ಕಾಪಾಡಿ ಕಾಪಾಡಿ ಎಂದು ಕೂಗಿ 3 ತಾಸು ಹೋರಾಟ ಮಾಡಿದ್ದೆ...

ಕ.ಪ್ರ.ವಾರ್ತೆ , ಬೆಂಗಳೂರು , ಡಿ.21
ಶಕ್ತಿಯನ್ನೆಲ್ಲ ಒಗ್ಗೂಡಿಸಿ ಕಾಪಾಡಿ.. ಕಾಪಾಡಿ.. ಎಂದು ಕಿರುಚುತ್ತಿದ್ದೆ. ಆದರೆ ವಾಹನಗಳ ಓಡಾಟದ ಸದ್ದಿನಲ್ಲಿ ನನ್ನ ದನಿ ಯಾರಿಗೂ ಕೇಳಿಸಲೇ ಇಲ್ಲ...
ನ.19 ರಂದು ಎನ್.ಆರ್.ವೃತ್ತದ ಕಾರ್ಪೋರೇಷನ್ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಹಲ್ಲೆಗೊಳಗಾದ ಜ್ಯೋತಿ ಅವರ ಮಾತು ಇದು. 32 ದಿನಗಳಿಂದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜ್ಯೋತಿ ಅವರು ಶನಿವಾರ ಆಸ್ಪತ್ರೆಯಿಂದ ಬಿಡುಗಡೆ ಆದರು. ಈ ವೇಳೆ ಆಸ್ಪತ್ರೆ ವೈದ್ಯರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಘಟನೆ ನೆನೆದು ಕಣ್ಣೀರಿಟ್ಟರು.
ಜ್ಯೋತಿ ಹೇಳಿದ್ದೇನು?: ನಾನು ಯಾವಾಗಲೂ ಎನ್.ಆರ್.ವೃತ್ತದ ಎಟಿಎಂ ಕೇಂದ್ರದಲ್ಲೇ ಹಣ ಡ್ರಾ ಮಾಡುತ್ತೇನೆ. ಅದರಂತೆ ನ.19 ಅಲ್ಲಿಗೆ ಹೋಗಿದ್ದೆ. ನನ್ನ ಮಗಳ ಶಾಲಾ ಫೀಸ್ ಹಾಗೂ ಹುಟ್ಟುಹಬ್ಬದ ಆಚರಣೆಗೆ ಹಣ ಡ್ರಾ ಮಾಡಿಕೊಳ್ಳಲು ಹೋಗಿದ್ದೆ.
ಎಟಿಎಂ ಒಳಗೆ ಹೋಗಿ ಬ್ಯಾಗ್ನಲ್ಲಿ ಕಾರ್ಡ್ ಹುಡುಕುತ್ತಿದ್ದಾಗ ಬ್ಯಾಗ್ ನೇತು ಹಾಕಿಕೊಂಡಿದ್ದ ವ್ಯಕ್ತಿ ಏಕಾಏಕಿ ಒಳಗೆ ಬಂದು ಶೆಟರ್ ಹಾಕಿಕೊಂಡ. ಎಟಿಎಂ ಯಂತ್ರದೊಳಗೆ ಹಣ ಹಾಕುವ ವ್ಯಕ್ತಿ ಇರಬಹುದು ಎಂದುಕೊಂಡು ನಾನು ಯಾವುದೇ ಪ್ರತಿಕ್ರಿಯೆ ನೀಡದೆ ಯಾರು ನೀವು ಎಂದು ಕೇಳುತ್ತಾ ಹೊರ ಹೋಗಲು ಯತ್ನಿಸಿದೆ. ಆದರೆ, ಆತ ಅಡ್ಡಗಟ್ಟಿದ. ನನ್ನನ್ನು ಹೊರಗೆ ಬಿಡಲಿಲ್ಲ.
ಆದರೂ ಹೊರಗೆ ಹೋಗುವ ಪ್ರಯತ್ನ ಮಾಡಿದಾಗ ಆತ ಕತ್ತು ಹಿಡಿದು ಗೋಡೆವರೆಗೂ ತಳ್ಳಿಕೊಂಡು ಸುಮ್ಮನೆ ಹಣ ನೀಡು, ಇಲ್ಲದಿದ್ದರೆ ಸಾಯಿಸಿ ಬಿಡುತ್ತೇನೆ ಎಂದು ಬೆದರಿಸಿದ.
ಹಣ ಕೇಳುತ್ತಲೆ ಬ್ಯಾಗ್ನಿಂದ ಗನ್ ತೆಗೆದ. ಅದು ಅಟಿಕೆ ಗನ್ ಎಂದುಕೊಂಡೆ. ಅದರ ಹಿಂದೆಯೇ ಮಚ್ಚು
ತೆಗೆದ. ಭಯಗೊಂಡು ಪ್ರತಿಕ್ರಿಯಿಸದೆ ಸುಮ್ಮನಾದೆ. ಮತ್ತೆ ಹೊರ ಹೋಗಬೇಕು ಎನ್ನುವಾಗ ನನ್ನನ್ನು ಎಟಿಎಂ ಮೂಲೆಗೆ ತಳ್ಳಿಕೊಂಡು ಹೋದ ಆತ ಮಚ್ಚಿನಿಂದ ಬಲವಾಗಿ ಹಲ್ಲೆ ನಡೆಸಿದ್ದು ಮಾತ್ರ ನನಗೆ ನೆನಪಿದೆ.
ಅದಾದ ಬಳಿಕ ಪ್ರಜ್ಞೆ ಕಳೆದುಕೊಂಡ ನಾನು ಕುಸಿದು ಬಿದ್ದೆ. ಕೆಲ ಹೊತ್ತಿನ ಬಳಿಕ ಪ್ರಜ್ಞೆ ಬಂದಿತ್ತು. ಆಗ
ಬ್ಯಾಗ್ನಲ್ಲಿದ್ದ ಮೊಬೈಲ್ ಫೋನ್ ತೆಗೆದುಕೊಂಡು ಬ್ಯಾಂಕ್ ಮ್ಯಾನೇಜರ್ಗೆ ಕರೆ ಮಾಡಿ ಮಾಹಿತಿ ನೀಡುವುದರ ಜತೆಗೆ ನನ್ನ ಕೆಲಸವನ್ನು ಬೇರೆಯವರಿಗೆ ವಹಿಸುವಂತೆ ಹೇಳಲು ಬಲಗೈ ಎತ್ತಿದೆ. ಆದರೆ ನನ್ನ ಕೈ ಎತ್ತಲು ಆಗಲಿಲ್ಲ. ಈ ವೇಳೆ ಮೈಯಲ್ಲಿದ್ದ ಶಕ್ತಿ ಒಗ್ಗೂಡಿಸಿ ಸಹಾಯಕ್ಕಾಗಿ ಕೂಗಾಡಲು ಆರಂಭಿಸಿದೆ.
ನಿತ್ರಾಣಳಾಗಿದ್ದ ನನ್ನ ಧ್ವನಿ ಜೋರಾಗಿರಲಿಲ್ಲ. ಅಲ್ಲದೇ ವಾಹನಗಳ ಸದ್ದು ಜೋರಾಗಿತ್ತು. ಅರೆಪ್ರಜ್ಞಾವಸ್ಥೆಯಲ್ಲಿ ಸ್ವಾಧೀನ ಕಳೆದುಕೊಂಡಿದ್ದ ಕೈ, ಕಾಲುಗಳೊಂದಿಗೆ ಮೂರು ತಾಸುಗಳ ಕಾಲ ಹೇಗೋ ಪ್ರಯತ್ನಿಸಿ ಬಾಗಿಲುವರೆಗೂ ಬಂದು ಮತ್ತೆ ದಯವಿಟ್ಟು ಕಾಪಾಡಿ ಎಂದು ಕಿರುಚಿದೆ. ಎಟಿಎಂ ಕೇಂದ್ರದ ಹೊರಗಿದ್ದ ಕೆಲವರು ಮಾತನಾಡುತ್ತಾ, ನೋಡಿ ಯಾರೋ ಇದ್ದಾರೆ ಒಳಗಡೆ ಎನ್ನುತ್ತಿದ್ದರು. ಹೀಗಾಗಿ ನಾನು ಮತ್ತೆ ಜೋರಾಗಿ ಕಿರುಚಲು ಆರಂಭಿಸಿದೆ. ಆಗ ಯಾರೋ ಒಬ್ಬರು ಶೆಟರ್ ತೆಗೆದರು. ಅಲ್ಲಿನ ನಾಲ್ಕೈದು ಜನರಿಗೆ ನಡೆದ ಘಟನೆಯನ್ನು ವಿವರಿಸಿದೆ.
ಈ ಪೈಕಿ ಯಾರೋ ಒಬ್ಬರು ನನ್ನನ್ನು ಆಟೋದಲ್ಲಿ ಕೂರಿಸಿ ಬನ್ನಿ ಮೇಡಂ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ ಎಂದರು. ಆಟೋದಲ್ಲಿದ್ದಾಗ ಯಾರೋ ಒಬ್ಬರು 'ನಿಮ್ಮ ಪತಿಯ ಮೊಬೈಲ್ ಫೋನ್ ನಂಬರ್ ಹೇಳಿ ಎಂದು ಕೇಳಿದರು' ಆಗ ಯಾರೋ ನನ್ನನ್ನು ನೋಡಿಕೊಳ್ಳುತ್ತಿದ್ದಾರೆ ಎಂದೆನಿಸಿತು ಅಷ್ಟೇ.
ಬಿಜಿಎಸ್ ಆಸ್ಪತ್ರೆಯ ವೈದ್ಯರು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡರು. ಚಿಕಿತ್ಸೆ ನೀಡುವಾಗ ಬರೀ
ತಲೆಗೆ ಪೆಟ್ಟು ಬಿದ್ದಿದೆ ಎಂದುಕೊಂಡಿದ್ದರು. ಕೈ ಎತ್ತಲು ಆಗುತ್ತಿಲ್ಲ ಎಂದೆ. ಆಗ ನನಗೆ ತುಂಬಾ ಭಯವಾಯಿತು. ಬಲಗೈಯಲ್ಲಿ ಸ್ಪರ್ಶ ಜ್ಞಾನ ಆಗುತ್ತಿರಲಿಲ್ಲ. ಆಗ ನಾನು ಎಲ್ಲಾ ಮುಗಿದು ಹೋಯಿತು ಎಂದುಕೊಂಡೆ. ಆದರೆ ವೈದ್ಯರು ಹಾಗೂ ತಂಡ ನೀಡಿದ ಉತ್ತಮ ಚಿಕಿತ್ಸೆಯಿಂದ ಈಗ ಆರೋಗ್ಯವಾಗಿದ್ದೇನೆ.
ಆಸ್ಪತ್ರೆಯಲ್ಲಿದ್ದಾಗ ಕಾರ್ಪೋರೇಷನ್ ಬ್ಯಾಂಕ್ ಮುಖ್ಯಸ್ಥರು ಬಂದು ಮಾತನಾಡಿಸಿ, ವೈದ್ಯಕೀಯ ವೆಚ್ಚವನ್ನು ಸಂಪೂರ್ಣ ಭರಿಸುವುದಾಗಿ ಹೇಳಿದರು. ಹೆಚ್ಚಿನ ಕಾಳಜಿ ವಹಿಸುವಂತೆ ವೈದ್ಯರಿಗೂ ತಿಳಿಸಿದರು. ಉತ್ತಮ ಚಿಕಿತ್ಸೆಯಿಂದ ನಾನಿಂದು ಮಾತನಾಡುತ್ತಿದ್ದೇನೆ. ಬಲಗೈ, ಕಾಲುಗಳ ಚಲನೆ ಇದೆ ಎಂದು ಹೇಳಿದರು ಜ್ಯೋತಿ.
ಆರೋಗ್ಯದಲ್ಲಿ ಸುಧಾರಣೆ
ಜ್ಯೋತಿ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. ಮುಖ, ತಲೆಗೆ ತೀವ್ರ ಪೆಟ್ಟಾಗಿತ್ತು. ಮೆದುಳಿಗೆ ಪೆಟ್ಟು ಬಿದ್ದಿದ್ದ ಕಾರಣ ಬಲಗೈ ಸ್ವಾಧೀನ ಕಳೆದುಕೊಂಡಿತ್ತು. ಮೆದುಳು ಸುರಕ್ಷಿತಗೊಳಿಸುವ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಯಿತು. ಹಂತ ಹಂತವಾಗಿ ವ್ಯಾಯಾಮ ಮಾಡಿಸಿ ಮಾನಸಿಕ ಸ್ಥೈರ್ಯ ತುಂಬಲಾಯಿತು. ಚಿಕಿತ್ಸೆಯೊಂದಿಗೆ ಜ್ಯೋತಿ ಅವರು ಮನಸ್ಸು ದೃಢವಾಗಿದ್ದ ಕಾರಣ ಬೇಗ ಚೇತರಿಸಿಕೊಳ್ಳಲು ಸಾಧ್ಯವಾಗಿದೆ. ಆಘಾತದಲ್ಲಿರುವ ಜ್ಯೋತಿ ಅವರಿಗೆ ಮಾತನಾಡಿಸಿ ಪದೇ ಪದೇ ಘಟನೆಯನ್ನು ಕೆದಕಬಾರದು. ಕೆದಕದೆ ಇದ್ದರೆ ಅವರು ಮಾನಸಿಕವಾಗಿ ಬಲಿಷ್ಠರಾಗಿ ಆದಷ್ಟು ಬೇಗ ಎಂದಿನಂತಾಗುತ್ತಾರೆ.
ಡಾ.ಎನ್.ಕೆ.ವೆಂಕಟರಮಣ, ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ಉಪಾಧ್ಯಕ್ಷ
ಬದುಕಿಸಿದವರಿಗೆ ಧನ್ಯವಾದ
ಆಟೋದಲ್ಲಿ ಆಸ್ಪತ್ರೆಗೆ ನನ್ನನ್ನು ಕರೆದುಕೊಂಡು ಹೋದವರು ಯಾರು ಎನ್ನುವುದು ಗೊತ್ತಿಲ್ಲ. ಆದರೆ ಅವರು ನಿಮ್ಮನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ ಎನ್ನುತ್ತಿದ್ದರು. ನಾನು ಓಕೆ ಎಂದೆ. ಅವರಿಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ ಎಂದು ಜ್ಯೋತಿ ಸುದ್ದಿಗಾರರಿಗೆ ತಿಳಿಸಿದರು. ಇಂತಹ ಸ್ಥಿತಿ ಯಾರಿಗೂ ಬರಬಾರದು. ಹಲ್ಲೆ ನಡೆಸಿದ ದುಷ್ಕರ್ಮಿಯನ್ನು ಅದಷ್ಟು ಬೇಗ ಬಂಧಿಸಬೇಕು ಎಂದು ಜ್ಯೋತಿ ಮತ್ತು ಅವರ ಪತಿ ಉದಯ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


