ಕೊಳೆಗೇರಿ ಮುಕ್ತ ಸಮಾಜಕ್ಕೆ ಸಂಕಲ್ಪ, ರಾಜೀವ್ ಆವಾಸ್ ಯೋಜನೆಗೆ ಸಂಪುಟ ಒಪ್ಪಿಗೆ

ಕನ್ನಡಪ್ರಭ ವಾರ್ತೆ, ಬೆಂಗಳೂರು, ಡಿ.19-
ಕೇಂದ್ರ ಸರ್ಕಾರದ ನೆರವಿನೊಂದಿಗೆ ರಾಜ್ಯದ ನಗರ ಮತ್ತು ಪಟ್ಟಣಗಳನ್ನು ಕೊಳೆಗೇರಿ ಮುಕ್ತಗೊಳಿಸುವ ರಾಜೀವ್ ಆವಾಸ್ ಯೋಜನೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಯೋಜನೆ ಪ್ರಕಾರ ಮೊದಲ ಹಂತದಲ್ಲಿ 5 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ 10 ನಗರಗಳನ್ನು ಮತ್ತು ಎರಡನೇ ಹಂತದಲ್ಲಿ 5 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ 26 ಪಟ್ಟಣಗಳನ್ನು ಕೊಳೆಗೇರಿ ಮುಕ್ತಗೊಳಿಸಲಾಗುವುದು ಎಂದು ಸಂಪುಟ ಸಭೆ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಹೇಳಿದರು.
ಏನಿದು ಯೋಜನೆ?: ದೇಶಾದ್ಯಂತ 5 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರ ಪ್ರದೇಶಗಳನ್ನು ಕೊಳೆಗೇರಿ ಮುಕ್ತಗೊಳಿಸಿ ಅಲ್ಲಿನ ನಿವಾಸಿಗಳಿಗೆ ವಸತಿ ಮತ್ತಿತರೆ ಮೂಲ ಸೌಕರ್ಯ ಒದಗಿಸಲು ಕೇಂದ್ರ ಸರ್ಕಾರ ರಾಜೀವ್‌ಗಾಂಧಿ ವಸತಿ ಯೋಜನೆ ಜಾರಿಗೆ ತಂದಿತ್ತು. ರಾಜ್ಯದಲ್ಲಿ ಇದಕ್ಕಾಗಿ 10,752 ಕೋಟಿ ವೆಚ್ಚ ಮಾಡಬೇಕು ಎಂದು ನಿರ್ಧರಿಸಲಾಗಿತ್ತು. ಈ ಪೈಕಿ ಶೇ.75 ಭಾಗವನ್ನು ಕೇಂದ್ರ ಸರ್ಕಾರ ಭರಿಸಿದರೆ ಶೇ.15ರಷ್ಟು ಮೊತ್ತವನ್ನು ರಾಜ್ಯ ಸರ್ಕಾರ ಮತ್ತು ಉಳಿದ ಶೇ.10ರಷ್ಟು ಭಾಗವನ್ನು ಸ್ಥಳೀಯ ಸಂಸ್ಥೆಗಳು ಭರಿಸಬೇಕು.
ಅದರಂತೆ ಮೊದಲ ಹಂತದಲ್ಲಿ ಬಿಬಿಎಂಪಿ, ಮಂಗಳೂರು, ಹುಬ್ಬಳ್ಳಿ- ಧಾರವಾಡ, ಬಳ್ಳಾರಿ, ದಾವಣಗೆರೆ, ತುಮಕೂರು, ಬೆಳಗಾವಿ, ಮೈಸೂರು, ಶಿವಮೊಗ್ಗ ಮತ್ತು ಗುಲ್ಬರ್ಗ ನಗರಗಳಲ್ಲಿ ಈ ಯೋಜನೆ ಅನುಷ್ಠಾನಕ್ಕೆ ತರಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಈ ನಗರಗಳಲ್ಲಿ ಕೊಳಗೇರಿಗಳನ್ನು ತೆರವುಗೊಳಿಸಿ ಅಲ್ಲಿನ ನಿವಾಸಿಗಳಿಗೆ ಮನೆ ನಿರ್ಮಿಸಿಕೊಡುವುದರ ಜತೆಗೆ ಅಗತ್ಯ ಮೂಲ ಸೌಕರ್ಯ ಒದಗಿಸಲಾಗುತ್ತದೆ ಎಂದು ಸಚಿವರು ವಿವರಿಸಿದರು.
26 ಪಟ್ಟಣಗಳಿಗೂ ವಿಸ್ತರಣೆ: ಇದರ ಜತೆಗೆ 5 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ 26 ಪಟ್ಟಣಗಳಲ್ಲೂ ಈ ಯೋಜನೆ ಜಾರಿಗೆ ತರಲು ಸರ್ಕಾರ ತೀರ್ಮಾನಿಸಿದ್ದು, ಈ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಯೋಜನೆ ವಿಸ್ತರಣೆ ಮಾಡುವುದಾದರೆ ರಾಜ್ಯ ಸರ್ಕಾರ ತನ್ನ ಪಾಲಿನ ಮೊತ್ತ ಹೆಚ್ಚಿಸಬೇಕು ಎಂದು ಕೇಂದ್ರ ಸರ್ಕಾರ ಹೇಳಿದ್ದು, ಇದಕ್ಕೆ ಒಪ್ಪಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಎರಡನೇ ಹಂತದಲ್ಲಿ ಚಿತ್ರದುರ್ಗ, ಕೋಲಾರ, ರಾಬರ್ಟ್‌ಸನ್‌ಪೇಟೆ, ಭದ್ರಾವತಿ, ಚಿಕ್ಕಮಗಳೂರು, ಹಾಸನ, ಮಂಡ್ಯ, ಉಡುಪಿ, ಬಾಗಲಕೋಟೆ, ಬಿಜಾಪುರ, ಗದಗ, ರಾಣೆಬೆನ್ನೂರು, ಬೀದರ್, ಹೊಸಪೇಟೆ, ರಾಯಚೂರು, ಗಂಗಾವತಿ, ರಾಮನಗರ, ಚಾಮರಾಜನಗರ, ಮಡಿಕೇರಿ, ಕಾರವಾರ, ಯಾದಗಿರಿ, ಚಿಕ್ಕಬಳ್ಳಾಪುರ, ಕೊಪ್ಪಳ, ಹಾವೇರಿ, ದೊಡ್ಡಬಳ್ಳಾಪುರ ಮತ್ತು ಶಿರಾ ಪಟ್ಟಣಗಳಲ್ಲಿ ಯೋಜನೆ ಜಾರಿಗೆ ಬರಲಿದೆ ಎಂದು ವಿವರಿಸಿದರು.
ಸ್ಥಳೀಯ ಸಂಸ್ಥೆವಾರು ಟೆಂಡರ್: ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆ (ನಗರೋತ್ಥಾನ) ಹಂತ 2ರಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದರೂ ಕಾಮಗಾರಿ ಆರಂಭವಾಗಿಲ್ಲ. ರಾಜ್ಯ ಮಟ್ಟದಲ್ಲಿ ಟೆಂಡರ್ ಕರೆದಿರುವುದರಿಂದ ಈ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ನಗರೋತ್ಥಾನ ಯೋಜನೆಯಡಿ ಇನ್ನು ಮುಂದೆ ನಗರ ಸ್ಥಳೀಯ ಸಂಸ್ಥೆ ಮಟ್ಟದಲ್ಲೇ ಟೆಂಡರ್ ಕರೆಯಲು ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವರು ತಿಳಿಸಿದರು.
ಪ್ರಮುಖ ನಿರ್ಣಯಗಳು
- ಪಶು ಸಂಗೋಪನೆ ಇಲಾಖೆಯಲ್ಲಿ ಜಾನುವಾರು ಅಧಿಕಾರಿ ಹುದ್ದೆಯನ್ನು ಜಾನುವಾರು ಅಭಿವೃದ್ಧಿ ಅಧಿಕಾರಿ ಹುದ್ದೆಯಾಗಿ ಮೇಲ್ದರ್ಜೆಗೇರಿಸುವುದು
- ಇವರೂ ಸೇರಿದಂತೆ ಪಶುಸಂಗೋಪನೆ ಇನ್ಸ್‌ಪೆಕ್ಟರ್‌ಗಳು, ಹಿರಿಯ ಇನ್ಸ್‌ಪೆಕ್ಟರ್‌ಗಳು, ಸಹಾಯಕರಿಗೆ ನೀಡುತ್ತಿದ್ದ ವಿಶೇಷ ಭತ್ಯೆ 400-500ಕ್ಕೆ ಹೆಚ್ಚಳ.
- ಕೇಂದ್ರ ಸರ್ಕಾರದ ಅಸೈಡ್ ಯೋಜನೆಯಡಿ ರಾಜ್ಯದಲ್ಲಿ ಚರ್ಮ ಮತ್ತು ತಾಂತ್ರಿಕ ಸಂಸ್ಥೆ ಸ್ಥಾಪಿಸಲು 3.62 ಕೋಟಿ ಮಂಜೂರು.
- 2013- 14ನೇ ಸಾಲಿನಲ್ಲಿ 1000 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿನ ಯೋಜನೆ ಕಲ್ಪಿಸಲು ಪರಿಷ್ಕೃತ ಮೊತ್ತ 179.79 ಕೋಟಿಗೆ ಒಪ್ಪಿಗೆ.
- ಎಪಿಎಂಸಿಗಳಲ್ಲಿ ಇ- ವ್ಯಾಪಾರ ಯೋಜನೆ ಆರಂಭಿಸುವ ಕುರಿತು ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಪೂರೈಕೆಗೆ ಎನ್‌ಸಿಡಿಇ ಸಂಸ್ಥೆ ಜತೆ ಒಪ್ಪಂದಕ್ಕೆ ಅನುಮೋದನೆ. 9.94 ಕೋಟಿ ಬಿಡುಗಡೆ.
- ರಾಜ್ಯದ ವಿದ್ಯುತ್ ಯೋಜನೆಗಳಿಗೆ ಕಲ್ಲಿದ್ದಲು ಬ್ಲಾಕ್‌ಗಳನ್ನು ಪಡೆದು ಕಲ್ಲಿದ್ದಲು ಒದಗಿಸಲು ಹಿಂದಿನ ಸರ್ಕಾರ ಸ್ಥಾಪಿಸಿದ್ದ ಕರ್ನಾಟಕ ರಾಜ್ಯ ಕಲ್ಲಿದ್ದಲು ಗಣಿಗಾರಿಕೆ ಗಣಿ ಕಂಪನಿ ರದ್ದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


