ಫಿಫಾ ವಿಶ್ವಕಪ್: ಮೊರಾಕ್ಕೊ ವಿರುದ್ಧ ಫ್ರಾನ್ಸ್ 2-0 ಗೋಲುಗಳ ಭರ್ಜರಿ ಜಯ, ಫೈನಲ್ ನಲ್ಲಿ ಅರ್ಜೆಂಟಿನಾ ವಿರುದ್ಧ ಸೆಣಸು

ತೀವ್ರ ಕುತೂಹಲ ಕೆರಳಿಸಿರುವ ಫಿಫಾ ವಿಶ್ವಕಪ್ ಟೂರ್ನಿಯ 2ನೇ ಸೆಮಿ ಫೈನಲ್ ನಲ್ಲಿ ಬಲಿಷ್ಠ ಫ್ರಾನ್ಸ್ ತಂಡ ಮೊರಾಕ್ಕೋ ತಂಡವನ್ನು 2-0 ಅಂತರದ ಗೋಲುಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದೆ.
ಮೊರಾಕ್ಕೋ ವಿರುದ್ಧ ಫ್ರಾನ್ಸ್  ಗೆಲುವು
ಮೊರಾಕ್ಕೋ ವಿರುದ್ಧ ಫ್ರಾನ್ಸ್ ಗೆಲುವು

ದೋಹಾ: ತೀವ್ರ ಕುತೂಹಲ ಕೆರಳಿಸಿರುವ ಫಿಫಾ ವಿಶ್ವಕಪ್ ಟೂರ್ನಿಯ 2ನೇ ಸೆಮಿ ಫೈನಲ್ ನಲ್ಲಿ ಬಲಿಷ್ಠ ಫ್ರಾನ್ಸ್ ತಂಡ ಮೊರಾಕ್ಕೋ ತಂಡವನ್ನು 2-0 ಅಂತರದ ಗೋಲುಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದೆ.

ಇಂದು ನಡೆದ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಪರ ಥಿಯೋ ಹೆರ್ನಾಂಡೆಜ್ ಮತ್ತು ರಾಂಡಲ್ ಕೊಲೊ ಮುವಾನಿ ಗೋಲು ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದ ಫ್ರಾನ್ಸ್ ಪಂದ್ಯದ 5ನೇ ನಿಮಿಷದಲ್ಲೇ ಮೊದಲ ಗೋಲು ಗಳಿಸಿತು. ಫ್ರಾನ್ಸ್ ಪರ ಥಿಯೋ ಹೆರ್ನಾಂಡೆಜ್ ಮೊದಲು ಗೋಲು ಗಳಿಸಿದರು.

ಬಳಿಕ ಮೊರಾಕ್ಕೋ ಸಾಕಷ್ಟು ಬಾರಿ ಗೋಲು ಗಳಿಸಿದರು ಪ್ರಯತ್ನಿಸಿದರೂ ಫ್ರಾನ್ಸ್ ಆಟಗಾರರು ರಕ್ಷಣಾತ್ಮಕ ಆಟದ ಮೊರೆ ಹೋಗಿ ಮೊರಾಕ್ಕೋಗೆ ಗೋಲು ಗಳಿಸಲು ಅವಕಾಶ ನೀಡಲಿಲ್ಲ. ಪಂದ್ಯ 1-0 ಅಂತರದಲ್ಲಿ ಫ್ರಾನ್ಸ್ ಪರವಾಗಿಯೇ ಅಂತಿಮ ಹಂತದತ್ತ ಸಾಗುತ್ತಲೇ ಫ್ರಾನ್ಸ್ ಪರ ಪರ್ಯಾಯ ಆಟಗಾರನಾಗಿ ಕಣಕ್ಕಿಳಿದ ರಾಂಡಲ್ ಕೊಲೊ ಮುವಾನಿ ಗೋಲು ಗಳಿಸಿ ಫ್ರಾನ್ಸ್ ಗೆಲುವು ಸ್ಪಷ್ಟಪಡಿಸಿದರು. 

ಪಂದ್ಯದ 79ನೇ ನಿಮಿಷದಲ್ಲಿ ಉಸ್ಮಾನ್ ಡೆಂಬೆಲೆಗೆ ಸಬ್ ಸ್ಟಿಟ್ಯೂಟ್ ಆಗಿ ಕಣಕ್ಕಿಳಿದ ರಾಂಡಲ್ ಕೊಲೊ ಮುವಾನಿ ಮರು ಕ್ಷಣದಲ್ಲೇ ಗೋಲು ಗಳಿಸಿದರು. ಎಂಬಪ್ಪೆ ನೀಡಿದ ರೀಬೌಂಡ್ ಪಾಸ್ ಅನ್ನು ಸ್ವೀಕರಿಸಿದ ಮುವಾನಿ ತಡ ಮಾಡದೇ ಮೊರಾಕ್ಕೋ ಗೋಲ್ ಕೀಪರ್ ರನ್ನು ವಂಚಿಸಿ ಗೋಲು ಗಳಿಸಿದರು. ಈ ಮೂಲಕ ಫುಲ್ ಟೈಮ್ ಹೊತ್ತಿಗೆ ಫ್ರಾನ್ಸ್ 2-0 ಅಂತರದ ಭರ್ಜರಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು.

ಇದೇ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡ ಲಿಯೋನಲ್ ಮೆಸ್ಸಿ ನೇತೃತ್ವದ ಬಲಿಷ್ಟ ತಂಡ ಅರ್ಜೆಂಟಿನಾ ತಂಡವನ್ನು ಎದುರಿಸಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com