ಪ್ರಧಾನ ಸುದ್ದಿ

ಕಾರ್ಗಿಲ್‌ನಲ್ಲಿ ಮತ್ತೆ ಕಾಲ್ಕೆರೆದ ಪಾಕ್

ಕಾರ್ಗಿಲ್‌ನಲ್ಲಿ ಮತ್ತೆ ಕಾಲ್ಕೆರೆದ ಪಾಕ್
Published On :

ಜಮ್ಮು: ಕಾರ್ಗಿಲ್ ಕಣಿವೆಯಲ್ಲಿ 14 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಮತ್ತೆ ಗುಂಡಿನ ಮೊರೆತ ಕೇಳಿದೆ. ಕಾರ್ಗಿಲ್ ಯುದ್ಧದಲ್ಲಿನ ಹೀನಾಯ ಸೋಲಿನ ಬಳಿಕ ತೆಪ್ಪಗಿದ್ದ ಪಾಕಿಸ್ತಾನ ಸೇನೆ ಕಾರ್ಗಿಲ್‌ನಲ್ಲಿ ಕದನ ವಿರಾಮ ಉಲ್ಲಂಘಿಸಿದೆ.

ಪಾಕ್ ಪಡೆಗಳು ಕಾರ್ಗಿಲ್‌ನ ದ್ರಾಸ್ ಮತ್ತು ಕಾಸ್ಕರ್ ಪ್ರದೇಶದಲ್ಲಿ ಭಾರತೀಯ ಸೇನಾ ಶಿಬಿರಗಳನ್ನು ಗುರಿಯಾಗಿಟ್ಟುಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸಿವೆ. ಪಾಕ್‌ನ ಈ ದುಸ್ಸಾಹಸಕ್ಕೆ ಭಾರತೀಯ ಯೋಧರು ತಕ್ಕ ಉತ್ತರ ನೀಡಿದ್ದಾರೆ.
ಇದಕ್ಕೂ ಮೊದಲು ಸ್ವಾತಂತ್ರ್ಯ ದಿನವಾದ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗ್ಗೆ 2 ಗಂಟೆವರೆಗೂ ಜಮ್ಮು ಮತ್ತು ಕಾಶ್ಮೀರ ವಲಯದಲ್ಲಿ ಪಾಕ್ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಈ ವೇಳೆ ಮೂವರು ಭಾರತೀಯ ಯೋಧರು ಗಾಯಗೊಂಡಿದ್ದಾರೆ. ಈ ಮೂಲಕ ಕಳೆದೆರಡು ವಾರಗಳಿಂದ ಪಾಕ್ ಪಡೆಗಳು 18 ಬಾರಿ ಕದನ ವಿರಾಮ ಉಲ್ಲಂಘಿಸಿದಂತಾಗಿದೆ.

28 ಉಗ್ರರ ಹತ್ಯೆ
ಕಣಿವೆನಾಡಿನಲ್ಲಿ ರಕ್ತದೋಕುಳಿ ಹರಿಸುವ ಪಾಕ್‌ಕುತಂತ್ರವನ್ನು ಭಾರತ ಮತ್ತೊಮ್ಮೆ ಬಯಲು ಮಾಡಿದೆ. ಕಳೆದೆರಡು ತಿಂಗಳಲ್ಲಿ ಗಡಿ ನಿಯಂತ್ರಣ ರೇಖೆ ಹಾಗೂ ಕಾಶ್ಮೀರ ಕಣಿವೆಯಲ್ಲಿ 28 ಉಗ್ರರನ್ನು ಭಾರತೀಯ ಯೋಧರು ಹೊಡೆದುರುಳಿಸಿದ್ದಾರೆ. ಈ ವೇಳೆ ಉಗ್ರರಿಂದ ಅಪಾರ ಪ್ರಮಾಣದಲ್ಲಿ ಆಧುನಿಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಲೆ. ಜ. ಗುರುಮಿತ್ ಸಿಂಗ್ ಮಾಹಿತಿ ನೀಡಿದ್ದಾರೆ.  ಗಡಿನಿಯಂತ್ರಣ ರೇಖೆ ಹಾಗೂ ಕಾಶ್ಮೀರ ಕಣಿವೆಯಲ್ಲಿ ಜು. 24ರಿಂದ ಅನೇಕ ಯಶಸ್ವಿ ಕಾರ್ಯಾಚರಣೆ ನಡೆಸಲಾಗಿದೆ. ಒಟ್ಟು 28 ಉಗ್ರರಲ್ಲಿ 18 ಮಂದಿಯನ್ನು ಗಡಿನಿಯಂತ್ರಣ  ರೇಖೆಯಲ್ಲಿ ಹಾಗೂ 10 ಮಂದಿಯನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಹತ್ಯೆ ಮಾಡಲಾಗಿದೆ ಎಂದಿದ್ದಾರೆ. ಇವರಲ್ಲಿ 8 ಮಂದಿ ಉಗ್ರರು ಗುಂಡು ತಗುಲಿ ಹಿಂತಿರುಗಿದರೂ ನಂತರ ಕೆಲವೇ ಕ್ಷಣದಲ್ಲಿ ಮೃತಪಟ್ಟಿದ್ದಾರೆ.


ಪಾಕ್ ಶಸ್ತಾಸ್ತ್ರ
ಮೃತ ಉಗ್ರರಿಂದ 12ಕ್ಕೂ ಹೆಚ್ಚು ಎ.ಕೆ.- 47, ಗ್ರೆನೇಡ್‌ಗಳು, ಪಿಸ್ತೂಲ್ ಸೇರಿ ಅನೇಕ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಹುತೇಕ ಆಯುಧಗಳಲ್ಲಿ ಪಾಕಿಸ್ತಾನ ಸೇನೆಯ ಮುದ್ರೆಯಿದೆ. ಇದು ಉಗ್ರರಿಗೆ ಪಾಕ್ ಸೇನೆಯ ಬೆಂಬಲ ಇರುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.


ಕಟ್ಟರ್ ಉಗ್ರರ ನೇಮಕ

ಕಳೆದೆರಡು ದಶಕದಿಂದ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆ ಚಟುವಟಿಕೆಗಳಿಗೆ ಭಾರಿ ಹಿನ್ನಡೆಯಾಗಿದೆ. ಈ ಹಿನ್ನೆಲೆಯಲ್ಲಿ ಪಾಕ್ ಮೂಲದ ಸಂಘಟನೆಗಳು ಈಗ ಕಟ್ಟರ್ ಉಗ್ರರನ್ನೂ ಕಣಿವೆಗೆ ತಳ್ಳುವ ಪ್ರಯತ್ನ ನಡೆಸುತ್ತಿದೆ ಎನ್ನುವುದು ಸೈನಿಕ ಕಾರ್ಯಾಚರಣೆಯಿಂದ ಬಯಲಾಗಿದೆ. ಇತ್ತೀಚೆಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೃತಪಟ್ಟ ಸಯ್ಯದ್ ಕಾಸಿಮ್ ಶಾ ಎಂಬಾತನಿಂದ ವಶಪಡಿಸಿಕೊಂಡ ಗುರುತಿನ ಚೀಟಿ ಈ ವಿಚಾರ ಬಹಿರಂಗಪಡಿಸಿದೆ. ಆತನ ವಯಸ್ಸು 55 ದಾಟಿರುವುದು ಗುರುತುಪತ್ರದಿಂದ ಬಯಲಾಗಿದೆ.



ಮಾತುಕತೆಯತ್ತ ನೋಟ
ವಿಶ್ವಸಂಸ್ಥೆಯ ಸಾಮಾನ್ಯ ಸಭೆ ವೇಳೆ ನಡೆಸಲುದ್ದೇಶಿಸಿರುವ ಪಾಕ್ ಪ್ರಧಾನಿ ನವಾಜ್ ಷರೀಫ್ ಹಾಗೂ ಭಾರತದ ಪ್ರಧಾನಿ ಮನಮೋಹನ ಸಿಂಗ್ ಭೇಟಿ ಎರಡೂ ದೇಶಗಳ ನಡುವಿನ ಸಂಬಂಧ ಸುಧಾರಣೆಗೆ ಅವಕಾಶ ಮಾಡಿಕೊಡಲಿದೆ. ಈ ಭೇಟಿ ಎರಡೂ ದೇಶಗಳಿಗೆ ಉನ್ನತಮಟ್ಟದಲ್ಲಿ ಮಾತುಕತೆಗೆ ಉತ್ತಮ ಅವಕಾಶವಾಗಿದೆ ಎಂದು ಪಾಕ್ ವಿದೇಶಾಂಗ ಸಚಿವಾಲಯದ ವಕ್ತಾರ ಅಜೀಜ್ ಚೌಧರಿ ತಿಳಿಸಿದ್ದಾರೆ. ಐವರು ಯೋಧರ ಹತ್ಯೆ, ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿಯಿಂದಾಗಿ ಸಿಂಗ್ ಹಾಗೂ ಷರೀಫ್ ಭೇಟಿಗೆ ಅನಿಶ್ಚಿತತೆಯ ಆತಂಕ ಶುರುವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.