ಬೆಂ.ಗ್ರಾ ಲೋಕಸಭಾ ಕ್ಷೇತ್ರ ಹಿಂದಿನ ಚುನಾವಣೆ: ಕೈಗೆ 3ನೇ ಸ್ಥಾನ
ಕ.ಪ್ರ.ವಾರ್ತೆ ರಾಮನಗರ ಆ. 13
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 3ನೇ ಸ್ಥಾನಕ್ಕೆ ದೂಡಲ್ಪಟ್ಟಿತ್ತು. ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜೆಡಿಎಸ್ ಪಕ್ಷಕ್ಕಿಂತ 24,283 ಅಧಿಕ ಮತಗಳನ್ನು ಪಡೆದುಕೊಂಡಿದೆ.
ಒಟ್ಟಾರೆ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 5,00,947 ಮತಗಳನ್ನು ಪಡೆದಿದ್ದರೆ, ಜೆಡಿಎಸ್ 4,76,664 ಮತಗಳನ್ನು ಗಳಿಸಿದೆ. ಬಿಜೆಪಿ ಮತಗಳಿಕೆಯು 2,59,958 ಆಗಿದೆ. ಕ್ಷೇತ್ರದ ಫಲಿತಾಂಶ ನಿರ್ಧಾರ ತನ್ನಿಂದಲೇ ಎನ್ನುತ್ತಾ ಇನ್ನೂ ನಿಲವು ಪ್ರಕಟಿಸದ ಸಮಾಜವಾದಿ ಪಕ್ಷ ಚನ್ನಪಟ್ಟಣ ಒಂದರಲ್ಲೇ 80,099 ಮತಗಳನ್ನು ಬಾಚಿಕೊಂಡಿದೆ.
ಕ್ಷೇತ್ರವಾರು ಮತ ವಿವರ: ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ 1,02,207, ಜೆಡಿಎಸ್ 72,045 ಮತ್ತು ಕಾಂಗ್ರೆಸ್ 63,849 ಮತಗಳನ್ನು ಪಡೆದಿತ್ತು. ರಾಜರಾಜೇಶ್ವರಿಯಲ್ಲಿ ಕಾಂಗ್ರೆಸ್ 71,064, ಜೆಡಿಎಸ್ 52,251, ಬಿಜೆಪಿ 50,726, ಆನೇಕಲಲ್ಕ್ಷೇತ್ರದಲ್ಲಿ ಕಾಂಗ್ರೆಸ್ 1,05,464, ಬಿಜೆಪಿ 65,282 ಮತ್ತು ಜೆಡಿಎಸ್ 7,307 ಮತಗಳನ್ನು ಗಳಿಸಿತ್ತು.
ಕುಣಿಗಲ್ ಕ್ಷೇತ್ರದಲ್ಲಿ ಜೆಡಿಎಸ್ 44,575, ಬಿಜೆಪಿ 34,943, ಕಾಂಗ್ರೆಸ್ 33,918, ರಾಮನಗರದಲ್ಲಿ ಜೆಡಿಎಸ್ 83,447, ಕಾಂಗ್ರೆಸ್ 58,049, ಬಿಜೆಪಿ 1,776, ಮಾಗಡಿಯಲ್ಲಿ ಜೆಡಿಎಸ್ 74,821, ಕಾಂಗ್ರೆಸ್ 60,462, ಬಿಜೆಪಿ 1,604, ಚನ್ನಪಟ್ಟಣದಲ್ಲಿ ಎಸ್ಪಿ 80,099, ಜೆಡಿಎಸ್ 73,635, ಕಾಂಗ್ರೆಸ್ 8,134, ಬಿಜೆಪಿ 1,609, ಕನಕಪುರದಲ್ಲಿ ಕಾಂಗ್ರೆಸ್ 1,00,007, ಜೆಡಿಎಸ್ 68,583 ಮತ್ತು ಬಿಜೆಪಿ 1807 ಮತ ಪಡೆದಿತ್ತು.
ಕಾಂಗ್ರೆಸ್ ಪಕ್ಷದ ಪಾಲಿಗೆ ದಯನೀಯ ಫಲಿತಾಂಶ ಚನ್ನಪಟ್ಟಣದ್ದಾಗಿದೆ. ಅಲ್ಲಿ ಪಕ್ಷದ ಅಭ್ಯರ್ಥಿಗೆ ದಕ್ಕಿದ್ದು 8,134 ಮತಗಳಷ್ಟೇ. ಅದೇ ರೀತಿ ಜೆಡಿಎಸ್ ಆನೇಕಲ್ ಕ್ಷೇತ್ರದಲ್ಲಿ 7,307 ಮತಗಳಷ್ಟೇ ಬಂದಿವೆ. ಬಿಜೆಪಿಯು ರಾಮನಗರ ಜಿಲ್ಲೆಯ ಎಲ್ಲ 4 ವಿಧಾನಸಭಾ ಕ್ಷೇತ್ರಗಳಲ್ಲಿ ಹೀನಾಯವಾಗಿದ್ದು, ಇಲ್ಲೆಲ್ಲೂ 2 ಸಾವಿರದ ಗಡಿಯನ್ನೇ ದಾಟಿಲ್ಲ.
ಹೊರಗುಳಿದವರೇ ನಿರ್ಣಾಯಕ: ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ 3 ಕಡೆ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರಿದ್ದಾರೆ. ಒಂದು ಕಡೆ ಬಿಜೆಪಿ, ಮತ್ತೊಂದು ಕಡೆ ಸಮಾಜವಾದಿ ಪಕ್ಷ ಗೆಲುವು ಸಾಧಿಸಿದೆ. ಮೇಲ್ನೋಟಕ್ಕೆ ಇಲ್ಲಿ ಸಮಬಲದ ಸೆಣೆಸಾಟವಿದೆ. ಚುನಾವಣಾ ರಣಾಂಗಣದಿಂದ ಹೊರಗುಳಿದಿರುವ ಪಕ್ಷಗಳು, ಪಕ್ಷಾಂತರಿಗಳ ಮೇಲಾಟವಷ್ಟೇ ಫಲಿತಾಂಶ ನಿರ್ಣಯಿಸಬಲ್ಲದು.
2009ರ ಚುನಾವಣೆಯಲ್ಲಿ ಜೆಡಿಎಸ್ಶಾಸಕರು ಇದ್ದಿದ್ದೇ ಇಬ್ಬರು. ಇಷ್ಟಾಗಿಯೂ ಕುಮಾರಸ್ವಾಮಿ ಬಹು ದೊಡ್ಡ ಅಂತರದ ಗೆಲವು ದಾಖಲಿಸಿದರು. ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ, ಬಿಜೆಪಿಯಿಂದ ಸೆಣೆಸಿದ್ದ ಸಿ.ಪಿ.ಯೋಗೇಶ್ವರ್ ಆ ಪಕ್ಷದ ಮೂವರು ಶಾಸಕರಿರು ಕ್ಷೇತ್ರಗಳಲ್ಲಿ ಲೀಡ್ ತೆಗೆದುಕೊಂಡಿದ್ದರು. ತನ್ನದೇ ತವರು ನೆಲದಲ್ಲಿ ಹಿನ್ನೆಡೆ ಕಂಡರು. ಕಾಂಗ್ರೆಸ್ ಶಾಸಕರಿದ್ದ ಎರಡು ಕಡೆಯೂ ಜೆಡಿಎಸ್ ಮುನ್ನಡೆ ಪಡೆದಿತ್ತು.
ಹಿಂದಿನ ಫಲಿತಾಂಶ ಚಿತ್ರಣ: ಕಳೆದ ಲೋಕಸಭೆ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ 4,93,177 ಮತಗಳನ್ನು ಪಡೆದು, ಬಿಜೆಪಿಯ ಸಿ.ಪಿ.ಯೋಗೇಶ್ವರ್ ವಿರುದ್ಧ 1,30,275 ಮತಗಳ ಅಂತರದಿಂದ ಗೆಲವು ಸಾಧಿಸಿದ್ದರು. ಯೋಗೇಶ್ವರ್ 3,62,939 ಮತಗಳನ್ನು ಪಡೆದರೆ, ಆಗ ಪುನರಾಯ್ಕೆ ಬಯಸಿದ್ದ ತೇಜಸ್ವಿನಿಗೌಡ 1,92,809 ಮತಗಳೊಂದಿಗೆ ಮೂರನೇ ಸ್ಥಾನಕ್ಕೆ ದೂಡಲ್ಪಟ್ಟಿದ್ದರು.
ಕುಣಿಗಲ್, ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರದಲ್ಲಿ ಜೆಡಿಎಸ್ ಮುನ್ನಡೆ ಸಾಧಿಸಿದ್ದರೆ, ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ ಮತ್ತು ಆನೇಕಲ್ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಪಡೆದಿತ್ತು. ಕಾಂಗ್ರೆಸ್ ಅಭ್ಯರ್ಥಿಯು ತನ್ನದೇ ಪಕ್ಷದ ಶಾಸಕರಿರುವ ಕ್ಷೇತ್ರಗಳೂ ಸಹಿತ ಒಂದೆಡೆಯೂ ಮುನ್ನಡೆ ಪಡೆಯಲಾಗಿರಲಿಲ್ಲ.
ಚುನಾವಣೆಯಲ್ಲಿ ಹಿಂದಿನ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾದ ನಿದರ್ಶನಗಳೇ ಹೆಚ್ಚು. ಕಳೆದ ಎರಡೂವರೆ ದಶಕದಿಂದ ಕ್ಷೇತ್ರದಲ್ಲಿ ತ್ರಿಕೋನ ಸೆಣೆಸಾಟ ನಡೆದುಕೊಂಡು ಬಂದಿತ್ತು. ಪ್ರಬಲ ಸ್ಪರ್ಧೆ ಒಡ್ಡಿಕೊಂಡೇ ಬಂದಿದ್ದ ಬಿಜೆಪಿ ಈ ಬಾರಿ ಕಣದಲ್ಲಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿಯ ಕದನ ತೀವ್ರ ಕುತೂಹಲ ಕೆರಳಿಸಿದೆ.
ಮತ್ತೀಕೆರೆ ಜಯರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

