ಅನ್ನಭಾಗ್ಯಕ್ಕೆ ರೈತರಿಂದ ಬತ್ತ, ಗಿರಣಿಗಳಿಂದ ಅಕ್ಕಿ ಖರೀದಿಗೆ ಸಂಪುಟ ನಿರ್ಧಾರ

ಕನ್ನಡಪ್ರಭ ವಾರ್ತೆ, ಬೆಂಗಳೂರು, ಡಿ.12-
ಅನ್ನಭಾಗ್ಯ ಯೋಜನೆಗೆ ರಾಜ್ಯದ ರೈತರಿಂದ ಬತ್ತ ಮತ್ತು ಗಿರಣಿಗಳಿಂದ ಅಕ್ಕಿ ಖರೀದಿ ಮಾಡಲು ನಿರ್ಧರಿಸಿರುವ ಸರ್ಕಾರ, ಇದಕ್ಕಾಗಿ ಬೆಂಬಲ ಬೆಲೆಯನ್ನೂ ನಿಗದಿ ಮಾಡಿದೆ.
ಅನ್ನಭಾಗ್ಯ ಯೋಜನೆಯಲ್ಲಿ ಪಡಿತರ ಚೀಟಿ ಮೂಲಕ ಅಕ್ಕಿ ವಿತರಿಸಲು ವರ್ಷಕ್ಕೆ ಕನಿಷ್ಠ 5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಅಗತ್ಯವಿದೆ. ಹೀಗಾಗಿ ರೈತರಿಂದ ನೇರವಾಗಿ ಬತ್ತವನ್ನು ಪ್ರತಿ ಕ್ವಿಂಟಲ್ಗೆ 1600 ದರದಲ್ಲಿ ಖರೀದಿಸಲಾಗುತ್ತದೆ. ಮಿಲ್ಗಳಿಂದ ಅಕ್ಕಿಯನ್ನು ಕ್ವಿಂಟಲ್ಗೆ 2400ರಂತೆ ಖರೀದಿಸಲು ಸಚಿವ ಸಂಪುಟ ನಿರ್ಧರಿಸಿದೆ.
ರಾಜ್ಯದ ಕೆಲವು ಭಾಗದಲ್ಲಿ ಸೋನಾ ಮಸೂರಿ ಹಾಗೂ ಕಾವೇರಿ ಮಸೂರಿ ಎಂಬ ತಳಿಯ ಬತ್ತ ಬೆಳೆಯಲಾಗುತ್ತಿದ್ದು, ಆ ರೈತರು ಈ ಬೆಲೆಗೆ ಬತ್ತ ಮಾರಾಟ ಮಾಡುವುದಿಲ್ಲ. ಆ ಮಿಲ್ನವರೂ ಅಕ್ಕಿ ಮಾರುವುದಿಲ್ಲ.
ಆದ್ದರಿಂದ, ಸಾಮಾನ್ಯ ಬತ್ತ ಬೆಳೆಯುವ ರೈತರಿಂದ ಖರೀದಿ ಮಾಡಲಾಗುತ್ತದೆ. ರೈತರು ಅವರಿಗಿಷ್ಟವಿದ್ದರೆ ಮಾರಾಟ ಮಾಡಬಹುದು. ಆದರೆ ಮಿಲ್ನವರು ಮಾತ್ರ ಕಡ್ಡಾಯವಾಗಿ ಸರ್ಕಾರಕ್ಕೆ ಅಕ್ಕಿ ಮಾರಾಟ ಮಾಡಬೇಕು. ಪ್ರತಿ ಮಿಲ್ನ ಸಾಮರ್ಥ್ಯದ ಮೇಲೆ ಪ್ರಮಾಣ ನಿಗದಿ ಮಾಡಲಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಟಿ.ಬಿ. ಜಯಚಂದ್ರ ಅವರು ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.
1 ಲಕ್ಷ ಟನ್ ಖರೀದಿ: 2013- 14ನೇ ಸಾಲಿನಲ್ಲಿ ಜ್ಯೋತಿ ಬತ್ತವನ್ನು ಕ್ವಿಂಟಲ್ಗೆ 1600ರ ದರದಲ್ಲಿ ಸುಮಾರು 1 ಲಕ್ಷ ಟನ್ ಖರೀದಿಸಲಾಗುತ್ತದೆ. ಈ ಬತ್ತದಲ್ಲಿ ಕುಸುಬಲಕ್ಕಿ ತಯಾರಿಸಿ, ಕರಾವಳಿ ಭಾಗದ ಜನತೆಗೆ ಪಡಿತರ ಮೂಲಕ ವಿತರಿಸಲಾಗುತ್ತದೆ.
ಅನ್ನಭಾಗ್ಯ ಯೋಜನೆಯನ್ನು ಮೋಸವಿಲ್ಲದೆ ಎಲ್ಲರಿಗೂ ತಲುಪಿಸುವ ಉದ್ದೇಶದಿಂದ ಪಡಿತರ ಅಂಗಡಿಗಳು ತಿಂಗಳ 1ನೇ ದಿನಾಂಕದಿಂದ 10ರವರೆಗೆ ಭಾನುವಾರವೂ ಸೇರಿದಂತೆ ಕಡ್ಡಾಯವಾಗಿ ಬೆಳಗ್ಗೆ 8ರಿಂದ 12 ಹಾಗೂ ಸಂಜೆ 4ರಿಂದ 8ರವರೆಗೆ ತೆರೆದಿರಬೇಕು. ಪಡಿತರ ಧಾನ್ಯವನ್ನು ಹಿಂದಿನ ತಿಂಗಳ 15ರಿಂದ ವಿತರಿಸಲು ಪ್ರಾರಂಭಿಸಲಾಗುತ್ತದೆ. ಈ ಯೋಜನೆಗೆ 'ಪಡಿತರ ಖಾತ್ರಿ' ಎಂದು ಹೆಸರಿಲಾಗುತ್ತದೆ. ಇದು ಜನವರಿ 1ರಿಂದಲೇ ಜಾರಿಗೆ ಬರಲಿದೆ.
ಅನುದಾನಿತ ಶಾಲೆಗಳಲ್ಲಿ ಕ್ಷೀರಭಾಗ್ಯ ಯೋಜನೆಗಾಗಿ 314 ಕೋಟಿ ಹಣ ವೆಚ್ಚ ಮಾಡಲು ಶಿಕ್ಷಣ ಇಲಾಖೆಗೆ ಅನುಮತಿ ನೀಡಲಾಗಿದೆ. 9 ಮತ್ತು 10ನೇ ತರಗತಿ ಮಕ್ಕಳಿಗೆ ಮಧ್ಯಾಹ್ನದ ಊಟ ಹಾಗೂ ಆರಕ್ಷಕ, ಅಗ್ನಿಶಾಮಕದಳ, ಕಾರಾಗೃಹ ಇಲಾಖೆಯ ಸಿಬ್ಬಂದಿಗೆ ಪಡಿತರ ವಿತರಿಸುವ ಪ್ರತಿ ತಿಂಗಳು 19.66 ಕೋಟಿ ಹಾಗೂ ವರ್ಷಕ್ಕೆ 235.92 ಕೋಟಿ ವೆಚ್ಚ ಮಾಡಲು ಸಮ್ಮತಿಸಲಾಗಿದೆ.
ಏಪ್ರಿಲ್, ಮೇನಲ್ಲಿ ಜಾತಿವಾರು ಸಮೀಕ್ಷೆ : ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದಲ್ಲಿ ಜಾತಿವಾರು ಜನಗಣತಿ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು, ಒಂದು ತಿಂಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಈ ಪ್ರಕ್ರಿಯೆ ನಡೆಸಲು ಉದ್ದೇಶಿಸಲಾಗಿದೆ. ಲೋಕಸಭೆ ಚುನಾವಣೆಗೆ ದಿನಾಂಕ ಪ್ರಕಟವಾದರೆ, ಅಕ್ಟೋಬರ್ನಲ್ಲಿ ಈ ಕಾರ್ಯ ನೆರವೇರಿಸಲಾಗುತ್ತದೆ. ಇದಕ್ಕಾಗಿ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತದೆ. ಜತೆಗೆ, ಕಂದಾಯ, ಪೌರಾಡಳಿತ, ಅನುದಾನಿತ ಶಾಲೆಗಳ ಬೋಧಕ- ಬೋಧಕೇತರ ಸಿಬ್ಬಂದಿಯನ್ನೂ ಬಳಸಿಕೊಳ್ಳಲಾಗುತ್ತದೆ.
ಇದಕ್ಕಾಗಿ ಉದ್ದೇಶಿತ 5 ಕೋಟಿಗಿಂತ ಹೆಚ್ಚಿನ ಹಣ ವೆಚ್ಚವಾಗಲಿದೆ. ಈ ಸಾಲಿನಲ್ಲಿ 14.71 ಕೋಟಿ, ಮುಂದಿನ ವರ್ಷ 97.30 ಕೋಟಿ ವೆಚ್ಚವಾಗಲಿದೆ. ಇದಕ್ಕೆ ಸಚಿವ ಸಂಪುಟ ಅನುಮತಿ ನೀಡಿದೆ. ಹಿಂದುಳಿದ ವರ್ಗಗಳ ಆಯೋಗಕ್ಕೆ ಅಧ್ಯಕ್ಷರ ನೇಮಕವೂ ಶೀಘ್ರವಾಗಿ ನಡೆಯಲಿದೆ ಎಂದು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.
ಸಿ ಪ್ರವರ್ಗ ಗಣಿ, ಸುಪ್ರೀಂಕೋರ್ಟ್ ಪ್ರಮಾಣ
ರಾಜ್ಯದಲ್ಲಿ ಸಿ ಪ್ರವರ್ಗ ಗಣಿಗಾರಿಕೆಗೆ ಅನುಮತಿ ನೀಡಲು ಸುಪ್ರೀಂ ಕೋರ್ಟ್ ವಿಧಿಸಿರುವ ಎಲ್ಲ ಷರತ್ತುಗಳನ್ನೂ ಪಾಲಿಸಲು ಸರ್ಕಾರ ಸಮ್ಮತಿಸಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಸಲು ನಿರ್ಧರಿಸಿದೆ. ಬಳಿಕ ಸುಪ್ರೀಂ ಕೋರ್ಟ್ ನೀಡುವ ಆದೇಶದಂತೆ ಗಣಿಗಾರಿಕೆ ಹಂಚಿಕೆ ಪ್ರಕ್ರಿಯೆ ನಡೆಯಲಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಸಿ ಪ್ರವರ್ಗದ ಗಣಿಗಾರಿಕೆ ಹಂಚಿಕೆಯನ್ನು ಪಾರದರ್ಶಕವಾಗಿ, ಅತ್ಯಧಿಕ ಬಿಡ್ಡರ್, ಅತಿಹೆಚ್ಚು ಬಿಡ್ ಮಾಡುವವರಿಗೆ ಮಾರುಕಟ್ಟೆ ಮೌಲ್ಯದಲ್ಲಿ ನೀಡಲು ಬಿಡ್ಡಿಂಗ್ ಪ್ರಕ್ರಿಯೆನಡೆಸಲಾಗುತ್ತದೆ. ಅಲ್ಲದೆ, ಈ ಗಣಿಗಾರಿಕೆಯ ಉತ್ಪನ್ನವನ್ನು ರಫ್ತು ಮಾಡದೆ ಸ್ಥಳೀಯವಾಗಿಯೇ ಉಪಯೋಗಿಸುವ ಷರತ್ತು ವಿಧಿಸಲಾಗುತ್ತದೆ. ಇದೆಲ್ಲನ್ನು ಒಳಗೊಂದ ವಿವರವಾದ ಪ್ರಮಾಣಪತ್ರ ಸುಪ್ರೀಂಕೋರ್ಟ್ಗೆ ರಾಜ್ಯ ಸರ್ಕಾರ ಸಲ್ಲಿಸುತ್ತದೆ.
ಬೆಂಗಳೂರಿಗೆ 10 ಟಿಎಂಸಿ ಹೆಚ್ಚು ಕಾವೇರಿ ನೀರು
ರಾಜಧಾನಿ ಬೆಂಗಳೂರು ದಿನದಿಂದ ದಿನಕ್ಕೆ ವಿಸ್ತರಣೆಯಾಗುವ ಜತೆಗೆ ಜನಸಂಖ್ಯೆ ಹೆಚ್ಚಾಗುತ್ತಿದೆ. ಇದರ ಅನುಗುಣವಾಗಿ ಕಾವೇರಿ ನದಿಯಿಂದ 10 ಟಿಎಂಸಿ ಹೆಚ್ಚು ನೀರು ಬಳಸುವ ಜಲಮಂಡಳಿಯ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಸಭೆ ಸಮ್ಮತಿಸಿದೆ. ಕಾವೇರಿ ನೀರು ಹಂಚಿಕೆ ಹಾಗೂ ಬಳಕೆ ವಿಚಾರವಾಗಿ ಸುಪ್ರೀಂ ಕೋರ್ಟ್ನಲ್ಲಿ ಜನವರಿ 15ರಂದು ವಿಚಾರಣೆ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಬೆಂಗಳೂರಿಗೆ ಕುಡಿಯುವ ನೀರಿಗಾಗಿ ಹೆಚ್ಚಿನ ಪ್ರಮಾಣದ ಕಾವೇರಿ ನೀರು ಹಂಚಿಕೆ ಮಾಡಬೇಕೆಂದು ಮನವಿ ಮಾಡಿಕೊಳ್ಳಲಾಗುತ್ತದೆ. ಇದಕ್ಕೆ ಸಚಿವ ಸಂಪುಟ ಒಪ್ಪಿದೆ. ಬೆಂಗಳೂರಿಗಾಗಿ ಇದೀಗ 17.64 ಟಿಎಂಸಿ ಕಾವೇರಿ ನೀರು ಬಳಸಿಕೊಳ್ಳಲಾಗುತ್ತಿದೆ. ನಗರ ಬೆಳೆಯುತ್ತಿರುವುದರಿಂದ ಹೆಚ್ಚಿನ ನೀರು ಬೇಕಾಗಿದೆ. ಈಗಿರುವ ನೀರಿನ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ 10 ಟಿಎಂಸಿ ನೀರು ಬೇಕಾಗುತ್ತದೆ. ಕಾವೇರಿ 5ನೇ ಹಂತದ ಯೋಜನೆಯಲ್ಲಿ ಈ ನೀರು ಬಳಸಿಕೊಳ್ಳುವ ಬಗ್ಗೆ ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಲಾಗಿತ್ತದೆ ಟಿ.ಬಿ. ಜಯಚಂದ್ರ ವಿವರಿಸಿದರು.
ಪ್ರಮುಖ ತೀರ್ಮಾನಗಳು
- ಹಾವೇರಿ ಗೋಲಿಬಾರ್, ಜಗನ್ನಾಥ ಶೆಟ್ಟಿ ಆಯೋಗ ವರದಿ ಪರಿಶೀಲನೆಗೆ ಸಚಿವ ಸಂಪುಟ ಉಪ ಸಮಿತಿ
- ನರ್ಮ್ ಯೋಜನೆಯಡಿ 2104 ಬಸ್ ಖರೀದಿಗೆ ರಾಜ್ಯ ಸರ್ಕಾರದಿಂದ 214 ಕೋಟಿ ವೆಚ್ಚ.
- ನರ್ಮ್ ಯೋಜನೆಯ ಹಣ ವಿನಿಯೋಗಕ್ಕೆ ನಗರ ರಸ್ತೆ ಸಾರಿಗೆ ನಿಗಮ ಸ್ಥಾಪನೆ.
- ಕೊಡಗು, ಚಾಮರಾಜನಗರ, ಕೊಪ್ಪಳ, ಗದಗ, ಗುಲ್ಬರ್ಗದಲ್ಲಿ ವೈದ್ಯ ಕಾಲೇಜು ಕಟ್ಟಡ ನಿರ್ಮಾಣ
- ತಾಳೆಎಣ್ಣೆಗೆ ಪ್ರತಿ ಟನ್ಗೆ 8500 ಬೆಂಬಲ ಬೆಲೆ ನಿಗದಿಗೆ ನಿರ್ಧಾರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


