ಪ್ರಧಾನ ಸುದ್ದಿ

ಸೂರತ್ ಸ್ಫೋಟ ವಿಫಲವಾಗಿದ್ದಕ್ಕೆ ಉಗ್ರ ಇಕ್ಬಾಲ್ ಬಿರಿಯಾನಿ ತಿಂದಿರಲಿಲ್ಲ!

Published On :

ಕ.ಪ್ರ.ವಾರ್ತೆ ,  ಮಂಗಳೂರು ,  ಆ. 31
ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಸಂಸ್ಥಾಪಕ ರಿಯಾಜ್ ಮತ್ತು ಯಾಸೀನ್ ಭಟ್ಕಳ್ ಸೂರತ್ ಸ್ಫೋಟದಲ್ಲಿ ಕನಿಷ್ಠ 1 ಸಾವಿರ ಮಂದಿಯ ಸಾವನ್ನು ನಿರೀಕ್ಷಿಸಿದ್ದರು. ಆದರೆ ಅಹ್ಮದಾಬಾದ್ ಸ್ಫೋಟದಲ್ಲಿ 50 ಮಂದಿ ಸತ್ತ ಸುದ್ದಿ ಮತ್ತು ಸೂರತ್‌ನಲ್ಲಿ ಬಾಂಬ್‌ಗಳು ಸ್ಫೋಟಿಸದ ಸುದ್ದಿ ಟೀವಿಯಲ್ಲಿ ನೋಡಿದ ರಿಯಾಜ್ ಮತ್ತು ಇಕ್ಬಾಲ್ ಭಟ್ಕಳ್ ಬಾಂಬ್ ಇರಿಸಿದ್ದ ಮಂಗಳೂರಿನ ಇಬ್ಬರು ಉಗ್ರರ ಮೇಲೆ ಕೆಂಡ ಕಾರಿದ್ದರು. ಮಾತ್ರವಲ್ಲ ಸ್ಫೋಟದ ಖುಷಿಗೆ ಆಯೋಜಿಸಿದ್ದ ಬಿರಿಯಾನಿ ಊಟವನ್ನೂ ಇಕ್ಬಾಲ್ ತಿರಸ್ಕರಿಸಿದ್ದ!
ಈ ವಿಚಾರವನ್ನು ಮಂಗಳೂರಲ್ಲಿ 2008ರಲ್ಲಿ ನಡೆದ 'ಆಪರೇಷನ್ ಟೆರರ್‌' ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದ ಮಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿ ನೌಷಾದ್ ಮತ್ತು ಯಾಸೀನ್ ಭಟ್ಕಳ್‌ನ ಗೆಳೆಯ ಹಳೆಯಂಗಡಿ ಅಹ್ಮದ್ ಬಾವ ಪೊಲೀಸರ ಮುಂದೆ ನೀಡಿದ ಹೇಳಿಕೆಯಲ್ಲಿ ಬಹಿರಂಗಪಡಿಸಿದ್ದರು.  ಭಟ್ಕಳ್ ಸಹೋದರರು ಸೂರತ್ ಸ್ಫೋಟಕ್ಕೆ ಸಿದ್ಧತೆ ನಡೆಸುತ್ತಿದ್ದಾಗ 2008ರ ಜು.25ರಂದು ಬೆಂಗಳೂರಲ್ಲಿ 7 ಕಡೆ ಸರಣಿ ಸ್ಫೋಟ ಸಂಭವಿಸಿತ್ತು. ಇದರಿಂದ ಮಡಿವಾಳ ಚೆಕ್‌ಪೋಸ್ಟ್ ಬಳಿ ಮಹಿಳೆ ಲಕ್ಷ್ಮೀ ಮೃತಪಟ್ಟಿದ್ದರು. ಇದನ್ನು ಟಿವಿಯಲ್ಲಿ ನೋಡಿದ ರಿಯಾಜ್ ಭಟ್ಕಳ್ 'ಗಲತ್ ಟೈಮ್‌ಪೆ ಕ್ಯೂಂ ಕಿಯಾ?' ಎಂದು ಬೇಸರ ವ್ಯಕ್ತಪಡಿಸಿದ್ದ.  2008ರ ಜುಲೈ ತಿಂಗಳ ಕೊನೆ ವಾರದಲ್ಲಿ ಇಕ್ಬಾಲ್ ಅಹ್ಮದ್ ಬಾವಗೆ ಬ್ಯಾಗ್ ನೀಡಿ ಸೂರತ್‌ಗೆ ಹೋಗಲು ತಿಳಿಸಿದ್ದ. ಸೂರತ್ ಬಸ್ ನಿಲ್ದಾಣದಲ್ಲಿ ಅಕ್ಬರ್ ಚೌದರಿ, ಬಾವನನ್ನು ರಿಕ್ಷಾದಲ್ಲಿ 5 ಕಿ.ಮೀ. ದೂರದಲ್ಲಿದ್ದ ಫ್ಲ್ಯಾಟ್‌ಗೂ ಕರೆದುಕೊಂಡು ಹೋಗಿದ್ದ. ಆ ಮನೆಯಲ್ಲಿ ರಿಯಾಜ್, ಯಾಸೀನ್, ಮಂಗಳೂರಿನ ನೌಷಾದ್, ಹುಸೇನ್, ಖಯಾಮುದ್ದೀನ್ ಕಪಾಡಿಯಾ ಯಾನೆ ಮೂಸ ಮೊದಲಾದವರಿದ್ದರು. ಬ್ಯಾಗ್‌ನಲ್ಲಿ ಟೈಮರ್, ಬ್ಯಾಟರಿಗಳನ್ನು ಬಾವ, ಯಾಸೀನ್‌ಗೆ ನೀಡಿದ್ದ.
ಮಕ್ಕಳ ಆಟಿಕೆಯಲ್ಲಿ ಬಾಂಬ್: ರಿಯಾಜ್ ಬೀರಿನಲ್ಲಿದ್ದ ಚಿಪ್‌ಗಳನ್ನು ಮತ್ತು ಮರದಿಂದ ಮಾಡಿದ ಮಕ್ಕಳ ಆಟಿಕೆ ದೋಣಿಯಾಕಾರದ ವಸ್ತುವಿನ ಒಳಗಡೆ ಅಮೋನಿಯಂ ನೈಟ್ರೇಟ್ ತುಂಬಲು ಹೇಳಿದ. ಬಳಿಕ ರಿಯಾಜ್ ಡ್ರಿಲ್ ಮಾಡಿ ದೋಣಿ ಆಕಾರದ ಆಟಿಕೆಗೆ ರಂಧ್ರ ಕೊರೆದು ಒಳಗಡೆ ಡೆಟೋನೇಟರ್ ಫಿಕ್ಸ್ ಮಾಡಿದ್ದ. ಬೆಂಗಳೂರಿನ ಸ್ಫೋಟದಿಂದ ನಿರೀಕ್ಷಿತ ಮಟ್ಟದಲ್ಲಿ ಸಾವು ನೋವು ಸಂಭವಿಸದ ಕಾರಣ ಹೈ ಅಲರ್ಟ್ ಆಗಿ ಸೂರತ್ ಮತ್ತು ಅಹ್ಮದಾಬಾದ್ ಸ್ಫೋಟ ನಡೆಸಲು ತೊಂದರೆ ಆಗಬಹುದು ಎಂದು ರಿಯಾಜ್ ಊಹಿಸಿದ್ದ. ಸೂರತ್‌ನಲ್ಲಿ ಸ್ಫೋಟ ನಡೆಸಲು ಬಾವ ಸರ್ಕ್ಯೂಟ್ ಮತ್ತು  ಬ್ಯಾಟರಿ ಜೋಡಿಸಿ ವೋಲ್ಟಾಮೀಟರ್ ಮೂಲಕ ಪರೀಕ್ಷೆ ಮಾಡಿದ. ಆಸೀಫ್, ಮನ್ಸೂರ್ ಮತ್ತು ಸಲ್ಮಾನ್ ಟೈಮರ್ ಜೋಡಿಸಿದರು. 47 ಗಂಟೆ ಅವಧಿಯಲ್ಲಿ ಸರಣಿ ಬಾಂಬ್ ಸ್ಫೋಟವಾಗುವಂತೆ ಟೈಮ್ ಫಿಕ್ಸ್ ಮಾಡಲಾಗಿತ್ತು. ಹುಸೇನ್ ಅದಕ್ಕೆ ಬಣ್ಣ ಬಣ್ಣದ ಗಮ್ ಟೇಪ್ ಸುತ್ತಿದ. ಸೂರತ್‌ನ ಬೇರೆ ಬೇರೆ ಪ್ರದೇಶಗಳಲ್ಲಿ ಬಾಂಬ್ ಫಿಕ್ಸ್ ಮಾಡಲು ಬಣ್ಣದ ಗುರುತು ಮಾಡಲಾಗಿತ್ತು. 2 ಕಾರುಗಳಲ್ಲಿ ಬಾಂಬ್‌ಗಳನ್ನು ತೆಗೆದುಕೊಂಡು ಹೋಗಿ ಸೂರತ್‌ನ ಹಲವು ಕಡೆಗಳಲ್ಲಿ ಬಾಂಬ್ ಇಟ್ಟು ಬಂದರು.
ಜನ ಸಾಯದೆ ಇದ್ದದ್ದಕ್ಕೆ ಬಿರಿಯಾನಿ ತಿಂದಿಲ್ಲ!: ಅಹ್ಮದಾಬಾದ್ ಮತ್ತು ಸೂರತ್ ಸರಣಿ ಸ್ಫೋಟವಾಗುವ ವೇಳೆ ಎಲ್ಲರೂ ಪುಣೆಯಲ್ಲಿದ್ದ ರಿಯಾಜ್ ಮನೆಯಲ್ಲಿ ಪಾರ್ಟಿ ಮಾಡಿದ್ದರು. ಬಿರಿಯಾನಿಗೆ ಆರ್ಡರ್ ಮಾಡಿದ್ದರು. ಟಿವಿಯಲ್ಲಿ ಸ್ಫೋಟದ ಸುದ್ದಿ ಬಿತ್ತರವಾಗುವುದನ್ನೇ ಕಾದು ಕುಳಿತ್ತಿದ್ದರು. ಆದರೆ, ಅಹ್ಮದಾಬಾದ್ ಸ್ಫೋಟದಲ್ಲಿ 50 ಮಂದಿ ಸತ್ತರು, ಸೂರತ್‌ನಲ್ಲಿ ಸ್ಫೋಟವಾಗದೆ ಜೀವಂತ ಬಾಂಬ್‌ಗಳು ಹಾಗೆಯೇ ಸಿಕ್ಕಿವೆ ಎಂಬ ಸುದ್ದಿ ಬರುತ್ತಿದ್ದಂತೆ ಇಕ್ಬಾಲ್ ಮತ್ತು ರಿಯಾಜ್ ಮಂಗಳೂರಿನ ಅಹಮದ್ ಬಾವ ಮತ್ತು ನೌಷಾದರನ್ನು ತರಾಟೆಗೆ ತೆಗೆದುಕೊಂಡಿದ್ದರು. ಸೂರತ್‌ನಲ್ಲಿ ಒಂದು ಸಾವಿರ ಮಂದಿಯನ್ನಾದರೂ ಕೊಲ್ಲಬೇಕಿತ್ತು. ನಿಮ್ಮ ನಿರ್ಲಕ್ಷ್ಯದಿಂದ ಹೀಗಾಗಿದ್ದು, ಇನ್ನು ಮುಂದೆ ನಿಮ್ಮನ್ನು ಯಾವುದೇ ಆಪರೇಷನ್‌ನಲ್ಲಿಯೂ ತೆಗೆದುಕೊಳ್ಳುವುವದಿಲ್ಲ ಎಂದು ಕೂಗಾಡಿದ್ದರು.  ಅಷ್ಟು ಹೊತ್ತಿಗೆ ಬಿರಿಯಾನಿ ಬಂದಿತ್ತು. ಸಿಟ್ಟು ಮಾಡಿಕೊಂಡಿದ್ದ ಇಕ್ಬಾಲ್ ಬಿರಿಯಾನಿ ತಿನ್ನಲೇ ಇಲ್ಲ. ಈ ಬಾರಿ ವಿಫಲವಾದರೆ ಏನಾಯಿತು ಇನ್ನೊಮ್ಮೆ ಯತ್ನಿಸೋಣ ಎಂದು ರಿಯಾಜ್ ಸಮಾಧಾನ ಮಾಡಿದರೂ ಇಕ್ಬಾಲ್ ಊಟ ಮಾಡಿರಲಿಲ್ಲ.

-ಜಿತೇಂದ್ರ ಕುಂದೇಶ್ವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.