ಫಿಫಾ ವಿಶ್ವಕಪ್: ಗರಿಷ್ಠ ಗೋಲ್ ದಾಖಲೆ ಬರೆದ ಅರ್ಜೆಂಟಿನಾ ನಾಯಕ ಮೆಸ್ಸಿ
ಮಂಗಳವಾರ ತಡರಾತ್ರಿ ನಡೆದ ಮೊದಲ ಸೆಮಿ ಫೈನಲ್ ರೋಚಕ ಪಂದ್ಯದಲ್ಲಿ ಕ್ರೊಯೇಷಿಯಾವನ್ನು ಮಣಿಸುವಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದ ಅರ್ಜೆಂಟಿನಾ ನಾಯಕ ಲಿಯೋನಲ್ ಮೆಸ್ಸಿ ತಮ್ಮ ಅಮೋಘ ಗೋಲಿನ ಮೂಲಕ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
Published: 14th December 2022 10:33 PM | Last Updated: 14th December 2022 10:33 PM | A+A A-

ಲಿಯೋನಲ್ ಮೆಸ್ಸಿ
ದೋಹಾ: ಮಂಗಳವಾರ ತಡರಾತ್ರಿ ನಡೆದ ಮೊದಲ ಸೆಮಿ ಫೈನಲ್ ರೋಚಕ ಪಂದ್ಯದಲ್ಲಿ ಕ್ರೊಯೇಷಿಯಾವನ್ನು ಮಣಿಸುವಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದ ಅರ್ಜೆಂಟಿನಾ ನಾಯಕ ಲಿಯೋನಲ್ ಮೆಸ್ಸಿ ತಮ್ಮ ಅಮೋಘ ಗೋಲಿನ ಮೂಲಕ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಮಂಗಳವಾರ ನಡೆದ ಪಂದ್ಯದಲ್ಲಿ ಅರ್ಜೆಂಟಿನಾ ತಂಡ ಕ್ರೊಯೇಷಿಯಾವನ್ನು 3-0 ಗೋಲುಗಳಿಂದ ಸೋಲಿಸಿ ಫೈನಲ್ ಪ್ರವೇಶ ಮಾಡಿದ್ದು, ಅದು ಅರ್ಜೆಂಟಿನಾ ತಂಡ ಎಂಟು ವರ್ಷಗಳಲ್ಲಿ ಎರಡನೇ ಬಾರಿ ವಿಶ್ವಕಪ್ ಫೈನಲ್ ತಲುಪಿತು. ಕತಾರ್‌ನಲ್ಲಿ ಮತ್ತೊಮ್ಮೆ ವಿಶ್ವದ ಅತ್ಯುತ್ತಮ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಮಹತ್ವದ ಪಂದ್ಯದಲ್ಲಿ ಗೋಲು ಗಳಿಸಿ ತಮ್ಮ ತಂಡವನ್ನು ಫೈನಲ್‌ಗೆ ಕೊಂಡೊಯ್ದರು ಮತ್ತು ತಾನು ಫುಟ್ಬಾಲ್‌ನ ಶ್ರೇಷ್ಠ ಆಟಗಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.
ಇದನ್ನೂ ಓದಿ: ಫಿಫಾ ವಿಶ್ವಕಪ್: ಭಾನುವಾರದ ಫೈನಲ್ ನನ್ನ ಕೊನೆಯ ವಿಶ್ವಕಪ್ ಪಂದ್ಯ: ಅರ್ಜೆಂಟಿನಾ ಸೂಪರ್ ಸ್ಟಾರ್ ಮೆಸ್ಸಿ
ಅಂತೆಯೇ ಇದೇ ಪಂದ್ಯದಲ್ಲಿ ಮೆಸ್ಸಿ ಅರ್ಜೆಂಟೀನಾ ಪರ ವಿಶ್ವಕಪ್ ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ದಾಖಲೆ ಬರೆದರು. ಫಿಫಾ ವಿಶ್ವಕಪ್‌ನ ಮೊದಲ ಸೆಮಿಫೈನಲ್‌ನಲ್ಲಿ ಕ್ರೊಯೇಷಿಯಾ ವಿರುದ್ಧ ಅರ್ಜೆಂಟೀನಾ 1-0 ಮುನ್ನಡೆ ಸಾಧಿಸಲು ಲಿಯೋನೆಲ್ ಮೆಸ್ಸಿ ಪೆನಾಲ್ಟಿ ಸ್ಪಾಟ್‌ನಿಂದ ಗೋಲು ಗಳಿಸಿದರು. ಆ ಗೋಲಿನೊಂದಿಗೆ ಅವರು ಗೇಬ್ರಿಯಲ್ ಬಟಿಸ್ಟುಟಾ ಅವರ ದಾಖಲೆಯನ್ನು ಮುರಿದರು. ಫಿಫಾ ವಿಶ್ವಕಪ್ ಪಂದ್ಯಾವಳಿಯ ಇತಿಹಾಸದಲ್ಲಿ ಅರ್ಜೆಂಟೀನಾ ದೇಶಕ್ಕಾಗಿ ಅತಿ ಹೆಚ್ಚು ಗೋಲು ಗಳಿಸಿದ ದಾಖಲೆ ಬರೆದರು.
ಲಿಯೋನೆಲ್ ಮೆಸ್ಸಿ ಈಗ ಹಂಗೇರಿಯ ಸೂಪರ್ ಸ್ಟಾರ್ ಸ್ಯಾಂಡರ್ ಕೊಕ್ಸಿಸ್ ಮತ್ತು ಜರ್ಮನ್ ಗೋಲ್-ಮೆಷಿನ್ ಜುರ್ಗೆನ್ ಕ್ಲಿನ್ಸ್‌ಮನ್ ಅವರ 11 ಗೋಲುಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದೇ ವೇಳೆ ಅರ್ಜೆಂಟೀನಾದ ಇತರ ಅಟಗಾರರಿಗಿಂತ ಹೆಚ್ಚು ವಿಶ್ವಕಪ್ ಪಂದ್ಯಗಳನ್ನು ಮೆಸ್ಸಿ ಆಡಿದ್ದಾರೆ. ಇದು ಅವರ 25ನೇ ವಿಶ್ವಕಪ್ ಪಂದ್ಯವಾಗಿದ್ದು, ಇದು ಲೋಥರ್ ಮ್ಯಾಥೌಸ್ ಅವರೊಂದಿಗೆ ಯಾವುದೇ ಆಟಗಾರನಿಗಿಂತ ಹೆಚ್ಚಿನ ಪಂದ್ಯವಾಡಿದ ಸ್ಥಾನ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಫಿಫಾ ವಿಶ್ವಕಪ್: ಮೆಸ್ಸಿ ಮ್ಯಾಜಿಕ್ ಗೆ ತಲೆ ಬಾಗಿದ ಕ್ರೊಯೇಷಿಯಾ, 6ನೇ ಬಾರಿಗೆ ಫೈನಲ್ ಪ್ರವೇಶಿಸಿದ ಅರ್ಜೆಂಟಿನಾ
ಉಳಿದಂತೆ ಬ್ರೆಜಿಲ್‌ನ ದಂತಕಥೆ ಪೀಲೆ (12), ಜಸ್ಟ್ ಫಾಂಟೈನ್ (13), ಗೆರ್ಡ್ ಮುಲ್ಲರ್ (14), ಬ್ರೆಜಿಲ್‌ನ ರೊನಾಲ್ಡೊ (15) ಮತ್ತು ಜರ್ಮನಿಯ ಮಿರೊಸ್ಲಾವ್ ಕ್ಲೋಸ್ (16) ಮಾತ್ರ ಅರ್ಜೆಂಟೀನಾ ದಂತಕಥೆ ಲಿಯೋನೆಲ್ ಮೆಸ್ಸಿಗಿಂತ ಹೆಚ್ಚಿನ ಗೋಲು ಗಳಿಸಿದವರಾಗಿದ್ದಾರೆ.
ಇನ್ನು ಲಿಯೋನೆಲ್ ಮೆಸ್ಸಿ ಈಗ 2022ರ ಫಿಫಾ ಆವೃತ್ತಿಯಲ್ಲಿ ಐದು ಗೋಲುಗಳನ್ನು ಗಳಿಸಿದ್ದಾರೆ ಮತ್ತು ಗೋಲ್ಡನ್ ಶೂ ಸ್ಪರ್ಧೆಯಲ್ಲಿ ಫ್ರೆಂಚ್‌ನ ಕೈಲಿಯನ್ ಎಂಬಪ್ಪೆ ಅವರೊಂದಿಗೆ ಸಮಬಲ ಸಾಧಿಸಿದ್ದಾರೆ. ನಿರ್ದಿಷ್ಟ ವಿಶ್ವಕಪ್ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರಿಗೆ ಗೋಲ್ಡನ್ ಶೂ ನೀಡಲಾಗುತ್ತದೆ.