ಸ್ವಿಸ್ ಆರ್ಚರಿ ವಿಶ್ವಕಪ್: ಕೋವಿಡ್-19 ಉಲ್ಬಣ ಹಿನ್ನಲೆ ಭಾರತೀಯ ಆಟಗಾರರಿಗೆ ವೀಸಾ ನಿರಾಕರಣೆ!
ನವದೆಹಲಿ: ಸ್ವಿಟ್ಜರ್ಲೆಂಡ್ ನಲ್ಲಿ ಆಯೋಜನೆಯಾಗಿರುವ ಆರ್ಚರಿ ವಿಶ್ವಕಪ್ ನಲ್ಲಿ ಭಾರತದ ಸ್ಪರ್ಧೆಯೇ ಇಲ್ಲದಂತಾಗಿದ್ದು, ಭಾರತದಲ್ಲಿ ಕೋವಿಡ್ ಸೋಂಕು ಉಲ್ಪಣವಾಗಿರುವ ಹಿನ್ನಲೆಯಲ್ಲಿ ಭಾರತೀಯ ಆಟಗಾರರಿಗೆ ವೀಸಾ ನಿರಾಕರಿಸಲಾಗಿದೆ.
ಹೌದು.. ಭಾರತ ಮೂಲದ ಬಿಲ್ಲುಗಾರರು ಹಾಲಿ ಆರ್ಚರಿ ವಿಶ್ವಕಪ್ ನಿಂದ ದೂರ ಉಳಿಯುವಂತಾಗಿದ್ದು, ಅವರ ವೀಸಾ ಅರ್ಜಿಗಳನ್ನು ಸ್ವಿಟ್ಜರ್ಲೆಂಡ್ ರಾಯಭಾರ ಕಚೇರಿ ತಿರಸ್ಕರಿಸಿದೆ. ಸ್ವಿಸ್ ನ ಲೌಸಾನ್ ನಲ್ಲಿ ನಡೆಯುತ್ತಿರುವ 2ನೇ ಹಂತದ ವಿಶ್ವಕಪ್ ಟೂರ್ನಿಯಿಂದ ಭಾರತ ತಂಡ ಪಾಲ್ಗೊಳ್ಳದಂತಾಗಿದೆ. ಆದರೆ ಪ್ಯಾರಿಸ್ ನಲ್ಲಿ ನಡೆಯಲಿರುವ ಮೂರನೇ ಹಂತದ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಬಿಲ್ಲುಗಾರರು ನೇರವಾಗಿ ಪಾಲ್ಗೊಳ್ಳಲ್ಲಿದ್ದಾರೆ. ಇದು ಭಾರತದ ಮಹಿಳಾ ತಂಡದ ಕೊನೆಯ ಒಲಿಂಪಿಕ್ ಅರ್ಹತಾ ಪಂದ್ಯವಾಗಿದೆ. ಏಳು ದಿನಗಳ ಸ್ಪರ್ಧೆ ಜೂನ್ 23 ರಿಂದ ಪ್ರಾರಂಭವಾಗಲಿದೆ.
ಭಾರತದಲ್ಲಿ ಮಾರಕ ಕೊರೋನಾ ವೈರಸ್ ಸೋಂಕು ಉಲ್ಪಣವಾಗಿರುವ ಹಿನ್ನಲೆಯಲ್ಲಿ ಸಾಕಷ್ಟು ರಾಷ್ಟ್ರಗಳು ಭಾರತದಿಂದ ಬರುವ ಪ್ರಯಾಣಿಕ ವಿಮಾನಗಳನ್ನು ಮತ್ತು ಪ್ರಯಾಣಿಕರನ್ನು ನಿಷೇಧಿಸಿದೆ. ಸ್ವಿಟ್ಜರ್ಲೆಂಡ್ ರಾಯಭಾರ ಕಚೇರಿ ಭಾರತೀಯ ಆಟಗಾರರಿಗೆ ವೀಸಾ ನಿರಾಕರಿಸುವ ಮೂಲಕ ಭಾರತೀಯ ಆಟಗಾರರ ಕನಸಿಗೆ ತಣ್ಣೀರೆರಚಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಆರ್ಚರಿ ಅಸೋಸಿಯೇಶನ್ ಆಫ್ ಸೆಕ್ರೆಟರಿ ಜನರಲ್ ಪ್ರಮೋದ್ ಚಂದುರ್ಕರ್, 'ಸ್ವಿಸ್ ರಾಯಭಾರ ಕಚೇರಿ ಯಾವುದೇ ಅಲ್ಪಾವಧಿಯ ವೀಸಾವನ್ನು ಅನುಮತಿಸಲಿಲ್ಲ. ಆದರೂ ನಮಗೆ ನಿರಾಸೆ ಇಲ್ಲ. ಪ್ರಸ್ತುತ ನಮ್ಮ ಗಮನ ಪ್ಯಾರಿಸ್ ನಲ್ಲಿ ನಡೆಯಲಿರುವ 3ನೇ ಹಂತದ ಮೇಲಿದ್ದು, 2ನೇ ಹಂತದ ವಿಶ್ವಕಪ್ ಸಮಯದಲ್ಲಿ ನಮಗೆ ಉತ್ತಮ ಅಭ್ಯಾಸಕ್ಕೆ ಸಮಯ ದೊರೆತಿದೆ ಎಂದು ಹೇಳಿದ್ದಾರೆ. ಭಾರತದ ಮಹಿಳಾ ಮತ್ತು ಪುರುಷರ ತಂಡ ಈ ವರೆಗೂ ಟೋಕಿಯೋ ಟೂರ್ನಿವರೆಗೂ ಅರ್ಹತೆ ಪಡೆದಿದೆ. ಆರ್ಚರಿ ರಾಷ್ಟ್ರೀಯ ಒಕ್ಕೂಟವು ಪ್ಯಾರಿಸ್ ತಲುಪಿದಾಗ ತನ್ನ ಬಿಲ್ಲುಗಾರರಿಗೆ 10 ದಿನಗಳ ಕಡ್ಡಾಯ ಸಂಪರ್ಕತಡೆ ನಿಯಮ ಸಡಿಲಿಕೆ ನಿರೀಕ್ಷಿಸಬಹುದು ಎಂದು ಹೇಳಿದ್ದಾರೆ.
'10 ದಿನಗಳ ಕ್ಯಾರಂಟೈನ್ ಸಮಯದಲ್ಲಿ ಬಿಲ್ಲುಗಾರರಿಗೆ ಅಭ್ಯಾಸಕ್ಕಾಗಿ ಕನಿಷ್ಠ ಪ್ರಯಾಣಿಸಲು ಅವಕಾಶ ಮಾಡಿಕೊಡಲು ನಾವು ಫ್ರೆಂಚ್ ಒಕ್ಕೂಟಕ್ಕೆ ಪತ್ರ ಬರೆಯಲು ಮುಂದಾಗಿದ್ದೇವೆ. ಫೆಡರೇಶನ್ ಸಹ ತಂಡದ ಪಟ್ಟಿಯನ್ನು ಪ್ಯಾರಿಸ್ಗೆ ಕಳುಹಿಸುತ್ತದೆ ಎಂದು ಚಂದುರ್ಕರ್ ಹೇಳಿದ್ದಾರೆ.

