ಕೆಎಸ್ಆರ್ಟಿಸಿ ನಿವೃತ್ತ ನೌಕರರಿಗೆ ಉಚಿತ ಬಸ್ ಪಾಸ್ ಬಗ್ಗೆ ಪರಿಶೀಲನೆ
ಕ.ಪ್ರ.ವಾರ್ತೆ ಬೆಂಗಳೂರು ಆ. 13
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿವೃತ್ತ ನೌಕರರಿಗೆ ಉಚಿತ ಬಸ್ಪಾಸ್ ನೀಡಲು ಹಾಗೂ ವೈದ್ಯಕೀಯ ವೆಚ್ಚ ಭರಿಸುವ ಕುರಿತು ಪರಿಶೀಲಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ನಿವೃತ್ತ ನೌಕರರ ಶ್ರಮದಿಂದಲೇ ಸಾರಿಗೆ ಸಂಸ್ಥೆ ದೇಶದಲ್ಲಿ ಉತ್ತಮ ಹೆಸರುಗಳಿಸಿ ಲಾಭದಾಯಕವಾಗಿದೆ. ನಿವೃತ್ತರಿಗೆ ಹೆಚ್ಚಿನ ಸವಲತ್ತು ನೀಡುವ ಅಗತ್ಯವಿದೆ. ಲೋಕಸಭೆ ಉಪಚುನಾವಣೆಯ ನೀತಿಸಂಹಿತೆ ಕಾರಣದಿಂದ ಯೋಜನೆ ಘೋಷಿಸಲು ಸಾಧ್ಯವಿಲ್ಲ. ಬಳಿಕ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಅವರು ನಗರದಲ್ಲಿ ಮಂಗಳವಾರ ನಡೆದ ನಿವೃತ್ತ ನೌಕರರ ಸಮಾವೇಶದಲ್ಲಿ ಭರವಸೆ ನೀಡಿದರು.
ವಾಯವ್ಯ ರಸ್ತೆ ಸಾರಿಗೆ ನಿಗಮದ ನಿವೃತ್ತ ಸಿಬ್ಬಂದಿಗೆ ನೀಡಬೇಕಿರುವ 54 ಕೋಟಿ ಪಿಂಚಣಿಯನ್ನು ಕೂಡಲೇ ಬಿಡುಗಡೆ ಮಾಡಲಾಗುವುದು. ಮುಂದಿನ 6 ತಿಂಗಳಲ್ಲಿ ಈ ಹಣ ಬಿಡುಗಡೆ ಮಾಡುವುದಾಗಿ ವಿಧಾನಸಭೆಯಲ್ಲೂ ಭರವಸೆ ನೀಡಿದ್ದೆ. ಸರ್ಕಾರ ಈ ಮಾತಿಗೆ ಬದ್ಧವಾಗಿದೆ. ನಿವೃತ್ತರ ಸಾಲದಲ್ಲಿ ಸಂಸ್ಥೆ ಇರುವುದು ಒಳ್ಳೆಯ ಲಕ್ಷಣವಲ್ಲ ಎಂದು ಅವರು ತಿಳಿಸಿದರು.
ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ನಷ್ಟದಲ್ಲಿದೆ ಎಂಬ ವರದಿಗಳನ್ನು ಮಾಧ್ಯಮಗಳಲ್ಲಿ ಓದಿರುತ್ತೀರಿ. ಆದರೆ ನೈಜವಾಗಿ ಸಂಸ್ಥೆಗಳು ನಷ್ಟದಲ್ಲಿಲ್ಲ. ವಿದ್ಯಾರ್ಥಿ ಪಾಸ್, ಹಿರಿಯ ನಾಗರಿಕರು ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ರಿಯಾಯಿತಿಗಾಗಿ ಸುಮಾರು 400 ಕೋಟಿ ಹೊರೆ ಸರ್ಕಾರದ ಮೇಲೆ ಬೀಳುತ್ತದೆ. ಈ ಹಣ ಸರ್ಕಾರ ಭರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನಷ್ಟವಾದಂತೆ ಬಾಸವಾಗುತ್ತದೆ. ಸಂಸ್ಥೆಯ ಲಕ್ಷಾಂತರ ನೌಕರರ ಭವಿಷ್ಯದ ದೃಷ್ಟಿಯಿಂದ ಲಾಭದಲ್ಲಿರುವುದು ಅನಿವಾರ್ಯ ಎಂದು ಅವರು ಅಭಿಪ್ರಾಯಪಟ್ಟರು. ಕಳೆದ ಕೆಲ ವರ್ಷಗಳಲ್ಲಿ ಡೀಸೆಲ್ ಬೆಲೆ ಏರಿಕೆ ಹಾಗೂ ಬಿಡಿ ಭಾಗಗಳ ಖರೀದಿಯ ಕಾರಣದಿಂದ ಬಿಎಂಟಿಸಿ ಕೂಡ ಮೊದಲ ಬಾರಿಗೆ ನಷ್ಟದತ್ತ ಮುಖಮಾಡಿದೆ. ಆದರೆ ಸೆಪ್ಟೆಂಬರ್ ತಿಂಗಳೊಳಗೆ ಮತ್ತೆ ಲಾಭದತ್ತ ಹೆಜ್ಜೆ ಇಡಲಿದೆ ಎಂದು ರಾಮಲಿಂಗಾರೆಡ್ಡಿ ಅವರು ಅಭಿಪ್ರಾಯಪಟ್ಟರು.
ತಮಿಳುನಾಡಿನ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಬಸ್ಗಳಿಗೆ ಕೇವಲ ಡೀಸೆಲ್ ಹಾಕಿ ಓಡಿಸುವುದು ಮಾತ್ರ ಸಂಸ್ಥೆಯ ಕೆಲಸ. ನೌಕರರ ಸಂಬಳ ಹಾಗೂ ಮೂಲಸೌಕರ್ಯಗಳನ್ನು ಸರ್ಕಾರ ಒದಗಿಸುತ್ತದೆ. ಆದರೆ ರಾಜ್ಯದಲ್ಲಿ ಸಂಬಳ, ಸಾರಿಗೆ ಮೂಲಸೌಕರ್ಯಗಳನ್ನು ಸಂಸ್ಥೆಯೆ ಒದಗಿಸುವ ಅನಿವಾರ್ಯತೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರನ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಜೈಶಂಕರ ರೆಡ್ಡಿ ಹಾಗೂ ಕಾರ್ಪೊರೇಟರ್ ಉದಯಕುಮಾರ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

