ಪ್ರಧಾನ ಸುದ್ದಿ

ವ್ಯಾಪಕ ಅಕ್ರಮ ಪಾಲಿಕೆ ದಿವಾಳಿ

ವ್ಯಾಪಕ ಅಕ್ರಮ ಪಾಲಿಕೆ ದಿವಾಳಿ
Published On :

ಬೆಂಗಳೂರು: ಸಾರ್ವಜನಿಕ ಸಂಪನ್ಮೂಲಗಳ ವ್ಯಾಪಕ ದುರ್ಬಳಕೆಯ ಕಡೆಗೆ ತಕ್ಷಣವೆ ಗಮನಹರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಂಸದ ರಾಜೀವ್ ಚಂದ್ರಶೇಖರ್ ಒತ್ತಾಯಿಸಿದ್ದಾರೆ.
ಬಿಬಿಎಂಪಿಯಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಹಣವಿಲ್ಲವೆಂಬ ಮುಖ್ಯಮಂತ್ರಿಗಳ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಸರ್ಕಾರದ ನಿಧಿ ಮತ್ತು ಸಾರ್ವಜನಿಕ ಸ್ವತ್ತುಗಳ ಬಳಕೆಯಲ್ಲಿ ದುರುಪಯೋಗವಾಗುತ್ತಿದ್ದು ವ್ಯಾಪಕ ಭ್ರಷ್ಟಾಚಾರವೇ ಬಿಬಿಎಂಪಿ ದಿವಾಳಿಯತ್ತ ಸಾಗಿರುವುದಕ್ಕೆ ಕಾರಣವೆಂದು ಹೇಳಿದ್ದಾರೆ.
ಮಿತಿಮೀರಿದ ಭ್ರಷ್ಟಾಚಾರ, ಯೋಜನಾರಹಿತ ವ್ಯರ್ಥ ಖರ್ಚು-ವೆಚ್ಚಗಳು ಮತ್ತು ಪಟ್ಟಭದ್ರ ಹಿತಾಸಕ್ತಿಗಳು ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿ ಬೆಂಗಳೂರಿನ ಆಡಳಿತದ ಮೇಲೆ ತನ್ನ ಕರಾಳ ಛಾಯ್ನೆ ಬೀರುತ್ತಿವೆ. ನಗರಾಡಳಿತ ಖಾತೆಯನ್ನು ಹೊಂದಿರುವ ಸಿದ್ದರಾಮಯ್ಯ ಅವರೇ ಈ ಅವ್ಯಸಸ್ಥೆಯನ್ನು ಕೂಡಲೇ ಸರಿಪಡಿಸಬೇಕು ಎಂದು ರಾಜೀವ್ ಬಲವಾಗಿ ಆಗ್ರಹಿಸಿದ್ದಾರೆ.
ಬೆಂಗಳೂರಿನ ಆಡಳಿತದಲ್ಲಿ ಸುಧಾರಣೆಗಳಿಗಾಗಿ ಒತ್ತಾಯಿಸುತ್ತಲೇ ಬಂದಿರುವ ರಾಜೀವ್, ಈಗ ಮತ್ತೊಮ್ಮೆ ಈ ಕುರಿತು ದನಿಯೆತ್ತಿದ್ದಾರೆ. ಸತತವಾಗಿ ಅನೇಕ ಸರ್ಕಾರಗಳು ಸಾರ್ವಜನಿಕ ಸ್ವತ್ತುಗಳ ದುರುಪಯೋಗ ಮತ್ತು ಭ್ರಷ್ಟಾಚಾರವನ್ನು ನಿಯಂತ್ರಿಸದ ಕಾರಣದಿಂದ ಈ ಪ್ರಸಕ್ತ ಆಡಳಿತ ವೈಫಲ್ಯದ ಸನ್ನಿವೇಶ ಸೃಷ್ಠಿಯಾಗಿದೆ ಎಂದು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಅವರು ತಿಳಿಸಿದ್ದಾರೆ.             
ಸಿದ್ದರಾಮಯ್ಯ ಅವರ ಸರ್ಕಾರ ಉತ್ತಮ ಆಡಳಿತ ಭರವಸೆಯಿಂದಲೇ ಚುನಾಯಿತಗೊಂಡಿರುವುದರಿಂದ ಅವರು ಈ ಕೂಡಲೇ ಆ ದಾಯಿತ್ವವನ್ನು ವಹಿಸಿಕೊಂಡು ಬೆಂಗಳೂರನ್ನು ಮತ್ತೆ ಸರಿದಾರಿಗೆ ತರಲು ದೀರ್ಘಾವಧಿ ಸಾಮರ್ಥ್ಯದ, ಸ್ಥಿರ ಆರ್ಥಿಕ ಅಭಿವೃದ್ಧಿಗಾಗಿ ಬದ್ಧತೆಯನ್ನು ಪ್ರದರ್ಶಿಸುವುದರ ಜೊತೆಗೆ ಉತ್ತಮ ಆಡಳಿತಕ್ಕಾಗಿ ತಮ್ಮ ಕಾರ್ಯತಂತ್ರಗಳನ್ನು ಪ್ರಕಟಿಸಬೇಕು.
ನೆನೆಗುದಿಗೆ ಬಿದ್ದಿರುವ ಆಡಳಿತ ಸುಧಾರಣೆಗಳ ಹೆಚ್ಚಿನ ಅಂಶಗಳಲ್ಲಿ ಪರಿಗಣಿಸುವ ಬಿಎಂಆರ್‌ಜಿಎ ವಿಧೇಯಕವನ್ನು ಸರ್ಕಾರ ಅಂಗೀಕರಿಸಬೇಕು ಎಂದು ರಾಜೀವ್ ಹೇಳಿದ್ದಾರೆ.

ಹೇಗೆ ಸಾಧ್ಯ?: ರಾಜ್ಯದ ಜಿಡಿಪಿಗೆ ಶೇ.30 ಕೊಡುಗೆ ನೀಡುತ್ತಿರುವ, 80ಲಕ್ಷ ಜನಸಂಖ್ಯೆ, ಹತ್ತಾರು ಲಕ್ಷ ತೆರಿಗೆದಾರರು, ರಸ್ತೆ ತೆರಿಗೆ, ಆಸ್ತಿ ತೆರಿಗೆ, ಸರ್ಕಾರಿ ಭೂಮಿ ಇತ್ಯಾದಿಯಾಗಿ ಗಣನೀಯ ಸಂಪನ್ಮೂಲವನ್ನು ಹೊಂದಿರುವ ಮಹಾನಗರ ಬೆಂಗಳೂರು. ಇದರ ಹೊತಾಗಿಯೂ ಬಿಬಿಎಂಪಿ ಸಂಕಷ್ಟದಲ್ಲಿದೆಯೆಂದರೆ ಆಶ್ಚರ್ಯಕರ.
ಕರ್ನಾಟಕದ ರಾಜಧಾನಿಯಾಗಿರುವ ಬೆಂಗಳೂರು ನಗರ ಸಹಜವಾಗಿ ಬಂಡವಾಳ ಹೂಡಿಕೆ, ವಾಣಿಜ್ಯ ಮತ್ತು ಆರ್ಥಿಕ ಚಟುವಟಿಕೆಗಳ ಕೇಂದ್ರವಾಗಿ ರಾಜ್ಯಕ್ಕೆ ಅತ್ಯಂತ ಪ್ರಮುಖವಾಗಿರುವುದರಿಂದ ನಗರದ ಆರ್ಥಿಕ ಆರೋಗ್ಯವೋಂದೇ ಅದರ ಸುಸ್ಥಿರ ಮತ್ತು ಯೋಜಿತ ಪ್ರಗತಿ- ವಿಸ್ತರಣೆಗಳನ್ನು ಖಾತ್ರಿಪಡಿಸುತ್ತದೆ ಎಂದು ರಾಜೀವ್ ಅಭಿಪ್ರಾಯಪಟ್ಟಿದ್ದಾರೆ.

ಸಮಸ್ಯೆಗಳು ಮತ್ತು ಪರಿಹಾರಗಳು
ಆಡಳಿತ ವೈಫಲ್ಯದಿಂದಾಗಿ ಸಂಭವಿಸಿರುವ ಸಮಸ್ಯೆಗಳ ಪಟ್ಟಿ ಮಾಡಿರುವ ರಾಜೀವ್, ಅವುಗಳಿಗೆ ಸೂಕ್ತ ಪರಿಹಾರಕ್ರಮಗಳನ್ನೂ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಸೂಚಿಸಿದ್ದಾರೆ:
1. ನಮ್ಮ  ಬೆಂಗಳೂರಿಗೆ ಸೂಕ್ತವಾದ ಒಂದು ಶಾಸನಹಬದ್ಧ ದೀರ್ಘಾವಧಿ ಯೋಜನೆ ಅತ್ಯಗತ್ಯವಾಗಿ ರೂಪುಗೊಳ್ಳಬೇಕು.
2. ಯೋಜನಾಬದ್ಧವಾಗಿರದೆ, ಪಟ್ಟಭದ್ರ ಹಿತಾಸಕ್ತಿಗಳ ಅಪೇಕ್ಷೆಗಳಿಗನುಗುಣವಾಗಿ, ಭ್ರಷ್ಟ ಕಳಂಕಿತ ವ್ಯವಸ್ಥೆಗಳ ಮೂಲಕ ನಗರದ ಆರ್ಥಿಕ ಸಂಪನ್ಮೂಲಗಳ ಅತ್ಯಂತ ಅಸಮರ್ಥ ಬಳಕೆ - ಸರ್ಕಾರದ ಗುತ್ತಿಗೆ ನೀಡುವ ಮತ್ತು   ಹಣಬಳಕೆಯ ಪಕ್ರಿಯೆಗಳಲ್ಲಿ ಪಾರದರ್ಶಕ, ಸ್ಪರ್ಧಾತ್ಮಕ ಮತ್ತು ಪರಿಣಾಮಕಾರಿ ವ್ಯವಸ್ಥೆಗಳು ಕಟ್ಟುನಿಟ್ಟಾಗಿ ಪಾಲನೆಯಾಗಬೇಕು.
3. ಆದಾಯ ಸಂಗ್ರಹಣೆಯಲ್ಲಿ ಸೋರುವಿಕೆ - ತೆರಿಗೆ ಸಂಗ್ರಹಣೆಯಲ್ಲಿ ನಿಯಮಿತವಾಗಿ ಗುರಿಗಳನ್ನು ನಿರ್ಧರಿಸುವುದರ ಜೊತೆಗೆ ತೆರಿಗೆ ವ್ಯಾಪ್ತಿಯನ್ನು ವಿಸ್ತರಿಸಬೇಕು ಮತ್ತು ಮುಖ್ಯವಾಗಿ ಆದಾಯ ಸೋರಿಕೆ ಹೊಣೆಗಾರರಾಗಿರುವ ಎಲ್ಲಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
4. ಸರ್ಕಾರಿ ಸ್ವತ್ತುಗಳಾದ ಭೂಮಿ, ಕಟ್ಟಡಗಳು ಮುಂತಾದವುಗಳನ್ನು ಆರ್ಥಿಕ ಸಂಪಲ್ಮೂನವನ್ನಾಗಿ ಬಳಸದೆ ಪಟ್ಟಭದ್ರ ಹಿತಾಸಕ್ತಿಗಳ ಅನುಕೂಲಕ್ಕೆ ತಕ್ಕಂತೆ ಅಪಾರದರ್ಶಕವಾಗಿ ಹಂಚಿಕೆ ಮತ್ತು ಬಳಕೆ - ವಾಣಿಜ್ಯ ಹಿತಾಸಕ್ತಿಗಳಿಂದ ಕಬಳಿಕೆ ಮತ್ತು ಒತ್ತುವರಿಯಾಗಿರುವ ಸರ್ಕಾರಿ ಪ್ರದೇಶಗಳನ್ನು ಕಡ್ಡಾಯವಾಗಿ ಹಿಂಪಡೆಯಬೇಕು ಮತ್ತು ನಗರದ ಆರ್ಥಿಕ ಸಂಪನ್ಮೂಲವು ಗರಿಷ್ಠ ಪ್ರಮಾಣದಲ್ಲಿ ಏರಿಕೆಯಾಗುವಂತೆ ಮಾರಾಟ ಭೋಗ್ಯ ಅಥವಾ ಕ್ರಯವನ್ನಾಗಲಿ ಮಾರುಕಟ್ಟೆ ದರದಲ್ಲಿಯೇ ನೀಡಬೇಕು.
5. ಸಹಜ ಆದಾಯ ಮೂಲಗಳನ್ನು ಬಳಸುವಲ್ಲಿ ವೈಫಲ್ಯ- ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ನಿಟ್ಟಿನಲ್ಲಿ ಮನೋರಂಜನಾತ್ಮಕ ಆಕರ್ಷಣಾ ಕೇಂದ್ರಾಗಳನ್ನು, ಸೌಕರ್ಯಗಳನ್ನು ನಿರ್ಮಿಸಿ ಹೆಚ್ಚುವರಿ ಆದಾಯವನ್ನು ಗಳಿಸುವ ಬೆಂಗಳೂರನ್ನು ವಿಶ್ವದರ್ಜೆಯ ಪ್ರವಾಸಿ ಕೇಂದ್ರವನ್ನಾಗಿ ಆಭಿವೃದ್ಧಿಪಡಿಸಬೇಕು.
6. ಯೋಜನೆಗಳಿಗೆ ಸರ್ಕಾರಿ ವೆಚ್ಚಗಳಿಗೆ ಪೂರಕವಾಗಿ ಅಥವಾ ಅದರ ಬದಲಿಗೆ ಸಾರ್ವಜನಿಕ- ಖಾಸಗಿ ಸಹಭಾಗಿತ್ವದಡಿಯಲ್ಲಿ (ಪಿಪಿಪಿ) ಸಾಕಷ್ಟು ಬಂಡವಾಳ ಆಕರ್ಷಿಸುವಲ್ಲಿ ವೈಫಲ್ಯ- ಸೂಕ್ತ ವಾಣಿಜ್ಯಾತ್ಮಕ ಒಪ್ಪಂದಗಳ ಮೂಲಕ ನಾಗರಿಕ ಸೌಲಭ್ಯ ಮತ್ತು ಸೇವಾ ಕ್ಷೇತ್ರಗಳಲ್ಲಿ ಖಾಸಗಿ ಬಂಡವಾಳ ಹೂಡಿಕೆಯನ್ನು ಉತ್ತೇಜಿಸಬೇಕು.
ಜನರನ್ನು ನಿರ್ಲಕ್ಷಿಸುವ ಸರ್ಕಾರಗಳನ್ನು ಜನರು ತಿರಸ್ಕರಿಸುವರೆಂಬುದನ್ನು ಇತ್ತೇಚಿನ ದೆಹಲಿಯ ವಿದ್ಯಮಾನಗಳು ತೋರಿಸಿವೆ. ಆಡಳಿತ ಕುಸಿತದ ವಿರುದ್ಧದ ಜನದನಿಯನ್ನು ನಿರ್ಲಕ್ಷಿಸಿಬಾರದೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿರುವ ರಾಜೀವ್ ಅವರು, ಸರ್ಕಾರ ಸೋತಲ್ಲಿ ಜನರು ಬದಲಾವಣೆಯನ್ನು ಬಯಸುವುದು ಖಂಡಿತ ಎಂದು ರಾಜೀವ್ ಚಂದ್ರಶೇಖರ್ ಅವರು ಹೇಳಿದ್ದಾರೆ.

ಸಾರ್ವಜನಿಕ ಸೇವಾ ಇಲಾಖೆಗಳಲ್ಲಿ ಅದರಲ್ಲೂ ಬಿಬಿಎಂಪಿ ಮತ್ತು ಜಲಮಂಡಳಿಗಳ ನಡುವೆ ಸಮನ್ವಯತೆಯ ಕೊರತೆಯಿದೆ. ಇಲಾಖೆಗಳ ನಡುವೆ ಮೇಲ್ವಿಚಾರಣೆ ಮತ್ತು ಸಮನ್ವಯತೆಗಳನ್ನು ಸಾಧಿಸಲು ನಿವಾಸಿ ಅಭಿವೃದ್ಧಿ ಸಂಸ್ಥೆಗಳ ಪ್ರಾತಿನಿಧ್ಯವಿರುವ ಒಂದು ಮುಖ್ಯ ಘಟಕವನ್ನು ರಚಿಸಿದಲ್ಲಿ ವೆಚ್ಚ, ಶ್ರಮ ಮತ್ತು ಸಮಯವನ್ನು ಉಳಿಸಬಹುದು.
- ನಂದಾರಾವ್ ಕಾರ್ಯದರ್ಶಿ, ಅಭಯ ಒಕ್ಕೂಟ

ಯಾವುದೇ ಯೋಜನೆಗಳಲ್ಲಿ ನಾಗರಿಕ ಪಾಲುದಾರಿಕೆ ಮತ್ತು ಸಮಾಲೋಚನೆಗಳ ಉದ್ದೇಶವಂದರೆ ಅವರಿಗೆ ಸಮಸ್ಯೆಗಳ ಮತ್ತು ಆದ್ಯತೆಗಳ ಪೂರ್ಣ ಅರಿವು ಇರುತ್ತದೆ. ಹಾಗೆಯೇ, ಸ್ಥಳೀಯ ನಿವಾಸಿಗಳು ಕಾವಲುಗಾರರಂತೆ ಕೆಲಸ ಮಾಡುವುದರಿಂದ ಪ್ರಜೆಗಳ ಪಾಲುದಾರಿಕೆಯು ಭ್ರಷ್ಟಾಚಾರವನ್ನು ನಿಯಂತ್ರಿಸಬಹುದು.
- ರಾಜಶೇಖರ್, ಯೋಗ್ಯ ಆಡಳಿತ ಜವಾಬ್ದಾರಿಯುತ ಆಡಳಿತ 

ಬೆಂಗಳೂರಿನಂಥ ಅಂತಾರಾಷ್ಟ್ರೀಯ ಖ್ಯಾತಿಯುಳ್ಳ ನಗರದ ಆಡಳಿತ ಮಾತ್ರ ಅತ್ಯಂತ ಕಳಪೆ ಮಟ್ಟದ್ದಾಗಿದೆ. ಒಂದು ಬಲಿಷ್ಠ ನಾಗರಿಕ ಕೇಂದ್ರಿತ ಆಡಳಿತ ಮಾದರಿ ಸದ್ಯದ ಅವಶ್ಯಕತೆಯಾಗಿದೆ.
-  ರವೀಂದ್ರನಾಥ್ ಗುರು, ಸದಸ್ಯರು, ಯೋಗ್ಯ ಆಡಳಿತ, ಜವಾಬ್ದಾರಿಯುತ ಆಡಳಿತ ಮತ್ತು ಕಾರ್ಯದರ್ಶಿಗಳು, ಗ್ರಾಹಕ ವೇದಿಕೆ ಮತ್ತು ಭ್ರಷ್ಠಾಚಾರ ವಿರೋಧಿ ಒಕ್ಕೂಟ

ನಿಜವಾದ ಉತ್ತಮ ಆಡಳಿತ ಕಾರ್ಯಸಾಧ್ಯವಾಗಬೇಕೆಂದರೆ ಯೋಜನೆಯಿಂದ ಅನುಷ್ಠಾನದವರೆಗಿನ ನಿರ್ಧಾರ ತೆಗೆದುಕೊಳ್ಳುವ ಎಲ್ಲಾ ಪ್ರಕ್ರಿಯೆಗಳಲ್ಲಿನಾಗರಿಕ ಪಾಲುದಾರಿಕೆಗೆ ಗರಿಷ್ಠ ಆದ್ಯತೆಯನ್ನು ನೀಡಬೇಕು.
- ಎನ್.ಎಸ್. ಮುಕುಂದ, ಸದಸ್ಯರು, ಯೋಗ್ಯ ಆಡಳಿತ, ಜವಾಬ್ದಾರಿಯುತ ಆಡಳಿತ ವೇದಿಕೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.