ಪ್ರಧಾನ ಸುದ್ದಿ

ಫಲಿತಾಂಶ ಬಂದು 3 ತಿಂಗ್ಳಾದ್ರೂ ಅಂಕಪಟ್ಟಿ ಇಲ್ಲ!

Published On :

ಕ.ಪ್ರ.ವಾರ್ತೆ ,  ಕೊಪ್ಪಳ ,  ಆ. 31
ಫಲಿತಾಂಶ ಬಂದು ಮೂರು ತಿಂಗಳಾದರೂ ವಿದ್ಯಾರ್ಥಿಗಳ ಕೈಗಿನ್ನೂ ಅಂಕಪಟ್ಟಿ ಸಿಕ್ಕಿಲ್ಲ. ಎಸ್‌ಎಸ್‌ಎಲ್‌ಸಿ ಪಾಸಾದರೂ ವಿದ್ಯಾರ್ಥಿಗಳು ತಮ್ಮ ಮೂಲ ಅಂಕಪಟ್ಟಿ ಪಡೆಯಲು ಹೆಣಗಾಡುತ್ತಿದ್ದಾರೆ. ಪ್ರತಿ ದಿನ ಶಾಲೆಗೆ ಪ್ರದಕ್ಷಿಣೆ ಹಾಕುತ್ತಿದ್ದಾರೆ. ಅದರಲ್ಲೂ ನೆರೆ ರಾಜ್ಯಕ್ಕೆ ವ್ಯಾಸಂಗಕ್ಕೆಂದು ಹೋಗಿರುವ ವಿದ್ಯಾರ್ಥಿಗಳ ತಾಪತ್ರಯವಂತೂ ಹೇಳ ತೀರದಾಗಿದೆ.
ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಇತಿಹಾಸದಲ್ಲಿಯೇ ಅಂಕಪಟ್ಟಿ ನೀಡಲು ಇಷ್ಟೊಂದು ವಿಳಂಬವಾಗಿರುವುದು ಇದೇ ಮೊದಲು. ಮಕ್ಕಳ ಅಂಕಪಟ್ಟಿ ನೀಡುವಂತೆ ಪಾಲಕರು ಮುಖ್ಯೋಪಾಧ್ಯಾಯರ ಬೆನ್ನು ಬಿದ್ದಿರುವುದರಿಂದ ಈಗ ಮುಖ್ಯೋಪಾಧ್ಯಾಯರ ಸ್ಥಿತಿ ಅಡಕತ್ತರಿಯಲ್ಲಿ ಸಿಕ್ಕಿದಂತಾಗಿದೆ.
ಅಂಕ ಪಟ್ಟಿ ನೀಡುವುದು ವಿಳಂಬವಾಗುತ್ತಿರುವುದರಿಂದ ಆನ್‌ಲೈನ್‌ನಲ್ಲಿ ನೀಡುವ ಅಂಕಗಳ ಮಾಹಿತಿ ಅಥವಾ ಶಾಲೆಯಲ್ಲಿ ಮುಖ್ಯೋಪಾಧ್ಯಾಯರು ರುಜು ಮಾಡಿ, ನೀಡುವ ಅಂಕಪಟ್ಟಿಗಳನ್ನೇ ಮೂಲ ಅಂಕಪಟ್ಟಿಗಳೆಂದು ತಿಳಿದು ಪ್ರವೇಶ ನೀಡುವಂತೆ ಪರೀಕ್ಷಾ ಮಂಡಳಿ ಸುತ್ತೋಲೆ ಹೊರಡಿಸಿದೆ. ಅದರಂತೆ ಈಗ ಪ್ರವೇಶ ನೀಡಲಾಗಿದೆಯಾದರೂ ಮೂಲ ಅಂಕಪಟ್ಟಿ ಬರದಿದ್ದರೇ ಹೇಗೆ ಎಂದು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿರುವ ಪ್ರಾಂಶುಪಾಲರು ಕೇಳುತ್ತಿದ್ದಾರೆ. ಹಾಗೊಂದು ವೇಳೆ ಅಂತರ್ಜಾಲದಲ್ಲಿ ನೀಡಿರುವ ಮಾಹಿತಿ ತಪ್ಪಾಗಿದ್ದರೆ ಏನು ಮಾಡುವುದು ಎನ್ನುವ ಸಂಕಷ್ಟ ಅವರದ್ದು.
ನೆರೆ ರಾಜ್ಯದಲ್ಲಿ ಮತ್ತಷ್ಟು ಸಮಸ್ಯೆ: ಸುತ್ತೋಲೆಯನ್ನು ಆಧರಿಸಿ ರಾಜ್ಯದಲ್ಲಿ ಮುಂದಿನ ಕೋರ್ಸ್‌ಗೆ ಅನುಮತಿ ನೀಡಲಾಗಿದೆ. ಆದರೆ, ನೆರೆ ರಾಜ್ಯಕ್ಕೆ ಅಭ್ಯಾಸ ಮಾಡಲು ಹೋಗಿರುವ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಗಿದೆ. ಅಲ್ಲಿ ಮೂಲ ಅಂಕಪಟ್ಟಿ ಬೇಕೇಬೇಕು ಎನ್ನುತ್ತಿರುವುದರಿಂದ ವಿದ್ಯಾರ್ಥಿಗಳು ತ್ರಿಶಂಕು ಸ್ಥಿತಿಗೆ ತಲುಪಿದ್ದಾರೆ.
ಏನಿದು ಸಮಸ್ಯೆ?: ಅಂಕಪಟ್ಟಿ ಮುದ್ರಣ ವಿಳಂಬಕ್ಕೆ ನಿಖರ ಕಾರಣ ಗೊತ್ತಾಗಿಲ್ಲ. ಮುದ್ರಣ ಗುತ್ತಿಗೆ ಪಡೆದಿರುವ ಸಂಸ್ಥೆ ವಿಳಂಬ ಮಾಡುತ್ತಿದೆ ಎನ್ನಲಾಗಿದೆ. ಇನ್ನು ಕೆಲವರು ಹೇಳುವ ಪ್ರಕಾರ ಪರೀಕ್ಷಾ ಮಂಡಳಿ ಬೇಜವಾಬ್ದಾರಿಯೂ ಇದಕ್ಕೆ ಕಾರಣವೆನ್ನಲಾಗಿದೆ. ಈ ಕುರಿತು ನೋಡಲ್ ಅಧಿಕಾರಿಗಳು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಧಿಕಾರಿಗಳನ್ನು ಸಂಪರ್ಕಿಸಿದರೆ ಬರುತ್ತವೆ ಎಂದಷ್ಟೇ ಹೇಳುತ್ತಿದ್ದಾರೆ.
ಪೂರಕ ಪರೀಕ್ಷೆಗಳು ಪ್ರಾರಂಭವಾದ ಮೇಲೆ ಎರಡೂ ಫಲಿತಾಂಶಗಳ ಅಂಕಪಟ್ಟಿ ಒಟ್ಟಿಗೆ ಬರಲು ಪ್ರಾರಂಭವಾದ ಮೇಲೆ ವಿಳಂಬವಾಗುತ್ತಿದೆ. ಆದರೆ, ಈ ವರ್ಷದ ಹಾಗೆ ಆಗಿರಲ್ಲಿಲ್ಲ.
ರಾಜ್ಯದಲ್ಲಿ ಮೇನಲ್ಲಿ  ಪಾಸಾದ ವಿದ್ಯಾರ್ಥಿಗಳು (ರೆಗ್ಯುಲರ್)
ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು        7,55,441
ಒಟ್ಟು ಪಾಸಾದ ವಿದ್ಯಾರ್ಥಿಗಳು               6,25,832
ಡಿಸ್ಟಿಂಕ್ಷನ್‌ನಲ್ಲಿ ಪಾಸಾದವರು                35,477
ಪ್ರಥಮ ದರ್ಜೆ ಪಾಸಾದವರು                 2,31,553
ದ್ವಿತೀಯ ದರ್ಜೆ ಪಾಸಾದವರು               1,45,716
ಪಾಸಾದವರು                                     2,13,086
ಮೇ ಮತ್ತು ಜುಲೈನಲ್ಲಿ ಪ್ರಕಟವಾಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಂಕಪಟ್ಟಿಗಳು ಇನ್ನೂ ಬಂದಿಲ್ಲ. ಈ ಕುರಿತು ಈಗಾಗಲೇ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಗಮನಕ್ಕೆ ತರಲಾಗಿದ್ದು, ಇನ್ನೊಂದು ವಾರದಲ್ಲಿ ಬರುತ್ತವೆ ಎನ್ನಲಾಗುತ್ತಿದೆ.
- ಎಸ್.ಎಫ್. ಸಂಗಟಿ, ಪ್ರೌಢ ಶಿಕ್ಷಣ ಪರೀಕ್ಷಾ ವಿಭಾಗದ ನೋಡಲ್ ಅಧಿಕಾರಿ

ಪರೀಕ್ಷೆ ಮುಗಿದು ಐದು ತಿಂಗಳಾದರೂ ಅಂಕಪಟ್ಟಿ ಬಂದಿಲ್ಲ. ಇದರಿಂದ ವಿದ್ಯಾರ್ಥಿಗಳು ಹಾಗೂ ಪಾಲಕರು ನಿತ್ಯವೂ ಶಾಲೆಗೆ ಅಂಕಪಟ್ಟಿಗಾಗಿ ಅಲೆದಾಡುತ್ತಿದ್ದಾರೆ. ನೆರೆಯ ಆಂಧ್ರದಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಗಿದೆ.
- ರಾಮು ಓಲೇಕಾರ, ಕೊಪ್ಪಳ ಓಲೇಕಾರ ಶಿಕ್ಷಣ ಸಂಸ್ಥೆ ಮುಖ್ಯೋಪಾಧ್ಯಾಯರು

ಗುಲ್ಬರ್ಗ ಹೊರತುಪಡಿಸಿ, ಎಲ್ಲ ಜಿಲ್ಲೆಗಳಿಗೂ ಅಂಕಪಟ್ಟಿಗಳೂ ಈಗಾಗಲೇ ಮಂಡಳಿಯಿಂದ ರವಾನಿಸಲಾಗಿದೆ. ರೆಗ್ಯುಲರ್ ಹಾಗೂ ಪೂರಕ ಪರೀಕ್ಷೆಗಳ ಅಂಕಪಟ್ಟಿಗಳು ಒಟ್ಟಿಗೇ ಸೇರಿಸಿ ನೀಡುತ್ತಿರುವುದರಿಂದ ಈ ಸಮಸ್ಯೆ ತಲೆದೋರಿದೆ.
- ವೆಂಕಟೇಶಯ್ಯ, ನಿರ್ದೇಶಕರು, ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ

-ಸೋಮರಡ್ಡಿ ಅಳವಂಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.