ಅಭ್ಯರ್ಥಿಗಳಿಂದ ಪಿಎಚ್.ಡಿ ಪ್ರವೇಶ ಪರೀಕ್ಷೆ ಬಹಿಷ್ಕಾರ
ಕ.ಪ್ರ. ವಾರ್ತೆ, ಮೈಸೂರು, ಡಿ. 15-
ಮೈಸೂರು ವಿಶ್ವವಿದ್ಯಾನಿಲಯವು ಭಾನುವಾರ ಆಯೋಜಿಸಿದ್ದ ಪಿಎಚ್.ಡಿ ಪ್ರವೇಶ ಪರೀಕ್ಷೆಯಲ್ಲಿ ಕನ್ನಡದಲ್ಲಿ ಪ್ರಶ್ನೆಪತ್ರಿಕೆ ನೀಡದಿರುವುದನ್ನು ಖಂಡಿಸಿ ಅಭ್ಯರ್ಥಿಗಳು ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟಿಸಿದರು.
ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜು, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಹಾಗೂ ಮಹಾರಾಜ ಪಿಯು ಕಾಲೇಜಿನಲ್ಲಿ ಮೈಸೂರು ವಿವಿ 73 ವಿಷಯಗಳಲ್ಲಿ ಪಿಎಚ್.ಡಿ ಪ್ರವೇಶ ಪರೀಕ್ಷೆ ಹಮ್ಮಿಕೊಂಡಿತ್ತು.
ಬೆಳಗ್ಗೆ 9.30ಕ್ಕೆ ಪ್ರವೇಶ ಪರೀಕ್ಷೆ ಆರಂಭವಾಯಿತು. ಆದರೆ, ಪರೀಕ್ಷೆ ತೆಗೆದುಕೊಂಡಿದ್ದ ಕಲಾ ಮತ್ತು ವಾಣಿಜ್ಯ ವಿಭಾಗದ ಕೆಲವು ವಿದ್ಯಾರ್ಥಿಗಳು, ಪ್ರಶ್ನೆಪತ್ರಿಕೆ ಕನ್ನಡದಲ್ಲಿ ಇಲ್ಲದಿರುವುದನ್ನು ಕಂಡು ಗೊಂದಲಗೊಂಡರು. ಅಲ್ಲದೆ, ಪರೀಕ್ಷಾ ಕೊಠಡಿಯಿಂದ ಹೊರ ನಡೆದು ಪ್ರತಿಭಟಿಸಿದರು.
ಪಿಎಚ್.ಡಿ ಪ್ರವೇಶ ಪರೀಕ್ಷೆಗೆ ಕನ್ನಡದಲ್ಲೂ ಪ್ರಶ್ನೆಪತ್ರಿಕೆ ನೀಡಲಾಗುತ್ತಿತ್ತು. ಆದರೆ ಈ ಬಾರಿ ಇಂಗ್ಲಿಷ್‌ನಲ್ಲಿ ಮಾತ್ರ ಪ್ರಶ್ನೆಪತ್ರಿಕೆ ನೀಡಿರುವುದು ಸರಿಯಲ್ಲ ಎಂದು ಖಂಡಿಸಿದ ಅವರು, ಮೈಸೂರು ವಿವಿ ವಿರುದ್ಧ ಘೋಷಣೆ ಕೂಗಿದರು.
ಕಲಾ ಮತ್ತು ವಾಣಿಜ್ಯ ವಿಭಾಗದ ವಿಷಯಗಳಲ್ಲಿ ಪರೀಕ್ಷೆ ಬರೆಯಲು ಬಂದಿದ್ದ ಬಹುತೇಕ ವಿದ್ಯಾರ್ಥಿಗಳು ಕನ್ನಡದಲ್ಲಿ ಪ್ರಶ್ನೆಪತ್ರಿಕೆ ಇರಬಹುದೆಂದು ನಿರೀಕ್ಷಿಸಿದ್ದರು. ಆದರೆ ಪರೀಕ್ಷಾ ಕೇಂದ್ರದಲ್ಲಿ ಇಂಗ್ಲಿಷ್‌ನಲ್ಲಿ ಪ್ರಶ್ನೆ ಪತ್ರಿಕೆ ಇರುವುದನ್ನು ನೋಡಿ ಆಕ್ರೋಶಗೊಂಡರು. ಅಲ್ಲದೆ, ಪರೀಕ್ಷಾ ಕೇಂದ್ರದಿಂದ ಹೊರ ಬಂದು ಪ್ರತಿಭಟಿಸಿದರು.
ಸ್ಥಳಕ್ಕೆ ಆಗಮಿಸಿದ ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಅವರು ಅಭ್ಯರ್ಥಿಗಳನ್ನು ಮನವೊಲಿಸಲು ನಡೆಸಿದ ಪ್ರಯತ್ನ ಸಹ ವಿಫಲವಾಯಿತು. ಅಂತಿಮವಾಗಿ ಕಲಾ ಮತ್ತು ವಾಣಿಜ್ಯ ವಿಭಾಗದ 14 ಪರೀಕ್ಷೆಗಳನ್ನು ಮುಂದೂಡುವ ನಿರ್ಧಾರ ಕೈಗೊಂಡರು.
ಹೊರಗೆ ಪ್ರತಿಭಟನೆ ನಡೆಯುತ್ತಿದ್ದರೂ ಕೆಲವು ವಿದ್ಯಾರ್ಥಿಗಳು ಇಂಗ್ಲಿಷ್‌ನಲ್ಲೇ ಪರೀಕ್ಷೆ ಬರೆಯುತ್ತಿದ್ದರು. ವಿವಿ ಪ್ರವೇಶ ಪರೀಕ್ಷೆ ಮುಂದೂಡಿರುವ ವಿಚಾರ ತಿಳಿಯುತ್ತಿದ್ದಂತೆ ಅವರು ಸಹ ಪರೀಕ್ಷಾ ಕೇಂದ್ರದಿಂದ ಹೊರ ಬಂದರು.
ಮುಂದೂಡಲಾದ ವಿಷಯಗಳು...: ವಾಣಿಜ್ಯಶಾಸ್ತ್ರ, ಮ್ಯಾನೇಜ್‌ಮೆಂಟ್ ಸೈನ್ಸ್, ಅರ್ಥಶಾಸ್ತ್ರ, ಸಂಹವನ ಮತ್ತು ಪತ್ರಿಕೋದ್ಯಮ, ಸಹಕಾರ, ಮಾನವಶಾಸ್ತ್ರ, ದಕ್ಷಿಣ ಭಾರತೀಯ ಅಧ್ಯಯನ, ಗಾಂಧಿ ಅಧ್ಯಯನ, ನೃತ್ಯ, ಭೂಗೋಳಶಾಸ್ತ್ರ, ಜೈನಶಾಸ್ತ್ರ ಮತ್ತು ಪ್ರಾಕೃತ, ವಾಕ್ ಮತ್ತು ಶ್ರವಣ, ಸಮಾಜ ಕಾರ್ಯ ಮತ್ತು ಶಿಕ್ಷಣ ವಿಷಯದ ಪಿಎಚ್.ಡಿ ಪ್ರವೇಶ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಕುಲಪತಿ ಹೇಳಿದ್ದು...
ಈ ಹಿಂದೆ ಕನ್ನಡದಲ್ಲಿ ಪಿಎಚ್.ಡಿ ಪ್ರವೇಶ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು, ಹೀಗಾಗಿ ಈ ಬಾರಿಯೂ ಅವಕಾಶ ನೀಡುವಂತೆ ಅಭ್ಯರ್ಥಿಗಳು ಒತ್ತಾಯಿಸುತ್ತಿದ್ದಾರೆ. ಯುಜಿಸಿ ನಿಯಮದ ಪ್ರಕಾರ ಸ್ಥಳೀಯ ಭಾಷೆಯಲ್ಲಿ ಪಿಎಚ್.ಡಿ ಪರೀಕ್ಷೆ ಬರೆಯಲು ಅವಕಾಶವಿಲ್ಲ. ಅಭ್ಯರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆ ಮುಂದೂಡಲಾಗಿದೆ. ಇನ್ನೂ ಎರಡು ವಾರದೊಳಗೆ 14 ವಿಷಯಗಳಿಗೆ ಪ್ರವೇಶ ಪರೀಕ್ಷೆ ನಡೆಸಲಾಗುವುದು ಎಂದು ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಉಳಿದ ಪರೀಕ್ಷೆಗಳು ಸುಗಮ
ಮೈಸೂರು ವಿವಿ ಏರ್ಪಡಿಸಿದ್ದ 73 ವಿಷಯಗಳ ಪಿಎಚ್.ಡಿ ಪ್ರವೇಶ ಪರೀಕ್ಷೆ ಪೈಕಿ 14 ವಿಷಯಗಳು ಪರೀಕ್ಷೆಯನ್ನು ಮಾತ್ರ ಮುಂಜೂಡಿದೆ. ಉಳಿದ ವಿಷಯಗಳ ಪ್ರವೇಶ ಪರೀಕ್ಷೆಯು ಸುಗಮವಾಗಿ ನಡೆಯಿತು. ಈ ಬಾರಿ 5600ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ತೆಗೆದುಕೊಂಡಿದ್ದರು. ಕಲಾ ಮತ್ತು ವಾಣಿಜ್ಯ ವಿಭಾಗವನ್ನು ಹೊರತುಪಡಿಸಿ ಉಳಿದ ವಿಷಯಗಳ ಪ್ರವೇಶ ಪರೀಕ್ಷೆಯು ಸುಗಮವಾಗಿ ನಡೆಯಿತು ಎಂದು ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

