ಪ್ರಧಾನ ಸುದ್ದಿ

ಆಸ್ತಿ ಇಂದಿನದ್ದು, ಮೌಲ್ಯ ಅಂದಿನ ಕಾಲದ್ದು ಇದು ಜನರ ಕಣ್ಣಿಗೆ ನಾಯಕರು ಮಣ್ಣೆರಚಿದ್ದು!

Published On :

ನವದೆಹಲಿ: ನಾವು ಹೇಳಿದ್ದೇ ಆಸ್ತಿ, ನಾವು ಬರೆದಿದ್ದೇ ದರ... ವಿವರ ಸಲ್ಲಿಸಿದರಾಯ್ತು. ಲೆಕ್ಕ ಹಾಕುವವರ್ಯಾರು? ಇದು ನಮ್ಮ 'ಮಹಾನ್‌' ಜನಪ್ರತಿನಿಧಿಗಳ ಮನಸ್ಥಿತಿ. ಚುನಾವಣಾ ಆಯೋಗಕ್ಕೆ ತಮ್ಮ ಆಸ್ತಿ ವಿವರ ಘೋಷಣೆ ವೇಳೆ ಜನನಾಯಕರು ಭಾರಿ ಗಿಮಿಕ್ ತೋರಿಸಿರುವುದು ಈಗ ಬೆಳಕಿಗೆ ಬಂದಿದೆ. ತಾವು ಜನರನ್ನು ಮಾತ್ರ ಮೂರ್ಖರನ್ನಾಗಿಸುವುದಿಲ್ಲ, ಆಯೋಗಕ್ಕೂ ಮಂಕುಬೂದಿ ಎರಚುತ್ತೇವೆ ಎಂಬುದನ್ನು ಈ ಮೂಲಕ ಸಾಬೀತುಪಡಿಸಿದ್ದಾರೆ ನಮ್ಮ ರಾಜಕೀಯ ನಾಯಕರು.

ಸುಳ್ಳೇ ಸುಳ್ಳು: ತಮ್ಮಲ್ಲಿರುವ ಆಸ್ತಿಯ ಮೌಲ್ಯವೇ ಒಂದು, ಘೋಷಣೆ ಮಾಡಿರುವ ದರವೇ ಇನ್ನೊಂದು.
ಕೇವಲ ಆಸ್ತಿಯ ವಿವರಗಳನ್ನು ಮಾತ್ರ ಘೋಷಿಸುತ್ತಾ, ಮಾರುಕಟ್ಟೆ ಮೌಲ್ಯವನ್ನು ನಮೂದಿಸದೇ ಚುನಾವಣಾ ಆಯೋಗದ ಕಣ್ಣಿಗೆ ಮಣ್ಣೆರಚಿರುವುದು ಸಣ್ಣ ಪುಟ್ಟ ಫುಡಾರಿಗಳಲ್ಲ. ಸೋನಿಯಾ ಗಾಂಧಿಯಿಂದ ಸುಷ್ಮಾ ಸ್ವರಾಜ್‌ವರೆಗೆ, ರಾಜನಾಥ್‌ಸಿಂಗ್‌ರಿಂದ ಮಾಯಾವತಿವರೆಗೆ ಹೆಚ್ಚಿನ ಎಲ್ಲ ನಾಯಕರೂ ಸುಳ್ಳು ಆಸ್ತಿ ವಿವರ ಘೋಷಿಸಿದ್ದಾರೆ. ತಮ್ಮ ಆಸ್ತಿ ಭಾರಿ ಬೆಲೆಬಾಳುತ್ತಿದ್ದರೂ ಆ ಸತ್ಯವನ್ನು ಮರೆಮಾಚುವ ಪ್ರಯತ್ನ ಮಾಡಿದ್ದಾರೆ. 'ನ್ಯಾಷನಲ್ ಸ್ಟ್ಯಾಂಡರ್ಡ್‌' ಪತ್ರಿಕೆ ಮಾಡಿರುವ ತನಿಖೆಯಿಂದ ಈ ವಿಚಾರ ಬಹಿರಂಗವಾಗಿದೆ.

ಸುಪ್ರೀಂ ಆದೇಶ ಗಾಳಿಗೆ: ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮ ಆಸ್ತಿ ವಿವರ ಹಾಗೂ ಬಾಧ್ಯತೆಗಳನ್ನು ಘೋಷಿಸಬೇಕು ಎಂದು 2003ರ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಅಭ್ಯರ್ಥಿಯ ಆರ್ಥಿಕ ಸ್ಥಿತಿಗತಿಯ ಮೂಲಕ ಜನರು ಆತನನ್ನು ತಿಳಿದುಕೊಳ್ಳಲು ಸಾಧ್ಯ. ಹಾಗಾಗಿ ಆಸ್ತಿ ವಿವರ ಘೋಷಣೆ ಪ್ರತಿಯೊಬ್ಬ ಅಭ್ಯರ್ಥಿಯ ಹಕ್ಕು ಎಂದಿತ್ತು. ಈ ಐತಿಹಾಸಿಕ ತೀರ್ಪು ನೀಡಿ ದಶಕಗಳು ಕಳೆದರೂ ಅದು ಕಡತಗಳಲ್ಲೇ ಉಳಿದಿದೆಯೇ ವಿನಾ ಯಾವ ಅಭ್ಯರ್ಥಿಯೂ ಅದನ್ನು ಪಾಲಿಸುತ್ತಿಲ್ಲ. 6 ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಸಿಪಿಐ, ಸಿಪಿಎಂ, ಬಿಎಸ್ಪಿ ಹಾಗೂ ಎನ್‌ಸಿಪಿ, ಸಂಸತ್‌ನ ಎರಡೂ ಸದನಗಳಲ್ಲಿರುವ ಈ ಪಕ್ಷಗಳ ನಾಯಕರು, ಪಕ್ಷಗಳ ಮುಖ್ಯಸ್ಥರು, ಈ ಬಾರಿ ಅಸೆಂಬ್ಲಿ ಚುನಾವಣೆ ಎದುರಿಸಿದ 5 ರಾಜ್ಯಗಳ ಮುಖ್ಯಮಂತ್ರಿಗಳು... ಇವರಲ್ಲಿ ಬಹುತೇಕ ಎಲ್ಲರೂ ತಮ್ಮ ಆಸ್ತಿ ವಿವರ ಘೋಷಣೆ ವೇಳೆ ಸುಳ್ಳು ಮಾಹಿತಿ ನೀಡಿದ್ದಾರೆ. ಕೆಲವರು ತಮ್ಮ ಆಸ್ತಿಯ ನೈಜ ಮೊತ್ತವನ್ನು ಬಹಿರಂಗಪಡಿಸಿಲ್ಲ, ಮತ್ತೆ ಕೆಲವರು ಮಾರುಕಟ್ಟೆ ದರಕ್ಕಿಂತ ಕಡಿಮೆ ಮೌಲ್ಯವನ್ನು ತೋರಿಸಿದ್ದಾರೆ, ಇನ್ನೂ ಕೆಲವರು ಒಂದು ಚುನಾವಣೆ ಕಳೆದು ಮತ್ತೊಂದು ಚುನಾವಣೆ ಬಂದರೂ ಆಸ್ತಿಯ ಮೌಲ್ಯದಲ್ಲಿ ಬದಲಾವಣೆಯೇ ಮಾಡಿಲ್ಲ.

ಸುಷ್ಮಾ ಸ್ವರಾಜ್: ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಹಾಗೂ ಅವರ ಪತಿ ಮಾಜಿ ಗವರ್ನರ್ ಸ್ವರಾಜ್ ಕೌಶಲ್ ಜಂತರ್ ಮಂತರ್ ಪ್ರದೇಶದ ಧವನ್‌ದೀಪ್ ಕಟ್ಟಡದಲ್ಲಿ ಪ್ರತ್ಯೇಕ ಫ್ಲ್ಯಾಟ್‌ಗಳನ್ನು ಹೊಂದಿದ್ದಾರೆ. 2,139 ಚ.ಅಡಿಯ ಫ್ಲ್ಯಾಟ್‌ಗೆ 1.35 ಕೋಟಿ ಹಾಗೂ 2,254 ಚ. ಅಡಿಯ ಫ್ಲ್ಯಾಟ್‌ಗೆ 1.13 ಕೋಟಿ ಎಂದು ಸುಷ್ಮಾ ನಮೂದಿಸಿದ್ದಾರೆ. ಇದರ ಮಾರುಕಟ್ಟೆ ದರವನ್ನು ಅವರು ಘೋಷಿಸಿಲ್ಲ. ಇದರ ಜತೆಗೆ ತಾವು ಮುಂಬೈನಲ್ಲಿ ಹೊಂದಿರುವ ಅಪಾರ್ಟ್‌ಮೆಂಟ್‌ವೊಂದರ ಬಗ್ಗೆಯೂ ಪ್ರಸ್ತಾಪಿಸಿದ್ದು ಅದರ ಮೌಲ್ಯ 1.39 ಕೋಟಿ ಎಂದಿದ್ದಾರೆ. ಆದರೆ ಆ ಅಪಾರ್ಟ್‌ಮೆಂಟ್‌ನ ವಿಸ್ತಾರವೆಷ್ಟು ಎಂದು ಹೇಳಿಲ್ಲ.

ಮಾಯಾವತಿ: ಬಿಎಸ್ಪಿ ಅಧಿನಾಯಕಿ ಮಾಯಾವತಿ ಅವರು 2012ರಲ್ಲಿ ತಮ್ಮ ಆಸ್ತಿಯನ್ನು ಘೋಷಿಸಿದ್ದರು. ನವದೆಹಲಿಯ ಪ್ರಮುಖ ಶಾಪಿಂಗ್ ಪ್ರದೇಶವೆಂದೇ ಪರಿಗಣಿಸಲಾದ ಕನ್ನೌಟ್‌ಪ್ಲೇಸ್‌ನ ಬಿ ಬ್ಲಾಕ್‌ನಲ್ಲಿ 3,628 ಚದರ ಅಡಿ ಹಾಗೂ 4,535 ಚದರ ಅಡಿಯ ಎರಡು ಮಳಿಗೆಗಳನ್ನು ಹೊಂದಿದ್ದು, ಅವುಗಳ ಮೌಲ್ಯವು ಕ್ರಮವಾಗಿ 9.39 ಕೋಟಿ ಹಾಗೂ 9.45 ಕೋಟಿ ಎಂದಿದ್ದರು. ಆದರೆ ರಿಯಲ್ ಎಸ್ಟೇಟ್ ತಜ್ಞರು ಹೇಳುವ ಪ್ರಕಾರ ಈ ಮಳಿಗೆಗಳ ಮೌಲ್ಯ ಬರೋಬ್ಬರಿ 12 ಹಾಗೂ 15 ಕೋಟಿಯಾಗುತ್ತದೆ. ಮಾಯಾವತಿ ಅವರು ಸರ್ದಾರ್ ಪಟೇಲ್ ಮಾರ್ಗದಲ್ಲಿರುವ 42,907.87 ಚದರ ಅಡಿಯ ಮನೆ ಬಗ್ಗೆಯೂ ಘೋಷಿಸಿದ್ದು, ಅದರ ಬೆಲೆ 61.86 ಕೋಟಿ ಎಂದು ನಮೂದಿಸಿದ್ದರು. ಈ ಪ್ರದೇಶದ ಪ್ರಸ್ತುತ ದರವನ್ನು ಗಮನಿಸಿದರೆ, ಒಂದು ಚದರ ಅಡಿಗೆ 1.92 ಲಕ್ಷದಿಂದ 3.88 ಲಕ್ಷವಿದೆ. ಒಂದು ವರ್ಷದ ಹಿಂದೆ ಚದರ ಅಡಿಗೆ 1 ಲಕ್ಷದಂತೆ ಲೆಕ್ಕ ಹಾಕಿದರೂ ಮಾಯಾವತಿಯವರ ಈ ಬಂಗಲೆಯ ಮೌಲ್ಯ ಬರೋಬ್ಬರಿ 429 ಕೋಟಿಯಾಗುತ್ತದೆ.

ಚುನಾವಣಾ ಆಯೋಗಕ್ಕೆ ಬೇಕಾದ್ದೇನು?

  • ಕೃಷಿ/ಕೃಷಿಯೇತರ ಭೂಮಿ/ ವಾಣಿಜ್ಯ ಕಟ್ಟಡ/ ವಸತಿ ಸಂಕೀರ್ಣ
  • ಒಟ್ಟಾರೆ ಪ್ರದೇಶ ಎಕರೆಗಳಲ್ಲಿ ಅಥವಾ ಚದರ ಅಡಿಗಳಲ್ಲಿ
  • ಪಿತ್ರಾರ್ಜಿತ ಆಸ್ತಿಯೇ ಅಥವಾ ಸ್ವಯಾರ್ಜಿತವೇ?
  • ಸ್ವಯಾರ್ಜಿತವಾಗಿದ್ದರೆ ಖರೀದಿ ಮಾಡಿದ ದಿನಾಂಕ
  • ಖರೀದಿಸಿದ ಸಮಯದಲ್ಲಿ ಆ ಭೂಮಿಯ/ಆಸ್ತಿಯ ಮೌಲ್ಯ
  • ನಿರ್ಮಾಣ, ಅಭಿವೃದ್ಧಿ ಮತ್ತಿತರೆ ವಿಧದಲ್ಲಿ ನಡೆಸಿದ ಹೂಡಿಕೆ ವಿವರ
  • ಸದ್ಯದ ಅಂದಾಜು ಮಾರುಕಟ್ಟೆ ಮೌಲ್ಯ
ನಮ್ಮ ನಾಯಕರ ಆಸ್ತಿಯೆಷ್ಟು?
ಸೋನಿಯಾ ಗಾಂಧಿ
ರಾಜನಾಥ್ ಸಿಂಗ್
ಮೀರಾ ಕುಮಾರ್
ಸುಶೀಲ್ ಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.