ಪ್ರಧಾನ ಸುದ್ದಿ

ಅಡಕೆ ನಿಷೇಧಕ್ಕೆ ಸುಪ್ರೀಂಗೆ ಕೇಂದ್ರ ಅಪೀಲು!

Published On :

ಮಂಗಳೂರು: ಶೀತವಾಗಿದೆ ಎಂದು ಮೂಗನ್ನೇ ಕುಯ್ಯಲು ಹೊರಟರೆ ಹೇಗೆ?
ಅಡಕೆ ಬೆಳೆಗಾರರ ವಿಚಾರದಲ್ಲಿ ಕೇಂದ್ರ ಸರ್ಕಾರ ಇದೇ ಕೆಲಸ ಮಾಡಲು ಹೊರಟಿದೆ. ಅಡಕೆ ಜಗಿಯುವುದು ಆರೋಗ್ಯಕ್ಕೆ ಅಪಾಯಕಾರಿ. ಹೀಗಾಗಿ ಗುಟ್ಕಾ ನಿಷೇಧಿಸಿದ ಮಾದರಿಯಲ್ಲೇ ಅಡಕೆ ನಿಷೇಧಿಸುವಂತೆ ಸ್ವತಃ ಕೇಂದ್ರವೇ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದೆ. ಅಡಕೆ ನಿಷೇಧಿಸಿ ಸುಪ್ರೀಂ ಕೋರ್ಟ್ ಆದೇಶವೇನಾದರೂ ಹೊರಡಿಸಿದರೆ, ಇಡೀ ದೇಶದಲ್ಲಿ ಅಡಕೆ ಬೆಳೆ ನಾಶ ಮಾಡಬೇಕಾದ ಪರಿಸ್ಥಿತಿ ತಲೆದೋರಲಿದೆ.
ಆರೋಗ್ಯಕ್ಕೆ ಹಾನಿಕರ ಪದಾರ್ಥಗಳ ನಿಷೇಧ ಕುರಿತ ಪ್ರಕರಣ 2007ರಿಂದಲೇ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ. ಅದರ ಅಂತಿಮ ತೀರ್ಪು ಇನ್ನೂ ಹೊರಬಂದಿಲ್ಲ. ಆರೋಗ್ಯಕ್ಕೆ ಹಾನಿಕರವಾದ ಗುಟ್ಕಾ ನಿಷೇಧಿಸುವಂತೆ ಸುಪ್ರೀಂ ಎಲ್ಲ ರಾಜ್ಯಗಳಿಗೆ ಸೂಚಿಸಿತ್ತು. ಅದರಂತೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಗುಟ್ಕಾ ನಿಷೇಧಿಸಿವೆ. ಹಾನಿಕಾರಕ ಪದಾರ್ಥ ನಿಷೇಧ ಪರಿಶೀಲನೆ ಮುಂದುವರಿಸಿದ ಕೇಂದ್ರ ಈಗ ತಿನ್ನಲು, ಜಗಿಯಲು ಬಳಕೆ ಮಾಡುವ ಅಡಕೆಯತ್ತ ವಕ್ರದೃಷ್ಟಿ ಹರಿಸಿದೆ. ಇದರ ಪರಿಣಾಮ ಅಡಕೆಯನ್ನೇ ನಿಷೇಧಿಸುವಂತೆ ಕೋರಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸುಪ್ರೀಂ ಕೋರ್ಟ್‌ಗೆ ನ.25ರಂದು ಲಿಖಿತ ಮೇಲ್ಮನವಿ ಸಲ್ಲಿಸಿದ್ದು, ಅದರ ಪ್ರತಿ 'ಕನ್ನಡಪ್ರಭ'ಕ್ಕೆ ಲಭ್ಯವಾಗಿದೆ.

ಯಾವ ದೇಶದಲ್ಲಿ ಎಷ್ಟು ಅಡಕೆ ಬೆಳೆ?
ಭಾರತವಲ್ಲದೆ ಇತರೆ 11 ದೇಶಗಳಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಒಟ್ಟು 8.67 ಲಕ್ಷ ಟನ್ ಅಡಕೆ ಉತ್ಪಾದನೆಯಾಗುತ್ತಿದ್ದು, ಮೊದಲ ಸ್ಥಾನ ಭಾರತಕ್ಕೆ. ದ್ವಿತೀಯ ಸ್ಥಾನ ಇಂಡೋನೇಷ್ಯಾದಲ್ಲಿ 1.25 ಲಕ್ಷ ಹೆಕ್ಟೇರ್, ತೃತೀಯ ಸ್ಥಾನ ಬಾಂಗ್ಲಾದಲ್ಲಿ 79 ಸಾವಿರ ಹೆಕ್ಟೇರ್ ಹಾಗೂ ಚೀನಾದಲ್ಲಿ 59 ಸಾವಿರ ಹೆಕ್ಟೇರ್‌ನಲ್ಲಿ ಅಡಕೆ ಬೆಳೆ ಇದೆ.

ಅಡಕೆ ತಿಂದರೂ ಹಾನಿಕರ!
ತಾಂಬೂಲವಾಗಿ ಬಳಸುವ ಅಡಕೆಯನ್ನು ಪಾನ್‌ಮಸಾಲಕ್ಕೂ ಬಳಸುತ್ತಾರೆ. ಸಮಾರಂಭಗಳಲ್ಲಿ ಅಡಕೆ ಸುಪಾರಿ ಕೂಡ ಉಪಯೋಗಿಸುತ್ತಾರೆ. ಅಡಕೆಗೆ ಹೊಗೆಸೊಪ್ಪು, ಮಿಶ್ರ ಮಾಡಿದರೆ ಮಾತ್ರ ಆರೋಗ್ಯಕ್ಕೆ ಹಾನಿಕರ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಕೇಂದ್ರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಜಸ್ಟಿಸ್ ಜಿ.ಎಸ್.ಸಿಂಘ್ವಿ ಇದನ್ನು ಸುಪ್ರೀಂಗೆ ಸಲ್ಲಿಸಿದ್ದಾರೆ. ಹಿರಿಯ ವಕೀಲ ಗೋಪಾಲ ಸುಬ್ರಹ್ಮಣ್ಯಂ ಇದಕ್ಕೆ ಪೂರಕವಾಗಿ ಸುಮಾರು ಎರಡೂವರೆ ಸಾವಿರ ಪುಟಕ್ಕೂ ಮಿಕ್ಕಿದ ದಾಖಲೆ ವಿವರಗಳನ್ನು ಕೋರ್ಟ್‌ಗೆ ಸಲ್ಲಿಸಿದ್ದಾರೆ. ಸರ್ಕಾರ ಪರ 50 ಮಂದಿ ವಕೀಲರು ವಾದ ಮಂಡಿಸಲಿದ್ದಾರೆ. ಆಹಾರ ಪದಾರ್ಥಗಳ ನಿಷೇಧ ವಿಚಾರದಲ್ಲಿ ಅಷ್ಟಮ ಕೇರ್ ಸೊಸೈಟಿ ಸುಪ್ರೀಂನಲ್ಲಿ ಪ್ರತಿವಾದಿ.

ಅಡಕೆ ನಿಷೇಧವಾದರೆ..!
ಒಂದು ವೇಳೆ ಸುಪ್ರೀಂ ಕೋರ್ಟ್ ಅಡಕೆ ಆರೋಗ್ಯಕ್ಕೆ ಹಾನಿ ಎಂಬುದನ್ನು ವಾದ ಪ್ರತಿವಾದ ವೇಳೆ ಅಂತಿಮವಾಗಿ ಒಪ್ಪಿಕೊಂಡರೆ ಈ ಬೆಳೆಯನ್ನೇ ಸಂಪೂರ್ಣ ನಾಶ ಮಾಡಬೇಕಾದ ಅನಿವಾರ್ಯತೆ ಬರಲಿದೆ. ಪ್ರಸ್ತುತ ದೇಶದಲ್ಲಿ 4.110 ಲಕ್ಷ ಹೆಕ್ಟೇರ್‌ನಲ್ಲಿ ಅಡಕೆ ಬೆಳೆಯುತ್ತಿದ್ದು, ಕರ್ನಾಟಕದಲ್ಲಿ 2.15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆ ಇದ್ದು, ದೇಶದಲ್ಲಿ ಇದು ಪ್ರಥಮ ಸ್ಥಾನದಲ್ಲಿದೆ. ದ್ವಿತೀಯ ಸ್ಥಾನ ಕೇರಳದಲ್ಲಿ 97,170 ಹೆಕ್ಟೇರ್, ಅಸ್ಸಾಂನಲ್ಲಿ 69,970 ಹೆಕ್ಟೇರ್. ದೇಶದ ಒಟ್ಟು ಅಡಕೆ ಉತ್ಪಾದನೆ 4.78 ಲಕ್ಷ ಟನ್ ಆಗಿದ್ದು, ಇದನ್ನೇ ನಂಬಿಕೊಂಡು ಜೀವನ ನಡೆಸುವ 5 ಲಕ್ಷ ಕುಟುಂಬಗಳಿವೆ. ಸರಾಸರಿ ರು. 20 ಸಾವಿರ ಕೋಟಿ ವಹಿವಾಟು ನಡೆಯುತ್ತಿದ್ದು, ಅಡಕೆಗೆ ಪೂರಕವಾಗಿ ರು. 40 ಸಾವಿರ ಕೋಟಿ ವ್ಯವಹಾರ ನಡೆಯುತ್ತಿದೆ ಇದೆಲ್ಲವೂ ಬಂದ್ ಆಗಲಿದೆ. ಅಡಕೆ ನಿಷೇಧಿಸಿದರೆ ಪರ್ಯಾಯ ಉತ್ಪನ್ನ ಬೆಳೆಸಲು ಕನಿಷ್ಠ ಐದಾರು ವರ್ಷವಾದರೂ ಬೇಕು. ಅಲ್ಲಿವರೆಗೆ ಬೆಳೆಗಾರನ ಜೀವನಕ್ಕೆ ದಾರಿ ಏನು ಎಂಬ ಬಗ್ಗೆ ಯೋಚಿಸಬೇಕಾಗುತ್ತದೆ.

ಯಾವ ದೇಶದಲ್ಲಿ ಎಷ್ಟು ಅಡಕೆ ಬೆಳೆ?
ಭಾರತವಲ್ಲದೆ ಇತರೆ 11 ದೇಶಗಳಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಒಟ್ಟು 8.67 ಲಕ್ಷ ಟನ್ ಅಡಕೆ ಉತ್ಪಾದನೆಯಾಗುತ್ತಿದ್ದು, ಮೊದಲ ಸ್ಥಾನ ಭಾರತಕ್ಕೆ. ದ್ವಿತೀಯ ಸ್ಥಾನ ಇಂಡೋನೇಷ್ಯಾದಲ್ಲಿ 1.25 ಲಕ್ಷ ಹೆಕ್ಟೇರ್, ತೃತೀಯ ಸ್ಥಾನ ಬಾಂಗ್ಲಾದಲ್ಲಿ 79 ಸಾವಿರ ಹೆಕ್ಟೇರ್ ಹಾಗೂ ಚೀನಾದಲ್ಲಿ 59 ಸಾವಿರ ಹೆಕ್ಟೇರ್‌ನಲ್ಲಿ ಅಡಕೆ ಬೆಳೆ ಇದೆ.

'ತಿನ್ನುವ ಅಡಕೆ ನಿಷೇಧಿಸುವಂತೆ ಕೇಂದ್ರ ಸುಪ್ರೀಂಗೆ ಮನವಿ ಸಲ್ಲಿಸಿದೆ. ಇದು ಜಾರಿಯಾದರೆ ಗಾಂಜಾ ನಿಷೇಧ ಜಾರಿಗೊಂಡಂತೆ ಅಡಕೆ ತೋಟವನ್ನು ನಿವಾರಿಸಬೇಕಾಗುತ್ತದೆ. ಇದರ ವಿರುದ್ಧ ಕರ್ನಾಟಕ ಕಿಸಾನ್ ಕಾಂಗ್ರೆಸ್ ಖೇತ್ ಸುಪ್ರೀಂಗೆ ಸೂಕ್ತ ದಾಖಲೆ ಸಲ್ಲಿಸಿ ಬೆಳೆಗಾರರ ಹಿತ ಕಾಯಲಿದೆ.'
-ಸಚಿನ್ ಮೀಗಾ, ಉಪಾಧ್ಯಕ್ಷ ರಾಜ್ಯ ಕಿಸಾನ್ ಕಾಂಗ್ರೆಸ್ ಖೇತ್

'ಅಡಕೆ ನಿಷೇಧಿಸುವಂತೆ ಸುಪ್ರೀಂಗೆ ಕೇಂದ್ರ ಅಪೀಲು ಸಲ್ಲಿಸಿದ್ದರೂ ಬೆಳೆಗಾರರು ತಕ್ಷಣ ಗಾಬರಿಪಡುವ ಅಗತ್ಯವಿಲ್ಲ. ತಂಬಾಕು ಪೂರ್ತಿ ನಿಷೇಧಕ್ಕೆ 2020 ವರೆಗೆ ಅವಕಾಶ ಕೋರಲಾಗಿದೆ. ಹಾಗೆಯೇ ಅಡಕೆ ಪರ ಸಮರ್ಥ ವಾದ ಮಂಡಿಸಿದರೆ ಬೆಳೆಗಾರರಿಗೆ ಏನೂ ತೊಂದರೆಯಾಗದು.'
- ವಿಘ್ನೇಶ್ವರ ವರ್ಮುಡಿ,
ಅಡಕೆ ಮಾರುಕಟ್ಟೆ ತಜ್ಞ.

- ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.