ಪ್ರಧಾನ ಸುದ್ದಿ

ವಿದ್ಯೆಯಷ್ಟೇ ಕಲೆಗೂ ಪ್ರಾಮುಖ್ಯತೆ ಸಿಗಲಿ: ಡಾ. ವೀರೇಂದ್ರ ಹೆಗ್ಗಡೆ

Published On :

ಮೂಡುಬಿದಿರೆ, ಸುಂದರಿ ಆನಂದ ಆಳ್ವ ಆವರಣ: ಕಲೆ ಮೂಲಕ ವಿಶ್ವಶಾಂತಿ, ಸಾಮರಸ್ಯ ಸಾಧ್ಯ. ಶಾಲೆ, ಕಾಲೇಜುಗಳಲ್ಲಿ ಶಿಕ್ಷಣ ಜತೆ ಕಲೆಗೆ ಹೆಚ್ಚಿನ ಪ್ರಾಧಾನ್ಯತೆ ಸರ್ಕಾರ ನೀಡಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ನುಡಿದರು.
ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಉದ್ಘಾಟಿಸಿ ಅವರು ಮಾತನಾಡಿದರು. ಶಾಲೆಗಳಲ್ಲಿ ವಿಜ್ಞಾನ ಮಾತ್ರ ಬೋಧಿಸಿದರೆ ಸಾಲದು, ತತ್ವಶಾಸ್ತ್ರ ಧರ್ಮ ಶಾಸ್ತ್ರ, ಸಂಸ್ಕೃತಿ, ಕಲೆ ಬೋಧಿಸಬೇಕು. ಸರ್ಕಾರ ಶಾಲೆ ಕಾಲೇಜುಗಳಲ್ಲಿ ಶಿಕ್ಷಣ ಜತೆ ಕಲೆಗೆ ಹೆಚ್ಚಿನ ಪ್ರಾಧಾನ್ಯತೆ ಕೊಡಬೇಕು. ರಾಜ್ಯದ ಶಾಲೆಗಳಲ್ಲಿ ಸಂಗೀತ, ನೃತ್ಯ, ಒಳ್ಳೆ ಆಟ ತರಬೇತಿಗೆ ಶಿಕ್ಷಕರ ಕೊರತೆ ಇದೆ. ಸರ್ಕಾರ ಕಲಾ ಶಿಕ್ಷಕರ ನೇಮಕಕ್ಕೆ ಮುಂದಾಗಲಿ ಎಂದು ಆಶಯ ವ್ಯಕ್ತಪಡಿಸಿದರು.  
ಸಚಿನ್ ತೆಂಡುಲ್ಕರ್ 16 ವರ್ಷದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ. ಆದರೆ ಮಕ್ಕಳು ಬ್ಯಾಟ್ ಮುಟ್ಟಿದರೆ ಹೆತ್ತವರು ಕೈ ಗಂಟಿಗೆ ಹೊಡೆಯುತ್ತಾರೆ. ಮಕ್ಕಳು ಎಸ್ಸೆಸ್ಸೆಲ್ಸಿಗೆ ಬಂದರೆ ಸಾಕು, ಯಾವ ಮನೋರಂಜನೆ, ಕಲೆಗೆ ಆಸ್ಪದವೇ ಇಲ್ಲ. ಕೆಲವೆಡೆ ಟಿವಿ ನೋಡಲೂ ಬಿಡುವುದಿಲ್ಲ. ಈ ಚಿಂತನೆ ಬದಲಾಗಬೇಕು. ಸರ್ವಪಲ್ಲಿ ರಾಧಾಕೃಷ್ಣನ್ ಹೇಳುವಂತೆ 'ನಮಗೆ ಬೇಕಾಗಿರುವುದು ಶಾರೀರಿಕ, ಮಾನಸಿಕ, ಬೌದ್ಧಿಕ, ಆಧ್ಯಾತ್ಮಿಕ ಸಮಾಜಮುಖಿ ಮಾಡುವ ಶಿಕ್ಷಣ. ವಿಜ್ಞಾನ ಬೋಧಿಸಿದರೆ ಸಾಲದು, ತತ್ವಶಾಸ್ತ್ರ ಲಲಿತಕಲೆ, ಇತಿಹಾಸ, ಧರ್ಮಶ್ತಾಸ್ತ್ರ ಕಲಿಸುವುದು ಅತ್ಯವಶ್ಯ. ಶುದ್ಧ ಬುದ್ಧಿ, ವಿದ್ಯೆ ಕಾಮಧೇನು ಇದ್ದಂತೆ, ವಿದ್ಯೆ ವಿಪತ್ತು ತಡೆಯುತ್ತದೆ, ಕೀರ್ತಿ ತರುತ್ತದೆ. ಅಜ್ಞಾನ ಮಾಲಿನ್ಯ ತೊಳೆಯುತ್ತದೆ. ವಿದ್ಯೆಗೆ ಕಲೆ ತಡೆಯಾಗದೆ ಪ್ರೋತ್ಸಾಹಕವಾಗುತ್ತದೆ' ಎಂಬುದನ್ನು ಡಾ. ಮೋಹನ ಆಳ್ವರು ಶಿಕ್ಷಣ ಸಂಸ್ಥೆಯಲ್ಲಿ ಸಾಧಿಸಿ ತೋರಿಸಿದ್ದಾರೆ. ಶಾಲೆ, ಕಾಲೇಜು ಮಕ್ಕಳು ಇಲ್ಲಿ ಅಪಾರ ಮನೋರಂಜನೆ, ನೃತ್ಯ, ಸಂಗೀತ ಆಸ್ವಾದಿಸಿದ್ದಾರೆ, ಕಲಾವಿದರಾಗಿದ್ದಾರೆ. ಶಿಕ್ಷಣದಲ್ಲಿಯೂ ಶೇ.96 ಫಲಿತಾಂಶ ಬಂದಿದೆ ಎಂದರು. 

ಭಾರತೀಯ ಸಂಸ್ಕೃತಿಗೆ ಅವಕಾಶ
ಭಾರತೀಯ ಸಂಸ್ಕೃತಿಯಿಂದ ವಿಮುಖರಾಗಿ ಪಾಶ್ಚಾತ್ಯ ಸಂಸ್ಕೃತಿಯತ್ತ ವಾಲುತ್ತಾರೆ ಎಂದು ಯುವ ಜನಾಂಗ ಬಗ್ಗೆ ಟೀಕೆ ಮಾಡುತ್ತೇವೆ. ಭಾರತೀಯ ಸಂಸ್ಕೃತಿಯನ್ನು ನೋಡಲು, ಆಸ್ವಾದಿಸಲು ಅವಕಾಶ ಮಾಡಿಕೊಟ್ಟರೆ ಅವರು ಅದರಲ್ಲಿ ಆಸಕ್ತಿ ತಾಳುತ್ತಾರೆ ಎಂಬುದಕ್ಕೆ ಮೂಡುಬಿದರೆ ಶಿಕ್ಷಣ ಸಂಸ್ಥೆಯ ಮಕ್ಕಳೇ ಸಾಕ್ಷಿ. ದೂರ ಹೋದರೆ ಹತ್ತಿಯೂ ಬಾರವಾಗುತ್ತದೆ. ಆದ್ದರಿಂದ ಸಂಸ್ಕೃತಿ ಪರಿಚಯ ಮಕ್ಕಳಿಗೆ ಮಾಡಬೇಕು ಎಂದು ಡಾ. ಹೆಗ್ಗಡೆ ಕರೆ ನೀಡಿದರು.

ಅಭಿವೃದ್ಧಿ ಹೆಸರಲ್ಲಿ ಬರಿದು: ಅಭಿವೃದ್ಧಿ ಹೆಸರಲ್ಲಿ ನೆಲ, ಜಲ ಬರಿದಾಗಿಸುವುದು ಅಪಾಯಕಾರಿ. ಜಾಗತಿಕರಣ ಜಗತ್ತಿಗೆ ಜ್ಞಾನಕ್ಕೆ ಹತ್ತಿರವಾಗುವ ಅವಕಾಶಗಳನ್ನು ಕೊಟ್ಟಿದೆ. ಆದರೆ ಜನವಿರೋಧಿಯಾದ, ಪರಿಸರ ವಿರೋಧಿಯಾದ ಯೋಜನೆ ರೂಪಿಸಿಕೊಳ್ಳುತ್ತಿದೆ. ಅಭಿವೃದ್ಧಿ ಹೆಸರಲ್ಲಿ ನೆಲ, ಜಲ ಬರಿದಾಗಿಸುವ ಹಾದಿ ತುಳಿದಿರುವುದು ಅಪಾಯಕಾರಿ ಎಂದರು.

ಮಕ್ಕಳನ್ನು ಬುದ್ಧರನ್ನಾಗಿಸಿ

ವಿಶ್ವ ಮಾನವನಾಗಿ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾಂಗ, ವರ್ಣ ಇತ್ಯಾದಿ ಉಪಾದಿಗಳಿಂದ ಬದ್ಧರನ್ನಾಗಿ ಮಾಡುತ್ತೇವೆ, ಅವುಗಳಿಂದ ಬಿಡಿಸಿ ಬುದ್ಧರನ್ನಾಗಿಸಬೇಕಾದ ಅಗತ್ಯ ಇದೆ. ವಿದ್ಯೆ, ಸಂಸ್ಕೃತಿ ಇವು ಅದ್ಯ ಕರ್ತವ್ಯವಾಗಬೇಕು ಎಂದು ಡಾ.ಹೆಗ್ಗಡೆ ಹೇಳಿದರು. ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದ ಕುವೆಂಪುಗೆ ಯಾವ ಭಾಷೆ ಬಂಧನ ಇರಲಿಲ್ಲ. ಆಂಗ್ಲ, ಸಂಸ್ಕೃತ ಸಾಹಿತ್ಯದ ಮೇಲೂ ಪ್ರೇಮ ಇತ್ತು. ಇದರಿಂದಾಗಿಯೇ ವಿಶ್ವಮಾನವ ಸಂದೇಶ ಸೃಷ್ಟಿಸಿದ ಕವಿಯಾದರು. ಆ ಮತ ಈ ಮತ ಅಲ್ಲ, ಮನುಜ ಮತ, ಆ ಪಥ ಈ ಪಥ ಅಲ್ಲ ವಿಶ್ವಪಥ ಎಂದು ಕುವೆಂಪು ಹೇಳಿದ್ದಾರೆ, ಆದರಂತೆ ಕನ್ನಡವನ್ನು ವಿಶ್ವಾತ್ಮಕವಾಗಿ ಬೆಳೆಸುವುದೇ ಉದ್ದೇಶವಾಗಿರಬೇಕು. ಸಾಹಿತ್ಯ ಬಗ್ಗೆ ಯೋಚಿಸುವಾಗ ಒಂದಾಗಿರಬೇಕು. ಕನ್ನಡ ಭಾಷೆಗೆ ಆಪತ್ತು ಬಂದಾಗ ಇಂದೂ ಎಚ್ಚರ ರೂಢಿಸಬೇಕಾದ ಅಗತ್ಯ ಇದೆ ಎಂದು ಹೆಗ್ಗಡೆ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.