ಉಪಚುನಾವಣೆ: ಸಕ್ಕರೆ 'ಕೈ'ಗೆ ಮುತ್ತಲಿರುವ ಕಲ್ಪನಾ, ಕೃಷ್ಣ?
ಮಂಡ್ಯ: ಮಂಡ್ಯ ರಾಜಕಾರಣದಲ್ಲಿ ಮತ್ತೆ ಧ್ರುವೀಕರಣ ಆರಂಭವಾಗಿದೆ. ಚುನಾವಣೆ ಬಂತು ಎಂದರೆ ಒಂದು ಪಕ್ಷದಲ್ಲಿ ನೊಂದ, ಅನ್ಯಾಯಕ್ಕೆ ಒಳಗಾದ ನಾಯಕರುಗಳು ಆ ಪಕ್ಷದಿಂದ, ಈ ಪಕ್ಷಕ್ಕೆ ಜಿಗಿಯುವುದು ಸಹಜ ಮತ್ತು ಅನಿವಾರ್ಯ. ಅದು ರಾಜಕೀಯ ಅಸ್ತಿತ್ವ ಹುಡುಕಿಕೊಳ್ಳುವ ಪರಂಪರೆಯೂ ಆಗಿದೆ.
ಈಗ ಅಂಥ ಸನ್ನಿವೇಶ ಜಿಲ್ಲೆಯಲ್ಲಿ ಎದುರಾಗಿದೆ. ಸಕ್ಕರೆ ಇರುವ ಕಡೆ ಇರುವೆ ಮುತ್ತಿಕೊಳ್ಳುವಂತೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ನ ಬಂಡಾಯ ನಾಯಕರಾಗಿದ್ದ ಮದ್ದೂರಿನ ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಹಾಗೂ ಮಾಜಿ ಸ್ಪೀಕರ್ ಕೃಷ್ಣ ಸೇರಿಕೊಳ್ಳಲು ವೇದಿಕೆ ಸಿದ್ದವಾಗಿದೆ.
ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಮಂತ್ರಿ ಅಂಬರೀಷ್ ತಮ್ಮ ನಿವಾಸಕ್ಕೆ ಆಗಮಿಸಲಿದ್ದಾರೆ. ಅಲ್ಲಿ ಮಾತುಕತೆ ಮುಗಿದ ನಂತರ ವಿದ್ಯುಕ್ತವಾಗಿ ತಾವು ಕಾಂಗ್ರೆಸ್ ಸೇರುವುದು ನಿಶ್ಚಿತ ಎಂದು ಸ್ವತಃ ಕಲ್ಪನಾ ಸಿದ್ದರಾಜು 'ಕನ್ನಡಪ್ರಭ'ಕ್ಕೆ ಹೇಳಿದರು.
ರಾಜಕೀಯದಲ್ಲಿ ಬದಲಾವಣೆ ಸಹಜ ನಿಯಮ. ರಾಜಕಾರಣದ ಭವಿಷ್ಯ ಹಾಗೂ ಅಸ್ತಿತ್ವವನ್ನು ಹುಡುಕಿಕೊಳ್ಳಬೇಕಾದರೆ ನಿಂತ ನೀರಾಗದೆ ಒಂದು ಕಡೆ ಅನ್ಯಾಯವಾದಾಗ ನ್ಯಾಯ ಹುಡುಕುವುದು ಅತ್ಯಗತ್ಯ ಎನ್ನುವ ಸಿದ್ಧಾಂತಕ್ಕೆ ಬದ್ಧರಾಗಿರುವ ಮಾಜಿ ಸ್ಪೀಕರ್ ಕೃಷ್ಣ ಹಾಗೂ ಕಲ್ಪನಾ ಅವರು ಸಿದ್ದರಾಮಯ್ಯನವರನ್ನು ನಂಬಿಕೊಂಡು ಈ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿ, ಬೆಂಬಲಿಸಲು ನಿರ್ಧರಿಸಿರುವುದು ಸತ್ಯ.
ಕೈ ಕೊಟ್ಟ ಜೆಡಿಎಸ್, 'ಕೈ' ಹಿಡಿದ ಕಲ್ಪನಾ: ಮದ್ದೂರಿನ ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಅವರನ್ನು ಪುನಹ ಜೆಡಿಎಸ್ಗೆ ಸೇರ್ಪಡೆ ಮಾಡಿಕೊಳ್ಳಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ಧರಿಸಿ, ಹರಸಾಹಸ ಮಾಡಿದರು. ಆದರೆ ಮದ್ದೂರಿನ ಶಾಸಕ ಡಿ.ಸಿ. ತಮ್ಮಣ್ಣ ಮಾತ್ರ ಕಲ್ಪನಾ ಸಿದ್ದರಾಜು ಜೆಡಿಎಸ್ ಒಳಗೆ ಸೇರಲು ಸೈದ್ಧಾಂತಿಕ, ನೈತಿಕವಾದ ಆಧಾರಗಳಿಲ್ಲ. ಪಕ್ಷಕ್ಕೆ ಸಾಕಷ್ಟು ವಿರೋಧವಾದ ಕೆಲಸಗಳನ್ನು ಮಾಡಿದ್ದಾರೆ ಹಾಗೂ ಕ್ಷೇತ್ರದಲ್ಲಿ ನಮ್ಮ ಅಸ್ತಿತ್ವವನ್ನು ಹೇಗೆ ನೆಲೆಕಾಣಿಸಿಕೊಳ್ಳುವುದು ಎಂಬ ಪ್ರಶ್ನೆಯನ್ನು ತಮ್ಮಣ್ಣ ಕುಮಾರಸ್ವಾಮಿ ಅವರ ಮುಂದಿಟ್ಟಿದ್ದಾರೆ.
ಕಲ್ಪನಾ ಅವರನ್ನು ಜೆಡಿಎಸ್ಗೆ ಸೇರಿಸಿಕೊಳ್ಳುವುದು ಎಷ್ಟು ಸರಿ ಎಂದು ತಮ್ಮಣ್ಣ ಪಟ್ಟು ಹಿಡಿದುಕೊಂಡಿದ್ದರಿಂದ ಕುಮಾರಸ್ವಾಮಿ ಪಟ್ಟು ಸಡಿಸಲಿ, ಕೊನೆಗೆ ನೀವು (ಕಲ್ಪನಾ) ಈ ಚುನಾವಣೆಯಲ್ಲಿ ಜೆಡಿಎಸ್ ಅನ್ನು ಬೆಂಬಲಿಸಿ, ಪುಟ್ಟರಾಜು ಗೆಲುವಿಗೆ ನೆರವು ನೀಡಿ ಮುಂದೆ ನೋಡೋಣ ಎಂದು ಹೇಳಿ ಜಾರಿಕೊಂಡರು ಎನ್ನಲಾಗಿದೆ.
ಅರ್ಧ ಗೋಡೆ ಮೇಲಿನ ದೀಪ ಇಟ್ಟಂತಹ ಕುಮಾರಸ್ವಾಮಿ ಮಾತುಗಳನ್ನು ಕೇಳಿದ ಕಲ್ಪನಾ, ಮಂಡ್ಯದಲ್ಲಿ ಎಸ್.ಡಿ. ಜಯರಾಂ ಪತ್ನಿ ಪ್ರಭಾವತಿ ಅವರನ್ನು ಮೂಲೆ ಗುಂಪು ಮಾಡಿದ ರೀತಿಯಲ್ಲಿ ನನ್ನನ್ನು, ನನ್ನ ಬೆಂಬಲಿಗರನ್ನು ಮೂಲೆ ಗುಂಪು ಮಾಡಿದರೆ ಮುಂದಿನ ಗತಿ ಏನು ಎಂದು ಪ್ರಶ್ನೆ ಮಾಡಿದರಲ್ಲದೇ ಭವಿಷ್ಯ ರೂಪಿಸಿಕೊಳ್ಳಲು ಅನಿವಾರ್ಯವಾಗಿ ಕಾಂಗ್ರೆಸ್ ಅನ್ನು ಏಕೆ ಬೆಂಬಲಿಸಬಾರದು ಎಂಬ ನಿರ್ಧಾರಕ್ಕೆ ಕಲ್ಪನಾ ಬಂದಿದ್ದಾರೆಂದು ಗೊತ್ತಾಗಿದೆ.
ಕೃಷ್ಣ ಸಂಧಾನ ಫಲ: ಮಾಜಿ ಸ್ಪೀಕರ್, ಕೆ.ಆರ್.ಪೇಟೆಯ ಕೃಷ್ಣ ಅವರಿಗೆ ಬೇರೆ ದಾರಿಯೇ ಇರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಳೇ ಸ್ನೇಹಿತರು. ಎಲ್ಲದಕ್ಕಿಂತಲೂ ಹೆಚ್ಚಾಗಿ ಕೃಷ್ಣ ಈಗ ದೇವೇಗೌಡರ ವೈರಿ. ಆ ಕಾರಣಕ್ಕಾಗಿ ಸಿದ್ದರಾಮಯ್ಯ ಸಂಧಾನ ಮಾಡಿ ಕೃಷ್ಣ ಅವರನ್ನು ಕಾಂಗ್ರೆಸ್ಗೆ ಕರೆ ತರುವ ಪ್ರಯತ್ನದಲ್ಲಿ ಸಫಲರಾದರು.
ಆದರೆ, ಕ್ಷೇತ್ರದಲ್ಲಿ ಕೃಷ್ಣ ಅವರನ್ನು ಕಾಂಗ್ರೆಸ್ ಸೇರ್ಪಡೆಗೆ ಮಾಡಿಕೊಳ್ಳುತ್ತಿರುವ ಬಗ್ಗೆ ಹೇಳಿಕೊಳ್ಳುವಂತಹ ಒಲವು ಇಲ್ಲ. ಅನಿವಾರ್ಯವಾಗಿ ಸಿದ್ದರಾಮಯ್ಯ ಅವರ ಬಲವಂತಕ್ಕೆ ಕೃಷ್ಣ ಕಾಂಗ್ರೆಸ್ ಸೇರುವ ನಿರ್ಧಾರವನ್ನು ಅಲ್ಲಿನ ಕಾಂಗ್ರೆಸ್ ನಾಯಕರು ಮಾಘಸ್ನಾನ ಮಾದರಿಯಲ್ಲಿ ಒಪ್ಪಿಕೊಳ್ಳಬೇಕಾಗಿದೆ. ಆದರೆ ಕೃಷ್ಣ ಅವರಿಗೆ ರಾಜಕಾರಣ, ಅಧಿಕಾರದ ಆಸೆ ಇನ್ನೂ ಹೆಚ್ಚಾಗಿದೆ ಎನ್ನುವುದನ್ನು ಕಾಂಗ್ರೆಸ್ ಸೇರುವ ಮೂಲಕ ಎತ್ತಿ ತೋರಿಸುತ್ತಿದ್ದಾರೆಂದು ಜೆಡಿಎಸ್ ನಾಯಕರೊಬ್ಬರು ಪ್ರತಿಕ್ರಿಯೆ ನೀಡಿದರು.
ಒಟ್ಟಾರೆ ಮಂಡ್ಯದಲ್ಲಿನ ಇಬ್ಬರು ರಾಜಕೀಯ ನಾಯಕರನ್ನು ಕಾಂಗ್ರೆಸ್ ಸೆಳೆದುಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸರಿಯಾದ ಸಮಯಕ್ಕೆ ಬೀಸಿದ ಗಾಳ ವರ್ಕ್ ಔಟ್ ಆಗುತ್ತದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ನಲ್ಲಿ ಈ ಇಬ್ಬರು ನಾಯಕರ ಭವಿಷ್ಯ ಹೇಗೆ ಇರುತ್ತದೆ ಎನ್ನುವುದನ್ನು ಈಗಲೇ ಏಕೆ ಲೆಕ್ಕಾಚಾರ ಹಾಕಬೇಕು. ಈ ನಾಯಕರ ಭವಿಷ್ಯವನ್ನು ಕಾಲವೇ ಎಲ್ಲವನ್ನೂ ನಿರ್ಧರಿಸುತ್ತದೆ.
-ಕೆ.ಎನ್. ರವಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

