ನವದೆಹಲಿ: ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಇಂದು ಚಿನ್ನ ಮತ್ತು ಬೆಳ್ಳಿ ಪದಕ ತಂದು ಕೊಟ್ಟು ವಿಶ್ವ ದಾಖಲೆ ನಿರ್ಮಿಸಿರುವ ಮನೀಶ್ ನರ್ವಾಲ್, ಸಿಂಗರಾಜ್ ಅವರ ಶ್ರಮಕ್ಕೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಶೂಟರ್ ಜೋಡಿಗೆ ಶುಭಾಶಯ ಕೋರಿದ್ದು, ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಪದಕ ವೈಭವ ಮುಂದುವರಿದಿದ್ದು, ಯುವ ಮತ್ತು ಅದ್ಭುತ ಪ್ರತಿಭಾನ್ವಿತ ಮನೀಶ್ ನರ್ವಾಲ್ ಅವರು ಉತ್ತಮ ಸಾಧನೆ ಗೈದಿದ್ದಾರೆ. ಅವರು ಚಿನ್ನದ ಪದಕ ಗೆದ್ದಿರುವುದು ಭಾರತೀಯ ಕ್ರೀಡೆಗೆ ಒಂದು ವಿಶೇಷ ಕ್ಷಣವಾಗಿದೆ. ಅವರಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.
ಅಂತೆಯೇ ಬೆಳ್ಳಿ ಪದಕ ಗೆದ್ದ ಸಿಂಗರಾಜ್ ಅವರಿಗೂ ಪ್ರಧಾನಿ ಮೋದಿ ಶುಭ ಕೋರಿದ್ದು, ಮಹೋನ್ನತ ಸಿಂಗರಾಜ್ ಅಧಾನ ಮತ್ತೆ ಅಂತಹುದೇ ಸಾಧನೆ ಮಾಡಿದ್ದು, ಅವರು ಈ ಬಾರಿ ಮಿಶ್ರ 50 ಮೀಟರ್ ಪಿಸ್ತೂಲ್ SH1 ಸ್ಪರ್ಧೆಯಲ್ಲಿ ಮತ್ತೊಂದು ಪದಕವನ್ನು ಗೆದ್ದಿದ್ದಾರೆ. ಅವರ ಸಾಧನೆಯಿಂದಾಗಿ ಭಾರತವು ಸಂತೋಷಪಡುತ್ತದೆ. ಅವರಿಗೆ ಅಭಿನಂದನೆಗಳು. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಅನುರಾಗ್ ಠಾಕೂರ್ ಅವರು, ಚಿನ್ನ ಗೆದ್ದ ಮನೀಶ್ ನರ್ವಾಲ್ ನೂತನ ದಾಖಲೆ ನಿರ್ಮಿಸಿದ್ದಾರೆ. ಅವರಿಗೆ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಭಾರತದ ಶೂಟರ್ ಗಳ ಸಾಧನೆಯನ್ನು ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕೂಡ ಮುಕ್ತ ಕಂಠದಿಂದ ಶ್ಲಾಘಿಸಿದ್ದು, ಇಬ್ಬರು ಭಾರತೀಯರು ಚಿನ್ನ ಹಾಗೂ ಬೆಳ್ಳಿ ಎರಡನ್ನೂ ಗೆಲ್ಲುವುದು ಎಷ್ಟು ಅದ್ಭುತ ಕ್ಷಣ ಎಂದು ಟ್ವೀಟ್ ಮಾಡಿದ್ದಾರೆ.
Advertisement