ಪ್ಯಾರಿಸ್: ಒಲಿಂಪಿಕ್ಸ್ 2024 ರ ಹಾಕಿ ಸೆಮಿಫೈನಲ್ ನಲ್ಲಿ ಜರ್ಮನಿ ಭಾರತವನ್ನು 3-2 ಅಂತರದಿಂದ ಮಣಿಸಿದ್ದು, ಫೈನಲ್ ಪ್ರವೇಶಿಸಿದೆ.
ಫೈನಲ್ ನಲ್ಲಿ ಜರ್ಮನಿ ತಂಡ ನೆದರ್ ಲ್ಯಾಂಡ್ ತಂಡವನ್ನು ಎದುರಿಸಲಿದೆ. ಕೊನೆ ಕ್ಷಣದ ವರೆಗೂ ಭಾರತದ ಹಾಕಿ ತಂಡ ಅತ್ಯುತ್ತಮವಾಗಿ ಪಂದ್ಯವನ್ನಾಡಿತು. ಆದರೆ ಮಾರ್ಕೊ ಮಿಲ್ಟ್ಕೌ ಗಳಿಸಿದ ಗೋಲು ಪಂದ್ಯದ ದಿಕ್ಕನ್ನು ಬದಲಿಸಿತು.
ಜರ್ಮನಿ ಎದುರು ಪರಾಭವಗೊಂಡ ಭಾರತ ಈಗ ಕಂಚಿಕ ಪದಕಕ್ಕಾಗಿ ಸ್ಪೇನ್ ತಂಡದ ಜೊತೆಗೆ ಸೆಣೆಸಲಿದೆ.
ಜರ್ಮನಿ ಗೋಲುಗಳಲ್ಲಿ ಮುಂದಿದ್ದಾಗ 3 ನೇ ಕ್ವಾರ್ಟರ್ ನಲ್ಲಿ ಸುಖ್ಜೀತ್ ಗೋಲು ಗಳಿಸಿ ಸಮಬಲ ಸಾಧಿಸಲು ನೆರವಾದರು. ಇದಕ್ಕೂ ಮುನ್ನ ಹರ್ಮನ್ ಪ್ರೀತ್ ಸಿಂಗ್ ಗೋಲು ಗಳಿಸಿ ಭಾರತ ಮೊದಲ ಕ್ವಾರ್ಟರ್ ನಲ್ಲಿ ಪಂದ್ಯದಲ್ಲಿ ಮೇಲಿಗೈ ಸಾಧಿಸಿತ್ತು. ಅದರೆ ಜರ್ಮನಿ ಎರಡನೇ ಕ್ವಾರ್ಟರ್ ನಲ್ಲಿ ಪುಟಿದೆದ್ದಿತು.
ಹರ್ಮನ್‌ಪ್ರೀತ್ ಸಿಂಗ್ ಮತ್ತು ತಂಡ ಒಲಿಂಪಿಕ್ಸ್ ನಲ್ಲಿ ಅದ್ಭುತವಾಗಿ ಪಂದ್ಯವನ್ನಾಡಿದ್ದಾರೆ ಮತ್ತು ಸೆಮಿಸ್ ಹಾದಿಯಲ್ಲಿ ಆಸ್ಟ್ರೇಲಿಯಾ ಮತ್ತು ಗ್ರೇಟ್ ಬ್ರಿಟನ್‌ನಂತಹ ತಂಡಗಳನ್ನು ಸೋಲಿಸಿದ್ದಾರೆ. ಭಾರತ ಒಲಿಂಪಿಕ್ಸ್‌ನಲ್ಲಿ ಶ್ರೀಮಂತ ಇತಿಹಾಸವನ್ನು ಹೊಂದಿದೆಯಾದರೂ, 40 ವರ್ಷಗಳಿಂದ ಚಿನ್ನದ ಪದಕವನ್ನು ಗೆಲ್ಲಲು ಸಾಧ್ಯವಾಗಿಲ್ಲ. 1980 ರ ಮಾಸ್ಕೋ ಗೇಮ್ಸ್‌ನಲ್ಲಿ ಭಾರತ ತನ್ನ ಎಂಟು ಒಲಿಂಪಿಕ್ ಪದಕಗಳ ಪೈಕಿ ಕೊನೆಯದನ್ನು ಗೆದ್ದಿತ್ತು.
Advertisement