ಪ್ರಧಾನ ಸುದ್ದಿ

ಅಸಂಬದ್ಧ ಕೌನ್ಸೆಲಿಂಗ್‌ನಿಂದ ಬ್ಲಾಕಿಂಗ್ ದಂಧೆ

Published On :

ಕನ್ನಡಪ್ರಭ ವಾರ್ತೆ, ಬೆಂಗಳೂರು, ಆ.20-
ಸರ್ಕಾರದ ಅವೈಜ್ಞಾನಿಕ ಕೌನ್ಸೆಲಿಂಗ್ ಕ್ರಮ ಖಾಸಗಿ ಕಾಲೇಜುಗಳ ಸೀಟ್ ಬ್ಲಾಕಿಂಗ್ ದಂಧೆಗೆ ಸಹಕಾರಿ ಆಗಿದೆಯೇ ಎಂಬ ಪ್ರಶ್ನೆ ಮೂಡಿದೆ.
ಪ್ರತಿ ವಿದ್ಯಾರ್ಥಿಯೂ ಒಂದು- ಎರಡು ಸೀಟುಗಳನ್ನು ಜತೆಯಲ್ಲಿರಿಸಿಕೊಂಡು 3 ಮತ್ತು 4ನೇ ಹಂತದ ಕೌನ್ಸೆಲಿಂಗ್‌ಗೆ ಹಾಜರಾಗಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅವಕಾಶ ನೀಡಿತ್ತು. ಇದರಿಂದ ಕಾಮೆಡ್- ಕೆ ಸೀಟುಗಳ ಮಾರಾಟ ದೊಡ್ಡ ಪ್ರಮಾಣದಲ್ಲಿ ನಡೆದಿವೆ ಎಂದು ಪ್ರಾಧಿಕಾರದ ಕೆಲ ಅಧಿಕಾರಿಗಳೇ ಹೇಳುತ್ತಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಜು.27ಕ್ಕೆ ಕಾಮೆಡ್- ಕೆ ಕೌನ್ಸೆಲಿಂಗ್ ಅಂತ್ಯವಾಗಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆ.13ರವರೆಗೆ ಕೌನ್ಸೆಲಿಂಗ್ ನಡೆಸಿದೆ.
ಈ ರೀತಿಯ ಅಸಂಬದ್ಧ ಕೌನ್ಸೆಲಿಂಗ್‌ನಿಂದ ವಿದ್ಯಾರ್ಥಿಗಳು ಸರ್ಕಾರಿ ಅಥವಾ ಕಾಮೆಡ್- ಕೆ ಸೀಟುಗಳನ್ನು ಉಳಿಸಿಕೊಂಡೇ ಅಂತಿಮ ಹಂತದ ಕೌನ್ಸೆಲಿಂಗ್‌ಗೆ ಹಾಜರಾಗಲು ಅವಕಾಶ ನೀಡಲಾಗಿದೆ. ಇದರಿಂದ ಸೀಟ್ ಬ್ಲಾಕಿಂಗ್ ಹೆಚ್ಚಾಗುವ ಅಪಾಯವಿದೆ. ಕಾಮೆಡ್- ಕೆನಲ್ಲಿ ಉಳಿಕೆಯಾಗಿರುವ ಸೀಟುಗಳು ಆಡಳಿತ ಮಂಡಳಿ ಸೀಟುಗಳಾಗಿ ಪರಿವರ್ತನೆಯಾಗುತ್ತವೆ.
ಇನ್ನು ಖಾಸಗಿ ಕಾಲೇಜುಗಳಲ್ಲಿ ಬಾಕಿ ಉಳಿದಿರುವ ಸರ್ಕಾರಿ ಸೀಟುಗಳ್ನು ಏನು ಮಾಡಬೇಕೆಂಬ ಬಗ್ಗೆ ಯಾವುದೆ ಸ್ಪಷ್ಟ ಆದೇಶವನ್ನು ಸರ್ಕಾರ ಇಂದಿನವರೆಗೆ ಹೊರಡಿಸಿಲ್ಲ. ರಾಜ್ಯ ಸರ್ಕಾರ ಬೇಕಾಬಿಟ್ಟಿ ಕೌನ್ಸೆಲಿಂಗ್ ಮಾಡುತ್ತಿದೆ ಎಂದು ಖಾಸಗಿ ಆಡಳಿತ ಮಂಡಳಿಗಳು ಕೇವಲ ತೋರಿಕೆಗೆ ಹೇಳಿಕೆ ನೀಡುತ್ತಿವೆ. ಸರ್ಕಾರದೊಂದಿಗಿನ ಒಪ್ಪಂದದ ಸಣ್ಣ ಪ್ರಮಾಣದ ಉಲ್ಲಂಘನೆಯಾದರೂ ಕಾನೂನು ಹೋರಾಟ ನಡೆಸುವ ಆಡಳಿತ ಮಂಡಳಿಗಳು ಸುಮ್ಮನಿರುವುದು ನೋಡಿದರೆ 'ಅಂದರ್ ಬಾಹರ್‌' ಇರುವುದು ಖಾತ್ರಿಯಾಗುತ್ತದೆ.
ಏಕೆಂದರೆ ಕಾಮೆಡ್- ಕೆನಲ್ಲಿ ಉಳಿದ ಸೀಟುಗಳು ಆಡಳಿತ ಮಂಡಳಿಗೆ ಬೋನಸ್ ಆಗುತ್ತವೆ. ಇದು ಎಲ್ಲ ಕಾಲೇಜುಗಳಿಗೂ ಅನ್ವಯಿಸದಿದ್ದರೂ ಪ್ರತಿಷ್ಠಿತ ಕಾಲೇಜುಗಳಿಗೆ ಬಂಪರ್ ಲಾಟರಿಯಾಗಿ ಪರಿಣಮಿಸುತ್ತದೆ.

ಎರಡೂ ಮಂಡಳಿಗಳ ಬಳಿ ಲೆಕ್ಕವಿಲ್ಲ!:
ಎರಡನೇ ಹಂತದ ಕೌನ್ಸೆಲಿಂಗ್ ಬಳಿಕ ಪ್ರಸಕ್ತ ಸಾಲಿನ ಪ್ರವೇಶ ಪ್ರಕ್ರಿಯೆಯಿಂದ ಕಾಮೆಡ್- ಕೆ ಸಂಪೂರ್ಣ ವಿಮುಖವಾಗಿದೆ. ಜು.27ರ ಬಳಿಕ ರದ್ದಾಗುವ ಸೀಟುಗಳು ಹಾಗೂ ಶುಲ್ಕ ಮರುಪಾವತಿ ತಮಗೆ ಸಂಬಂಧವಿಲ್ಲ ಎಂದು ಕಾಮೆಡ್-ಕೆ ಸ್ಪಷ್ಟಪಡಿಸಿದೆ.
ಇದರರ್ಥ ಆ ಬಳಿಕ ನಡೆದ 2 ಹಂತದ ಕೌನ್ಸೆಲಿಂಗ್‌ನಲ್ಲಿ ರದ್ದಾದ ಕಾಮೆಡ್- ಕೆ ಸೀಟುಗಳ ಬಗ್ಗೆ ಯಾವುದೆ ಮಾಹಿತಿ ಸಿಗುತ್ತಿಲ್ಲ. ಪ್ರಾಧಿಕಾರದ ಮೂಲಗಳ ಪ್ರಕಾರ 300ಕ್ಕೂ ಅಧಿಕ ಕಾಮೆಡ್- ಕೆ ಸೀಟು ಪೆಡದ ವಿದ್ಯಾರ್ಥಿಗಳು ಸರ್ಕಾರಿ ಸೀಟುಗಳತ್ತ ಮುಖಮಾಡಿದ್ದಾರೆ.
ವೇಕೆನ್ಸಿ ರೌಂಡ್ ಕೌನ್ಸೆಲಿಂಗ್‌ಗಳಲ್ಲಿ ತನ್ನ ಬಳಿ ಸೀಟು ಇರಿಸಿಕೊಂಡು ಕೌನ್ಸೆಲಿಂಗ್ ಹಾಜರಾಗುವಂತಿಲ್ಲ. ಇದರಿಂದ ಅನವಶ್ಯಕವಾಗಿ ಸೀಟ್ ಬ್ಲಾಕಿಂಗ್‌ಗೆ ರಹದಾರಿ ಒದಗಿಸಿದಂತಾಗುತ್ತದೆ. ಈ ರೀತಿ ಸೀಟುಗಳನ್ನು ಪಡೆಯಲೇ ದೊಡ್ಡ ಜಾಲವಿರುವುದನ್ನು ಈಗಾಗಲೇ 'ಕನ್ನಡಪ್ರಭ'ವು ದಾಖಲೆ ಸಮೇತ ವರದಿ ಮಾಡಿದೆ.
ಇನ್ನು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಕಾಲೇಜುವಾರು ಉಳಿಕ ಸೀಟುಗಳ ಮಾಹಿತಿ ಕೋರಿ ಕಳೆದೊಂದು ವಾರದಿಂದ ಕೆಇಎ ಅಧಿಕಾರಿಗಳಿಗೆ ದುಂಬಾಲುಬಿದ್ದರೂ ಪ್ರಯೋಜನವಾಗಿಲ್ಲ. 'ಇಂದು ಸಂಜೆ ಅಂತರ್ಜಾಲದಲ್ಲಿ ಮಾಹಿತಿ ಪ್ರಕಟಿಸುತ್ತೇವೆ' ಎಂದು ಕಳೆದ ಆ.14ರಿಂದ ಸುಳ್ಳು ಹೇಳಿಕೆ ನೀಡುತ್ತಲೇ ಇದ್ದಾರೆ. ಉನ್ನತ ಮೂಲಗಳ ಪ್ರಕಾರ ನಿಯಮಬಾಹಿರವಾಗಿ ಕಾಲೇಜುಗಳಲ್ಲಿ ಇಂದಿಗೂ ಸರ್ಕಾರಿ ಸೀಟುಗಳ ಪ್ರವೇಶ ಪ್ರಕ್ರಿಯೆ ನಡೆಯುತ್ತಿದೆ. ಎಲ್ಲದಕ್ಕೂ ಸುಪ್ರೀಂ ಕೋರ್ಟ್ ಆದೇಶದ ನೆಪ ಹೇಳುವ ಸರ್ಕಾರ ಈಗ ಎಲ್ಲವನ್ನೂ ಮರೆತುಕೂತಿದೆ.
ಇವತ್ತೂ ಪ್ರವೇಶ ಪ್ರಕ್ರಿಯೆ ನಡೆಯುತ್ತಿರುವ ಕಾರಣದಿಂದ ಮಾಹಿತಿ ಸಿಗುತ್ತಿಲ್ಲ ಎಂದು ಪ್ರಾಧಿಕಾರದ ಆಡಳಿತಾಧಿಕಾರಿ ಎಸ್.ಪಿ. ಕುಲಕರ್ಣಿ ಹೇಳಿದ್ದಾರೆ.

ವರದಿಯಿಂದ ಎಚ್ಚೆತ್ತ 48 ಕಾಲೇಜುಗಳ ಮಾಹಿತಿ ಪ್ರಕಟ
ಕಾಲೇಜುವಾರು ಶುಲ್ಕ ವಸೂಲಿ ಕುರಿತಂತೆ ಆ.15ರೊಳಗೆ ಮಾಹಿತಿ ಪ್ರಕಟಿಸಲು ಸಚಿವರು ಆದೇಶ ನೀಡಿದ್ದರೂ ಪಾಲನೆಯಾಗಿಲ್ಲ ಎಂದು ಎರಡು ದಿನದ ಹಿಂದೆ 'ಕನ್ನಡಪ್ರಭ' ವರದಿ ಮಾಡಿತ್ತು. ಈಗ ತಾಂತ್ರಿಕ ಶಿಕ್ಷಣ ಇಲಾಖೆ ವೆಬ್‌ಪುಟದಲ್ಲಿ 203 ಎಂಜಿನಿಯರಿಂಗ್ ಕಾಲೇಜುಗಳ ಪೈಕಿ 51 ಕಾಲೇಜುಗಳ ಶುಲ್ಕ ಮಾಹಿತಿ ಪ್ರಕಟಿಸಲಾಗಿದೆ. ಅದರಲ್ಲಿ ಮೂರು ಕಾಲೇಜುಗಳ ಮಾಹಿತಿ ಸಿಗುತ್ತಿಲ್ಲ. ಅಧಿಕೃತ ಪ್ರವೇಶ ಪ್ರಕ್ರಿಯೆ ಮುಗಿದು ಒಂದು ವಾರ ಕಳೆದಿದೆ.

30 ಸಾವಿರಕ್ಕೂ ಅಧಿಕ ಶುಲ್ಕ ವಸೂಲಿ ಒಪ್ಪಿಕೊಂಡ ಕಾಲೇಜು!
ಹೆಚ್ಚುವರಿ ಶುಲ್ಕ ಪಡೆಯಲು ಮೌನ ಸಮ್ಮತಿ ನೀಡಿಲ್ಲ ಎಂದು ಸರ್ಕಾರ ಹೇಳಿಕೆ ನೀಡುತ್ತಿದ್ದರೂ ವೆಬ್‌ಪುಟದಲ್ಲಿ ಪ್ರಕಟವಾಗಿರುವ 48 ಕಾಲೇಜುಗಳಲ್ಲಿ 35ಕ್ಕೂ ಅಧಿಕ ಕಾಲೇಜುಗಳು 15 ಸಾವಿರಕ್ಕೂ ಅಧಿಕ ಹಣ ಪಡೆದಿವೆ. ಇನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಪಾವತಿಸಬೇಕಿರುವ ಶುಲ್ಕ ಕುರಿತಂತೆ ಏಕರೂಪ ವ್ಯವಸ್ಥೆಯಿಲ್ಲದಿರುವುದು ಆಶ್ಚರ್ಯ ಮೂಡಿಸಿದೆ. ಇನ್ನು ಸರ್ಕಾರ ಹಾಗೂ ಖಾಸಗಿ ಕಾಲೇಜುಗಳ ಸಂಘದ ವಿರೋಧದ ಹೊರತಾಗಿಯೂ ಖಾಸಗಿ ಕಾಲೇಜುಗಳು 20 ಸಾವಿರಕ್ಕೂ ಅಧಿಕ ಶುಲ್ಕ ವಸೂಲಿಮಾಡಿರುವುದು ಸಾಬೀತಾಗಿದೆ.

- ರಾಜೀವ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.