
ನವದೆಹಲಿ: ಪೋರ್ಚುಗಲ್ ಫುಟ್ಬಾಲ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ಸೌದಿ ಫುಟ್ಬಾಲ್ ಕ್ಲಬ್ Al-Nassr ಜೊತೆಗಿನ ತಮ್ಮ ಒಪ್ಪಂದವನ್ನು ನವೀಕರಿಸಿದ್ದು, ಈ ಒಪ್ಪಂದ ಇದೀಗ ಫುಟ್ಬಾಲ್ ವಲಯದ ನೂತನ ದಾಖಲೆಯಾಗಿದೆ.
ಹೌದು.. ಕ್ರಿಸ್ಟಿಯಾನೋ ರೊನಾಲ್ಡೋ ಸೌದಿ ಕ್ಲಬ್ ಜೊತೆ ಒಪ್ಪಂದ ಹೊಂದಿದ್ದು, ಇವರ ಈ ಒಪ್ಪಂದ ಜೂನ್‌ನಲ್ಲಿ ಕೊನೆಗೊಳ್ಳಲಿದೆ. ರೊನೊಲ್ಡೊ ಮುಂದಿನ ನಡೆ ಏನು ಎಂಬ ಬಗ್ಗೆ ಪ್ರಶ್ನೆಗಳು ಆರಂಭವಾಗಿದ್ದವು. ಈಗ ಇದಕ್ಕೆಲ್ಲಾ ಉತ್ತರ ಸಿಕ್ಕಿದೆ.
ಕ್ರಿಸ್ಟಿಯಾನೊ ರೊನಾಲ್ಡೊ 2022ರಲ್ಲಿ ಸೌದಿ ಪ್ರೊ ಲೀಗ್‌ನಲ್ಲಿ ಅಲ್-ನಾಸರ್ ಕ್ಲಬ್‌ನೊಂದಿಗೆ ಸೇರಿಕೊಂಡಿದ್ದರು. ಈ ಒಪ್ಪಂದವು ಇದೇ ತಿಂಗಳು ಅಂತ್ಯವಾಗುತ್ತಿತ್ತು. ಈಗ ಇವರ ಮುಂದಿನ ನಡೆಯ ಬಗ್ಗೆ ಸ್ಪಷ್ಟತೆ ಸಿಕ್ಕಿದ್ದು, ಹೊಸ ಒಪ್ಪಂದದಿಂದ ರೊನಾಲ್ಡೊ ಪಡೆಯಬಹುದಾದ ಮೊತ್ತದ ಬಗ್ಗೆಯೂ ಮಾಹಿತಿ ಲಭಿಸಿದೆ.
ಹೊಸ ಒಪ್ಪಂದ
ರೊನಾಲ್ಡೊ ಅಲ್-ನಾಸರ್ ಕ್ಲಬ್‌ನೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದ್ದು, ಈ ಮೂಲಕ ಯುರೋಪಿಯನ್ ಕ್ಲಬ್‌ಗಳತ್ತ ಮುಖ ಮಾಡುತ್ತಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ತಮ್ಮ ಒಪ್ಪಂದದ ಬಗ್ಗೆ ರೊನಾಲ್ಡೊ ತಮ್ಮ ಎಕ್ಸ್ (X) ಖಾತೆಯಲ್ಲಿ ಬರೆದುಕೊಂಡಿದ್ದು, ಹೊಸ ಅಧ್ಯಾಯ ಆರಂಭವಾಗಿದೆ.
ಅದೇ ಉತ್ಸಾಹ, ಕನಸು, ಒಟ್ಟಿಗೆ ಇತಿಹಾಸ ನಿರ್ಮಿಸೋಣ ಎಂದು ರೊನಾಲ್ಡೊ ಹೇಳಿಕೊಂಡಿದ್ದಾರೆ. ಇವರ ಈ ಹೊಸ ಒಪ್ಪಂದವು 2027 ರವರೆಗೆ ವಿಸ್ತರಣೆ ಆಗಿದೆ ಎಂದು ಅಲ್ ನಾಸರ್ ಕ್ಲಬ್ ತಿಳಿಸಿದೆ.
2 ಸಾವಿರ ಕೋಟಿ ರೂ ಸಂಭಾವನೆ
ಅಲ್ ನಾಸರ್ ಕ್ಲಬ್ ಜೊತೆ ಹೊಸ ಒಪ್ಪಂದದ ಪ್ರಕಾರ ರೊನಾಲ್ಡೊ ವಾರ್ಷಿಕ್ 178 ಮಿಲಿಯನ್ ಪೌಂಡ್ (ಪ್ರತಿ ವರ್ಷ ಸುಮಾರು 2 ಸಾವಿರ ಕೋಟಿ ರೂ.) ಸಂಭವಾನೆ ಪಡೆಯಲಿದ್ದಾರೆ. ಇದರ ಹೊರತಾಗಿಯೂ ರೊನಾಲ್ಡೊ ಅವರಿಗೆ ಬೇರೆ ಭತ್ಯೆಗಳು ಸಹ ಸಿಗಲಿವೆ.
ಒಂದು ವೇಳೆ ಇವರು ಪ್ರತಿನಿಧಿಸುವ ತಂಡ ಗೆದ್ದರೆ, ಪ್ರತ್ಯೇಕವಾಗಿ 8 ಮಿಲಿಯನ್ ನೀಡಲಾಗುತ್ತದೆ ಎನ್ನಲಾಗಿದೆ. ಅಲ್ಲದೆ ಒಪ್ಪಂದದ ಪೂರ್ವಭಾವಿಯಾಗಿ ಕ್ರಿಸ್ಟಿಯಾನೊ 24.5 ಮಿಲಿಯನ್ ಪಡೆದಿದ್ದಾರೆ. ಇದಲ್ಲದೆ ಅವರ ಪ್ರಯಾಣಕ್ಕೆ ಒಂದು ಖಾಸಗಿ ಜೆಟ್ ಅನ್ನು ಕೂಡ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.
ರೊನಾಲ್ಡೋಗೆ ಸಿಕ್ಕಿದ್ದೇನು?
ಟಾಕ್ಸ್‌ಪೋರ್ಟ್ ವರದಿ ಪ್ರಕಾರ, ಅಲ್-ನಾಸರ್ ಜೊತೆಗಿನ ಒಪ್ಪಂದ ವಿಸ್ತರಣೆಗೆ ಸಹಿ ಹಾಕಿದ ನಂತರ ರೊನಾಲ್ಡೊ ಮುಂದಿನ ಎರಡು ವರ್ಷಗಳಲ್ಲಿ ವರ್ಷಕ್ಕೆ 178 ಮಿಲಿಯನ್ ಪೌಂಡ್‌ಗಳನ್ನು (ಸುಮಾರು 400 ಮಿಲಿಯನ್ ಯುರೋಗಳು ಅಥವಾ INR 2000 ಕೋಟಿ) ಗಳಿಸಲಿದ್ದಾರೆ. ಇದಲ್ಲದೆ ಈ ಮಹತ್ವದ ಒಪ್ಪಂದವು ಈ ಕೆಳಗಿನವುಗಳನ್ನು ಸಹ ಒಳಗೊಂಡಿದೆ:
24.5 ಮಿಲಿಯನ್ ಸಹಿ ಬೋನಸ್ (ಎರಡನೇ ವರ್ಷದಲ್ಲಿ £38 ಮಿಲಿಯನ್‌ಗೆ ಹೆಚ್ಚಳ)
ಅಲ್ ನಸರ್ ಸೌದಿ ಪ್ರೊ ಲೀಗ್ ಗೆದ್ದರೆ 8 ಮಿಲಿಯನ್ ಬೋನಸ್
ಅಲ್ ನಸರ್ ಏಷ್ಯನ್ ಚಾಂಪಿಯನ್ಸ್ ಲೀಗ್ ಗೆದ್ದರೆ 5 ಮಿಲಿಯನ್ ಬೋನಸ್
ಗೋಲ್ಡನ್ ಬೂಟ್ ಗೆದ್ದರೆ 4 ಮಿಲಿಯನ್ ಬೋನಸ್
ಅಲ್ ನಸರ್ ನ ಶೇ.15% ಮಾಲೀಕತ್ವ (£33 ಮಿಲಿಯನ್ ಎಂದು ಅಂದಾಜಿಸಲಾಗಿದೆ)
ಪ್ರತಿ ಗೋಲಿಗೆ 80 ಸಾವಿರ ಬೋನಸ್ (ಎರಡನೇ ವರ್ಷದಲ್ಲಿ 20% ಹೆಚ್ಚಳ)
ಪ್ರತಿ ಸಹಾಯಕ್ಕೆ 40 ಸಾವಿರ ಬೋನಸ್ (ಎರಡನೇ ವರ್ಷದಲ್ಲಿ 20% ಹೆಚ್ಚಳ)
60 ಮಿಲಿಯನ್ ಮೌಲ್ಯದ ಪ್ರಾಯೋಜಕತ್ವದ ಒಪ್ಪಂದಗಳ ಭರವಸೆ
4 ಮಿಲಿಯನ್ ಮೌಲ್ಯದ ಖಾಸಗಿ ಜೆಟ್ ವೆಚ್ಚಗಳು ಕೂಡ ಸೇರಿದೆ.
Advertisement