
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಆರ್ಚರಿ ವಿಭಾಗದಲ್ಲಿ ಭರವಸೆ ಮೂಡಿಸಿದ್ದ ದೀಪಿಕಾ ಕುಮಾರಿ, ಕ್ವಾರ್ಟರ್ ಫೈನಲ್ಸ್ ನಲ್ಲಿ ಹೊರಬಿದ್ದಿದ್ದಾರೆ.
ಕೊರಿಯಾದ ಸುಹ್ಯೆನ್ ನಾಮ್ ಎದುರು ದೀಪಿಕಾ ಪರಾಭವಗೊಂಡಿದ್ದಾರೆ. ಆರಂಭದಲ್ಲಿ ಪ್ರಾಬಲ್ಯ ಮೆರೆದಿದ್ದ ದೀಪಿಕಾ ಕುಮಾರಿ, ಮೊದಲ ಮೂರು ಸೆಟ್ ಗಳ ಪೈಕಿ 2 ನ್ನು ಗೆದ್ದಿದ್ದರು. ಆದರೆ ನಾಲ್ಕನೇ ಸೆಟ್ ನಲ್ಲಿ 2 ನೇ ಹೊಡೆತದಲ್ಲಿ ಎಡವಿದರು. ಈ ಮೂಲಕ ಆರ್ಚರಿ ವಿಭಾಗದಲ್ಲಿ ಭಾರತದ ಪದಕ ಬೇಟೆ ಕೊನೆಗೊಂಡಿದೆ.
ಇದಕ್ಕೂ ಮುನ್ನ ದೀಪಿಕಾ 6-4 ಅಂತರದಿಂದ ಜರ್ಮನಿಯ ಮಿಚೆಲ್ ಕ್ರೊಪ್ಪೆನ್ ವಿರುದ್ಧ ಗೆಲುವು ಸಾಧಿಸಿದ್ದರು ಆದರೆ ಇಷ್ಟೇ ಅಂತರದಲ್ಲಿ ಕ್ವಾರ್ಟರ್ ಫೈನಲ್ಸ್ ನಲ್ಲಿ ನಾಮ್ ವಿರುದ್ಧ ಸೋಲು ಕಂಡಿದ್ದಾರೆ. ಸುಹ್ಯೆನ್ ನಾಮ್ ಮಹಿಳೆಯರ ತಂಡದಲ್ಲಿ ಚಿನ್ನ ಗೆದ್ದಿದ್ದರು.
ಇನ್ನು ಭಜನ್ ಕೌರ್ ತನ್ನ ಪ್ರಿ-ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಇಂಡೋನೇಷ್ಯಾದ ದಯಾನಂದ ಚೊಯಿರುನಿಸಾ ವಿರುದ್ಧ ಶೂಟ್-ಆಫ್‌ನಲ್ಲಿ ಸೋತು ಹೊರನಡೆದಿದ್ದರು. ತನ್ನ ನಾಲ್ಕನೇ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ದೀಪಿಕಾ ಮತ್ತೊಮ್ಮೆ ದೊಡ್ಡ ವೇದಿಕೆಯನ್ನು ಬರಿಗೈಯಲ್ಲಿ ತೊರೆದಿದ್ದಾರೆ.
ಮಿಶ್ರ ತಂಡ ವಿಭಾಗದಲ್ಲಿ ಅಂಕಿತಾ ಭಕತ್ ಮತ್ತು ಧೀರಜ್ ಬೊಮ್ಮದೇವರ ನಾಲ್ಕನೇ ಸ್ಥಾನ ಗಳಿಸಿದ್ದು ಪ್ಯಾರಿಸ್‌ನಲ್ಲಿ ಆರ್ಚರಿಯಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನವಾಗಿದೆ.
Advertisement