ಕೈಗಾದಲ್ಲಿ ಗರಿಷ್ಠ ಅಣು ವಿದ್ಯುತ್ ಉತ್ಪಾದನೆ
ಕ.ಪ್ರ.ವಾರ್ತೆ, ಕಾರವಾರ, ಆ. 9-
ಇಂಧನ ಕೊರತೆಯಿಂದ ದೇಶದ ಅಣು ವಿದ್ಯುತ್ ಸ್ಥಾವರಗಳಿಗೆ ಕವಿದಿದ್ದ ಗ್ರಹಣ ವಿಮೋಚನೆಯಾಗಿದೆ. ಇದೀಗ ಇಂಧನ ಪೂರೈಕೆ ಸಹಜ ಸ್ಥಿತಿಗೆ ಮರಳಿದ್ದು, ಅಣು ವಿದ್ಯುತ್ ಘಟಕಗಳು ಗರಿಷ್ಠ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುತ್ತಿವೆ. ಕೈಗಾ ಅಣು ವಿದ್ಯುತ್ ಘಟಕಗಳೂ ತಮ್ಮ ಸಾಮರ್ಥ್ಯದ ಶೇ.90ರಷ್ಟು ವಿದ್ಯುತ್ ಉತ್ಪಾದಿಸುತ್ತಿವೆ.
ಪ್ರಮುಖ ಅಣು ಇಂಧನವಾದ ಯುರೇನಿಯಂ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗದೆ ಐದು ವರ್ಷಗಳ ಹಿಂದೆ ಅಣು ವಿದ್ಯುತ್ ಘಟಕಗಳಿಗೆ ಕಾರ್ಮೋಡ ಕವಿದಿತ್ತು. ಈ ಶೇ.50ರಷ್ಟು ಮಾತ್ರ ವಿದ್ಯುತ್ ಉತ್ಪಾದಿಸುವಲ್ಲಿ ಸಫಲವಾಗಿದ್ದವು. ಕೆಲವು ಘಟಕಗಳು ಕುಂಟುತ್ತಿದ್ದವು. ಇದರಿಂದ ಅಣು ಇಂಧನ ಲಭ್ಯವಾಗದೆ ಅಣು ವಿದ್ಯುತ್ ಸ್ಥಾವರಗಳ ಭವಿಷ್ಯವೇ ಡೋಲಾಯಮಾನವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಸಾಲದೆಂಬಂತೆ ತಮಿಳುನಾಡಿನ ಕೂಡಂಕುಳಂನಲ್ಲಿ ಅಣು ವಿದ್ಯುತ್ ಘಟಕಗಳ ವಿರುದ್ಧ ಹೋರಾಟ, ಜಪಾನ್ನ ಫುಕುಶಿಮಾ ದುರಂತದ ತರುವಾಯ ದೇಶದ ಎಲ್ಲ ಅಣು ವಿದ್ಯುತ್ ಸ್ಥಾವರಗಳ ವಿರುದ್ಧ ಹೋರಾಟದ ಕಹಳೆ ಮೊಳಗಿದ್ದು ಅಣು ವಿದ್ಯುತ್ ಸ್ಥಾವರಗಳ ಮೇಲೆ ಕತ್ತಲೆ ಕವಿದಂತಾಗಿತ್ತು.
ಯುರೇನಿಯಂ ಲಭ್ಯ: ಈಗ ಅಗತ್ಯ ಯುರೇನಿಯಂ ಪೂರೈಕೆಯಾಗುತ್ತಿರುವುದರಿಂದ ಅಣು ವಿದ್ಯುತ್ ಸ್ಥಾವರಗಳು ಮೈಕೊಡವಿಕೊಂಡು ಎದ್ದಿವೆ. ಅದರಲ್ಲೂ ಜಾರ್ಖಂಡ್ನ ಜಾದೂಗಡ ಗಣಿಯಿಂದ ಯುರೇನಿಯಂ ಅಗತ್ಯ ಪ್ರಮಾಣದಲ್ಲಿ ದೊರೆಯುತ್ತಿದ್ದರೆ, ಉಳಿದೆಡೆ ಯುರೇನಿಯಂನ ವ್ಯಾಪಕ ನಿಕ್ಷೇಪ ಇರುವುದು ಪತ್ತೆಯಾಗಿರುವುದು ದೇಶದ ಅಣು ವಿದ್ಯುತ್ ಯೋಜನೆಗಳಿಗೆ ಆಶಾದಾಯಕವಾಗಿದೆ.
ರಾಜ್ಯದ ಕೈಗಾ ಮತ್ತು ಉತ್ತರ ಪ್ರದೇಶದ ನರೋರಾ ಘಟಕಗಳಿಗೆ ಮಾತ್ರ ದೇಶೀಯವಾಗಿ ಉತ್ಪಾದಿತ ಯುರೇನಿಯಂ ಬಳಸಲಾಗುತ್ತಿದ್ದರೆ, ಕಕ್ರಪರ್, ರಾಜಸ್ಥಾನ, ತಾರಾಪುರ, ಕಲ್ಪಕ್ಕಂ ಅಣು ವಿದ್ಯುತ್ ಘಟಕಗಳಲ್ಲಿ ವಿದೇಶದಿಂದ ಬರುವ ಯುರೇನಿಯಂ ಬಳಸಲಾಗುತ್ತಿದೆ.
ಕೈಗಾ ಅಣು ವಿದ್ಯುತ್ ಯೋಜನಾ ಪ್ರದೇಶದಲ್ಲಿ ತಲಾ 220 ಮೆ.ವ್ಯಾ.ಗಳ 4 ಘಟಕಗಳಿವೆ. ಇಂಧನ ಕೊರತೆಯಿಂದ 2009-10ರಲ್ಲಿ 1ನೇ ಘಟಕ ಕೇವಲ ಶೇ.52ರಷ್ಟು ಪ್ರಮಾಣದಲ್ಲಿ ಮಾತ್ರ ವಿದ್ಯುತ್ ಉತ್ಪಾದಿಸಿತು. 2ನೇ ಘಟಕ ಶೇ. 58ರಷ್ಟು, 3 ಹಾಗೂ 4ನೇ ಘಟಕ ಸಹ ಶೇ.58ರಷ್ಟು ಪ್ರಮಾಣದಲ್ಲಿ ಮಾತ್ರ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗಿತ್ತು. 2012-13ರಲ್ಲಿ ಈ ಘಟಕಗಳ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಶೇ.75ರಿಂದ 80ಕ್ಕೇರಿತು. ಇದರಂತೆ ದೇಶದ ಉಳಿದೆಲ್ಲ ಅಣು ವಿದ್ಯುತ್ ಘಟಕಗಳೂ ಈಗ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುತ್ತಿವೆ.
ಯುರೇನಿಯಂ ನಿಕ್ಷೇಪ: ಒಡಿಶಾದ 8 ಜಿಲ್ಲೆಗಳಲ್ಲಿ ಯುರೇನಿಯಂನ ಬೃಹತ್ ನಿಕ್ಷೇಪ ಇರುವುದನ್ನು ಅಟೋಮಿಕ್ ಮಿನರಲ್ ಡೈರೆಕ್ಟೋರೆಟ್ ನಡೆಸಿದ ಸಮೀಕ್ಷೆಯಿಂದ ಪತ್ತೆಯಾಗಿದೆ. ಆಂಧ್ರ ಪ್ರದೇಶದ ತಮ್ಮಲಪಲ್ಲಿ ಎಂಬಲ್ಲಿ ವಿಶ್ವದಲ್ಲೇ ಅತಿಹೆಚ್ಚು ಯುರೇನಿಯಂ ನಿಕ್ಷೇಪ ಇರುವುದು ಅಣುಶಕ್ತಿ ಆಯೋಗ ನಡೆಸಿದ ಸಂಶೋಧನೆಯಿಂದ ಖಚಿತಪಟ್ಟಿದೆ. ಇಲ್ಲಿ 49 ಸಾವಿರ ಟನ್ಗಳಷ್ಟು ಯುರೇನಿಯಂ ಇದ್ದು, ದೇಶದ ಅಣು ವಿದ್ಯುತ್ ಯೋಜನೆಗಳಿಗೆ ಇನ್ನಷ್ಟು ಬಲಬಂದಂತಾಗಿದೆ.
ಸದ್ಯ ದೇಶದ ಒಟ್ಟೂ ವಿದ್ಯುತ್ ಉತ್ಪಾದನೆಯಲ್ಲಿ ಅಣು ವಿದ್ಯುತ್ ಪಾಲು ಶೇ. 3ರಷ್ಟಿದೆ. ಇದನ್ನು 2050ರ ವೇಳೆಗೆ ಶೇ.30ರಷ್ಟಕ್ಕೆ ಹೆಚ್ಚಿಸುವುದು ಅಣು ವಿದ್ಯುತ್ ನಿಗಮದ ಗುರಿಯಾಗಿದೆ. ಇದಕ್ಕಾಗಿ ಬೇರೆ ಬೇರೆ ಕಡೆಗಳಲ್ಲಿ ಅಣು ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ನಿಗಮ ಉತ್ಸುಕವಾಗಿದೆ.
ಈಗ ಅಣು ಇಂಧನ ಯುರೇನಿಯಂ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗುತ್ತಿದೆ. ನಾವು ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುತ್ತಿದ್ದೇವೆ. ಇಂಧನದ ಕೊರತೆ ಈಗಿಲ್ಲ. ಜಾದೂಗಡ ಮತ್ತಿತರ ಕಡೆಗಳಿಂದ ಇದೀಗ ಯುರೇನಿಯಂ ಪೂರೈಕೆಯಾಗುತ್ತಿದೆ.
- ಎಚ್.ಎನ್. ಭಟ್, ಕೈಗಾ ಸ್ಥಳ ನಿರ್ದೇಶಕ
- ವಸಂತಕುಮಾರ್ ಕತಗಾಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

