ಮದುವೆಯಾಗಿ ಏಳೇ ದಿನಕ್ಕೆ ಹೆಣ್ಣು ಮಗುವಿಗೆ ಜನ್ಮ!
ಮುದ್ದೇಬಿಹಾಳ : ಗರ್ಭಧರಿಸಿದ್ದನ್ನು ಮುಚ್ಚಿಟ್ಟು ಬೇರೊಬ್ಬನೊಂದಿಗೆ ಮದುವೆಯಾದ ಏಳೇ ದಿನಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆಯೊಬ್ಬಳು ಸಮಾಜಕ್ಕೆ ಹೆದರಿ ಮಗುವನ್ನು ತಿಪ್ಪೆಯಲ್ಲಿ ಹುದಗಿ ಹಾಕಲು ವಿಫಲ ಯತ್ನ ನಡೆಸಿದ್ದಾಳೆ. ಕೊನೆಗೆ ಗಂಡನ ಮನೆಯವರಿಂದ ಹೊರ ಹಾಕಿಸಿಕೊಂಡು ತವರು ಮನೆ ಸೇರಿದ ಘಟನೆ ಬಿಜಾಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಚವನಭಾವಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ರೂಢಗಿ ಗ್ರಾಮದ ಯುವತಿಯೊಬ್ಬಳ ಮದುವೆ ಚವನಭಾವಿ ಗ್ರಾಮದ ಯುವಕನೊಂದಿಗೆ ನ.25ರಂದು ಗ್ರಾಮದಲ್ಲಿಯೇ ಅದ್ಧೂರಿಯಾಗಿ ನಡೆದಿತ್ತು. ಹೆಚ್ಚು ಬೊಜ್ಜಿದ್ದ ಕಾರಣ ಯುವತಿ ಗರ್ಭವತಿ ಎಂಬುದು ಯಾರ ಅರಿವಿಗೂ ಬಂದಿರಲಿಲ್ಲ.
ವಿವಾಹಿತೆ ಬಹಿರ್ದೆಸೆಗೆ ಹೋದಾಗ ಏಕಾಏಕಿ ಹೆರಿಗೆ ಆಗಿ ಹೆಣ್ಣು ಶಿಶುವಿಗೆ ಜನ್ಮ ನೀಡಿದ್ದಾಳೆ. ಅದರ ಹೊಕ್ಕಳಬಳ್ಳಿಯನ್ನು ಕಲ್ಲಿನಿಂದ ಜಜ್ಜಿ ಕತ್ತರಿಸಿದ್ದಾಳೆ. ಗರ್ಭಚೀಲದಿಂದ ಹೊರಬಂದ ಮಾಸನ್ನು ತಿಪ್ಪೆಯಲ್ಲಿ ಮುಚ್ಚಿದ್ದಾಳೆ. ಶಿಶುವನ್ನೂ ಮುಚ್ಚುವ ಪ್ರಯತ್ನದಲ್ಲಿದ್ದಾಗ ಅದೇ ಗ್ರಾಮದ ಮಹಿಳೆ ಬಹಿರ್ದೆಸೆಗೆ ಬಂದದ್ದನ್ನು ನೋಡಿ ತನ್ನ ಯತ್ನ ಕೈ ಬಿಟ್ಟು, 'ಬೇ ಯವ್ವಾ ಯಾರೋ ಹೆಣ್ಣು ಕೂಸು ಒಗೆದು ಹೋಗ್ಯಾರ. ಅದು ಸತ್ತೈತಿ. ತಿಪ್ಪೆಯಲ್ಲಿ ಮುಚ್ಚಿಹಾಕು' ಎಂದು ಹೇಳಿದ್ದಾಳೆ.
ಮಗು, ಬಾಣಂತಿ ಆಸ್ಪತ್ರೆಗೆ: ಅನುಮಾನಗೊಂಡ ಮಹಿಳೆ ಗ್ರಾಮಸ್ಥರಿಗೆ ಈ ಸುದ್ದಿ ಮುಟ್ಟಿಸಿದ್ದಾಳೆ. ರಕ್ತಸ್ರಾವದಿಂದ ನಿತ್ರಾಣಳಾಗಿದ್ದ ಆಕೆಯ ಸ್ಥಿತಿ ನೋಡಿದ ಗ್ರಾಮಸ್ಥರು ಆರೋಗ್ಯ ಕವಚ ವಾಹನ ಕರೆಸಿ ನಾಲತವಾಡ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ. ವಿಷಯ ತಿಳಿದು ದಿಗ್ಬ್ರಾಂತನಾದ ಪತಿ, ಅತ್ತೆ ಬಾಣಂತಿಯನ್ನು ಮನೆಯಲ್ಲಿರಿಸಿಕೊಳ್ಳಲು ಒಪ್ಪದೇ ತವರುಮನೆಗೆ ಕಳಿಸಿ ಮದುವೆ ಮುರಿದುಕೊಳ್ಳಲು ಮುಂದಾಗಿದ್ದಾರೆ.
ತಾಯಿ, ಮಗು ಆರೋಗ್ಯವಾಗಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ತನ್ನ ಗರ್ಭಕ್ಕೆ ಕಾರಣನಾದವನ ಹೆಸರನ್ನು ಬಹಿರಂಗಪಡಿಸಿದ್ದಾಳೆ. ಈಕೆಯ ಮನೆಯವರು ಗರ್ಭಕ್ಕೆ ಕಾರಣನಾದವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ವಿಚಾರಣೆಯ ಹಂತದಲ್ಲಿದ್ದು ಮುಂದೇನಾಗುತ್ತದೆ ಎನ್ನುವ ಕುತೂಹಲ ಜನತೆಯಲ್ಲಿ ಹೆಚ್ಚಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

