ಜನರೇ ರೋಚಕತೆಯತ್ತ ಆಕರ್ಷಿತರಾದರೆ, ಒಳ್ಳೆಯ ಕಾರ್ಯಕ್ರಮ ಎಲ್ಲಿಂದ ಬರಬೇಕು?

ವಿದ್ಯಾಗಿರಿ, ಮೂಡುಬಿದಿರೆ: ಟಿ.ವಿ. ಸೇರಿದಂತೆ ಮಾಧ್ಯಮದವರನ್ನು 'ಹಾಳು ಮಾಡುತ್ತಿರುವವರು ಅದರಲ್ಲಿರುವವರಾ ಅಥವಾ ಜನರಾ?' ಎಂಬುದನ್ನು ನೀವೇ ವಿಚಾರ ಮಾಡಿ. ನಾವು ರೋಚಕತೆ, ಹಣದತ್ತ ಆಕರ್ಷಿತರಾಗಿ ಒಳ್ಳೆಯ ಕಾರ್ಯಕ್ರಮಗಳು ಬರಬೇಕು ಎಂದರೆ ಎಲ್ಲಿಂದ ಬರಲು ಸಾಧ್ಯ ಎಂದು ನಿರ್ದೇಶಕ ಟಿ.ಎನ್. ಸೀತಾರಾಂ ಹೇಳಿದರು.
ವಿಶ್ವ ನುಡಿಸಿರಿಯ ಕೊನೆಯ ದಿನವಾದ ಭಾನುವಾರ ಮಾಧ್ಯಮ ಕುರಿತ ಸಮಾವೇಶ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮಾಧ್ಯಮಗಳಲ್ಲಿ ರೈತರ ಬಗ್ಗೆ, ವಿಜ್ಞಾನಿಗಳ ಬಗ್ಗೆ ಕಾರ್ಯಕ್ರಮ ಮಾಡಿದರೆ ಮಾರುಕಟ್ಟೆ ಇಲ್ಲ. ಮಾಧ್ಯಮಗಳಲ್ಲಿ ಕೆಟ್ಟ ಕಾರ್ಯಕ್ರಮ ಬರುವುದಕ್ಕೆ ನಾವೆಷ್ಟು ಕಾರಣ ಎಂಬುದರ ಬಗ್ಗೆ ಜನರೇ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಜನ ಇಂದು ರೋಚಕತೆ, ಹಣದತ್ತ ಆಕರ್ಷಿತರಾಗಿದ್ದಾರೆ. ಅವುಗಳ ಬಗ್ಗೆಯೇ ಮಾತನಾಡುತ್ತಾರೆ. ಹೀಗಿರುವಾಗ ಒಳ್ಳೆಯ ಕಾರ್ಯಕ್ರಮಗಳು ಬರಬೇಕು ಎಂದು ಆಶಿಸಿದರೆ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ನಶಿಸುತ್ತಿರುವ ಆದರ್ಶ: ಟಿವಿಯಿಂದಾಗಿ ಮನುಷ್ಯರ ನಡುವಿನ ಸಂಬಂಧಗಳು ಹಾಳಾಗಿವೆ. ಕುಟುಂಬದೊಳಗಿನ ಸಂಬಂಧಗಳು ಹಳಸಿವೆ, ನಮ್ಮ ಆದರ್ಶಗಳು ನಶಿಸುತ್ತಿವೆ. ಆದರೆ ಟಿವಿಯನ್ನು ನಿಯಂತ್ರಿಸುವುದು ನಮ್ಮ ಮನಸ್ಸು ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ನೀವು ಅಂತಹ ಕಾರ್ಯಕ್ರಮಗಳನ್ನು ನೋಡದಿದ್ದರೆ ಮುಂದೆ ಅಂತಹ ಕಾರ್ಯಕ್ರಮಗಳು ಪ್ರಸಾರವಾಗುವುದಿಲ್ಲ. ಹೀಗಾಗಿ ಮಾಧ್ಯಮಗಳು ಕೆಟ್ಟಿದ್ದರೆ ಅದನ್ನು ನಡೆಸುವರು ಕೆಟ್ಟುಹೋದದ್ದಾ ಅಥವಾ ನೀವು ಕೆಟ್ಟುಹೋಗಿದ್ದಾ ಎಂಬುದನ್ನು ವಿಚಾರಮಾಡಿ ಎಂದರು.
ನಮ್ಮನ್ನು ನಾವು ಮಾರಿಕೊಂಡಿಲ್ಲ: 'ಕನ್ನಡಪ್ರಭ' ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಮಾತನಾಡಿ, ಮಾಧ್ಯಮಗಳ ಮೇಲೆ ಇಂದು ತೀವ್ರವಾದ ಒತ್ತಡವಿದೆ. ಬಾಹ್ಯ ಶಕ್ತಿಗಳು ನಿಯಂತ್ರಿಸುತ್ತಿವೆ. ಆದರೆ ನಮ್ಮನ್ನು ನಾವು ಮಾರಿಕೊಂಡಿಲ್ಲ. ಸಮಾಜಕ್ಕೆ, ಸಾರ್ವಜನಿಕರ ಹಕ್ಕುಗಳಿಗೆ ಧಕ್ಕೆಯಾದಾಗ ಮಾಧ್ಯಮಗಳು ದನಿ ಎತ್ತುತ್ತಾ ಬಂದಿವೆ. ಮುಂದೂ ಆ ಕೆಲಸ ಮಾಡಲಿವೆ ಎಂದು ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 100 ವರ್ಷಗಳ ಹಿಂದೆ ಪತ್ರಿಕೆಗಳ ದರ 1.50 ಇತ್ತು, ಈಗ ರು. 3 ಹಾಗೂ 3.50 ಆಗಿದೆ. ಆದರೆ ಪತ್ರಿಕೆಗಳ ಉತ್ಪಾದನಾ ವೆಚ್ಚ ಹೆಚ್ಚಿದೆ. ಬಹುಶಃ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಲಭ್ಯವಿರುವುದು ಕೇವಲ ಪತ್ರಿಕೆಗಳು ಮಾತ್ರ. ಉಳಿದ ಹಣವನ್ನು ಜಾಹೀರಾತಿನ ಮೂಲಕವೇ ಗಳಿಸಬೇಕು ಎಂದರು.
ಟಿಆರ್ಪಿ ಇಲ್ಲದೆ ಟಿವಿಯಿಲ್ಲ. ಟಿಆರ್ಪಿಯೇ ಟಿವಿ ಚಾನಲ್ಗಳ ಮೂಲ. ಆದರೆ ಮಾಧ್ಯಮಗಳು ಸಮಾಜದ ಕನ್ನಡಿಯಿದ್ದಂತೆ. ಸಮಾಜದಲ್ಲಿ ನಡೆಯುವುದನ್ನೇ ಟಿವಿಗಳು ತೋರಿಸುತ್ತವೆ. ಐಸ್ಲ್ಯಾಂಡ್ನ ಪತ್ರಿಕೆಗಳಲ್ಲಿ ಅಪರಾಧ ಸುದ್ದಿಯೇ ಇಲ್ಲ. ಕಾರಣ ಅಲ್ಲಿ ಅಪರಾಧ ಘಟನೆಗಳು ನಡೆಯುವುದೇ ಇಲ್ಲ. ಇಂದು ಘಟನೆಗೂ, ಸುದ್ದಿ ನೀಡುವುದಕ್ಕೂ ನಡುವಿನ ಅಂತರ ತುಂಬ ಕಡಿಮೆ. ಹಾಗಾದಾಗ ಕೆಲವೊಮ್ಮೆ ತಪ್ಪುಗಳಾಗಬಹುದು. ಆದರೆ ಬೇಕಂತಲೇ ಯಾರೂ ತಪ್ಪು ಮಾಡುವುದಿಲ್ಲ. ಮಾಧ್ಯಮಗಳು ಸಾಕಷ್ಟು ಒಳ್ಳೆ ಕೆಲಸ ಮಾಡಿವೆ. ಒಳ್ಳೆಯ ಕೆಲಸಗಳಿಗೆ ಬೆಂಬಲವನ್ನೂ ನೀಡಿವೆ. ಆದರೆ ಕೆಟ್ಟದ್ದನ್ನೇ ಮಾಧ್ಯಮಗಳು ಬಿತ್ತರಿಸುತ್ತವೆ ಎಂಬ ಆರೋಪ ಮಾಡಲಾಗುತ್ತದೆ. ಅದು ಸರಿಯಲ್ಲ ಎಂದರು.
ಸುದ್ದಿ ಸುದ್ದಿಯಾಗಿ ಉಳಿದಿಲ್ಲ: ಸುದ್ದಿ ಮತ್ತು ಜಾಹೀರಾತಿನ ಅಂತರ ಕಡಿಮೆಯಾಗಿದೆ. ಜಾಹೀರಾತು ಪ್ರಭಾವ ಜಾಸ್ತಿಯಾಗುತ್ತಿದೆ. ಸುದ್ದಿ ಕೇವಲ ಸುದ್ದಿಯಾಗಿ ಉಳಿದಿಲ್ಲ ಎಂದು 'ಪ್ರಜಾವಾಣಿ' ಪತ್ರಿಕೆ ಸಂಪಾದಕ ಪದ್ಮರಾಜ ದಂಡಾವತಿ ಹೇಳಿದರು.
ಮಾಧ್ಯಮಗಳು ಅನಾದಿ ಕಾಲದಂದಿಲೂ ಅತೀವ ಪ್ರಭಾವಿಯಾಗಿ ಬೆಳೆದುಬಂದಿವೆ. ಸ್ವಾತಂತ್ರ್ಯ ಹೋರಾಟದಲ್ಲಿ ಕೂಡ ಮಾಧ್ಯಮಗಳು ಪರಿಣಾಮಕಾರಿ ಕೆಲಸ ಮಾಡಿವೆ. ವಿರೋಧ ಪಕ್ಷಗಳು ಸರಿಯಾಗಿ ಕೆಲಸ ಮಾಡಲಿ, ಬಿಡಲಿ ಮಾಧ್ಯಮಗಳು ವಿರೋಧಪಕ್ಷದ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುತ್ತಿವೆ ಎಂದರು.
ನುಡಿಸಿರಿಗೆ ಬರಲು ತಾತ್ವಿಕತೆ ಯಾಕೆ?
ಕನ್ನಡದ ಮನಸ್ಸು ಕಟ್ಟುವ ಕೆಲಸದಲ್ಲಿ ತಾತ್ವಿಕತೆಯನ್ನು ತರಬೇಡಿ. ಇದು ಎಲ್ಲರೂ ಕೈಜೋಡಿಸಬೇಕಾದ ಕಾರ್ಯಕ್ರಮ ಎಂದು ನಿರ್ದೇಶಕ ಟಿ.ಎನ್. ಸೀತಾರಾಂ ಹೇಳಿದ್ದಾರೆ. ಮಾಧ್ಯಮ ಕುರಿತು ಸಮಾವೇಶಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಈ ಕಾರ್ಯಕ್ರಮಕ್ಕೆ ಬರುವ ಮೊದಲು ಸಾಕಷ್ಟು ಎಸ್ಎಂಎಸ್ ಮತ್ತು ಕರೆಗಳು ಬಂದವು. ನುಡಿಸಿರಿ ಕಾರ್ಯಕ್ರಮಕ್ಕೆ ನಮ್ಮ ತಾತ್ವಿಕ ವಿರೋಧವಿದೆ, ಆದ್ದರಿಂದ ಅದಕ್ಕೆ ಹೋಗಬೇಡಿ ಎಂದು ಒತ್ತಾಯಿಸಿದರು. ಆದರೆ ಇಷ್ಟೆಲ್ಲ ಕನ್ನಡಿಗರ ಮುಂದೆ ನನ್ನ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ದೊರೆತಿದೆ. ಅದಕ್ಕೇನು ತಾತ್ವಿಕತೆ? ಕನ್ನಡಿಗರ ಮನಸ್ಸು ಕಟ್ಟುವ ಇಂತಹ ಒಳ್ಳೆಯ ಕಾರ್ಯಕ್ರಮದಲ್ಲಿ, ಸಾಹಿತ್ಯಿಕ ಕಾರ್ಯಕ್ರಮಕ್ಕೆ ತಾತ್ವಿಕತೆ ತರಬಾರದು. ಎಲ್ಲರೂ ಇದರಲ್ಲಿ ಕೈಜೋಡಿಸಬೇಕು ಎಂದರು.
- ವಿನಾಯಕ ಭಟ್ಟ ಮೂರೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


