ದಕ್ಷಿಣ ಏಷ್ಯಾ ಕ್ರೀಡಾಕೂಟ: ಲಿಖಿತ್ ಬಳಿಕ  ಇನ್ನೋರ್ವ ಕನ್ನಡಿಗನಿಗೆ ಸ್ವರ್ಣ ಪದಕ, ಈಜಿನಲ್ಲಿ ಚಿನ್ನ ಗೆದ್ದ ಶ್ರೀಹರಿ!

ಕರ್ನಾಟಕದ ಸ್ಟಾರ್ ಈಜು ಪಟುಗಳಾದ ಲಿಖಿತ್ ಎಸ್.ಪಿ ಹಾಗೂ ಶ್ರೀಹರಿ ನಟರಾಜ್ ಅವರು ದಕ್ಷಿಣ ಏಷ್ಯಾ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ.
ಶ್ರೀಹರಿ ನಟರಾಜ್
ಶ್ರೀಹರಿ ನಟರಾಜ್

ಕಠ್ಮಂಡು: ಕರ್ನಾಟಕದ ಸ್ಟಾರ್ ಈಜು ಪಟುಗಳಾದ ಲಿಖಿತ್ ಎಸ್.ಪಿ ಹಾಗೂ ಶ್ರೀಹರಿ ನಟರಾಜ್ ಅವರು ದಕ್ಷಿಣ ಏಷ್ಯಾ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ.

ಶುಕ್ರವಾರ ನಡೆದ ಪುರುಷರ 200 ಮೀಟರ್ ಬ್ಯಾಕ್ ಸ್ಟ್ರೋಕ್ ನಲ್ಲಿ ಶ್ರೀಹರಿ ನಟರಾಜ್ 1 ನಿಮಿಷ 59.69 ಸೆಕೆಂಡ್ ಗಳಲ್ಲಿ ಕ್ರಮಿಸಿ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಶ್ರೀಲಂಕಾದ ಪಿಯರಿಸ್ (2:01.55) ಎರಡನೇ ಸ್ಥಾನ, ಶ್ರೀಲಂಕಾದ ನುಗ್ವೆಲಾ (2:05.74) ಮೂರನೇ ಸ್ಥಾನವನ್ನು ಪಡೆದಿದ್ದಾರೆ. 

ಇದಕ್ಕೆ ಮುನ್ನ ಗುರುವಾರದ ಪಂದ್ಯದಲ್ಲಿ ಕರ್ನಾಟಕದ ಈಜು ಪಟು ಲಿಖಿತ್ ಎಸ್.ಪಿ ಬಂಗಾರದ ಸಾಧನೆ ಮಾಡಿದ್ದರು. ಲಿಖಿತ್ 200 ಮೀಟರ್ ಬ್ರೆಸ್ಟ್ ಸ್ಟ್ರೋಕ್ ಸ್ಪರ್ಧೆಯಲ್ಲಿ 2 ನಿಮಿಷ 14.76 ಸೆಕಂಡ್ ಗಳಲ್ಲಿ ಕ್ರಮಿಸಿ ಮೊದಲ ಸ್ಥಾನ ಅಲಂಕರಿಸಿದ್ದರು

ಬ್ಯಾಡ್ಮಿಂಟನ್:ಸಿರಿಲ್, ಅಶ್ಮಿತಾಗೆ ಚಿನ್ನ

ಅಶ್ಮಿತಾ ಚಲಿಹಾ ಹಾಗೂ ಸಿರಿಲ್ ವರ್ಮಾ ಅವರು ಇಲ್ಲಿ ನಡೆಯುತ್ತಿರುವ 13ನೇ ದಕ್ಷಿಣ ಏಷ್ಯನ್ ಕ್ರೀಡಾಕೂಟದ ಬ್ಯಾಡ್ಮಿಂಟನ್ ಮಹಿಳೆಯರ ಹಾಗೂ ಪುರುಷರ ಸಿಂಗಲ್ಸ್‌ ವಿಭಾಗಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಇದರೊಂದಿಗೆ ಬ್ಯಾಡ್ಮಿಂಟನ್ ನಲ್ಲಿ ಎಂಟು ವೈಯಕ್ತಿಕ ಪದಕಗಳು ಭಾರತದ ಪಾಲಾಗಿವೆ.

ಅಶ್ಮಿತಾ ಚಲಿಹಾ ಹಾಗೂ ಸಿರಿಲ್ ಅವರು ಚಿನ್ನದ ಮುಡಿಗೇರಿಸಿಕೊಂಡರು. ಜತೆಗೆ, ಧೃವ್ ಕಪಿಲಾ ಅವರು ಪುರುಷರ ಹಾಗೂ ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಎರಡು ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಒಟ್ಟಾರೆ, ಭಾರತ ನಾಲ್ಕು ಚಿನ್ನ, ಎರಡು ಬೆಳ್ಳಿ ಹಾಗೂ ಎರಡು ಕಂಚು ತನ್ನ ಖಾತೆಗೆ ಸೇರಿಸಿಕೊಂಡಿದೆ.

ವಿಶ್ವ ಕಿರಿಯರ ಮಾಜಿ ಚಾಂಪಿಯನ್ ಸಿರಿಲ್ ಅವರು ಮೊದಲನೇ ಗೇಮ್ ಸೋತರೂ ನಂತರ ಪುಟಿದೆದ್ದು 17-21, 23-21, 21-13 ಅಂತರದಲ್ಲಿ ಆರ್ಯಮನ್ ಟಂಡನ್ ವಿರುದ್ಧ ಗೆದ್ದು ಪುರುಷರ ಸಿಂಗಲ್ಸ್‌ ಕಿರೀಟ ತನ್ನದಾಗಿಸಿಕೊಂಡರು.

ಟಿಟಿಯಲ್ಲಿ ಚಿನ್ನ, ಬೆಳ್ಳಿ

13ನೇ ದಕ್ಷಿಣ ಏಷ್ಯನ್ ಕ್ರೀಡಾಕೂಟದ ಟೇಬಲ್ ಟೆನಿಸ್ ವಿಭಾಗದಲ್ಲಿ ಪುರುಷ ಹಾಗೂ ಮಹಿಳೆಯರ ಸಿಂಗಲ್‌ಸ್‌ ಎರಡರಲ್ಲೂ ಭಾರತ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿತು.

ಶುಕ್ರವಾರ ಪುರುಷರ ಸಿಂಗಲ್ಸ್‌ ಫೈನಲ್ ಹಣಾಹಣಿಯಲ್ಲಿ ಆ್ಯಂಥೋನಿ ಅಮಲ್‌ರಾಜ್ ಅವರು ಪಂದ್ಯದ ಆರಂಭದಲ್ಲಿ 0-3 ಹಿನ್ನಡೆ ಅನುಭವಿಸಿದ್ದರು. ನಂತರ, ಪುಟಿದೆದ್ದ ಅವರು 6-11, 9-11, 10-12, 11-7, 11-4, 11-9, 11-7 ಅಂತರದಲ್ಲಿ ಹರ್ಮೀತ್ ದೇಸಾಯಿ ಅವರನ್ನು ಮಣಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡರು. ಹರ್ಮೀತ್ ಬೆಳ್ಳಿಗೆ ತೃಪ್ತಿಪಟ್ಟರು.

ಮಹಿಳಾ ಸಿಂಗಲ್ಸ್‌ ಫೈನಲ್ಸ್‌ ಹಣಾಹಣಿಯಲ್ಲಿ ಅವರು ಸುತೀರ್ಥ ಮುಖರ್ಜಿ ಅವರು ಕೂಡ ಆರಂಭದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರದರ್ಶನ ತೋರಿರಲಿಲ್ಲ. ಆದರೂ, 8-11, 11-8, 6-21, 11-4, 13-11, 11-8 ಅಂತರದಲ್ಲಿ ಅಹಿಕ್ಯಾ ಮುಖರ್ಜಿ ವಿರುದ್ಧ ಚಿನ್ನದ ಪದಕ ಮುಡಿಗೇರಿಸಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com