ಹುಲುನ್‌ಬುಯಿರ್: ಭಾನುವಾರ ಇಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಆತಿಥೇಯ ಚೀನಾ ವಿರುದ್ಧ ಹಾಲಿ ಚಾಂಪಿಯನ್ ಭಾರತದ ಪುರುಷರ ಹಾಕಿ ತಂಡ 3-0 ಗೋಲುಗಳಿಂದ ಗೆಲುವು ಪಡೆದು ಶುಭಾರಂಭ ಮಾಡಿತು.
ಭಾರತದ ಪರ ಸುಖ್ ಜೀತ್ ಸಿಂಗ್ (14ನೇ ನಿಮಿಷ), ಉತ್ತಮ್ ಸಿಂಗ್ (27ನೇ), ಮತ್ತು ಅಭಿಷೇಕ್ (32ನೇ) ಗೋಲು ಗಳಿಸಿದರೆ, ಚೀನಾ ಯಾವುದೇ ಗೋಲು ಗಳಿಸುವಲ್ಲಿ ವಿಫಲವಾಯಿತು.
ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಬಾರಿ ಕಂಚಿನ ಪದಕ ಗೆಲುವಿನೊಡನೆ ಈ ಟೂರ್ನಿಗೆ ಬಂದಿದ್ದ ಭಾರತ ತಂಡ ಉತ್ತಮ ಪ್ರದರ್ಶನ ನೀಡಿತು. ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಿತು. ವಿಜೇತರಾಗಿ ಹೊರಹೊಮ್ಮುವಲ್ಲಿ ತಂಡದ ರಕ್ಷಣಾ ವಿಭಾಗ ಬಲಾಢ್ಯವಾಗಿತ್ತು.
ಮೊದಲ ಕ್ವಾರ್ಟರ್‌ನಲ್ಲಿ ಸುಖಜೀತ್ ಚೆಂಡನ್ನು ಗುರಿ ತಲುಪಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಎರಡನೇ ಕ್ವಾರ್ಟರ್ ನ ಅಂತ್ಯಕ್ಕೆ ವಿರಾಮಕ್ಕೆ ಕೆಲವೇ ನಿಮಿಷಗಳಿರುವಾಗ ಉತ್ತಮ್ ಗೋಲು ಭಾರಿಸುವ ಮೂಲಕ ಭಾರತಕ್ಕೆ ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು. ಇದಾದ ಕೇವಲ ಎರಡು ನಿಮಿಷಗಳ ನಂತರ, ಅಭಿಷೇಕ್ ಅದ್ಭುತವಾದ ರಿವರ್ಸ್ ಹಿಟ್‌ನೊಂದಿಗೆ ಚೆಂಡನ್ನು ಕರಾರುವಾಕ್ ಆಗಿ ಗುರಿ ತಲುಪಿಸಿ ಭಾರತ ಮುನ್ನಡೆಯನ್ನು 3-0ಕ್ಕೆ ಹೆಚ್ಚಿಸಿದರು.
ಸೋಮವಾರ ನಡೆಯಲಿರುವ ಗುಂಪಿನ ಎರಡನೇ ಪಂದ್ಯದಲ್ಲಿ ಭಾರತ ತಂಡ ಜಪಾನ್ ತಂಡವನ್ನು ಎದುರಿಸಲಿದೆ. ಇತರ ಪಂದ್ಯಗಳಲ್ಲಿ, ಮಲೇಷ್ಯಾ ಹೈ-ವೋಲ್ಟೇಜ್ ಸ್ಪರ್ಧೆಯಲ್ಲಿ ಪಾಕಿಸ್ತಾನವನ್ನು 2-2 ಡ್ರಾಗೆ ಹಿಡಿದಿಟ್ಟುಕೊಂಡಿತು, ಆದರೆ ಜಪಾನ್ ಮತ್ತು ಕೊರಿಯಾ 5-5 ಡ್ರಾಕ್ಕೆ ನೆಲೆಗೊಳ್ಳುವ ಮೊದಲು ಗೋಲು-ಸಂಭ್ರಮದಲ್ಲಿ ತೊಡಗಿದವು.
Advertisement