ನವದೆಹಲಿ: ಯುವ ಸ್ಟ್ರೈಕರ್ ರಾಜ್ ಕುಮಾರ್ ಪಾಲ್ ಅವರ ಹ್ಯಾಟ್ರಿಕ್ ಗೋಲಿನ ನೆರವಿನಿಂದ ಹಾಲಿ ಚಾಂಪಿಯನ್ ಭಾರತವು ಬುಧವಾರ ನಡೆದ ಹೀರೋ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಮಲೇಷ್ಯಾವನ್ನು 8-1 ಗೋಲುಗಳಿಂದ ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ಇದು ಟೂರ್ನಿಯಲ್ಲಿ ಭಾರತಕ್ಕೆ ಸತತ ಮೂರನೇ ಜಯವಾಗಿದೆ.
ಭಾರತದ ಪರ ರಾಜ್ ಕುಮಾರ್ (3, 25 ಮತ್ತು 33ನೇ ನಿಮಿಷ), ಅರಿಜಿತ್ ಸಿಂಗ್ ಹುಂಡಾಲ್ (6ನೇ, 39ನೇ ನಿಮಿಷ), ಜುಗರಾಜ್ ಸಿಂಗ್ (7ನೇ ನಿಮಿಷ), ನಾಯಕ ಹರ್ಮನ್‌ಪ್ರೀತ್ ಸಿಂಗ್ (22ನೇ ನಿಮಿಷ) ಮತ್ತು ಉತ್ತಮ್ ಸಿಂಗ್ (40ನೇ ನಿಮಿಷ) ಗೋಲು ಗಳಿಸಿದರು. ಮಲೇಷ್ಯಾ ಪರ ಅಖಿಮುಲ್ಲಾ ಅನ್ವರ್ (34ನೇ ನಿಮಿಷ) ಏಕೈಕ ಗೋಲು ದಾಖಲಿಸಿದರು. ಭಾರತ ಪ್ರಸ್ತುತ ಮೂರು ಗೆಲುವಿನಿಂದ ಒಂಬತ್ತು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಭಾರತ ಗುರುವಾರ ದಕ್ಷಿಣ ಕೊರಿಯಾವನ್ನು ಎದುರಿಸಲಿದೆ. ನಂತರ ಶನಿವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಲೀಗ್ ಪಂದ್ಯವನ್ನು ಆಡಲಿದೆ. ಈ ಎರಡು ತಂಡಗಳ ನಡುವಿನ ಕೊನೆಯ ಪಂದ್ಯವು 2023ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಆಗಿತ್ತು. ಅಲ್ಲಿ ಭಾರತವು ವಿರಾಮದ ವೇಳೆಗೆ 1-3 ರಿಂದ ಹಿಂದುಳಿದಿತ್ತು. ಆ ಪಂದ್ಯದಲ್ಲಿ ಭಾರತ ತಂಡ ಬಲಿಷ್ಠ ಪುನರಾಗಮನ ಮಾಡಿ 4-3 ಅಂತರದಲ್ಲಿ ಗೆದ್ದು ಪ್ರಶಸ್ತಿ ಗೆದ್ದುಕೊಂಡಿತು.
ಮೊದಲ ಪಂದ್ಯದಲ್ಲಿ ಜಪಾನ್ ತಂಡವನ್ನು 2-1 ಗೋಲುಗಳಿಂದ ಸೋಲಿಸುವ ಮೂಲಕ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸುವ ಅವಕಾಶವನ್ನು ಹೆಚ್ಚಿಸಿಕೊಂಡಿದೆ.
Advertisement