ಕಾವೇರಿ ವಿವಾದ ಪರಿಹರಿಸುವ ತಾಕತ್ತಿರುವವರ್ಯಾರು?
ಮಂಡ್ಯ: ಮಂಡ್ಯಕ್ಕೆ ಬೇಕು ಮಾದರಿ ಲೋಕಸಭಾ ಸದಸ್ಯ (ಎಂಪಿ).
ಮಂಡ್ಯ ಲೋಕಸಭಾ ಉಪಚುನಾವಣೆ ತೀರಾ ಅನಗತ್ಯವಾಗಿತ್ತು. ಆದರೂ, ಪ್ರಜಾಪ್ರಭುತ್ವದಲ್ಲಿರುವ ಅವಕಾಶ ಬಳಕೆ ಮಾಡಿಕೊಂಡು ಸಂಸದರಾಗಿದ್ದ ಎನ್.ಚಲುವರಾಯಸ್ವಾಮಿ ಅವರ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಈಗ ಚುನಾವಣೆ ನಡೆಯುತ್ತಿದೆ.
ಜೆಡಿಎಸ್ ಪ್ರಚಾರ ಕಾರ್ಯ ಕ್ಷೇತ್ರದಲ್ಲೆಡೆ ಬರದಿಂದ ಸಾಗಿದೆ. ಜಿಲ್ಲಾ ನಾಯಕರು, ಸ್ಟಾರ್ ಕ್ಯಾಂಪೇನರ್ಗಳ ಪ್ರಚಾರ ಕಾರ್ಯದ ಸದ್ದುಗಳು ವಿವಾದದ ಹೇಳಿಕೆಗಳು ಅದನ್ನು ವಿರೋಧಿಸಿ ಪ್ರತಿಭಟನೆಗಳು ತಣ್ಣಗಾಗುವ ವೇಳೆಗೆ ನಮಗೆ ಎಂತಹ ಎಂಪಿಯವರನ್ನು ಆಯ್ಕೆ ಮಾಡಬೇಕು ಎಂಬ ಪ್ರಶ್ನೆ ಮತದಾರರ ಮುಂದಿದೆ.
ಮಂಡ್ಯ ಜಿಲ್ಲೆಯ ರಾಜಕಾರಣ ಅತ್ಯಂತ ವಿಶಿಷ್ಟವಾಗಿದೆ. ಮತದಾರರು ಅಷ್ಟೇ ಪ್ರಜ್ಞಾವಂತರಾಗಿದ್ದಾರೆ.
1989 ರಿಂದ 2009 ರವರೆಗೆ ಮಂಡ್ಯ ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾಗಿದ್ದ ಜಿ.ಮಾದೇಗೌಡ, ಕೃಷ್ಣ, ಅಂಬರೀಷ್ ಹಾಗೂ ಚಲುವರಾಯಸ್ವಾಮಿ ಅವರು ಸಂಸತ್ಗೆ ತೆರಳಿ ಜವಾಬ್ದಾರಿಯುತವಾಗಿ ಹಾಗೂ ಜಿಲ್ಲೆಯ ಅಭಿವೃದ್ಧಿ ಕೆಲಸಗಳನ್ನು ಯಾವ ರೀತಿ ನಿರ್ವಹಿಸಿದ್ದಾರೆ ಎಂಬುದು ಮತದಾರರ ಕಣ್ಣ ಮುಂದೆ ಇದೆ.
ಇತಿಹಾಸ ಗಮನಿಸಿಕೊಂಡೆ ಪ್ರಸ್ತುತವಾಗಿ ಎದುರಾಗಿರುವ ಲೋಕಸಭಾ ಉಪಚುನಾವಣೆಯ ಕಣದಲ್ಲಿರುವ ಇಬ್ಬರು ಅಭ್ಯರ್ಥಿಗಳಾದ ಕಾಂಗ್ರೆಸ್ನ ರಮ್ಯ ಹಾಗೂ ಜೆಡಿಎಸ್ನ ಸಿ.ಎಸ್.ಪುಟ್ಟರಾಜು ಅವರ ಹಣೆಬರಹ ನಿರ್ಧರಿಸುವ ಕಾಲ ಕೇವಲ ಇನ್ನೂ ಒಂದುವಾರವಷ್ಟೇ.
ನಾವ ಪ್ರತಿ ಭಾರಿ ಚುನಾವಣೆಯಲ್ಲೂ ನಮಗೆ ಎಂತಹ ಜನಪ್ರತಿನಿಧಿ ಬೇಕು ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಮತ ಹಾಕುತ್ತೇವೆ. ಅವರು ಆಯ್ಕೆಯಾಗುತ್ತಾರೆ. ಅವಧಿ ಮುಗಿಸುತ್ತಾರೆ. ಮತ್ತೆ ಚುನಾವಣಾ ಬರುತ್ತದೆ. ಇದು ಕಾಲಚಕ್ರದ ನಿರ್ಣಯದ ಒಂದು ಭಾಗ. ಆದರೆ, ನಿಜವಾಗಲೂ ಪ್ರಜ್ಞಾವಂತ ಮತದಾರರು ಆಯ್ಕೆ ಮಾಡುವ ಜನಪ್ರತಿನಿಧಿಗಳು ಸಾಮಾಜಿಕ ನ್ಯಾಯ, ಅಭಿವೃದ್ಧಿ ಕನಸು, ವಿಶಾಲ ದೃಷ್ಟಿಕೋನ, ಇತ್ಯಾದಿಗಳ ಬಗ್ಗೆ ಯಾವುದೇ ಕನಸುಗಳನ್ನು ಇಟ್ಟುಕೊಂಡ ಕೆಲಸ ಮಾಡಿದ ಉದಾಹರಣೆಗಳೇ ಇಲ್ಲ. ಇದು ಮತದಾರರಿಗೂ ಗೊತ್ತಿರುವ ಸಂಗತಿ.
ಪ್ರತಿಯೊಬ್ಬ ಮತದಾರರನೂ ಅನಿವಾರ್ಯ ಪರಿಸ್ಥಿತಿ ಎದುರಿಸುವ ಪರಿಸ್ಥಿತಿಗಳು ಬರುತ್ತವೆ. ಕಣದಲ್ಲಿರುವ ಇಬ್ಬರು ಅಭ್ಯರ್ಥಿಗಳ ಪೈಕಿ ಯಾರೂದರೂ ಒಬ್ಬರನ್ನು ಆಯ್ಕೆ ಮಾಡಲೇಬೇಕು. ಯಾರನ್ನ ಆಯ್ಕೆ ಮಾಡಿದರೆ ಸೂಕ್ತ ಎಂಬುದು ಇಲ್ಲಿ ಪ್ರಮುಖ ಪ್ರಶ್ನೆ. ಅಭ್ಯರ್ಥಿ ಆಯ್ಕೆ ವಿಚಾರವನ್ನು ಒಂದು ಪಕ್ಕಕ್ಕೆ ಇಟ್ಟು. ಮತ್ತೊಂದು ದೃಷ್ಟಿಯಿಂದ ಯೋಜನೆ ಮಾಡುವುದನ್ನು ನೋಡಿದರೆ ಮಂಡ್ಯಕ್ಕೆ ಒಬ್ಬ ಮಾದರಿ ಎಂ.ಪಿ. ಬೇಕಲ್ಲವೇ. ಇರುವ ಇಬ್ಬರು ಪ್ರಮುಖ ಅಭ್ಯರ್ಥಿಗಳಲ್ಲಿ ಯಾರು ಆ ಸ್ಥಾನ ತುಂಬುತ್ತಾರೆ ಎಂಬುದು ಮತದಾರರನ್ನು ಸದಾ ಕಾಡುತ್ತದೆ.
ಸಮಸ್ಯೆಗಳಿಗೆ ಸ್ಪಂದಿಸುತ್ತಾರೆಯೇ?: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸತ್ಗೆ ಆಯ್ಕೆಯಾಗಿರುವ ಇದುವರೆಗಿನ ಸಂಸದರು ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆಯೇ. ಈ ಪ್ರಶ್ನೆಗೆ ಉತ್ತರ ಹೇಳುವುದು ತುಂಬ ಕಷ್ಟ. ಏಕೆಂದರೆ, ಕೆಲವು ಎಂಪಿ ಆಗಿದ್ದವರು. ಸಂಸತ್ ಅಧಿವೇಶನದಲ್ಲಿ ಪಾಲ್ಗೊಂಡಿದ್ದೇ ಅಪರೂಪ. ಕೆಲವು ಪ್ರಶ್ನೆಗಳನ್ನು ಕೇಳಲಿಲ್ಲ. ಮತ್ತೆ ಕೆಲವರು ಪ್ರಶ್ನೆಗಳನ್ನು ಕೇಳಿದರೆ ಅವು ಸದ್ದೆ ಆಗಲಿಲ್ಲ. ಹೀಗಿರುವಾಗ ಸಂಸತ್ಗೆ ಆಯ್ಕೆಯಾಗುವ ಸಂಸದರ ಜವಾಬ್ದಾರಿಗಳು, ಸಮಸ್ಯೆಗಳ ಅರಿವು ಮತ್ತು ಕ್ಷೇತ್ರವನ್ನು ಅಭಿವೃದ್ಧಿಯತ್ತ ತೆಗೆದುಕೊಂಡ ಹೋಗುವ ದೃಷ್ಟಿಕೋನ ಇಲ್ಲದೇ ಹೋದರೆ ನಮ್ಮ ಸಂಸದರೂ ಕೂಡಾ ಹತ್ತರ ಜೊತೆ ಹನ್ನೊಂದರಂತೆ ಆಗುತ್ತಾರೆ.
ಕಾವೇರಿಗೆ ಪರಿಹಾರಬೇಕು?: ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಹುಮುಖ್ಯವಾಗಿ ಆಗಬೇಕಾಗಿರುವ ಕೆಲಸ ಎಂದರೆ ಕಾವೇರಿ ಜಲವಿವಾದ ಸೌಹಾರ್ದಯುತವಾಗಿ ಪರಿಹರಿಸುವುದು.
ತಮಿಳುನಾಡು ಮತ್ತು ಕರ್ನಾಟಕದ ನಡುವೆ ಉಂಟಾಗಿರುವ ವಿವಾದ ಮಾತುಕತೆ ಹಾಗೂ ಸಮಸ್ಯೆಗಳಿಗೆ ಎರಡು ರಾಜ್ಯಗಳಲ್ಲಿ ಹೆಚ್ಚುವರಿಯಾಗಿ ಅಣೆಕಟ್ಟೆಗಳನ್ನು ಕಟ್ಟುವುದರ ಮೂಲಕ ಪರಿಹಾರ ಮಾರ್ಗಗಳನ್ನು ಕಂಡುಹಿಡಿಯುವ ಸಾಧ್ಯತೆ ಇದೆ. ಕೆಲಸವನ್ನು ಮಂಡ್ಯ ಸಂಸದರು ಮಾತ್ರವಲ್ಲ. ಕರ್ನಾಟಕ ಹಾಗೂ ಕಾವೇರಿ ಕಣಿವೆಯ ಎಲ್ಲಾ ಜಿಲ್ಲೆಯ ಸಂಸದರು ಒಗ್ಗಟ್ಟಿನಿಂದ ಕೇಂದ್ರದ ಮೇಲೆ ಒತ್ತಡ ಹಾಕಿ ಕೆಲಸ ಮಾಡಬೇಕು. ಈ ಕೆಲಸವನ್ನು ಮಾಡಲು ಇದುವರೆಗೂ ಯಾರೂ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ.
ಮಂಡ್ಯ ಜಿಲ್ಲೆಗೆ ಸಂಬಂಧಿಸಿದಂತೆ ಸಾಕಷ್ಟು ರೇಲ್ವೆ ಯೋಜನೆಗಳಿವೆ. ಇವುಗಳ ಅನುಷ್ಠಾನಕ್ಕೆ ಆದ್ಯತೆ ನೀಡಿ. ಕೇಂದ್ರದ ಮೇಲೆ ಒತ್ತಡ ಹಾಕಿ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದರೆ ಎಂಪಿ ಕೆಲಸ ಸಾರ್ಥಕ. ಕೈಗಾರಿಕೆಯಿಂದ ಮಂಡ್ಯ ಜಿಲ್ಲೆ ಸಾಕಷ್ಟು ಹಿಂದೆ ಉಳಿದಿದೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಯಾವುದಾರರೂ ಕೈಗಾರಿಕೆಗಳನ್ನು ಮಂಡ್ಯಕ್ಕೆ ತರುವ ಪ್ರಯತ್ನ ಮಾಡಬೇಕು. ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಜಿಲ್ಲೆಯಲ್ಲಿ ಸಾಕಷ್ಟು ಅವಕಾಶಗಳಿವೆ. ಆ ಅವಕಾಶಗಳನ್ನು ಬಳಕೆ ಮಾಡಿಕೊಂಡು ಕೇಂದ್ರ ಸರ್ಕಾರದ ಅನುದಾನದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಮೂಲಕ ಸುಂದರ ಜಿಲ್ಲೆ ಎಂದು ಖ್ಯಾತಿಗೊಳಿಸಬಹುದು.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೇಂದ್ರೀಯ ವಿದ್ಯಾಲಯವನ್ನು ಆರಂಭಿಸಲಾಗಿದೆ. ಮಂಡ್ಯ ಜಿಲ್ಲೆಯ ವಿದ್ಯಾರ್ಥಿಗಳು ಮಾತ್ರ ಕೇಂದ್ರಿಯ ಶಿಕ್ಷಣ ಮತ್ತು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಈಬಗ್ಗೆ ಗಮನ ಹರಿಸುವ ಜವಾಬ್ದಾರಿ ಸಂಸದರ ಮೇಲಿದೆ.
ಇಂತಹ ಅನೇಕ ಯೋಜನೆಗಳನ್ನು ಕೇಂದ್ರದ ಮೂಲಕ ನೆರವು ಪಡೆದುಕೊಂಡು ಅನುಷ್ಠಾನಗೊಳಿಸಲು ಸಾಕಷ್ಟು ಅವಕಾಶಗಳಿವೆ. ಆದರೆ, ಈ ಹಿಂದೆ ಜಿಲ್ಲೆಯಲ್ಲಿ ಸಂಸದರಾಗಿದ್ದವರು. ತಮಗೆ ದೊರೆತ ಕೇಂದ್ರ ಸರ್ಕಾರದ ಸಂಸದರ ನಿಧಿ ಬಳಕೆ ಮಾಡಿರುವುದನ್ನು ಹೊರತು ಪಡಿಸಿ ಬೇರೆ ಯಾವುದೇ ಪ್ರಯತ್ನ ನಡೆಸಿಲ್ಲ ಎಂಬುದು ಎಲ್ಲರ ಕಣ್ಣಿಗೂ ಕಾಣುತ್ತದೆ. ಹೀಗಾಗಿಜನ ಆಯ್ಕೆ ಮಾಡುವ ಸಂಸದರು ಜಿಲ್ಲೆಗೆ ಮಾದರಿಯಾಗಿಬೇಕು. ಜಿಲ್ಲೆಯ ಅಭಿವೃದ್ಧಿಗೆ ಹೊಸ ಹೊಸ ಕನಸ್ಸುಗಳನ್ನು ಕಟ್ಟಿಕೊಂಡು ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಬಯಸುವುದು ತಪ್ಪೆ?
- ಕೆ.ಎನ್. ರವಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

