ಕೆಲವು ಆಟಗಾರರನ್ನು ಬ್ಲ್ಯಾಕ್‌ಮೇಲ್ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ. 7 ಮಂದಿಯನ್ನು ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದು, ಬಹಳಷ್ಟು ಆಟಗಾರರಿಗೆ ಹನಿ ಟ್ರ್ಯಾಪಿಂಗ್ ನಡೆಸಲಾಗಿದೆ. ಆರೋಪಿಗಳು ಎಲ್ಲೇ ಇದ್ದರೂ ಅವರನ್ನು ನಾವು ಬಂಧಿಸುತ್ತೇವೆ. ಸಾಕ್ಷಿಗಳು ಸಿಕ್ಕಕೂಡಲೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಭಾಸ್ಕರ್ ರಾವ್ ಹೇಳಿಕೆ ನೀಡಿದ್ದಾರೆ.
Advertisement