
ನವದೆಹಲಿ: ಜರ್ಮನಿಯಲ್ಲಿ ನಡೆದ 2025ರ ವಿಶ್ವ ಟ್ರಾನ್ಸ್‌ಪ್ಲಾಂಟ್ ಕ್ರೀಡಾಕೂಟದಲ್ಲಿ ಅಂಗಾಂಗ ಸ್ವೀಕರಿಸಿದವರು ಅಥವಾ ದಾನಿಗಳು ಸೇರಿದಂತೆ ಸುಮಾರು 57 ಭಾರತೀಯ ಕ್ರೀಡಾಪಟುಗಳು ಒಟ್ಟು 63 ಪದಕಗಳನ್ನು ಗೆದ್ದು ಬೀಗಿದ್ದಾರೆ. ಇದು ಅಂಗಾಂಗ ಕಸಿ ನಂತರವೂ ಕ್ರೀಡಾ ಜೀವನ ಸಾಧ್ಯ ಮತ್ತು ಶಕ್ತಿಶಾಲಿಯೂ ಆಗಿದೆ ಎಂಬುದನ್ನು ಸಾಬೀತುಪಡಿಸಿದೆ.
ವಿವಿಧ ಕ್ರೀಡಾ ವಿಭಾಗಗಳಲ್ಲಿ 16 ಚಿನ್ನ, 22 ಬೆಳ್ಳಿ ಮತ್ತು 23 ಕಂಚಿನ ಪದಕಗಳನ್ನು ಭಾರತೀಯ ಕ್ರೀಡಾಪಟುಗಳು ಪಡೆದಿದ್ದಾರೆ.
ಪ್ರಮುಖ ಪದಕ ವಿಜೇತರಲ್ಲಿ ಚಂಡೀಗಢದ ಪಶುವೈದ್ಯ ಜಸ್ಕರನ್ ಸಿಂಗ್ ಕೂಡ ಒಬ್ಬರಾಗಿದ್ದು, ಅವರು ಎರಡು ವರ್ಷಗಳ ಹಿಂದೆ ತಮ್ಮ ಅನಾರೋಗ್ಯ ಪೀಡಿತ ಪತ್ನಿಗೆ ಮೂತ್ರಪಿಂಡ ದಾನ ಮಾಡಿದ್ದರು. ಸಿಂಗ್ ನಾಲ್ಕು ಚಿನ್ನದ ಪದಕಗಳು ಮತ್ತು ಒಂದು ಬೆಳ್ಳ ಪದಕ ಗೆದ್ದಿದ್ದಾರೆ. ಈ ಮೂಲಕ ಕ್ರೀಡಾಕೂಟದ ಅತ್ಯುತ್ತಮ ದಾನಿ ಕ್ರೀಡಾಪಟು ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
"ಅಂಗಾಂಗ ದಾನ ಮಾಡುವ ಅಥವಾ ಸ್ವೀಕರಿಸುವ ಜನ, ಸಾಮಾನ್ಯ ಜೀವನ ನಡೆಸಲು ಸಾಧ್ಯವಿಲ್ಲ ಎಂಬ ಮಾತಿದೆ. ಆದರೆ ನನಗೆ ಒಂದೇ ಮೂತ್ರಪಿಂಡವಿದೆ ಎಂದು ನನಗೆ ಒಮ್ಮೆಯೂ ಅನಿಸಲಿಲ್ಲ" ಎಂದು ಸಿಂಗ್ ಹೇಳಿದ್ದಾರೆ.
2012 ರಲ್ಲಿ ತನ್ನ ತಾಯಿಯಿಂದ ಮೂತ್ರಪಿಂಡ ಕಸಿ ಮಾಡಿಸಿಕೊಂಡ ರಾಜಸ್ಥಾನದ ರಾಮದೇವ್ ಸಿಂಗ್, ತೀವ್ರ ಪೈಪೋಟಿಯ ಟ್ರ್ಯಾಕ್ ಮತ್ತು ಫೀಲ್ಡ್ 30–39 ವಿಭಾಗದಲ್ಲಿ ಒಂದು ಚಿನ್ನ, ಒಂದು ಬೆಳ್ಳಿ ಮತ್ತು ಎರಡು ಕಂಚು ಸೇರಿದಂತೆ ನಾಲ್ಕು ಪದಕಗಳನ್ನು ಪೆಡಿದ್ದಾರೆ.
ಇನ್ನೂ ಬೆಂಗಳೂರಿನ ಆನಂದ್ ಕುಟುಂಬ, ತಮ್ಮ ನಡುವೆ 13 ಪದಕಗಳನ್ನು ಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿತು.
2021 ರಲ್ಲಿ ಮೂತ್ರಪಿಂಡ ಕಸಿ ನಂತರ ಮೈದಾನಕ್ಕೆ ಮರಳಿದ್ದ ಮಾಜಿ ಸೇನಾ ಶಾಟ್‌ಪುಟ್ ಪಟು ಸತ್ಯವಾನ್ ಪಂಗಲ್ ಅವರು ಎರಡು ಚಿನ್ನ ಮತ್ತು ಒಂದು ಬೆಳ್ಳಿ ಪದಕಗಳನ್ನು ಗೆದ್ದರು.
Advertisement