ಅನಾಥೆಗೆ ಕೂಡಿ ಬಂತು ಕಂಕಣ ಭಾಗ್ಯ
ಕ.ಪ್ರ.ವಾರ್ತೆ ಬೆಂಗಳೂರು ಆ.17
ಚಿಕ್ಕ ವಯಸ್ಸಿನಿಂದ ಅನಾಥ ಬಾಲಕಿಯನ್ನು ಪೋಷಿಸಿ, ಶಿಕ್ಷಣ ನೀಡಿ ಬೆಳೆಸಿದ ಸರ್ಕಾರ ಈಗ ಆಕೆಗೆ ಮದುವೆ ಮಾಡಲು ಮುಂದಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ ಬೆಳೆದ ಕಾಳಮ್ಮ ಎಂಬುವವರಿಗೆ ಕಂಕಣಭಾಗ್ಯ ಕೂಡಿ ಬಂದಿದೆ. ಆ.19 ರಂದು ಕಾಳಮ್ಮ ಅವರ ವಿವಾಹ ಮಡಿವಾಳದ ಇಲಾಖೆಯ ಸುಧಾರಣಾ ಕೇಂದ್ರದಲ್ಲಿರುವ ಗಣಪತಿ ದೇವಾಲಯದಲ್ಲಿ ನೇರವೇರಲಿದೆ. ಮದುವೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾಕ್ಷಿಯಾಗಲಿದ್ದಾರೆ.
10ನೇ ತರಗತಿವರೆಗೂ ಶಿಕ್ಷಣ ಪಡೆದಿರುವ ಕಾಳಮ್ಮ ಪ್ರಸಾದನ, ಹೊಲಿಗೆ ಮತ್ತು ಕಂಪ್ಯೂಟರ್ ತರಬೇತಿ ಪಡೆದಿದ್ದಾಳೆ. ಕಾಳಮ್ಮ ಅವರ ಕೈ ಹಿಡಿಯುತ್ತಿರುವ ಯುವಕ ಚಿಕ್ಕಮಗಳೂರು ಜಿಲ್ಲೆ ಸಂಗಮೇಶ್ವರ ಪೇಟೆ ಪೂರ್ಣಪ್ರಜ್ಞ ವಸತಿ ಶಾಲೆ ಉದ್ಯೋಗಿ ಸತೀಶ. ಇವರ ವಿವಾಹ ಯಶಸ್ವಿಯಾಗಿ ನೇರವೇರಿಸಲು ಸರ್ಕಾರಕ್ಕೆ ಹಲವು ದಾನಿಗಳು ಮುಂದಾಗಿದ್ದಾರೆ. ಊಟ, ಮದುವೆ ಹಾರ, ಧ್ವನಿವರ್ಧಕ, ಆಹ್ವಾನ ಪತ್ರಿಕೆ, ವಧು-ವರರ ವಸ್ತ್ರಗಳು, ಅಲಂಕಾರ ಸೇರಿದಂತೆ ಅಗತ್ಯ ಖರ್ಚುಗಳನ್ನು ಪ್ರತ್ಯೇಕವಾಗಿ ಭರಿಸಲು ದಾನಿಗಳು ಒಪ್ಪಿಕೊಂಡಿದ್ದಾರೆ.
ಆಸರೆ: ಹದಿನೆಂಟು ವರ್ಷ ಮೇಲ್ಪಟ್ಟು ನಿರಾಶ್ರಿತ ಯುವತಿಯರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ವೀಕಾರ ಕೇಂದ್ರ ತಾತ್ಕಾಲಿಕ ಆಸರೆ ನೀಡುತ್ತಿದೆ. ಬದುಕಿನಲ್ಲಿ ನೊಂದು ಆಸರೆ ಕಳೆದುಕೊಂಡಿರುವ ಯುವತಿಯರಿಗೆ ಸೂಕ್ತ ತರಬೇತಿ ನೀಡಿ ಬದುಕಿಗೆ ನೆಲೆ ಕಲ್ಪಿಸುವ ಪ್ರಯತ್ನ ಮಾಡುತ್ತಿದೆ. ಯೋಗ್ಯ ವರರು ಮುಂದೆ ಬಂದರೆ ಇಲ್ಲಿರುವ ಇತರ ಯುವತಿಯರ ವಿವಾಹ ನೆರವೇರಿಸಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.
ಇಲ್ಲಿ ಆಸರೆ ಪಡೆದ 10 ಯುವತಿಯರು ಕೌಟುಂಬಿಕ ಜೀವನಕ್ಕೆ ಕಾಲಿಟ್ಟಿದ್ದು, ಕಾಳಮ್ಮಳದ್ದು 11ನೇ ವಿವಾಹ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸರ್ಕಾರದ ಕಾರ್ಯದರ್ಶಿ ರಮೇಶ ಝಳಕಿ, ನಿರ್ದೇಶಕ ಗುರ್ನಿತ್ ತೇಜ್, ಉಪ ನಿರ್ದೇಶಕ ರಮೇಶ ಹಾಲಭಾವಿ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಡಾ.ಜಿ.ಸಿ.ಪ್ರಕಾಶ ಅವರ ಉಪಸ್ಥಿತಿಯಲ್ಲಿ ಈ ವಿವಾಹ ನೆರವೇರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

