ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್: ಇರಾನ್ ಮಣಿಸಿ 8ನೇ ಬಾರಿಗೆ ಏಷ್ಯನ್ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತ!

ಅದ್ಭುತ ಪ್ರದರ್ಶನ ನೀಡಿದ ಭಾರತದ ಪುರುಷರ ಕಬಡ್ಡಿ ತಂಡ ಎಂಟನೇ ಬಾರಿ ಏಷ್ಯನ್ ಚಾಂಪಿಯನ್‌ಶಿಪ್ ಗೆದ್ದಿದೆ.
ಭಾರತೀಯ ಕಬಡ್ಡಿ ತಂಡ
ಭಾರತೀಯ ಕಬಡ್ಡಿ ತಂಡ

ಬುಸಾನ್‌(ಕೊರಿಯಾ): ಅದ್ಭುತ ಪ್ರದರ್ಶನ ನೀಡಿದ ಭಾರತದ ಪುರುಷರ ಕಬಡ್ಡಿ ತಂಡ ಎಂಟನೇ ಬಾರಿ ಏಷ್ಯನ್ ಚಾಂಪಿಯನ್‌ಶಿಪ್ ಗೆದ್ದಿದೆ. 

ಕೊರಿಯಾದ ಬುಸಾನ್‌ನಲ್ಲಿ ಇಂದು ನಡೆದ ಫೈನಲ್ ಪಂದ್ಯದಲ್ಲಿ ಭಾರತ 42-32 ಅಂತರದಿಂದ ಇರಾನ್ ತಂಡವನ್ನು ಸೋಲಿಸಿತು. ಈ ಟೂರ್ನಿಯ ಒಂಬತ್ತು ಆವೃತ್ತಿಗಳಲ್ಲಿ ಭಾರತಕ್ಕೆ ಇದು ಎಂಟನೇ ಪ್ರಶಸ್ತಿಯಾಗಿದೆ.

ಮೊದಲ ಐದು ನಿಮಿಷಗಳಲ್ಲಿ ಇರಾನ್ ವಿರುದ್ಧ ಭಾರತ ತಂಡದ ಸ್ಥಿತಿ ಉತ್ತಮವಾಗಿರಲಿಲ್ಲ. ಆದರೆ 10ನೇ ನಿಮಿಷದಲ್ಲಿ ಎಲ್ಲವೂ ಬದಲಾಯಿತು. ಇರಾನ್ ತಂಡ ಆಲೌಟ್ ಆಯಿತು. ಭಾರತದ ರಕ್ಷಣಾ ತಂಡವು ಕೆಲವು ಟ್ಯಾಕಲ್ ಪಾಯಿಂಟ್‌ಗಳನ್ನು ಬಿಟ್ಟುಕೊಟ್ಟ ನಂತರ ಪವನ್ ಸೆಹ್ರಾವತ್ ಮತ್ತು ಅಸ್ಲಾಮ್ ಇನಾಮದಾರ್ ಯಶಸ್ವಿ ದಾಳಿಗಳ ಮೂಲಕ ಇರಾನ್ ಮೇಲೆ ಒತ್ತಡ ಹೇರಿದರು.

ಎರಡು ಬಾರಿ ಇರಾನ್ ಅನ್ನು ಆಲೌಟ್ ಮಾಡಿದ ಭಾರತ
ಒಮ್ಮೆ ಭಾರತ ತಂಡವು ವೇಗ ಪಡೆದುಕೊಂಡ ನಂತರ ಪ್ರಚಂಡ ಆಲ್‌ರೌಂಡ್ ಆಟ ಪ್ರದರ್ಶಿಸಿತು. ಹಾಲಿ ಚಾಂಪಿಯನ್ ಭಾರತದ ವಿರುದ್ಧ ಇರಾನ್ ಕೆಲವು ಸುಲಭ ಬೋನಸ್ ಅಂಕಗಳನ್ನು ಪಡೆದುಕೊಂಡಿತು. ಆದರೆ 19ನೇ ನಿಮಿಷದಲ್ಲಿ ಭಾರತವು ಇರಾನ್‌ನ ಎರಡನೇ ಬಾರಿಗೆ ಆಲ್-ಔಟ್ ಮಾಡಿತು. ವಿರಾಮದ ವೇಳೆಗೆ ಭಾರತ 23-11ರಿಂದ ಮುಂದಿತ್ತು. ಇರಾನ್‌ನ ನಾಯಕ ಮೊಹಮ್ಮದ್ರೇಜಾ ಶಾದಲುಯಿ ಚಯಾನೆಹ್ ನಂತರ 29 ನೇ ನಿಮಿಷದಲ್ಲಿ ಎರಡು ಪಾಯಿಂಟ್ ರೈಡ್‌ಗಳು ಮತ್ತು ಸೂಪರ್ ರೈಡ್‌ನೊಂದಿಗೆ ಭಾರತವನ್ನು ಮೊದಲ ಆಲ್ ಔಟ್ ಮಾಡಿದರು.

ಕೊನೆಯ ನಿಮಿಷಗಳಲ್ಲಿ ಭಾರತದಿಂದ ಉತ್ತಮ ಪ್ರದರ್ಶನ
ಪಂದ್ಯದಲ್ಲಿ ಇನ್ನೆರಡು ನಿಮಿಷ ಬಾಕಿ ಇರುವಾಗ ಇರಾನ್ ತಂಡ ಕೇವಲ ಏಳು ಅಂಕಗಳ ಹಿಂದೆ ಬಿದ್ದಿತ್ತು. ಭಾರತ 38-31ರಲ್ಲಿ ಮುಂದಿತ್ತು. ಪಂದ್ಯ ಬಿಗುವಿನತ್ತ ಸಾಗಿತು, ಆದರೆ ಒತ್ತಡದಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತ ತಂಡವು 42-32 ರಲ್ಲಿ ಪಂದ್ಯವನ್ನು ಗೆದ್ದುಕೊಂಡಿತು. ಇದಕ್ಕೂ ಮುನ್ನ ನಡೆದ ಪಂದ್ಯಾವಳಿಯ ಲೀಗ್ ಹಂತದಲ್ಲಿ ಭಾರತ 64-20 ಅಂಕಗಳಿಂದ ಹಾಂಕಾಂಗ್ ತಂಡವನ್ನು ಸೋಲಿಸಿತು. ಲೀಗ್ ಸುತ್ತಿನಲ್ಲಿ ಒಂದೇ ಒಂದು ಪಂದ್ಯವನ್ನು ಭಾರತ ಸೋತಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com