ಮುಕ್ತ... ಮುಕ್ತ...

ಮುಕ್ತ... ಮುಕ್ತ...
Updated on: 

ಆತ ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪಿಯುಸಿ ಓದುತ್ತಿರುವ ಹುಡುಗ. ಅಪ್ಪ ಅಮ್ಮ ಕಾಲೇಜಿಗೆ ಅಂತ ಕಳುಹಿಸಿದರೆ, ಈತ ಕಾಲೇಜಿಗೆ ಚಕ್ಕರ್ ಹಾಕಿ ಸೈಬರ್‌ಗೆ ಹೋಗುತ್ತಿದ್ದ. ಜತೆಗಿಬ್ಬರು ಗೆಳೆಯರು ಬೇರೆ. ಒಮ್ಮೆ ಅಪ್ಪನ ಕೈಗೆ ಸಿಕ್ಕಿಬಿದ್ದ. 'ಪ್ರಾಜೆಕ್ಟ್ ವರ್ಕ್, ಅದು ನಿಮಗರ್ಥವಾಗಲ್ಲ' ಅಂತ ಹೇಳಿ ತಪ್ಪಿಸಿಕೊಂಡ.

ಸೈಬರ್ ಸಹವಾಸಕ್ಕೆ ಬಿದ್ದ ತನ್ನದೇ ಆದ ಪಡ್ಡೆಗಳ ಗುಂಪು ಕಟ್ಟಿಕೊಂಡ. ಕಾಲೇಜು ಎದುರೇ ಇದ್ದ ಅಂಗಡಿಗೆ ಹೋಗಿ ಸಿಗರೇಟು ಸೇದುವುದು, ರಸ್ತೆಯಲ್ಲಿ ಓಡಾಡುವ ಹುಡುಗಿಯರಿಗೆ ಗೆಳೆಯರ ಜತೆ ಸೇರಿ ಚುಡಾಯಿಸುವುದು ಶುರು ಮಾಡಿದ. ಅಕ್ಕಪಕ್ಕದವರು ಈ ಪೋಕರಿಗಳ ಬಗ್ಗೆ ಸೈಬರಣ್ಣನನ್ನು ವಿಚಾರಿಸಿದರೆ, 'ಸಾರ್... ಈ ಹುಡುಗರೇ ಹೀಗೆ. ಕಾಲೇಜಿಗೆ ಹೋಗದೆ ಇಲ್ಲಿಗೆ ಬರುತ್ತಾರೆ. ಗೇಮ್ ಆಡ್ತಾರೆ, ಅಶ್ಲೀಲ ಚಿತ್ರ ನೋಡುತ್ತಾರೆ. ಎಷ್ಟು ಹೇಳಿದ್ರೂ ಕೇಳಲ್ಲ' ಅನ್ನುವ ಉತ್ತರ ಬಂತು. ಇದನ್ನು ಕೇಳಿಸಿಕೊಂಡವರಿಗೆ 'ಎಂಥಾ ಕಾಲ ಬಂತಪ್ಪಾ...' ಅಂತ ಹಣೆ ಹಣೆ ಚಚ್ಚಿಕೊಳ್ಳುವುದು ಬಿಟ್ಟರೆ ಬೇರೆ ದಾರಿ ಇರಲಿಲ್ಲ.

ಹೌದು. ಆದರೆ, ಇದು ಬೆಂಗಳೂರಿನಂಥ ಮಹಾನಗರಕ್ಕೆ ಸೀಮಿತವಾದ ಸಮಸ್ಯೆ ಅಲ್ಲ. ಸಣ್ಣಪುಟ್ಟ ನಗರಗಳಲ್ಲೂ ನೆಟ್ ಲೋಕ ಇಂಥದ್ದೊಂದು ಅವಾಂತರಗಳನ್ನು ಸೃಷ್ಟಿ ಮಾಡುತ್ತಿದೆ. ಲಂಗುಲಗಾಮಿಲ್ಲದ ಈ ಜಗತ್ತಿನಲ್ಲಿ ಎಲ್ಲವೂ ಮುಕ್ತ ಮುಕ್ತ... ಮಕ್ಕಳು ಕಂಪ್ಯೂಟರ್ ಮುಂದೆ ಕುಳಿತು ಏನು ಮಾಡುತ್ತಿದ್ದಾರೆ ಅನ್ನುವುದು ದೊಡ್ಡವರಿಗೆ ಸುಲಭಕ್ಕೆ ಗೊತ್ತಾಗುವುದಿಲ್ಲ. ಇದು ನೆಟ್‌ಲೋಕದಲ್ಲಿ ಮಕ್ಕಳ ಸ್ವಚ್ಛಂದ ವಿಹಾರಕ್ಕೆ ಮುಕ್ತವಾತಾವರಣ ಕಲ್ಪಿಸಿಕೊಡುತ್ತದೆ. ಅವರನ್ನು ಅಡ್ಡದಾರಿಗಿಳಿಯಲು ಪ್ರೇರಣೆ ನೀಡುತ್ತದೆ. ಈಗಿನ ಮಕ್ಕಳ ಆಟ, ಪಾಠ ಎಲ್ಲವೂ ಕಂಪ್ಯೂಟರ್, ಮೊಬೈಲ್ ಜಗತ್ತಿಗೆ ಸೀಮಿತವಾಗುತ್ತಿದೆ.

ಕಾಲ ಬದಲಾಗಿದೆ, ಅದಕ್ಕೆ ತಕ್ಕಂತೆ ಎಲ್ಲರೂ ಬದಲಾಗಬೇಕು ಎನ್ನುವುದೇನೋ ಸರಿ. ಆದರೆ, ಅಂಕೆಯಿಲ್ಲದೆ ನೆಟ್‌ಲೋಕದಲ್ಲಿ ಮಕ್ಕಳನ್ನು ವಿಹರಿಸಲು ಬಿಟ್ಟರೆ ಅದು ಅವರಲ್ಲಿ ವಯಸ್ಸಿಗೆ ಮೀರಿದ ಬದಲಾವಣೆಗಳಿಗೆ ಕಾರಣವಾಗಬಹುದು. ಮುಂದೆ ಇದು ಅವರ ಭವಿಷ್ಯವನ್ನೇ ಹಾಳು ಮಾಡಬಹುದು. ನೆಟ್‌ನಲ್ಲಿ ಸಿಗುವ ಅಶ್ಲೀಲ ಚಿತ್ರ, ವೀಡಿಯೋ ನೋಡಿಕೊಂಡು ಅನೇಕರು ಮುಂದೆ ತಮ್ಮ ಸಾಂಸಾರಿಕ ಜೀವನ ಹಾಳು ಮಾಡಿಕೊಂಡ ಎಷ್ಟೋ ಉದಾಹರಣೆಗಳಿವೆ.
ತಂತ್ರಜ್ಞಾನಗಳಿರುವುದು ಮಾನವನ ಒಳಿತಿಗೆಂದೇ. ಆದರೆ, ಅದರ ಒಳಿತು-ಕೆಡುಕು ನಿರ್ಧರಿತವಾಗುವುದು ಅವುಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಅನ್ನುವುದರ ಮೇಲೆ. ಆಧುನಿಕ ತಂತ್ರಜ್ಞಾನಕ್ಕೆ ಒಡ್ಡಿಕೊಳ್ಳುವ ಮಕ್ಕಳಿಗೆ ಅದರ ಒಳಿತು- ಕೆಡುಕುಗಳ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಹಾಗಾಗಿ ಮಕ್ಕಳು ಇಂಥ ತಂತ್ರಜ್ಞಾನಗಳನ್ನು ಬಳಸುವಾಗ ಪೋಷಕರ ಸಲಹೆ- ಸೂಚನೆ ಅತ್ಯಗತ್ಯ.

ಪೋಷಕರು ಏನು ಮಾಡಬಹುದು?

  •  ನೆಟ್ ಲೋಕದ ಅಪಾಯದ ಕುರಿತು ಮಕ್ಕಳಿಗೆ ತಿಳಿವಳಿಕೆ ನೀಡಬೇಕು.
  •  ಮಕ್ಕಳು ಉಪಯೋಗಿಸುವ ಲ್ಯಾಪ್‌ಟಾಪ್, ಸ್ಮಾರ್ಟ್‌ಫೋನ್, ಕಂಪ್ಯೂಟರ್‌ಗಳ ಮೇಲೆ ನಿಗಾ ಇಟ್ಟಿರಬೇಕು.
  •  ಮಕ್ಕಳನ್ನು ಆಟ, ವ್ಯಾಯಾಮದಂಥ ದೈಹಿಕ ಚಟುವಟಿಕೆಗಳಲ್ಲೂ ತೊಡಗಿಸಬೇಕು.
- ವಿಜಯ್. ಆರ್. ಹೊಸನಗರ
vijay.suni925@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com