ಮಳೆ ಅನಾಹುತ: ಗ್ರಾಮೀಣ ಪ್ರದೇಗಳಿಗೆ ಕರೆಂಟ್ 'ಶಾಕ್'
ಕ.ಪ್ರ.ವಾರ್ತೆ, ಮಡಿಕೇರಿ , ಆ. 18-
ಕೊಡಗು ಜಿಲ್ಲೆಯಲ್ಲಿ ಮಳೆ ಇಳಿಮುಖವಾಗಿದೆ. ಆದರೆ, ಕಳೆದ ಎರಡು ತಿಂಗಳಲ್ಲಿ ಅತಿವೃಷ್ಟಿ ತಂದಿರುವ ಸಮಸ್ಯೆಗಳು ಮಾತ್ರ ಮುಗಿದಂತಿಲ್ಲ. ಕೊಡಗಿನ ಹಲವು ಗ್ರಾಮೀಣ ಪ್ರದೇಶಗಳು ಇನ್ನೂ ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲಲ್ಲೇ ಮುಳುಗಿವೆ. ಚೆಸ್ಕಾಂ ಸಿಬ್ಬಂದಿ ಜಿಲ್ಲೆಯಲ್ಲಿ ಮಹಾ ಮಳೆಯಿಂದಾಗಿ ಉಂಟಾಗಿರುವ ತೊಂದರೆಗಳನ್ನು ನಿವಾರಿಸಲು ನಿರಂತರ ಶ್ರಮಿಸುತ್ತಲೇ ಇದೆ.
ಈ ಬಾರಿಯ ಮಳೆಗಾಲ ಚೆಸ್ಕಾಂಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು, ಮಾತ್ರವಲ್ಲ ಸಾಕಷ್ಟು ಹಾನಿಯೂ ಉಂಟು ಮಾಡಿತ್ತು. ಚೆಸ್ಕಾಂಗೆ ಮಳೆಯಿಂದಾಗಿ ಆಗಿರುವ ನಷ್ಟ 1.50 ಕೋಟಿಗೂ ಹೆಚ್ಚು. ಕೊಡಗಿನ ವಿವಿಧ ಭಾಗಗಳಲ್ಲಿ ಚೆಸ್ಕಾಂಗೆ ಸೇರಿದ 1200 ವಿದ್ಯುತ್ ಕಂಬಗಳು ಹಾಗೂ 93 ಟ್ರಾನ್ಸ್ಫಾರ್ಮರ್ಗಳು ಹಾನಿಗೀಡಾಗಿವೆ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ವಾರ, ತಿಂಗಳುಗಟ್ಟಲೇ ವ್ಯತ್ಯಯವಾಗಿದೆ.
ಈ ಬಾರಿಯೇ ಅತಿ ಹೆಚ್ಚು ನಷ್ಟ: ಜಿಲ್ಲೆಯಲ್ಲಿ ಅನೇಕ ವರ್ಷಗಳ ಬಳಿಕ ಚೆಸ್ಕಾಂ ಇಷ್ಟೊಂದು ಭಾರಿ ಮೊತ್ತದ ನಷ್ಟ ಅನುಭವಿಸಿದೆ. ವಾರಗಳು ಕಳೆದರೂ ಸಮಸ್ಯೆ ಸುಧಾರಿಸಲು ಸಾಧ್ಯವಾಗದ ಸ್ಥಿತಿ ಎದುರಾಗಿದೆ. ಈ ಬಾರಿ ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ, ಮಡಿಕೇರಿಯಂಥ ನಗರ ಪ್ರದೇಶಗಳಲ್ಲಿಯೇ ಮಳೆಯಿಂದಾಗಿ ಭಾರಿ ಪ್ರಮಾಣದ ಹಾನಿ ಸಂಭವಿಸಿದ ಹಿನ್ನೆಲೆಯಲ್ಲಿ ಇವುಗಳನ್ನು ನಿವಾರಿಸಲು ಸಮರೋಪಾದಿಯಲ್ಲಿ ಚೆಸ್ಕಾಂ ಕಾರ್ಯಪ್ರವೃತ್ತವಾಗಬೇಕಾದ ಅನಿವಾರ್ಯತೆ ಎದುರಾಗಿತ್ತು.
ಸಿಬ್ಬಂದಿ ಕೊರತೆ: ಚೆಸ್ಕಾಂಗೆ ಮಳೆಗಾಲದಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಹೊರ ಊರುಗಳಿಂದ ತಾತ್ಕಾಲಿಕವಾಗಿ ಸಿಬ್ಬಂದಿ ನಿಯೋಜಿಸಲಾಗಿತ್ತು. ಆದರೆ ಕೊಡಗಿನ ಮಳೆ ಅಬ್ಬರ ನೋಡಿದ ಈ ಸಿಬ್ಬಂದಿ ಒಂದೇ ದಿನದಲ್ಲಿ ಇಲ್ಲಿ ಕಾರ್ಯ ನಿರ್ವಹಿಸುವುದು ಕಷ್ಟಸಾಧ್ಯ ಎಂದು ಜಾಗ ಖಾಲಿ ಮಾಡಿದರು. ಹೀಗಾಗಿ ಕೊಡಗಿನಲ್ಲಿರುವ ಅತ್ಯಲ್ಪ ಪ್ರಮಾಣದ ಸಿಬ್ಬಂದಿಯೇ ಮಳೆ, ಗಾಳಿಯನ್ನು ಲೆಕ್ಕಿಸದೇ ವಿದ್ಯುತ್ ಸಮಸ್ಯೆ ನಿವಾರಿಸಲು ಹೆಣಗಾಡುತ್ತಿದ್ದಾರೆ.
ಮಡಿಕೇರಿ ತಾಲೂಕಿನ ಹಮ್ಮಿಯಾಲ, ಹಚ್ಚಿನಾಡು, ಮುಕ್ಕೋಡ್ಲು, ಮುಟ್ಲು, ಕಾಲೂರು, ಭಾಗಮಂಡಲ ವ್ಯಾಪ್ತಿಯ ಅನೇಕ ಗ್ರಾಮಗಳು, ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ, ಶ್ರೀಮಂಗಲ ವ್ಯಾಪ್ತಿಯ ಹತ್ತಾರು ಗ್ರಾಮಗಳು, ಸೋಮವಾರಪೇಟೆ ತಾಲೂಕಿನ ಹಲವು ಗ್ರಾಮಗಳು ಈ ಬಾರಿ ಮಳೆಯಿಂದಾಗಿ ಕತ್ತಲಲ್ಲೇ ದಿನದೂಡುವಂಥ ಪರಿಸ್ಥಿತಿ ಎದುರಿಸಿವೆ.
93 ಟ್ರಾನ್ಸ್ಫಾರ್ಮರ್ ಹಾನಿ: ಮಳೆಯಿಂದಾಗಿ ಜಿಲ್ಲೆಯಲ್ಲಿ 93 ಟ್ರಾನ್ಸ್ಫಾರ್ಮರ್ಗಳು ಹಾನಿಗೊಳಗಾಗಿದ್ದು ಆದಷ್ಟು ಶೀಘ್ರ ಇವುಗಳ ದುರಸ್ತಿಗೆ ಕ್ರಮ ವಹಿಸಲಾಗುತ್ತಿದೆ. ನಗರ ಪ್ರದೇಶದ ಮುಖ್ಯಲೈನ್ಗಳನ್ನು ಈಗಾಗಲೇ ದುರಸ್ತಿಪಡಿಸಲಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಸಂಭವಿಸಿರುವ ವ್ಯತ್ಯಯವನ್ನು ಸರಿಪಡಿಸಲು ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಚೆಸ್ಕಾಂ ವ್ಯವಸ್ಥಾಪಕ ನಿರ್ದೇ ಶಕ ಎ.ಬಿ. ಇಬ್ರಾಹಿಂ ಹೇಳಿದ್ದಾರೆ.
ಮಳೆಗಾಲದ ಅರಿವಿದ್ದರೂ ಈ ವರ್ಷ ಚೆಸ್ಕಾಂ ಹಲವು ಕಡೆಗಳಲ್ಲಿ ಮರಗಳ ಕೊಂಬೆಗಳನ್ನು ಕಡಿಯುವತ್ತ ಗಮನ ಹರಿಸಿರಲಿಲ್ಲ. ಹೀಗಾಗಿಯೇ ಮಳೆ, ಗಾಳಿಯಿಂದಾಗಿ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು ತೋಟಗಳಲ್ಲಿ ಸಾಕಷ್ಟು ಹಾನಿ ಆಗಿದೆ ಎಂದು ಹಲವು ಗ್ರಾಮಸ್ಥರು ದೂರುತ್ತಾರೆ. ಅಂತೆಯೇ ತೋಟ ಮಾಲೀಕರೂ ತಮ್ಮ ತೋಟದಲ್ಲಿ ಮರಗಳ ಕೊಂಬೆಯನ್ನು ತೆರವುಗೊಳಿಸದೆ ಇರುವುದೂ ವಿದ್ಯುತ್ ತಂತಿಗಳು ತುಂಡಾಗಿ ವಿದ್ಯುತ್ ವ್ಯತ್ಯಯವಾಗಲು ಪ್ರಮುಖ ಕಾರಣ ಎಂಬುದೂ ವಾಸ್ತವ.
200 ಸಿಬ್ಬಂದಿ ನೇಮಕ: ಮೈಸೂರು ವಿಭಾಗದಿಂದ ಕೊಡಗು ವಿಭಾಗಕ್ಕೆ ಹೆಚ್ಚುವರಿಯಾಗಿ 20 ಲೈನ್ಮ್ಯಾನ್ಗಳನ್ನು ನಿಯೋಜಿಸಲಾಗಿದೆ. ಸೋಮವಾರಪೇಟೆ ಉಪ ವಿಭಾಗವನ್ನು ಮಡಿಕೇರಿಗೆ ಸೇರ್ಪಡೆಗೊಳಿಸಲಾಗಿದ್ದು, ನಾಲ್ಕು ಜೀಪ್ಗಳೊಂದಿಗೆ 200 ಸಿಬ್ಬಂದಿಯನ್ನು ಕೊಡಗಿನ ನಾಲ್ಕು ಉಪವಿಬಾಗಗಳಲ್ಲಿನ ವಿದ್ಯುತ್ ಸಮಸ್ಯೆ ನಿವಾರಣೆಗಾಗಿ ನಿಯುಕ್ತಿಗೊಳಿಸಲಾಗಿದೆ ಎಂದು ಚೆಸ್ಕಾಂ ಮುಖ್ಯ ಎಂಜಿನಿಯರ್ ಶಾಂತಿ ಮಾಹಿತಿ ನೀಡಿದ್ದಾರೆ. ಹಳೆ ಕಾಲದ ವಿದ್ಯುತ್ ಕಂಬಗಳನ್ನು ಈಗಾಗಲೇ ತೆರವುಗೊಳಿಸಿದ್ದು, ಹೊಸ ಕಂಬಗಳ ಅಳವಡಿಕೆಗೂ ಆದ್ಯತೆ ನೀಡಲಾಗಿದೆ ಎಂದು ಶಾಂತಿ ತಿಳಿಸಿದ್ದಾರೆ.
- ಅನಿಲ್ ಎಚ್.ಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

